ಹಾಸನದಲ್ಲಿ ಮೇ 30 ರಂದು ಜನಸಾಗರವೇ ನೆರೆಯಿತು… ಸಾವಿರ ಸಾವಿರ ಹೆಜ್ಜೆಗಳು ಕದಲಿದವು, ತಿಂಗಳಿಂದ ರಾಜ್ಯದಾದ್ಯಂತ ಮಡುಗಟ್ಟಿದ್ದ ಆಕ್ರೋಶದ ಕಟ್ಟೆ ಒಡೆದು ಪ್ರಜ್ವಲ್ ರೇವಣ್ಣ ವಿರುದ್ಧದ ಘೋಷಣೆಗಳಾಗಿ ಹಾಸನದ ಮುಖ್ಯ ಬೀದಿಗಳಲ್ಲಿ ಮೊಳಗಿದವು. ಕರ್ನಾಟಕದ ಉತ್ತರ ತುದಿಯ ಬೀದರ್, ಕಲಬುರಗಿಗಳಿಂದ ಹಿಡಿದು ದಕ್ಷಿಣ ತುದಿಯ ಮಂಗಳೂರಿನವರೆಗೂ ಹೋರಾಟಗಾರರು, ಸಾಮಾನ್ಯ ಮಹಿಳೆಯರು, ಸಾಹಿತಿ ಬರೆಹಗಾರರು ಬಂದು ತಮ್ಮ ಸಾತ್ವಿಕ ಪ್ರತಿರೋಧವನ್ನು ದಾಖಲಿಸಿದರು. ಈ ಅಭೂತಪೂರ್ವ ಪ್ರತಿಭಟನೆ ಹಾಸನದ ನೆಲದಲ್ಲಿ ಒಂದು ಇತಿಹಾಸವನ್ನೇ ಬರೆಯಿತು.
ಕನ್ನಡ ನಾಡಿನಲ್ಲಿ ಸಾವಿರಾರು ಹೋರಾಟಗಳು, ಇತ್ತೀಚಿ್ನ ವರ್ಷಗಳಲ್ಲಿ ಹತ್ತಾರು ಚಲೋಗಳು ನಡೆದಿವೆ. ಪ್ರತಿಯೊಂದು ಹೋರಾಟ, ಆಂದೋಲನವೂ ಒಂದು ಇತಿಹಾಸವೇ ಎಂಬುದರಲ್ಲಿ ಎರಡು ಮಾತಿಲ್ಲ. ಕರ್ನಾಟಕದ ಸಾಮಾಜಿಕ ಪ್ರಜ್ಞೆಗೆ ಸಾಣೆ ಹಿಡಿಯುವ ನಿಟ್ಟಿನಲ್ಲಿ ಈಗ ನಡೆದಿರುವ ʼಹಾಸನ ಚಲೋʼ ಆಂದೋಲನ ವಹಿಸಿರುವ ಪಾತ್ರ ವಿಶೇಷವಾದುದು. ಬಲಾಢ್ಯ ಕುಟುಂಬವೊಂದು ಆಧುನಿಕ ಪ್ರಜಾಪ್ರಭುತ್ವವನ್ನೇ ಬಳಸಿಕೊಂಡು ಒಂದಿಡೀ ಜಿಲ್ಲೆಯನ್ನೇ ತನ್ನ ಜಾಗೀರು ಎಂಬಂತೆ ವರ್ತಿಸುತ್ತಾ ಆಟ ಆಡುವ ಸಂದರ್ಭದಲ್ಲಿ ಆ ಕುಟುಂಬದ ಆಟಾಟೋಪಗಳನ್ನು ಪ್ರಶ್ನಿಸಿ, ವಿರೋಧಿಸಿ ಈ ʼಹಾಸನ ಚಲೋʼ ನಡೆಯಿತು.
