ದಲಿತರ ಮೇಲೆ ದ್ವೇಷ; ಅಂಬೇಡ್ಕರ್ ಮೇಲೆ ಆಕ್ರೋಶ

Most read

ದಲಿತ ಸಮುದಾಯ ಹಿಂದೂ ಧರ್ಮದ ಭಾಗವಲ್ಲವೆಂದು ನಿರ್ಧರಿಸಬೇಕಿದೆ. ಜಾತಿ ತಾರತಮ್ಯ ಇರುವಂತಹ ಹಿಂದೂ ಧರ್ಮ ಅಗತ್ಯವಿಲ್ಲವೆಂದು ಘೋಷಿಸಬೇಕಿದೆ. ಸಂವಿಧಾನದ ಆಶಯದಂತೆ ಎಲ್ಲಿಯವರೆಗೆ ಎಲ್ಲದರಲ್ಲೂ ದಲಿತರಿಗೆ ಸಮಾನತೆ ಸಿಗುವುದಿಲ್ಲವೋ, ಸಮಾಜದಿಂದ ಅಸ್ಪೃಶ್ಯತೆ ತೊಲಗುವುದಿಲ್ಲವೋ ಅಲ್ಲಿಯ ವರೆಗೂ ಹಿಂದೂ ಧರ್ಮವನ್ನೇ ಬಹಿಷ್ಕರಿಸಬೇಕಿದೆ. ಪ್ರತಿಯೊಬ್ಬರು ಅಂಬೇಡ್ಕರ್ ರವರ ಬದುಕಿನ ಹೋರಾಟದ ದಾರಿಯನ್ನು ಅನುಸರಿಸಬೇಕಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಮೇಲ್ಜಾತಿ ವ್ಯಸನ ಪೀಡಿತರ ಡಿಎನ್ ಎ ಯಲ್ಲಿಯೇ ದಲಿತರ ಬಗ್ಗೆ ಅಸಹನೆ ಇರುವಂತಿದೆ. ದಲಿತರಿಗೆ ಹಾಗೂ ಬಹುಸಂಖ್ಯಾತ ದಮನಿತರಿಗೆ  ಸಂವಿಧಾನದ ಮೂಲಕ ಸಮಾನತೆಯನ್ನು ಕೊಟ್ಟ ಅಂಬೇಡ್ಕರ್ ರವರ ಮೇಲೂ ಈ ಮೇಲ್ವರ್ಗದ ಮತಿಗೆಟ್ಟವರ ಸಿಟ್ಟು ಆಗಾಗ ನೆತ್ತಿಗೇರುತ್ತಲೇ ಇರುತ್ತದೆ. ಈ ಮೇಲ್ಜಾತಿ ಮೇಲಾಟದ ಕಾಯಿಲೆ ಅಪ್ರಾಪ್ತ ಬಾಲಕರಲ್ಲೂ ಉಲ್ಬಣಿಸಿದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ.

