ಕೆಂಪೇಗೌಡರ ಬಗ್ಗೆ ಗೌರವ ಇದ್ದರೆ ಅವರು ಕಟ್ಟಿಸಿರುವ ಬೆಂಗಳೂರು ಕೆರೆಗಳನ್ನು ರಕ್ಷಣೆ ಮಾಡಿ – HDK

Must read

ನಾಡಪ್ರಭು ಕೆಂಪೇಗೌಡರು ಎಂಬ ಮಹಾಪುರುಷರ ಬಗ್ಗೆ ಕಾಂಗ್ರೆಸ್ ಸರಕಾರಕ್ಕೆ ಹೃದಯದಲ್ಲಿ ಗೌರವ ಎನ್ನುವುದು ಇದ್ದರೆ ಮೊದಲು ಅವರು ಕಟ್ಟಿಸಿರುವ ಕೆರೆಗಳನ್ನು ರಕ್ಷಣೆ ಮಾಡಲಿ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿಗಳಾದ ದೇವೇಗೌಡರು ಹಾಗೂ ನನ್ನ ಹೆಸರು ಹಾಕಿಲ್ಲ ಎನ್ನುವ ಬಗ್ಗೆ ಬೇಸರ ಇಲ್ಲ. ನಾನು ಇದ್ದಲ್ಲಿಯೇ ನಾಡಪ್ರಭುಗಳನ್ನು ಸ್ಮರಿಸಿ ಗೌರವಿಸುತ್ತೇನೆ ಎಂದರು.

ಕೆಂಪೇಗೌಡರ ಜಯಂತಿಗೆ ನನಗೆ ಆಹ್ವಾನ ಇಲ್ಲ, ಆಹ್ವಾನ ಪತ್ರಿಕೆಯಲ್ಲಿ ಹೆಸರೂ ಹಾಕಿಲ್ಲ ಎಂದು ನೀವು ಕೇಳಿದಿರಿ ಎನ್ನುವ ಕಾರಣಕ್ಕೆ ನಾನು ಮತ್ನಡಬೇಕಾಯಿತು. ನನ್ನ ಹೃದಯದಲ್ಲಿ ನಾಡಪ್ರಭುಗಳು ಇದ್ದಾರೆ. ಅವರು ಕಾರ್ಯಕ್ರಮಕ್ಕೆ ಕರೆಯದಿರುವುದಕ್ಕೆ ನನಗೆ ಬೇಸರವಿಲ್ಲ, ನಾನು ಈ ವಿಚಾರಕ್ಕೆ ಮಹತ್ವ ಕೊಡುವುದಿಲ್ಲ ಎಂದರು ಸಚಿವರು.

ನಾನು ಯಾವಾಗಲೂ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿ ಎಂದು ಹೇಳುವುದಿಲ್ಲ. ಪ್ರೀತಿಯಿಂದ ಕರೆದರೆ ಹೋಗುತ್ತೇನೆ. ನಾನು ಈಗ ದೆಹಲಿಯಲ್ಲಿ ಸಂಸತ್ ಕಲಾಪದಲ್ಲಿ ಭಾಗಿಯಾಗಿದ್ದೇನೆ. ನಾಳೆಯ ದಿನ ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅವರು ಕರೆದಿದ್ದರೂ ಹೋಗಲು ಆಗುತ್ತಿರಲಿಲ್ಲ ಎಂದರು ಅವರು.

ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆದಾಗಲೂ ಸಹ ಆ ನಗರಕ್ಕೆ ಕೊಡುಗೆ ಕೊಟ್ಟಿದ್ದೇನೆ. ಕೆಂಪೇಗೌಡರ ಹಿರಿಮೆಗೆ ಧಕ್ಕೆ ಆಗದ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಕೆಂಪೇಗೌಡರಿಗೆ ಯಾವ ರೀತಿ ಗೌರವ ಸಲ್ಲಿಸಬೇಕೋ ಹಾಗೆ ನಡೆದುಕೊಂಡಿದ್ದೇನೆ ಎಂದರು ಅವರು.