ಏಪ್ರಿಲ್ 22ರಂದು ಕನ್ನಡ ಪ್ಲಾನೆಟ್ ಮಾಧ್ಯಮದ ಮೂಲಕ ಇಡೀ ರಾಜ್ಯದ ಜನತೆಗೆ ʼಪ್ರಜ್ವಲ್ ರೇವಣ್ಣ ನಡೆಸಿದ್ದ ವಿಕೃತ ಲೈಂಗಿಕ ದೌರ್ಜನ್ಯ ಮತ್ತು ದಬ್ಬಾಳಿಕೆಗಳು ಜಗಜ್ಜಾಹೀರಾದವು. ವಿಷಯ ಕೇಳಿಸಿಕೊಂಡವರು ಬೆಚ್ಚಿಬಿದ್ದರು, ತಮ್ಮ ಕಳವಳವನ್ನು ಫೇಸ್ಬುಕ್ ನಂತಹ ವೇದಿಕೆಗಳ ಮೂಲಕ ಹಂಚಿಕೊಂಡರು. ಮೂರು ದಿನಗಳ ನಂತರ ಪವರ್ ಟಿವಿಯಲ್ಲಿ ವರದಿಯಾಯಿತು. ಈ ಮೂಲಕ ಹಾಸನವನ್ನು ದಾಟಿ ನಾಡಿಗೆ ದೇಶಕ್ಕೆ ಅನಾವರಣಗೊಳ್ಳುತ್ತಾ ಹೋದ ಪ್ರಕರಣ ಕೆಲವೇ ದಿನಗಳಲ್ಲಿ ದೇಶಮಟ್ಟದ ಸುದ್ದಿಯಾಯಿತು. ಆದರೆ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಇದನ್ನು ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿ ಮತ್ತು ಪ್ರತಿಷ್ಠೆಗಳ ಮೂಲಕ ನೋಡುತ್ತಾ ಪರಸ್ಪರ ದೋಷಾರೋಪಣೆ ಮಾಡುತ್ತಾ ಬಂದರೇ ಹೊರತು ಯಾರೂ ʼಪ್ರಜ್ವಲ್ʼ ರೇವಣ್ಣʼನ ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾದ ನೂರಾರು, ಸಾವಿರಾರು ಮಹಿಳೆಯರ ಘನತೆ ಗೌರವದ ಕುರಿತು ಯೋಚಿಸಲಿಲ್ಲ, ಅವರಿಗೆ ಆಗಿರಬಹುದಾದ ಆಘಾತ ನೋವುಗಳ ಕುರಿತು ಮಾತಾಡಲಿಲ್ಲ. ಕರ್ನಾಟಕ ರಾಜ್ಯ ಮಹಿಳಾ ಆಯೋಗ ನೀಡಿದ ದೂರನ್ನು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ತನಿಖಾ ತಂಡ (SIT) ನೇಮಿಸಿದ್ದೊಂದು ಸಮಾಧಾನಕರ ವಿಷಯ. ಪ್ರಜ್ವಲ್ ರೇವಣ್ಣನ ಚಿಕ್ಕಪ್ಪ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ದಿನಕ್ಕೊಂದು ತರದ ಹೇಳಿಕೆಗಳು ಇಡೀ ಪ್ರಕರಣದ ಗಂಭೀರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯಶಸ್ವಿಯಾದವು. ಆರೋಪಿ ಪ್ರಜ್ವಲ್ ರೇವಣ್ಣನನ್ನು ದೇಶದಿಂದಲೇ ತಪ್ಪಿಸಿಕೊಂಡು ಓಡಿ ಹೋಗಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡೂ ಅವಕಾಶ ಮಾಡಿಕೊಟ್ಟದ್ದಕ್ಕೆ ಇಡೀ ರಾಜ್ಯದ ಜನರು ಆಕ್ರೋಶ ತೋರುತ್ತಲೇ ಬಂದಿದ್ದಾರೆ. ಇವೆಲ್ಲದರ ಒತ್ತಡಕ್ಕೆ ಪ್ರಜ್ವಲ್ ರೇವಣ್ಣನ ತಾತ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ತಮ್ಮ ಮೊಮ್ಮಗನನ್ನು ರಕ್ಷಿಸಲು ತಮ್ಮ ಮುತ್ಸದ್ದಿತನವನ್ನೇ ಕಳೆದು ಕೊಂಡರು. ನಿಜವಾಗಿಯೂ ಅವರು ತಮ್ಮ ಮತ್ಸದ್ದಿತನವನ್ನು ಮೆರೆದು ತಮ್ಮ ಮೊಮ್ಮೊಗನನ್ನು ತಿಂಗಳ ಹಿಂದೆಯೇ ಕಾನೂನಿಗೆ ಒಪ್ಪಿಸುವ ಕೆಲಸ ಮಾಡಿದ್ದರೆ ನಾಡಿನ ಜನರ ದೃಷ್ಟಿಯಲ್ಲಿ ಮತ್ತಷ್ಟು ಎತ್ತರವಾಗಿ ಕಾಣುತ್ತಿದ್ದರು. ಆದರೆ ಹೀಗಾಗಲೇ ಇಲ್ಲ. ಕೊನೆಯಲ್ಲಿ ಜನರ ಕಣ್ಣಿಗೆ ಮಣ್ಣೆರಚುವ ರೀತಿಯಲ್ಲಿ “ಪ್ರಜ್ವಲ್ ರೇವಣ್ಣನಿಗೆ ಎಚ್ಚರಿಕೆ ಪತ್ರʼ ಬರೆದು ನಗೆಪಾಟಲಿಗೀಡಾದರು.