ಡಿಸೆಂಬರ್ ಕೊನೆಯ ವಾರದಲ್ಲಿ, ಬಸವಕಲ್ಯಾಣ ತಾಲೂಕಿನ ಕಲಕೋರಾ ಎನ್ನುವ ಹಳ್ಳಿಯಲ್ಲಿ ಕೆಲವು ಮತಿಗೆಟ್ಟ ಯುವಕರು ಬಾಬಾಸಾಹೇಬರ ಭಾವಚಿತ್ರಕ್ಕೆ  ಚಪ್ಪಲಿಯಿಂದ ಹೊಡೆದು, ಕಾಲಿನಿಂದ ತುಳಿದು, ಭಾವಚಿತ್ರ ಹರಿದು ಹಾಕಿ ಅವಮಾನ ಮಾಡಿ ತಮ್ಮ ವಿಕೃತಿಯನ್ನು ಮೆರೆದಿದ್ದಾರೆ. ಹಾಗೂ ತಾವು ಮಾಡಿದ ಈ ನೀಚ ಕೆಲಸದ ವಿಡಿಯೋವನ್ನೂ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.  ಈ ವಿಡಿಯೋ ನೋಡಿ ಪ್ರಕರಣ ದಾಖಲಿಸಿಕೊಂಡಿರುವ ಮುಡುಬಿ ಠಾಣೆಯ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಹಾಗೂ ಇನ್ನು ಕೆಲವರು ಮಾಡಬಾರದ್ದನ್ನು ಮಾಡಿ ಹೇಡಿಗಳಂತೆ ತಲೆಮರೆಸಿಕೊಂಡಿದ್ದಾರೆ. ಆಘಾತಕಾರಿ ಸಂಗತಿ ಏನೆಂದರೆ ಹೀಗೆ ಬಂಧನಕ್ಕೊಳಗಾದವರಲ್ಲಿ ಮೂವರು ಅಪ್ರಾಪ್ತ ವಯೋಮಾನದವರು. ಬಾಲಕರಲ್ಲೂ ಸಹ ವರ್ಣದ್ವೇಷದ ವಿಷಬೀಜಗಳನ್ನು ತುಂಬಿ ಅಸಹನೆಯನ್ನು ಬಿತ್ತಿದವರು ಯಾರು? ಈ ದೇಶದ ಗೃಹಮಂತ್ರಿಯೇ ಅಂಬೇಡ್ಕರ್ ಬಗ್ಗೆ ಪೂರ್ವಾಗ್ರಹಪೀಡಿತವಾಗಿ ಅಪಮಾನ ಮಾಡುವಂತೆ ಪಾರ್ಲಿಮೆಂಟನಲ್ಲಿ ಮಾತಾಡಲು ಸಾಧ್ಯವಾಗುವುದಾದರೆ, ಈ ಹಳ್ಳಿಯ ಪಡ್ಡೆ ಹುಡುಗರು ಅಮಿತ್ ಶಾರವರ ದುರುದ್ದೇಶವನ್ನು ಜಾರಿಮಾಡಿದ್ದಾರೆ.  ಮನುವಾದಿಗಳ ಹಿಡಿತದಿಂದ ಬಿಡಿಸಿ ಎಲ್ಲರಿಗೂ ಸ್ವಾತಂತ್ರ್ಯ ಸಮಾನತೆ ತಂದು ಕೊಟ್ಟವರು ಅಂಬೇಡ್ಕರ್ ರವರು ಎಂಬುದೇ ಇಂತಹ ಕೃತ್ಯದಲ್ಲಿ ತೊಡಗುವ ದುಷ್ಕರ್ಮಿಗಳಿಗೆ ಗೊತ್ತಿಲ್ಲ. ಗೊತ್ತಿದ್ದರೂ ಸಂಘಿಗಳು ಹುಟ್ಟುಹಾಕಿದ ಹಿಂದುತ್ವದ ಭ್ರಮೆಗೆ ಒಳಗಾಗಿ ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಕೃತ್ಯದಲ್ಲಿ ಕೆಲವು ದಲಿತೇತರ ಮೇಲ್ಜಾತಿಯ ಯುವಕರು ತೊಡಗಿಕೊಂಡಿದ್ದಾರೆ.

ಅಂಬೇಡ್ಕರ್ ಭಾವಚಿತ್ರಕ್ಕೆ ಮಾಡಲಾದ ಅಪಮಾನವನ್ನೇ ಯಾರಾದರೂ ದಲಿತ ಯುವಕರು ಸಾವರ್ಕರ್ ಚಿತ್ರಕ್ಕೋ ಇಲ್ಲಾ ಮೋದಿಯವರ ಭಾವಚಿತ್ರಕ್ಕೋ ಮಾಡಿದ್ದರೆ ಇಷ್ಟೊತ್ತಿಗೆ ಆ ಊರು ಕೇರಿಗೆ ಸಂಘಿಗಳು ಬೆಂಕಿ ಹಾಕಿರುತ್ತಿದ್ದರು. ಅವಮಾನ ಮಾಡಿದವರ ಮೇಲೆ ಹಲ್ಲೆ ಮಾಡಿ ಹತ್ಯೆಯನ್ನು ಮಾಡುವ ಸಾಧ್ಯತೆಗಳಿದ್ದವು. ಭಾರತದ ಭಾಗ್ಯ ವಿಧಾತನ ಮೇಲೆ  ಮೇಲ್ಜಾತಿ ಹಾಗೂ ಸಂಘಿ ಮನಸ್ಥಿತಿಯವರಿಂದ ದೇಶಾದ್ಯಂತ ನಿರಂತರವಾಗಿ ಅಪಪ್ರಚಾರ ಹಾಗೂ ಅಪಮಾನಗಳು ನಡೆಯುತ್ತಲೇ ಇವೆ. ಜೊತೆಗೆ ಶ್ರಮಜೀವಿಗಳಾದ ದಲಿತರ ಮೇಲೆ ಜಾತಿನಿಂದನೆ, ಹಲ್ಲೆಗಳು ದಿನನಿತ್ಯದ ಸುದ್ದಿಗಳಾಗಿವೆ.

