ಮುಡಾ ಹಗರಣ ಇನ್ನಿತರೆ ಹಗರಣವನ್ನು ಇಟ್ಟುಕೊಂಡು ರಾಜ್ಯ ಸರ್ಕಾರದ ಮೇಲೆ ಸಾಲು ಸಾಲು ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದಿಕೆಶಿಯನ್ನು ನಪುಂಸಕ ಎಂದು ಕರೆದು ನಾಲಿಗೆ ಹರಿ ಬಿಟ್ಟಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಡಿ.ಕೆ. ಶಿವಕುಮಾರ್ ಗೆ ವ್ಯಕ್ತಿತ್ವ ಎನ್ನುವುದು ಇದೆಯಾ? ಅವರದ್ದು ಒಂದು ನಾಲಿಗೆನಾ.. ಆತ ಮನುಷ್ಯನಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧೈರ್ಯ ಎನ್ನುವುದು ಇದ್ದರೆ ಗಂಡಸ್ತನದಿಂದ ರಾಜಕೀಯ ಮಾಡಬೇಕು. ಸಂಪುಸಕ ಮಾಡುವ ಕೆಲಸ ಮಾಡುತ್ತಿದ್ದಾನೆ. ನನ್ನನ್ನು ಪ್ರಶ್ನೆ ಮಾಡುತ್ತಾನೆ. ಯಾರ ಮಗನನ್ನು ಬೆಳೆಸಬೇಕು ಎಂದು ಜನ ನಿರ್ಧಾರ ಮಾಡುತ್ತಾರೆ. ಒಳ್ಳೆಯದು, ಕೆಟ್ಟದು ಏನು ಎನ್ನುವುದು ಅವರಿಗೆ ಗೊತ್ತಿದೆ ಎಂದು ಕೇಂದ್ರ ಸಚಿವರು ಕಿಡಿ ಕಾರಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ನಿರ್ಧಾರ ಮಾಡುತ್ತಾರೆ. ಮೊದಲು ನೆಟ್ಟಗೆ ಬದುಕು. ನನ್ನನ್ನು ಕೆಣಕಬೇಡ ಶಿವಕುಮಾರ್..ಹುಷಾರು! ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ಕೊಟ್ಟರು.
ನಿನ್ನ ಯೋಗ್ಯತೆ, ಹಣೆಬರಹ ನನಗೆ ಬಹಳ ಚನ್ನಾಗಿ ಗೊತ್ತಿದೆ. ನಿನ್ನ ಬಗ್ಗೆ ನನ್ನಲ್ಲಿರುವ ಮಾಹಿತಿ ತೆಗೆದಿಟ್ಟರೆ ನೀನು ಬದುಕಲು ಕಷ್ಟವಾಗುತ್ತದೆ. ನಮ್ಮ ಕುಟುಂಬದ ವಿರುದ್ಧ ನೀನು ಏನೆಲ್ಲಾ ಸಂಚು ಮಾಡಿದೆ, ರೇವಣ್ಣ ಕುಟುಂಬ ಮುಗಿಸಲು ಏನು ಕುತಂತ್ರ ಮಾಡಿದೆ ಎನ್ನುವುದು ನನಗೆ ಗೊತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನನ್ನದು ಪಾರಾದರ್ಶಕ ಆಡಳಿತ. ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ರೀಡು ಹೆಸರಿನಲ್ಲಿ ಲೂಟಿ ಹೊಡೆದಿದ್ದೀರಿ. ಕೆಂಪಣ್ಣ ವರದಿ ಏನಾಯಿತು? ಸದನ ಸಮಿತಿ ವರದಿ ಎಲ್ಲಿ ಇಟ್ಕೊಂಡಿದ್ದೀರಿ? ಕೆಟ್ಟ ಪದ ಬಳಸ ಬಾರದು. ಇವತ್ತು ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ. ಎ.ಕೆ.ಸುಬ್ಬಯ್ಯ ಕಾಲದಿಂದಲೂ ದೇವೇಗೌಡರನ್ನು ಮುಗಿಸಲು ಯತ್ನ ಮಾಡಲಾಯಿತು. ಯಾವ ಸಂಚು ಮಾಡಿ ಬಿಡುಗಡೆ ಮಾಡಿದ್ದೀಯಾ ಪೊಣ್ಣನ್ನ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಿವೇಶನ ಕೊಡಿ ಎಂದು 37,000 ರೂಪಾಯಿ ದುಡ್ಡು ಕಟ್ಟಿದ್ದೇನೆ. ನನಗೆ ಈವರೆಗೆ ನಿವೇಶನ ಕೊಟ್ಟಿಲ್ಲ. ನಾನು ಮೈಸೂರಿನಲ್ಲಿದ್ದಾಗ ಸಿನಿಮಾ, ಹಂಚಿಕೆ ನಿರ್ಮಾಣ ಮಾಡುತ್ತಿದ್ದಾಗ ಹಣ ಕಟ್ಟಿದ್ದೆ. ಸತ್ಯ ಸಂಗತಿ ಮುಚ್ಚಿಟ್ಟು ಮೈಸೂರುನಲ್ಲಿ ಬೋರ್ಡ್, ಫ್ಲೆಕ್ಸ್ ಹಾಕಿಕೊಂಡಿದ್ದಾರೆ. ಅದನ್ನು ನಿಮ್ಮ ಶಾಸಕರು ಕೊರಳಿಗೆ ಹಾಕಿಕೊಳ್ಳಲಿ. ಆ ಪ್ರಕರಣಲ್ಲಿ ಏನು ಇಲ್ಲ ಎಂದು ಲೋಕಾಯುಕ್ತ, ಸಿಐಡಿ ಯವರು ಹೇಳಿದ್ದಾರೆ. ಈ ಬೋರ್ಡ್ ಕಾಂಗ್ರೆಸ್ ಸ್ವಂತದ್ದ.. ಬಿಜೆಪಿಯಿಂದ ಎರವಲು ತೆಗೆದುಕೊಂಡಿದ್ದಾರೆ ಕಾಂಗ್ರೆಸ್ ಪಕ್ಷದ್ದು ಏನೂ ಇಲ್ಲ ಎಂದು ಸಚಿವರು ಟೀಕಾ ಪ್ರಹಾರ ನಡೆಸಿದರು.