ಈ ಎಲ್ಲದರ ನಡುವೆ ನಾಡಿನ ಹಾಗೂ ಹಾಸನದ ಪ್ರಜ್ಞಾವಂತರ ಪ್ರಯತ್ನದಿಂದ ಸಂಘಟಿತವಾದ ʼಹಾಸನ ಚಲೋʼ ಅತ್ಯಗತ್ಯವಾಗಿ ಆಗಬೇಕಿದ್ದ ಕೆಲಸವನ್ನು ಮಾಡಿದೆ. ಅದೇನೆಂದರೆ ಈ ಪ್ರಕರಣದಲ್ಲಿ ರಾಜಕಾರಣಿಗಳ ಪರಸ್ಪರ ಕೆಸರೆರಚಾಟದಲ್ಲಿ ಬದಿಗೆ ಸರಿಸಲ್ಪಟ್ಟ ವಿಷಯಕ್ಕೆ ಪ್ರಾಮುಖ್ಯತೆ ನೀಡುವ ಕೆಲಸ. ಅಂದರೆ ನೊಂದ ಮಹಿಳೆಯರಿಗೆ ಧೈರ್ಯ ನೀಡುವ ಕೆಲಸ. ಪುರುಷಹಂಕಾರವೇ ಠೇಂಕರಿಸುತ್ತಿದ್ದ ಹೊತ್ತಿನಲ್ಲಿ “ನಾವು ನಿಮ್ಮೊಂದಿಗಿದ್ದೇವೆ, ಧೈರ್ಯ ಕಳೆದುಕೊಳ್ಳಬೇಡಿ, ನಿಮಗಾಗಿ ಧ್ವನಿ ಎತ್ತುತ್ತೇವೆ” ಎಂಬ ಸಂದೇಶವನ್ನು ಹಾಸನದಲ್ಲಿ ಹೆಜ್ಜೆಹಾಕಿದ ಸಹಸ್ರ ಸಹಸ್ರ ಜನರು ಒಕ್ಕೊರಲಿನಿಂದ ನುಡಿದರು. ಇದು ಈ ಹೊತ್ತಿಗೆ ಅತ್ಯಗತ್ಯವಾಗಿ ಆಗಬೇಕಾಗಿದ್ದ ಕೆಲಸವಾಗಿತ್ತು. ಈ ಮೂಲಕ ಹಳಿತಪ್ಪಿ ಹೋಗಿದ್ದ ʼಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ” ಪ್ರಕರಣಕ್ಕೆ ಸರಿಯಾದ ತಿರುವು ನೀಡುವ ಕೆಲಸವನ್ನು ಈ ಹೋರಾಟ ಮಾಡಿದೆ ಎಂಬುದು ಸಮಾಧಾನದ ವಿಷಯ.