ಕೆಂಪಗೌಡರ ಜಯಂತಿಯನ್ನು ಬೇರೆ ಬೇರೆ ರೀತಿಯಲ್ಲಿ ಜನರು ಆಚರಣೆ ಮಾಡುತ್ತಾರೆ. ಸರಕಾರ ಬೇರೆ ರೀತಿಯಲ್ಲಿ ಆಚರಣೆ ಮಾಡುತ್ತದೆ. ದೇವನಹಳ್ಳಿ ಸೇರಿ ರಾಜ್ಯದ ಅನೇಕ ಭಾಗಗಳಲ್ಲಿ ಮನೆ ಮನೆಯಲ್ಲೂ ನಾಡಪ್ರಭುಗಳ ಭಾವಚಿತ್ರ ಇಟ್ಟು ಪೂಜೆ ಮಾಡಿ ಜಯಂತಿಯನ್ನು ಆಚರಣೆ ಮಾಡುತ್ತಾರೆ. ನಾನು ಸಹ ದೆಹಲಿಯಲ್ಲಿಯೇ ಕೆಂಪೇಗೌಡರನ್ನು ಸ್ಮರಣೆ ಮಾಡುತ್ತೇನೆ ಎಂದರು ಕುಮಾರಸ್ವಾಮಿ ಅವರು.

ಕೆಂಪೇಗೌಡರು ಕಟ್ಟಿಸಿದ ಕೆರೆಗಳನ್ನು ರಕ್ಷಿಸಿ

ಬೆಂಗಳೂರು ನಗರದ ಬಗ್ಗೆ ಇವತ್ತು ವಿಶ್ವದಲ್ಲೇ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣ ಕೆಂಪೇಗೌಡರು. ಅವರು ಕಟ್ಟಿರುವ ಕೆರೆಗಳನ್ನು ಈಗಿನ ದಿನಗಳಲ್ಲಿ ಸ್ವಾರ್ಥಕ್ಕೆ ಕೆಲವರು ನುಂಗಿದ್ದಾರೆ. ಈಗಲಾದರೂ ಆ ಕೆರೆಗಳನ್ನು ಕಾಪಾಡುವ ಕೆಲಸವನ್ನು ಸರಕಾರ ಮಾಡಬೇಕಿದೆ. ಮೇಕೆದಾಟು ಕಟ್ಟಬೇಕು, ಕುಡಿಯುವ ನೀರು ತರುತ್ತೇವೆ ಎಂದೆಲ್ಲಾ ಹೇಳುತ್ತಾರೆ. ಆದರೆ, ನಗರದ ಜಲಮೂಲಗಳಾಗಿದ್ದ ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಈಗಲೇ ಕುಡಿಯಲು ನೀರಿಲ್ಲದೆ ಜನರು ಬೆಂಗಳೂರಿನಲ್ಲಿ ಪರದಾಡುವ ಪರಿಸ್ಥಿತಿ ಇದೆ. 15 ವರ್ಷವಾದ ಮೇಲೆ ಬೆಂಗಳೂರಿನ ಸ್ಥಿತಿ ಏನಾಗುತ್ತದೋ ಗೊತ್ತಿಲ್ಲ. ಈ ಸರಕಾರ ನ್ಯಾಯಯುತವಾಗಿ ಕೆಂಪೇಗೌಡರ ಜಯಂತಿ ಆಚರಣೆ ಮಾಡೋದಾದರೆ ಆ ಕೆರೆಗಳನ್ನು ರಕ್ಷಣೆ ಮಾಡುವಂತಹ ಕೆಲಸ ಮಾಡಲಿ. ಮಳೆ ನೀರನ್ನು ಸರಿಯಾಗಿ ಬಳಸಿಕೊಳ್ಳುವತ್ತ ಚಿಂತನೆ ಮಾಡಲಿ. ಇಷ್ಟು ಮಾಡಿದರೆ ನಾನು ಸರಕಾರಕ್ಕೆ ಸಲ್ಯೂಟ್ ಮಾಡುತ್ತೇನೆ ಎಂದು ಕೇಂದ್ರ ಸಚಿವರು ಹೇಳಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article