ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುನಿರತ್ನ ಅವರನ್ನು ಪಕ್ಷದಿಂದ ಉಚ್ಛಾಟಿಸಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಎರಡೂ ಬಣಗಳ ಮಧ್ಯೆ ದೊಡ್ಡ ಯುದ್ಧವೇ ನಡೆಯುತ್ತಿದೆ. ಮೇಲಾಗಿ, ಬಿಜೆಪಿ ಕಾರ್ಯಕರ್ತರೇ ಯತ್ನಾಳ್ ರನ್ನು ಅರೆಹುಚ್ಚ ಎಂದಿದ್ದಾರೆ. ಇಷ್ಟಾದರೂ ಅವರನ್ನು ಏಕೆ ಪಕ್ಷದಿಂದ ಉಚ್ಛಾಟಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದು ಕಡೆ ಯತ್ನಾಳ್ ಅವರಿಗೆ ತಮ್ಮ ಇತಿಹಾಸವೇ ಗೊತ್ತಿಲ್ಲದಿದ್ದರೂ ರಜಾಕಾರರ ಬಗ್ಗೆ ಮಾತನಾಡುತ್ತಾರೆ ಎಂದು ಕುಟುಕಿದರು.
ಮುಸ್ಲಿಮರಿಗೆ ಮತದಾನದ ಹಕ್ಕು ರದ್ದುಗೊಳಿಸಬೇಕು ಎಂದ ಒಕ್ಕಲಿಗ ಸ್ವಾಮೀಜಿ ವಿರುದ್ದ ಪ್ರಕರಣ ದಾಖಲಾಗಿರುವ ಕುರಿತು ಪ್ರಸ್ತಾಪಿಸಿದ ಅವರು, ಸ್ವಾಮೀಜಿ ಆದ ತಕ್ಷಣ ಅವರಿಗೆ ಕಾನೂನು ಅನ್ವಯ ಆಗುವುದಿಲ್ಲವೇ ಮಿಸ್ಟರ್ ಅಶೋಕ್ ಎಂದು ಕಿಡಿ ಕಾರಿದರು. ತಮ್ಮ ಹೇಳಿಕೆ ಕುರಿತು ಖುದ್ದು ಸ್ವಾಮೀಜಿಯವರೇ ವಿಷಾದ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಸ್ವಾಮೀಜಿಯವರ ಹೇಳಿಕೆಯನ್ನು ಬಿಜೆಪಿ ಸಮರ್ಥನೆ ಮಾಡುತ್ತಿದೆ ಎಂದು ಅವರು ಅಚ್ಚರಿ ಸೂಚಿಸಿದರು.
ಕಾನೂನು ಎಂದರೆ ನಮಗೇ ಬೇರೆ, ನಿಮಗೇ ಬೇರೆ ಅಲ್ಲ. ಎಲ್ಲರಿಗೂ ಒಂದೇ. ಯತ್ನಾಳ್ ಅವರು ಬಸವಣ್ಣ ಅವರನ್ನು ಹೇಡಿ ಎನ್ನುತ್ತಾರೆ. ಇದಕ್ಕೆ ಬಿಜೆಪಿಯವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿ ಅವರ ಈ ಹೇಳಿಕೆ ಖಂಡಿಸಿ ಬಿಜೆಪಿಯ ಒಬ್ಬರೂ ಈವರೆಗೆ ತುಟಿ ಬಿಚ್ಚಿಲ್ಲ ಎಂದು ಟೀಕಿಸಿದರು.
ಇಷ್ಟೆಲ್ಲಾ ವಿದ್ಯಮಾನಗಳು ನಡೆಯುತ್ತಿದ್ದರೂ ವಿಜಯೇಂದ್ರ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ. ಬಸವಣ್ಣ ಅಂದರೆ ನಿಮಗೆ ಅಷ್ಟೊಂದು ಅಲರ್ಜಿನಾ ಎಂದು ಕಿಡಿ ಕಾರಿದರು.
ಕ್ರಿಮಿನಲ್ ಕೆಲಸ ಮಾಡಿ ಜೈಶ್ರೀರಾಮ ಅಂದರೆ ಎಲ್ಲವೂ ಮುಚ್ಚಿ ಹೋಗುತ್ತಾ ಎಂದು ಲೇವಡಿ ಮಾಡಿದ ಅವರು ಸಂವಿಧಾನ ವಿರೋಧಿ ಹೇಳಿಕೆಯನ್ನು ಸರ್ಕಾರ ಸಹಿಸುವುದಿಲ್ಲ ಎಂದರು.
ನೀವು ಒಬ್ಬರು ಬೀದಿಗಳಿದರೆ ಸಂವಿಧಾನ ರಕ್ಷಣೆ ಮಾಡುವ ಸಲುವಾಗಿ ಲಕ್ಷಾಂತರ ಜನ ಬೀದಿಗಿಳಿಯುತ್ತಾರೆ. ಮಿಸ್ಟರ್ ಅಶೋಕ ಅವರೇ ಡೋಂಟ್ ವರಿ ಎಂದು ವ್ಯಂಗ್ಯವಾಡಿದರು.