ಈ ಆಂದೋಲನ ಸಂಘಟನೆಗೊಂಡ ರೀತಿಯ ಬಗ್ಗೆ ಎರಡು ಮಾತು ಹೇಳಬೇಕು. ಬಹಳ ಮುಖ್ಯವಾಗಿ ಈ ಆಂದೋಲನದ ಮುಂಚೂಣಿಯಲ್ಲಿ ಮಹಿಳೆಯರೇ ಇದ್ದುದು ದೊಡ್ಡ ಸಂದೇಶವನ್ನೇ ನೀಡಿತೆನ್ನಬಹುದು. ಹಾಸನದಲ್ಲಿ ರಾಜ್ಯ ಮಟ್ಟದ ಸಮಾಲೋಚನಾ ಸಭೆಯೊಂದನ್ನು ನಡೆಸಿ ಹತ್ತು ಹಲವು ಸಂಘಟನೆ, ವ್ಯಕ್ತಿಗಳನ್ನು ಇದರ ಭಾಗವಾಗುವಂತೆ ಮಾಡಲಾಯಿತು. ಸುಮಾರು 140ಕ್ಕೂ ಹೆಚ್ಚು ಜನಪರ, ಪ್ರಗತಿಪರ ಸಂಘಟನೆಗಳು ಈ ಚಳವಳಿಯ ಭಾಗವಾದವು. ಬರಹಗಾರರೂ ಸಾಮಾಜಿಕ ಕಾರ್ಯಕರ್ತರೂ ಆದ ರೂಪ ಹಾಸನ, ಕಮ್ಯುನಿಸ್ಟ್ ಮುಂದಾಳುಗಳಾದ ಧರ್ಮೇಶ್, ನವೀನ್ ಕುಮಾರ್, ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ, ದಲಿತ ಮುಖಂಡ ಸಂದೇಶ್, ಮಾದಿಕ ದಂಡೋರ ಜಿಲ್ಲಾಧ್ಯಕ್ಷ ವಿಜಯಕುಮಾರ್, ಸಮತಾ ಬಿಜಿವಿಎಸ್ ನ ಮಮತ ಶಿವು ಸೇರಿದಂತೆ ಹಾಸನದ ಪ್ರಮುಖ ಹೋರಾಟಗಾರರು ತೋರಿದ ಪ್ರಬುದ್ಧತೆ ಸಹ ಇಲ್ಲಿ ಮುಖ್ಯವಾಗುತ್ತದೆ. ರಾಷ್ಟ್ರಕವಿ ಕುವೆಂಪು ಅವರ “ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ” ಎಂಬ ತಿಳುವಳಿಕೆಯನ್ನು ಅಕ್ಷರಶಃ ಪಾಲಿಸುವ ಮೂಲಕ ಇದೊಂದು ಸಮೂಹ ಹೊಣೆಗಾರಿಕೆಯ ಹಾಗೂ ಸಮೂಹ ಸಮಾನ ಭಾಗೀದಾರಿಕೆಯ ಚಳವಳಿಯಾಗಿ ರೂಪಿಸಿದ್ದು ಕರ್ನಾಟಕದ ಮಟ್ಟಿಗೆ ಹೊಸ ಪ್ರಯತ್ನ. ಇದಕ್ಕಾಗಿ ಇವರೆಲ್ಲರೂ ಅಭಿನಂದನಾರ್ಹರು. ಎಲ್ಲಾ ಅಂದೋಲನಗಳಂತೆಯೇ ಇದರ ಯಶಸ್ಸಿಗೆ ದುಡಿದ ಅನೇಕ ಸಂಘಟನೆಗಳ ನೂರಾರು ಪ್ರಾಮಾಣಿಕ ಕಾರ್ಯಕರ್ತರ ಬದ್ಧತೆಯೂ ಮೆಚ್ಚುಗೆಗೆ ಅರ್ಹವಾಗಿದೆ.
