ಈ ಬಾರಿ ಲೋಕಸಭಾ ಚುನಾವಣೆಯು ನನ್ನ ವೈಯಕ್ತಿಕ ಚುನಾವಣೆಯಲ್ಲ, ಜಿಲ್ಲೆಯ ಸ್ವಾಭಿಮಾನಿ ಜನರ ಯಾತ್ರೆಯಾಗಿದೆ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಿಳಿಸಿದರು.
ಅವರು ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟ ಗ್ರಾಮದಲ್ಲಿ ಏರ್ಪಡಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇದ್ದ ಕೆಟ್ಟ ರಾಜಕೀಯದ ಗ್ರಹಣ ಈ ಬಾರಿ ಬಿಡಲಿದ್ದು ಯಾರು ತಮ್ಮ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದಾರೋ ಅವರು ಸ್ವಾಭಿಮಾನದ ವ್ಯಕ್ತಿಗೆ ಮತಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪರೋಕ್ಷವಾಗಿ ರೇವಣ್ಣ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದ್ದು ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸಬಲೀಕರಣರಾಗಿ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದಾರೆ, ನಮ್ಮ ತಾತನವರಾದ ಜಿ ಪುಟ್ಟಸ್ವಾಮಿಗೌಡರನ್ನು ಅಂದು ಜಿಲ್ಲೆಯ ಮತದಾರರು ಕೈಹಿಡಿದಿದ್ದರು, ಆದರೆ ನಂತರದ ಬೆಳವಳಿಗೆಗಳು ನೀವೇ ನೋಡಿದ್ದೀರಾ, ಜೆಡಿಎಸ್ ಪಕ್ಷದ ಕುಟುಂಬದವರು ಹೇಗೆ ದಬ್ಬಾಳಿಕೆ ನಡೆಸಿ ಅಧಿಕಾರ ನಡೆಸಿದ್ದಾರೆ ಎಂದು ನೀವೇ ಕಣ್ಣಾರೆ ಕಂಡಿದ್ದೀರಾ, ಆದರೆ ಈ ಬಾರಿ ಸಿಕ್ಕ ಅವಕಾಶವನ್ನು ಜನ ಕೈಚೆಲ್ಲುವುದಿಲ್ಲ ಎಂದು ನಂಬಿದ್ದೇವೆ ಮತ್ತೆ ಇಂತಹ ಅವಕಾಶ ಬರುವುದಿಲ್ಲ ಎಂದು ತಿಳಿಸಿದರು.
ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರಾದ ಕೆ ಎಂ ಶಿವಲಿಂಗೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಪುಟ್ಟಸ್ವಾಮೀಗೌಡು ಹಾಗೂ ಶ್ರೀಕಂಠಯ್ಯನವರ ನಂತರ ಕಾಂಗ್ರೆಸ್ ಗೆದ್ದ ಇತಿಹಾಸವಿಲ್ಲ ಆದರೆ ಅವರ ಮೊಮ್ಮಗ ಶ್ರೇಯಸ್‌ಪಟೇಲ್ ಅವರನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ರವರೇ ಈ ಅವಕಾಶವನ್ನು ಕಳೆದುಕೊಳ್ಳದೆ ಚುನಾವಣೆಗೆ ನಿಲ್ಲಬೇಕೆಂದು ತಿಳಿಸಿ ಪ್ರಚಾರಕ್ಕೂ ಕೂಡ ಬರುವುದಾಗಿ ಭರವಸೆ ನೀಡಿದ್ದಾರೆ ಆದ್ದರಿಂದ ಈ ಚುನಾವಣೆಯು ಸ್ವಾಭಿಮಾನದ ಯಾತ್ರೆಯಾಗಿ ಜನರ ಎದುರು ಹೇಳುತ್ತಿದ್ದೇನೆ ಜನರ ಕೈ ಹಿಡಿಯುವುದು ಶತಸಿದ್ಧ ಎಂದರು.
ಕಾರ್ಯಕ್ರಮದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ ಎಂ ಶಿವಲಿಂಗೇಗೌಡ, ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೇಯಸ್ ಎಮ್ ಪಟೇಲ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣ್,ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಕಾಂಗ್ರೆಸ್ ಮುಖಂಡರಾದ ಎಚ್ ಕೆ ಮಹೇಶ್, ಎಮ್ ಶಂಕರ್, ಎನ್ ಡಿ ಕಿಶೋರ್, ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಯುವರಾಜ್, ಉಪ್ಪಿನಹಳ್ಳಿ ಶಶಿಕುಮಾರ್, ಎಚ್ಎನ್ ರವಿ, ಯಲಿಯೂರ್ ಪ್ರಸಾದ್, ನಾಡನಹಳ್ಳಿ ಆನಂದ್, ಬರಗೂರು ಶಂಕರ್, ಕುಂಬೆನಹಳ್ಳಿ ಪಾಂಡುರಂಗ, ಕೇಶವಗೌಡ, ಸೇರಿದಂತೆ ಇತರರು ಹಾಜರಿದ್ದರು.