ಡಿಸೆಂಬರ್ 27 ರಂದು ಒಡಿಶಾದ ಜಗತ್ ಸಿಂಗ್ ಪುರ ಜಿಲ್ಲೆಯಲ್ಲಿ ಮೇಕೆ ಕಳ್ಳತನದ ಶಂಕೆಯಲ್ಲಿ ಇಬ್ಬರು ದಲಿತ ಯುವಕರಿಗೆ ಸವರ್ಣೀಯರು ಚಪ್ಪಲಿ ಹಾರ ಹಾಕಿ ಥಳಿಸಿ ಹಲ್ಲೆ ಮಾಡಿದ್ದಾರೆ.

ದೂರದ ಓಡಿಶಾದ ಸುದ್ದಿ ಯಾಕೆ. ಇಲ್ಲೇ ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಮುದ್ದನಹಳ್ಳಿ ಗ್ರಾಮದಲ್ಲಿ ಹಾಲಿನ ಗಾಡಿಯೊಂದರಲ್ಲಿ ಕೇಳಿಬರುತ್ತಿದ್ದ ಅಂಬೇಡ್ಕರ್ ಅವರ ʼಜೈ ಭೀಮ್ʼ ಹಾಡು ಕೇಳಿ ಆಕ್ರೋಶಗೊಂಡು ರೈಲ್ವೆ ಪೊಲೀಸ್ ಸೇರಿದಂತೆ ಮತ್ತೊಬ್ಬ ಆಗುಂತಕ ವಾಹನ ತಡೆದು ಈ ಹಾಡು ಹಾಕಿದ್ದಕ್ಕೆ ವಾಹನದಲ್ಲಿದ್ದ ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಮರ್ಮಾಂಗಕ್ಕೆ ಗಂಭೀರವಾಗಿ ಹೊಡೆದಿದ್ದಾರೆ. ಜೊತೆಗೆ ಜಾತಿ ನಿಂದನೆ ಮಾಡಿ ತಮ್ಮ ವಿಕೃತಿಯನ್ನು ತೋರ್ಪಡಿಸಿದ್ದಾರೆ. ಕೆಲವು ಮತಿಗೆಟ್ಟ ಮೇಲ್ಜಾತಿ ಮೋಹ ಪೀಡಿತರಿಗೆ ಅಂಬೇಡ್ಕರ್ ಕುರಿತ ಹಾಡೂ ಸಹ ಅಸಹನೆಯನ್ನು ಹುಟ್ಟಿಸುತ್ತದೆ ಅಂದರೆ ಈ ದೇಶದಲ್ಲಿ ಸಂವಿಧಾನದ ಆಶಯವೇ ಅಪಾಯದಲ್ಲಿದೆ ಎಂದರ್ಥ.