ಯಾವುದೇ ಪಕ್ಷ, ಸಂಘಟನೆಗಳ ಬಾವುಟ ಪ್ರದರ್ಶನ, ನಾವು ಮೇಲು ತಾವು ಮೇಲು ಎಂಬ ರೀತಿಯಲ್ಲಲ್ಲದೆ ʼಇಲ್ಲಿ ಮಹಿಳೆಯರ ಧ್ವನಿ ಮತ್ತು ನೊಂದ ಮಹಿಳೆಯರ ಪರವಾದ ಧ್ವನಿʼ ಮುಖ್ಯ ಎಂಬ ನಿಟ್ಟಿನಲ್ಲಿ ಹಾಸನ ಚಲೋ ನಡೆಯಿತು. ಅಂದು ಅಲ್ಲಿ ದೊಡ್ಡ ದೊಡ್ಡ ಸಂಘಟನೆಗಳ ದೊಡ್ಡ ನಾಯಕರಿದ್ದರೂ ಯಾರಿಗೂ ತಾವೇ ವೇದಿಕೆ ಏರಬೇಕು, ಭಾಷಣ ಬಿಗಿಯಬೇಕು ಎಂಬ ತಹತಹವಿರಲಿಲ್ಲ. ಈ ಮಹತ್ತರ ಆಂದೋಲನದಲ್ಲಿ ತಮ್ಮ ಹೆಜ್ಜೆಗುರುತುಗಳೂ ದಾಖಲಾಗಲಿ ಎಂಬ ಆಶಯವಿತ್ತು, ನಾಡಿನ ಕೋಟ್ಯಂತರ ಜನರ ಬೇಗುದಿಯನ್ನು ಹೊತ್ತು, ಸಂಕಟ ಆಕ್ರೋಶಗಳನ್ನು ಇಲ್ಲಿಗೆ ತಂದವರೇ ಎಲ್ಲರೂ ಆಗಿದ್ದರು.
ಕಳೆದ ಕೆಲವಾರು ದಶಕಗಳಲ್ಲಿ ಹಾಸನದಲ್ಲಿ ರೂಪುಗೊಂಡಿರುವ ಹೊಸ ಪಾಳೆಗಾರಿ ವ್ಯವಸ್ಥೆಯಲ್ಲಿ ಹಾಸನ ಯಾವ ಪರಿ ನಲುಗಿ ಹೋಗಿದೆ ಎಂಬುದನ್ನು ಬಲ್ಲವರೇ ಬಲ್ಲರು. ರೇವಣ್ಣ ಅವರ ಹೆಂಡತಿ ಭವಾನಿ ರೇವಣ್ಣ ಮತ್ತು ಅವರ ಪುತ್ರರತ್ನ ಪ್ರಜ್ವಲ್ ರೇವಣ್ಣ ನಡೆಸಿಕೊಂಡು ಬಂದ ದರ್ಪ, ದೌರ್ಜನ್ಯ, ದಮನಗಳಿಗೆ ಕೊನೆಯೇ ಇಲ್ಲ ಎನ್ನುವಂತ ದಾರುಣ ಕತೆಗಳು ಇಲ್ಲೀಗ ಕೇಳಿಬರುತ್ತಿವೆ. “ಭಯ, ಆತಂಕ” ಎಂಬುದು ನಿಲ್ಲಿ ನಿತ್ಯದ ಮಾತಾಗಿ ಹೋಗಿದೆ. ಈ ಕುಟುಂಬದ ವಿರುದ್ಧ ಯಾರೂ ಮಾತಾಡುವಂತೆಯೇ ಇಲ್ಲ, ಮಾತಾಡಿದರೆ ಉಳಿಗಾಲವಿಲ್ಲ ಎಂಬಂತಹ ಸನ್ನಿವೇಶ ನಿರ್ಮಾಣವಾಗಿದೆ. ಸಾಲದ್ದಕ್ಕೆ ಜಾತಿ ದುರಭಿಮಾನವನ್ನೂ ಈ ದಬ್ಬಾಳಿಕೆಗೆ ದಾಳವಾಗಿ ಬಳಸಿಕೊಂಡ ಕುಟುಂಬ ರಾಜಕಾರಣ ಇಲ್ಲಿದೆ. ಇಂತಹ ಸನ್ನಿವೇಶದಲ್ಲಿ ಬಯಲಾಗಿರುವುದು ʼಪ್ರಜ್ವಲ್ ರೇವಣ್ಣನʼ ವಿಕೃತಿಗಳು ಮತ್ತು ಲೈಂಗಿಕ ದೌರ್ಜನ್ಯಗಳು.
