Thursday, July 25, 2024

ರಾಹುಲ್‌ಗೆ ಬೈದು ಕೆಂಪು ಕೋಟೆ ಮೇಲೆ ಬಾವುಟ ನೆಟ್ಟುಬಿಟ್ಟಿರಾ?: ಸಂಜೀವ್‌ ಗೋಯೆಂಕಾ ಮೇಲೆ ಕಿಡಿಕಿಡಿಯಾದ ಮಹಮದ್‌ ಶಮಿ

Most read

ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಗಳ ನಡುವೆ ನಡೆದ ಪಂದ್ಯದ ನಂತರ, LSG ತಂಡದ ಮಾಲೀಕ ಸಂಜೀವ್‌ ಗೋಯೆಂಕಾ ತಂಡ ನಾಯಕ ಕೆ.ಎಲ್.ರಾಹುಲ್‌ ವಿರುದ್ಧ ನಡೆದುಕೊಂಡ ರೀತಿಗೆ ಎಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ಭಾರತ ತಂಡದ ವೇಗಿ ಮಹಮದ್‌ ಶಮಿ ಗೋಯೆಂಕಾ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಗಾಯಾಳುವಾಗಿ ಈ ಬಾರಿಯ ಐಪಿಎಲ್‌ ಮತ್ತು ಟಿ 20 ವಿಶ್ವಕಪ್‌ ನಿಂದ ಹೊರಬಿದ್ದಿರುವ ಮಹಮದ್‌ ಶಮಿ ಖಾಸಗಿ ಟಿವಿ ಚಾನಲ್‌ ಒಂದರಲ್ಲಿ ಮಾತನಾಡುತ್ತ ಗೋಯೆಂಕಾ ನಿಲುವನ್ನು ತೀವ್ರವಾಗಿ ಖಂಡಿಸಿದ್ದಾರೆ.

“ಆಟಗಾರರಿಗೆ ಆತ್ಮಗೌರವವಿರುತ್ತದೆ, ನೀವು ತಂಡದ ಮಾಲೀಕರಾಗಿರುವುದರಿಂದ ನೀವೂ ಸಹ ಗೌರವಾನ್ವಿತ ವ್ಯಕ್ತಿ ಆಗಿದ್ದೀರಿ. ಅನೇಕ ಜನರು ನಿಮ್ಮನ್ನು ನೋಡುತ್ತಿದ್ದಾರೆ ಮತ್ತು ನಿಮ್ಮಿಂದ ಕಲಿಯುತ್ತಿರುತ್ತಾರೆ. ಕ್ಯಾಮೆರಾ ಮುಂದೆ ಈ ಘಟನೆಗಳು ನಡೆದರೆ ಇದು ನಾಚಿಕೆಗೇಡಿನ ವಿಷಯʼʼ ಎಂದು ಶಮಿ ಕಿಡಿಕಾರಿದ್ದಾರೆ.

ನೀವು ಇದನ್ನು (ರಾಹುಲ್‌ ಮೇಲೆ ರೇಗಾಡಿದ ಪ್ರಕರಣ) ಡ್ರೆಸಿಂಗ್‌ ರೂಮ್‌ ನಲ್ಲೋ, ಹೋಟೆಲ್‌ ನಲ್ಲೋ ಮಾಡಬಹುದಿತ್ತು. ಮೈದಾನದಲ್ಲೇ ಎಲ್ಲರೂ ನೋಡುವಾಗ ಮಾಡುವ ಅವಶ್ಯಕತೆ ಏನಿತ್ತು? ಈ ರೀತಿ ಮಾಡಿ ನೀವೇನು ಕೆಂಪು ಕೋಟೆ ಮೇಲೆ ಬಾವುಟ ನೆಡುವುದಂತೂ ನಿಮ್ಮಿಂದ ಆಗಿಲ್ಲ ಎಂದು ಶಮಿ ಸಿಟ್ಟಿಗೆದ್ದು ನುಡಿದಿದ್ದಾರೆ.

ಆತ ಕ್ಯಾಪ್ಟನ್‌ (ಕೆ.ಎಲ್.ರಾಹುಲ್).‌ ಅವರು ಸಾಮಾನ್ಯ ಆಟಗಾರನಲ್ಲ. ಕ್ರಿಕೆಟ್‌ ಎಂಬುದು ತಂಡದ ಆಟ. ಒಮ್ಮೆ ನಮ್ಮ ಯೋಜನೆ ಸಫಲವಾಗಿಲ್ಲವೆಂದರೆ ಅದೇನು ದೊಡ್ಡ ವಿಷಯವಲ್ಲ.

ಕ್ರಿಕೆಟ್‌ ನಲ್ಲಿ ಏನು ಬೇಕಾದರೂ ಆಗಬಹುದು. ಆಟಗಾರರಿಗೆ, ತಂಡಕ್ಕೆ ಒಳ್ಳೆಯ ದಿನ, ಕೆಟ್ಟ ದಿನಗಳು ಇರುತ್ತವೆ. ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಎಲ್ಲ ಆಟಗಾರರಿಗೂ ಸ್ವಾಭಿಮಾನವಿರುತ್ತದೆ. ಮಾತನಾಡುವುದಕ್ಕೂ ಒಂದು ವಿಧಾನವಿದೆ. ನೀವು ಮಾಡಿದ್ದು ಕೆಟ್ಟ ಸಂದೇಶ ರವಾನಿಸುತ್ತದೆ ಎಂದು ಶಮಿ ಹೇಳಿದ್ದಾರೆ.

ಕೆ.ಎಲ್.ರಾಹುಲ್ ನಿಧಾನವಾಗಿ ಆಡುತ್ತಿದ್ದರೆ ಅದು ಅವರ ಶೈಲಿ. ನಿಮಗೆ ಅವರು ಇಷ್ಟವಿಲ್ಲವೆಂದರೆ ತಂಡದಿಂದ ತೆಗೆದುಬಿಡಿ. ಅದರ ಬದಲಾಗಿ ಕ್ರೀಡಾಂಗಣದಲ್ಲಿ ಸೇರಿದ್ದ ಜನರ ಮುಂದೆ ಅಪಮಾನ ಮಾಡುವುದು ಸರಿಯಲ್ಲ ಎಂದು ಶಮಿ ಹೇಳಿದ್ದಾರೆ.

More articles

Latest article