ಇವತ್ತಿನ ಕಾಂಗ್ರೆಸ್ ನಾಯಕರ ಜನಾಂದೋಲನ ನಡೆಯಿತು. ಇವರಿಗೆ ನಾಚಿಕೆ ಆಗಬೇಕು. ವಿರೋಧ ಪಕ್ಷದಲ್ಲಿದ್ದಾಗ ಬೊಗಳೆ ಬಿಟ್ಟರು. ಸಾಕ್ಷಿಗಳಿಲ್ಲದೇ ಅವರು ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದರು. ವಿರೋಧ ಪಕ್ಷದ ಸ್ಥಾನದ ಘನತೆ ಮರೆತು ಅತ್ಯಂತ ನಿಷ್ಕೃತವಾಗಿ ವರ್ತಿಸಿದ್ದಾರೆ. ವಿಧಾನಸಭೆಯಲ್ಲಿ ನಮ್ಮ ಶಾಸಕರು ಕಡಿಮೆ ಇದ್ದರೂ ದಾಖಲೆ ಸಮೇತ ಹೋರಾಟ ಮಾಡಿದ್ದೇವು. ದಾಖಲೆ ಸಮೇತ ಮಾತನಾಡಿದೆವು, ಅದರಲ್ಲೇನು ನಾಚಿಕೆ ಇಲ್ಲ ಎಂದು ಅವರು ಹೇಳಿದರು.
ನಾನು ಸಿಎಂ ಆಗಿದ್ದಾಗ ಒಂದು ಅಕ್ರಮ ನಡೆದಿದ್ದರೆ ದಾಖಲೆ ನೀಡಲಿ. ಇವರೇನಾದರೂ ದಾಖಲೆ ನೀಡಿದ್ದರಾ? ನಾನು ವಿರೋಧ ಪಕ್ಷದ ನಾಯಕನಿದ್ದಾಗ ಬಿಜೆಪಿ ವಿರುದ್ಧವೂ ಹೋರಾಟ ಮಾಡಿದ್ದೆ. ಈಗ ಏನೋ ಹೊಸದು ಅಂತ ಬಂದಿದ್ದಾರೆ. ಇದರಲ್ಲಿ ನನ್ನ ಮೇಲೆ ಏನು ಅಪಾದನೆ ಏನೂ ಇಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಮೋದಿ ಅವರನ್ನು ಭೇಟಿಯಾಗಿದ್ದು ರಕ್ಷಣೆ ಪಡೆಯಲು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಾವು ಯಾವತ್ತು ಕಾಪಾಡಿ ಎಂದು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ನೀವು ಲೋಕಾಯಕ್ತ ಮುಚ್ಚಿ ಎಸಿಬಿ ಮಾಡಿದಿರಿ. ಹ್ಯೂಬ್ಲೊಟೊ ವಾಚ್ ಏನಾಯಿತು, ರೀಡು ಹಗರಣ, ಕೆಂಪಯ್ಯ ವರದಿ ಏನಾಯಿತು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಸರಕಾರ ಕೆಡವಲು ಪ್ರಯತ್ನ ನಡೆಯುತ್ತದೆಯಂತೆ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಸಂಚು ನಡೆಯುತ್ತಿದೆ ಎಂದು ಯಾರು ಹೇಳಿದರು? ಅವರಿಗೇನು ಕನಸು ಬಿದ್ದಿತ್ತಾ? ಅಥವಾ ಅಜ್ಜಯ್ಯ ಹೇಳಿದರಾ? ಯಾರು ಹೇಳಿದ್ರಂತೆ ಅವರಿಗೆ? ಎಂದು ಸಚಿವರು ಕೇಳಿದರು.
ಸಂಸದ ಮಲ್ಲೇಶ್ ಬಾಬು ಅವರು ಸಚಿವರ ಜತೆಯಲ್ಲಿ ಇದ್ದರು.