ಚುನಾವಣೆಯ ಸಂದರ್ಭದಲ್ಲಿ ಪೆನ್ ಡ್ರೈವ್ ಮೂಲಕ ಈ ಪ್ರಕರಣವನ್ನು ಹೊರಕ್ಕೆ ತಂದು ಸಾವಿರಾರು, ಲಕ್ಷಾಂತರ ಜನರು ಆ ವಿಡಿಯೋಗಳನ್ನು ನೋಡುವಂತೆ ಮಾಡಿದವರ ಸ್ವಾರ್ಥ ಹಿತಾಸಕ್ತಿ ಮತ್ತು ಹೊಣೆಗೇಡಿತನಗಳು ಸಹ ಇಲ್ಲಿ ಪ್ರಶ್ನಾರ್ಹವಾಗಿವೆ. ಈ ಮೂಲಕ ಅಷ್ಟು ಮಹಿಳೆಯರ ಮಾನ ಬೀದಿಯಲ್ಲಿ ಹರಾಜಾಗಿಸಿದ್ದು ಸಹ ಅಪರಾಧವೇ. ನಂತರದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಈ ಹೆಣ್ಣುಮಕ್ಕಳ ಕುಟುಂಬ ಗುರುತುಗಳ ಸಮೇತವಾಗಿ ಸೆಕ್ಸ್ ವಿಡಿಯೋಗಳನ್ನು ಮಾಡಿ ಟೆಲಿಗ್ರಾಂ, ಟೆರಾಬಾಕ್ಸ್ ನಂತಹ (telegram, Terrabox) ಮೊಬೈಲ್ ಅಪ್ಲಿಕೇಶನ್ ಗಳ (Apps) ಮೂಲಕ ಹಂಚಿದವರ ವಿಕೃತಿಗೆ ಏನು ಹೇಳುವುದು? ಇಂತಹ ಪ್ರಯತ್ನಗಳನ್ನು ತಡೆಯುವ ಯಾವ ಪ್ರಯತ್ನ ಸೈಬರ್ ಪೊಲೀಸರಿಂದ ನಡೆಯಿತು? ಸರ್ಕಾರದ ಗೃಹ ಇಲಾಖೆ ಈ ವಿಷಯದಲ್ಲಿ ಸಂಪೂರ್ಣ ಮೌನಬೆಂಬಲವನ್ನೇ ನೀಡಿದೆಯೆನ್ನಬೇಕು. “ಹಾಸನ ಚಲೋ” ಈ ಹೊಣೆಗೇಡಿತನದ ಕುರಿತು ಸಹ ಜನರನ್ನು ಸೆನ್ಸಿಟೈಸ್ ಮಾಡುವ ಕೆಲಸ ಮಾಡಿತು. ʼಸೆಕ್ಸ್ ವಿಡಿಯೋಗಳನ್ನು ಮಾಡಿ ವಿಕೃತಿ ಮೆರೆದ ಪ್ರಜ್ವಲ್ ರೇವಣ್ಣʼನಿಗೆ ಕಠಿಣ ಶಿಕ್ಷೆ ನೀಡುವ ಜೊತೆಗೆ ನಂತರದಲ್ಲಿ ಅವುಗಳನ್ನು ಹಂಚಿಕೊಂಡವರ ಮೇಲೂ ಕಾನೂನು ಕ್ರಮಕ್ಕೆ ʼಹಾಸನ ಚಲೋ ಆಗ್ರಹಿಸಿದೆʼ.
