ಹಾಸನ-ಮಂಗಳೂರು ಸಂಪರ್ಕ ಕಲ್ಪಿಸುವ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತವಾಗಿದೆ. ಭಾರೀ ಪ್ರಮಾಣದ ಮಣ್ಣು, ಮರ-ಗಿಡಗಳು ಹಳಿಯ ಮೇಲೆ ಬಿದ್ದಿದೆ. ಆದ್ದರಿಂದ ಹಾಸನ-ಮಂಗಳೂರು ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ಹಳಿಯ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದ್ದು, ಮರಗಳು ಸಹ ಬಿದ್ದಿವೆ. ಕಿಲೋಮೀಟರ್ ಸಂಖ್ಯೆ 42/43ರ ಮಧ್ಯೆ ಈ ಭೂಕುಸಿತವಾಗಿದೆ.
ಹಳಿಯ ಮೇಲೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ. ಆದರೆ ಈ ಕಾರ್ಯಾಚರಣೆ ಮುಗಿಯಲು ಹಲವಾರು ಗಂಟೆಗಳು ಬೇಕು ಎಂದು ಅಂದಾಜಿಸಲಾಗಿದೆ.
ಹಾಸನ-ಮಂಗಳೂರು ಮತ್ತು ಮಂಗಳೂರು-ಹಾಸನ ರೈಲು ಸಂಚಾರ ಸ್ಥಗಿತವಾಗಿದೆ. ಸಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ 6 ಕಡೆ ವಿವಿಧ ರೈಲುಗಳನ್ನು ದಿಢೀರ್ ಎಂದು ನಿಲುಗಡೆ ಮಾಡಲಾಗಿದೆ. ರೈಲಿನಲ್ಲೇ ಗಂಟೆಗಟ್ಟಲೆ ಕುಳಿತುಕೊಳ್ಳುವ ಸ್ಥಿತಿ ಪ್ರಯಾಣಿಕರಿಗೆ ಎದುರಾಗಿದೆ.