ಅಸ್ಪೃಶ್ಯತೆ ಎನ್ನುವ ಸಂವಿಧಾನ ವಿರೋಧಿ ಕುಕೃತ್ಯ ಈಗಲೂ ಜ್ವಲಂತ ಸಮಸ್ಯೆಯಾಗಿದೆ. ದಲಿತ ಯುವಕರು ಮದುವೆಗೆ ಕುದುರೆ ಹತ್ತಿ ಬರಬಾರದು, ಸವರ್ಣೀಯರ ಬೀದಿಯಲ್ಲಿ ಮೆರವಣಿಗೆ ಮಾಡಬಾರದು, ಊರೊಳಗಿನ ಸೆಲೂನಿಗೆ ಹೋಗಬಾರದು, ಕೆರೆ ಬಾವಿ ನೀರು ಮುಟ್ಟಬಾರದು, ದೇವಸ್ಥಾನದೊಳಗಂತೂ ಹೋಗಲೇ ಬಾರದು. ಹಾಗೇನಾದರೂ ಮಾಡಿದರೆ ನಿಂದನೆ, ಹಲ್ಲೆ ಹಾಗೂ ಅಸಹ್ಯಕರ ಶಿಕ್ಷೆಗಳಿಗೆ ಗುರಿಯಾಗಬೇಕು. ಇಂತಹ ಕೇವಲ ಒಂದೆರಡು ಉದಾಹರಣೆಗಳಲ್ಲ. ದಿನನಿತ್ಯ ಸಾವಿರಾರು ದಲಿತ ವಿರೋಧಿ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಕೆಲವು ಸುದ್ದಿಯಾದರೆ ಹಲವು ಪ್ರಕರಣಗಳು ಮುಚ್ಚಿಹಾಕಲ್ಪಡುತ್ತವೆ. ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒತ್ತಡಕ್ಕೆ ಮಣಿದು ಪೊಲೀಸ್ ದೂರು ದಾಖಲಾದರೂ ಕೆಲವೇ ದಿನಗಳಲ್ಲಿ ಬಂಧಿತರು ಜಾಮೀನು ಮೇಲೆ ಹೊರಗೆ ಬರುತ್ತಾರೆ ಹಾಗೂ ಹಣ ಮತ್ತು ಪ್ರಭಾವದಿಂದಾಗಿ ಕೇಸುಗಳೇ ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತವೆ. ನ್ಯಾಯಾಲಯದಲ್ಲಿ ಅಪರೂಪಕ್ಕೊಂದು ಶಿಕ್ಷೆಯಾದರೆ ಅದರ ಮೇಲಿನ ನ್ಯಾಯಾಲಯದಲ್ಲಿ ಆರೋಪಿಗಳಿಗೆ ರಿಲೀಫ್ ಸಿಗುತ್ತದೆ. ಹೀಗಾಗಿ ಮೇಲ್ಜಾತಿಯವರಿಗೆ ಪೊಲೀಸ್ ಹಾಗೂ ನ್ಯಾಯಾಂಗದ ಭಯವೇ ಇಲ್ಲದಂತಾಗಿದೆ. ದಲಿತರ ಮೇಲೆ ಜಾತಿ ನಿಂದನೆ, ಹಲ್ಲೆಗಳು ನಡೆಯುತ್ತಲೇ ಇವೆ. ದಲಿತ ಸಮುದಾಯದ ಅಸ್ಮಿತೆಯಾದ ಅಂಬೇಡ್ಕರ್ ರವರೂ ಸಹ ಅಪಮಾನಕ್ಕೆ ಈಡಾಗುತ್ತಲೇ ಇದ್ದಾರೆ. 