ಎಂತಹ ಸನ್ನಿವೇಶದಲ್ಲಿ, ಯಾವ ಒತ್ತಡಗಳಿಂದಾಗಿ, ಎಂತಹ ಪ್ರಭಾವ ಗಳಿಂದಾಗಿ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದರು? ತಮ್ಮ ವಿಡಿಯೋಗಳನ್ನು ಪ್ರಜ್ವಲ್ ರೇವಣ್ಣ ಮಾಡಿಕೊಂಡಾದ ನಂತರದಲ್ಲಿ ಈ ಹಿಂದಿನ ಕೆಲ ವರ್ಷಗಳಲ್ಲಿ ಈ ಮಹಿಳೆಯರು ಎದುರಿಸಿ ಮಾನಸಿಕ ತಲ್ಲಣಗಳು ಯಾವ ಬಗೆಯವು? ಕೌಟುಂಬಿಕವಾಗಿ ಅವರು ಎದುರಿಸಿರುವ ಆಘಾತಗಳು ಏನು? ಇದೀಗ ಪೆನ್ ಡ್ರೈವ್ ಮೂಲಕ ಜಗಜ್ಜಾಹೀರಾದ ನಂತರ ಅವರೆಲ್ಲಾ ಎದುರಿಸುತ್ತಿರುವ ಒತ್ತಡ ಯಾವ ಬಗೆಯವು? ಈ ಸಂಗತಿಗಳು ಮುಖ್ಯವಾಗುತ್ತವೆ. ನಾಲ್ಕು ವರ್ಷಗಳ ಹಿಂದಿನ ವಿಡಿಯೋಗಳು ಎಂಬ ನೆಪದಲ್ಲಿ ಪ್ರಮುಖ ಅಪರಾಧಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡು ಬಿಡಬಹುದೇ? ಈ ಹೊತ್ತಿಗಾಗಲೇ ಈ ಪ್ರಭಾವಿ ಮತ್ತು ಪ್ರಬಲ ಕುಟುಂಬ ಬಹುತೇಕ ಸಾಕ್ಷ್ಯಗಳನ್ನು ನಾಶ ಮಾಡಿರಲು ಸಾಧ್ಯವಿಲ್ಲವೆ? ಈ ಮೂಲಕ ಹೇಗೇ ತನಿಖೆ ನಡೆದರೂ ಅಪರಾಧಿ ಕಾನೂನಿನ ಕುಣಿಕೆಯಿಂದ ಸುಲಭವಾಗಿ ಪಾರಾಗಿಬಿಟ್ಟರೆ? ಇನ್ನು ನಾಲ್ಕು ದಿನಗಳಲ್ಲಿ ಹೊರಬರಲಿರುವ ಚುನಾವಣಾ ಫಲಿತಾಂಶದಲ್ಲಿ ಆತನೇ ಗೆದ್ದು ಬಂದರೆ ಇನ್ನೂ ಏನಾಗಬಹುದು? ಇದೇ ಸಂದರ್ಭದಲ್ಲಿ ಇವನನ್ನು ರಕ್ಷಿಸಲು ಎಲ್ಲಾ ನೆರವನ್ನು ನೀಡಿದ ಮೋದಿಯ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬಂದರೆ? ಅವನ ಪುರುಷ ದುರಹಂಕಾರ ಮತ್ತು ಕೌಟುಂಬಿಕ ದರ್ಪಗಳಿಗೆ ಮತ್ತಷ್ಟು ಇಂಬು ದೊರೆತು ಹಾಸನದಲ್ಲಿ ಮತ್ತಷ್ಟು ಲೈಂಗಿಕ ಹತ್ಯಾಕಾಂಡಗಳು ನಡೆಯುವಂತಾದರೆ?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಎಚ್ಚೆತ್ತ ಜನತೆಯ ಪ್ರಜ್ಞೆ ದುಷ್ಟರಿಗೆ ಸರಿಯಾದ ಪಾಠ ಕಲಿಸಲು ಸಾಧ್ಯವಿದೆ ಎಂಬ ಸೂಚನೆಯನ್ನು ʼಹಾಸನ ಚಲೋʼ ನೀಡಿದೆ. ಈ ಹೋರಾಟ ಇನ್ನೂ ಆರಂಭವಾಗಿದೆ. ಇದುವರೆಗೆ ನಡೆದಿರುವ ರೀತಿಯಲ್ಲಿಯೇ ಮುಂದಿನ ದಿನಗಳಲ್ಲಿ ಒಂದು ದಿಟ್ಟ ʼಸಮೂಹ ಪ್ರಯತ್ನʼವಾಗಿ ಮುನ್ನಡೆದಲ್ಲಿ ಅಪರಾಧಿ ಎಷ್ಟೇ ದುಷ್ಟನಾದರೂ, ಎಷ್ಟೇ ಹುಂಬನಾದರೂ ಜನರ ಶಕ್ತಿಯ ಎದುರು ಮಣ್ಣುಮುಕ್ಕಿಸಲು ಸಾಧ್ಯವಿದೆ. ಅದು ಆಗಲೇಬೇಕು.
- ಹರ್ಷಕುಮಾರ್ ಕುಗ್ವೆ