ನವದೆಹಲಿ: ಸಿನಿಮಾ ಬಿಡುಗಡೆಯಾದ ನಂತರ ಮೂರು ದಿನಗಳವರೆಗೂ ಆನ್ಲೈನ್ ವಿಮರ್ಶೆಯನ್ನು ನಿಷೇಧ ಮಾಡಬೇಕು ಎಂದು ತಮಿಳು ಚಲನಚಿತ್ರ ಕಾರ್ಯನಿರತ ನಿರ್ಮಾಪಕರ ಸಂಘ (ಟಿಎಫ್ಎಪಿಎ) ಸಲ್ಲಿಸಿದ್ದ ಅರ್ಜಿ ಸಂಬಂಧ ಚೆನ್ನೈ ಹೈಕೋರ್ಟ್, ಕೇಂದ್ರ, ರಾಜ್ಯ ಸರ್ಕಾರ ಹಾಗೂ ಯೂಟ್ಯೂಬ್‌ಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿ ಎಸ್ ಸೌಂದರ್ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿದೆ
ಯೂಟ್ಯೂಬ್‌ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ವಿಮರ್ಶೆ ಮಾಡುವವರಿಗೆ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು. ಮೂರು ದಿನಗಳ ಕಾಲ ವಿಮರ್ಶೆಗೆ ನಿರ್ಬಂಧ ಹಾಕಬೇಕು ಎಂಬ ಟಿಎಫ್ಎಪಿಎ ಅರ್ಜಿ ಸಲ್ಲಿಸಿತ್ತು. ಆದರೆ, ಸಿನಿಮಾ ವಿಮರ್ಶೆಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದ್ದು ಅದನ್ನು ನಿಷೇಧ ಮಾಡುವುದು ಅಸಾಧ್ಯ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ತಿಳಿಸಿದರು.
ದ್ವೇಷ ಅಥವಾ ವ್ಯಾವಹಾರಿಕ ಪೈಪೋಟಿಯ ಕಾರಣಕ್ಕೆ ಸಿನಿಮಾವನ್ನು ನಕಾರಾತ್ಮಕವಾಗಿ ವಿಮರ್ಶಿಸಲಾಗುತ್ತಿದೆ. ಇದಕ್ಕಾಗಿ ಯೂಟ್ಯೂಬ್ ಸೇರಿದಂತೆ ಇತರ ಆನ್ಲೈನ್ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ರೀತಿಯ ವಿಮರ್ಶೆಗಳನ್ನು ಓದುವ ಸಾರ್ವಜನಿಕರು ಚಿತ್ರಮಂದಿರಗಳಿಗೆ ಬರುವುದೇ ಇಲ್ಲ. ಎಂದು ಅರ್ಜಿಯಲ್ಲಿ ಟಿಎಫ್ಎಪಿಎ ಹೇಳಿತ್ತು.
ವಿಮರ್ಶಕರಿಗೆ ಸಿನಿಮಾವನ್ನು ವಿಮರ್ಶೆ ಮಾಡುವ ಎಲ್ಲಾ ಹಕ್ಕು ಇದ್ದರೂ ವೈಯಕ್ತಿಕ ದುರುದ್ದೇಶದಿಂದ ಮಾಧ್ಯಮಗಳಲ್ಲಿ ಚಿತ್ರದ ಬಗ್ಗೆ ದ್ವೇಷಭಾವನೆ ಬಿತ್ತುತ್ತಿದ್ದಾರೆ. ಇಂತಹ ಋಣಾತ್ಮಕ ವಿಮರ್ಶೆಗಳಿಂದಾಗಿ ಸಿನಿಮಾ ನಿರ್ಮಾಪಕರು ಭಾರಿ ನಷ್ಟ ಎದುರಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ತಡೆಯುವ ಉದ್ದೇಶದಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ಕೋರಲಾಗಿದೆ.