ಸಕಲೇಶಪುರ: ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮುಂಗಾರು ಮಳೆಗೆ ಮತ್ತೆ ಹಲವೆಡೆ ಭೂಕುಸಿತ ಸಂಭವಿಸಿರುವ ಘಟನೆಗಳು ವರದಿಯಾಗಿವೆ.
ದೊಡ್ಡತಪ್ಲು ಗ್ರಾಮದ ಬಳಿ ಗುಡ್ಡ ಕುಸಿದು, ಚಲಿಸುತ್ತಿದ್ದ ಕಾರಿನ ಮೇಲೆ ಮಣ್ಣಿನ ರಾಶಿ ಬಿದ್ದಿದ್ದು, ಕಾರಿನ ಒಳಗಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿಯ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಭೂಕುಸಿತ ನಡೆದ ಸ್ಥಳದಿಂದ ಎರಡೂ ಕಡೆಗೆ ಐದು ಐದು ಕಿಲೋಮೀಟರ್ ಟ್ರಾಫಿಕ್ ಜಾಮ್ ಆಗಿದೆ.
ಮಣ್ಣಿನಡಿ ಸಿಲುಕಿದ ಓಮ್ನಿ ಕಾರನ್ನು ಹೊರತೆಗೆದು, ರಸ್ತೆಯನ್ನು ಮತ್ತೆ ಸಂಚಾರಕ್ಕೆ ಮುಕ್ತಗೊಳಿಸಲು ಕಂದಾಯ ಇಲಾಖೆ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಪೊಲೀಸರು ಶಿರಾಡಿಘಾಟ್ ಮಾರ್ಗದಲ್ಲಿ ಬದಲಿಯಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.