ಈ ಸಂಘಿಗಳು “ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು” ಎಂದು ಘೋಷಣೆ ಕೂಗುತ್ತಲೇ  ಇರುತ್ತಾರಲ್ಲಾ. ದಲಿತರ ಮೇಲೆ ಹಲ್ಲೆಗಳಾದಾಗ ಹಿಂದೂ ಮುಖಂಡರು ಎಲ್ಲಿ ತಲೆಮರೆಸಿಕೊಂಡಿರುತ್ತಾರೆ?. ಸಂಘಿ ನಾಯಕರಿಗೆ ಅವಮಾನವಾದರೆ ಸಿಡಿದೇಳುವ ಮತಾಂಧರು ಅಂಬೇಡ್ಕರ್‌ರವರಿಗೆ ಅಪಮಾನವಾದಾಗ ಯಾಕೆ ಜಾಣ ಮೌನಕ್ಕೆ ಜಾರುತ್ತಾರೆ?. ಯಾಕೆಂದರೆ ನಾವೆಲ್ಲಾ ಹಿಂದೂ ಎನ್ನುವುದೇ ವಂಚಕ ನಡೆಯಾಗಿದೆ. ಮನುವಾದಿ ಹಿಂದುತ್ವವಾದಿಗಳು ಮತ್ತೆ ವರ್ಣಾಶ್ರಮ ಆಧಾರಿತ ಆಡಳಿತವನ್ನು ಹೇರಲು ಮಾಡುತ್ತಿರುವ ಕುತಂತ್ರವಾಗಿದೆ. ನಾವೆಲ್ಲಾ ಹಿಂದೂ ಎನ್ನುತ್ತಲೇ ಹಿಂದುಳಿದ ವರ್ಗಗಳ ಜನರನ್ನು ಜನಾಂಗೀಯ ದಾಳಿಗೆ ಪ್ರೇರೇಪಿಸುವ ಶಡ್ಯಂತ್ರವನ್ನು ಮಾಡಲಾಗುತ್ತಿದೆ. ಮನುವಾದಿಗಳ ಗುರಿಸಾಧನೆಗೆ ಅಡ್ಡಿಯಾಗಿರುವ ಸಂವಿಧಾನವನ್ನು ಸಾವಕಾಶವಾಗಿ ದುರ್ಬಲ ಗೊಳಿಸುವುದು ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಪ್ರಭಾವವನ್ನು ಕಡಿಮೆಗೊಳಿಸುವುದೇ ಹಿಂದುತ್ವವಾದಿ ನೇತಾರರ ಹುನ್ನಾರವಾಗಿದೆ. 

ಅದಕ್ಕಾಗಿಯೇ ಸಂಸತ್ತಿನಲ್ಲಿ ಗೃಹಸಚಿವ ಶಾ “ಅಂಬೇಡ್ಕರ್ ಹೆಸರಿನ ಬದಲಾಗಿ ದೇವರ ಹೆಸರು ಹೇಳಿದರೆ ಏಳು ಜನ್ಮದಲ್ಲಿ ಸ್ವರ್ಗ ಸಿಗುತ್ತದೆ” ಎಂದು ಹೇಳಿ ಬಾಬಾಸಾಹೇಬರ ಕುರಿತ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಇಂತವರಿಂದ ಪ್ರೇರೇಪಿತರಾದ ಮೆದುಳು ತೊಳೆಸಿಕೊಂಡ ಹಿಂದೂ ಯುವಕರು ದೇಶಾದ್ಯಂತ ದಲಿತ ಸಮುದಾಯದವರನ್ನು ಕೀಳಾಗಿ ಕಾಣುತ್ತಾ ದಮನಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. 

ಬೀದರ್‌ ನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸೆಗಣಿ ಬಳಿದು ಅವಮಾನ


ಹೀಗಾದಾಗ ದಲಿತ ಸಮುದಾಯ ಹಿಂದೂ ಧರ್ಮದ ಭಾಗವೆಂದು ಹೇಗೆ ತಾನೇ ಒಪ್ಪಿಕೊಳ್ಳಲು ಸಾಧ್ಯ? ಊರು ಕೇರಿಯ ನಡುವೆ ಸಮಾನತೆ ಸಹೋದರತೆ ಬರಲು ಸಾಧ್ಯ? ಅಸ್ಪೃಶ್ಯತೆ ನಿವಾರಣೆಯಾಗಲು ಸಾಧ್ಯ? 

ದೀನ ದಲಿತರ ರಕ್ಷಣೆಗಾಗಿ ಕಾನೂನುಗಳಿವೆ, ಪ್ರಯೋಜನಕ್ಕಿಲ್ಲ. ಸಂವಿಧಾನ ಜಾರಿಗೆ ಬಂದು ಏಳು ದಶಕಗಳೇ ಕಳೆದರೂ ಅಸ್ಪೃಶ್ಯತೆ ತೊಲಗಿಲ್ಲ. ದಲಿತ ಸಮುದಾಯಕ್ಕಾಗಿ ಏನೇನೋ ಯೋಜನೆಗಳನ್ನು ಸರಕಾರಗಳು ಹಮ್ಮಿಕೊಂಡರೂ ಅದರ ಬಹುತೇಕ ಪ್ರಯೋಜನ ಮತ್ತೆ ಮೇಲ್ಜಾತಿಯವರಿಗೆ ಹೋಗುವುದು ನಿಶ್ಚಿತ. ಮೀಸಲಾತಿ ಪ್ರಯೋಜನ ಪಡೆದವರೂ ಸಹ ಸಾಮಾಜಿಕವಾಗಿ ಜಾತಿ ಪೀಡನೆಗೆ ಒಳಗಾಗುತ್ತಲೇ ಇರುತ್ತಾರೆ. ಒಟ್ಟಾರೆಯಾಗಿ ದಲಿತರು ಜೀತಕ್ಕೆ, ದುಡಿತಕ್ಕೆ, ಓಟು ಒತ್ತುವುದಕ್ಕೆ ಮೇಲ್ವರ್ಗದವರಿಗೆ ಅಗತ್ಯವಾಗಿ ಬೇಕು. ಆದರೆ ಸಮಾನತೆ ಹೊಂದುವುದಕ್ಕೆ, ಸಂಪನ್ಮೂಲ ಹಂಚುವುದಕ್ಕೆ, ಅವಕಾಶಗಳನ್ನು ಪಡೆಯುವುದಕ್ಕೆ ಬೇಕಾಗಿಲ್ಲ. 

ಇಂತಹ ಮೇಲ್ಜಾತಿಯ ಸವರ್ಣೀಯರ ಜಾತಿಗ್ರಸ್ತ ಮನಸ್ಥಿತಿಯನ್ನು ಅರಿತ ಅಂಬೇಡ್ಕರ್ ರವರು ಅಮಾನವೀಯ ತಾರತಮ್ಯವನ್ನು ರೂಢಿಸಿಕೊಂಡಿರುವ ಹಿಂದೂ ಧರ್ಮವನ್ನು ಬದಲಾಯಿಸಲು ಸಾಧ್ಯ ಇಲ್ಲವೆಂದೇ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದರು. ಹಿಂದೂ ಹೆಸರಲ್ಲಿ ವೈದಿಕಶಾಹಿ ಹೇಗೆ ಜಾತಿ ತಾರತಮ್ಯವನ್ನು ಪೋಷಿಸುತ್ತದೆ ಎಂಬುದು ಬಾಬಾಸಾಹೇಬರಿಗೆ ಗೊತ್ತಿತ್ತು. ಸಂಘಟನಾತ್ಮಕ ಹೋರಾಟವೇ ಸಮಾನತೆ ಪಡೆಯುವ ಮಾರ್ಗವೆಂಬುದೂ ಅಂಬೇಡ್ಕರ್ ರವರ ಆಶಯವಾಗಿತ್ತು. 

ಇದನ್ನೂ ಓದಿ- ಅಸ್ತವ್ಯಸ್ತಗೊಂಡಿರುವ ಅರ್ಥವ್ಯವಸ್ಥೆ

ಆದರೆ ಈಗಲೂ ದಿನನಿತ್ಯ ದಲಿತರ ಮೇಲೆ ತರಾವರಿ ದಮನಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಆದರೆ ಪ್ರಾಮಾಣಿಕ ಸಂಘಟನಾತ್ಮಕ ಹೋರಾಟದ ತೀವ್ರತೆ ಕಡಿಮೆಯಾಗಿದೆ. ಅಂಬೇಡ್ಕರ್ ಹೆಸರು ಚಾಲ್ತಿಯಲ್ಲಿದೆ. ಆದರೆ ಅವರ ತತ್ವಾದರ್ಶಗಳು ಹಾಗೂ  ಸಂಘಟನಾತ್ಮಕ ಹೋರಾಟಗಳಿಗೆ ಹಿನ್ನಡೆಯಾಗಿದೆ. ಹೀಗಾಗಿ ತಮ್ಮ ಅಸ್ತಿತ್ವಕ್ಕಾಗಿ ದಲಿತರು ಸಂವಿಧಾನಾತ್ಮಕ ನೆಲೆಯಲ್ಲಿ ಒಗ್ಗಟ್ಟಾಗಿ ತಮ್ಮ ಹಕ್ಕಿಗಾಗಿ ಹೋರಾಡಲೇಬೇಕಿದೆ. ಎಲ್ಲಿಯೇ ಯಾವುದೇ ದಲಿತ ವ್ಯಕ್ತಿಗೆ ಅನ್ಯಾಯವಾದರೂ ಕೂಡಲೇ ನೆರವಿಗೆ ಧಾವಿಸಿ ಶೋಷಕರ ವಿರುದ್ಧ ಸಿಡಿದೇಳಬೇಕಿದೆ. ಇಲ್ಲದೇ ಹೋದರೆ ಹಿಂದುತ್ವದ ಹೆಸರಲ್ಲಿ ಮತ್ತೆ ಮೇಲ್ಜಾತಿ ವೈದಿಕಶಾಹಿ ಸರ್ವಾಧಿಕಾರವನ್ನು ಪಡೆದು ಮನುಸ್ಮೃತಿಯನ್ನು ಜಾರಿಗೆ ತರುತ್ತದೆ. ಹಾಗೇನಾದರೂ ಆದಲ್ಲಿ ಮತ್ತೆ ಶ್ರೇಣೀಕೃತ ಸಮಾಜ, ಮತ್ತೆ ವರ್ಣಾಶ್ರಮ ಪದ್ಧತಿ, ಮತ್ತೆ ಚಾತುರ್ವರ್ಣ ಸಂಸ್ಕೃತಿ ಹೇರಿಕೆಯಾಗುತ್ತದೆ. 

ಆದ್ದರಿಂದ ದಲಿತ ಸಮುದಾಯ ಹಿಂದೂ ಧರ್ಮದ ಭಾಗವಲ್ಲವೆಂದು ನಿರ್ಧರಿಸಬೇಕಿದೆ. ಜಾತಿ ತಾರತಮ್ಯ ಇರುವಂತಹ ಹಿಂದೂ ಧರ್ಮ ಅಗತ್ಯವಿಲ್ಲವೆಂದು ಘೋಷಿಸಬೇಕಿದೆ. ಸಂವಿಧಾನದ ಆಶಯದಂತೆ ಎಲ್ಲಿಯವರೆಗೂ ಎಲ್ಲದರಲ್ಲೂ ದಲಿತರಿಗೂ ಸಮಾನತೆ ಸಿಗುವುದಿಲ್ಲವೋ, ಸಮಾಜದಿಂದ ಅಸ್ಪೃಶ್ಯತೆ ತೊಲಗುವುದಿಲ್ಲವೋ ಅಲ್ಲಿಯ ವರೆಗೂ ಹಿಂದೂ ಧರ್ಮವನ್ನೇ ಬಹಿಷ್ಕರಿಸಬೇಕಿದೆ. ಪ್ರತಿಯೊಬ್ಬರು ಅಂಬೇಡ್ಕರ್ ರವರ ಬದುಕಿನ ಹೋರಾಟದ ದಾರಿಯನ್ನು ಅನುಸರಿಸಬೇಕಿದೆ. ಮಾನವೀಯತೆ, ಸಮಾನತೆ ಹಾಗೂ ನಿಜವಾದ ಸ್ವಾತಂತ್ರ್ಯ ದೊರೆಯುವವರೆಗೂ ಪ್ರತಿಭಟನೆ ಮುಂದುವರೆಸಲೇ ಬೇಕಿದೆ. ಸಂವಿಧಾನ ಕೊಟ್ಟ ಸಮಾನತೆಯ ಹಕ್ಕನ್ನು ಪಡೆಯುವ ಛಲವನ್ನು ಸಂಘಟನಾತ್ಮಕವಾಗಿ ದಲಿತ ಸಮುದಾಯ ರೂಢಿಸಿಕೊಳ್ಳಬೇಕಿದೆ. ಹಿಂದುತ್ವವಾದಿ ಶಕ್ತಿಗಳನ್ನು ಶತಾಯ ಗತಾಯ ವಿರೋಧಿಸಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಅಂಬೇಡ್ಕರ್ ಸತ್ಯ; ಆರೆಸ್ಸೆಸ್ ಸುಳ್ಳು

More articles

Latest article