ವಿಜಯನಗರ: ಪ್ರಸಕ್ತ ಸಾಲಿನ ಹಂಪಿ ಉತ್ಸವವನ್ನು ಫೆಬ್ರುವರಿ 28ರಿಂದ ಮೂರು ದಿನಗಳ ಕಾಲ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ವರ್ಷ ಒಂದು ತಿಂಗಳು ವಿಳಂಬವಾಗಿದ್ದು, ಬಿರು ಬೇಸಿಗೆಯಲ್ಲಿ ಉತ್ಸವ ನಡೆಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇಂದು ಬೆಂಗಳೂರಿನಲ್ಲಿ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದು ಒಪ್ಪಿಗೆ ಪಡೆದುಕೊಂಡಿದ್ದಾರೆ. ಫೆ.28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿ ಉತ್ಸವ ಉದ್ಘಾಟಿಸಲಿದ್ದಾರೆ. ಮಾರ್ಚ್ 1 ಮತ್ತು 2ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ. ಫೆ. 2ರಂದು ಸಮಾರೋಪ ನಡೆಯಲಿದೆ ಎಂದು ತಿಳಿದು ಬಂದಿದೆ.
ಪ್ರತಿ ವರ್ಷದಂತೆಯೆ ಈ ವರ್ಷವೂ ಅದ್ಧೂರಿ ಹಾಗೂ ಸಂಪ್ರದಾಯವಾಗಿ ಹಂಪಿ ಉತ್ಸವ ಆಚರಿಸಲಾಗುವುದು. ಉತ್ಸವದ ಸಿದ್ಧತೆ ಮಾಡಿಕೊಳ್ಳವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕಳೆದ ವರ್ಷ ಫೆಬ್ರುವರಿ 2ರಿಂದ 4ರವರೆಗೆ ಹಂಪಿ ಉತ್ಸವ ನಡೆದಿತ್ತು. ಈ ವರ್ಷ ಒಂದು ತಿಂಗಳು ವಿಳಂಬವಾಗಿ ಉತ್ಸವ ನಡೆಯುತ್ತಿದೆ. ಮಾರ್ಚ್ ತಿಂಗಳಲ್ಲಿ ಬೇಸಿಗೆ ಇದ್ದು ಬಿಸಿಲು ಹೆಚ್ಚು. ಆದರೂ ಕಾರ್ಯಕ್ರಮಗಳು ಸಂಜೆ ವೇಳೆ ನಡೆಯುವುದರಿಂದ ಸಮಸ್ಯೆ ಆಗುವುದಿಲ್ಲ ಎಂದು ಜಿಲ್ಲಾಡಳಿತ ಹೇಳುತ್ತದೆ. ಸರ್ಕಾರದ ನಿರ್ಧಾರದಂತೆ ಈಗಿನಿಂದಲೇ ಹಂಪಿ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುವುದು. ಕಳೆದ ವರ್ಷ 5 ಲಕ್ಷಕ್ಕಿಂತಲೂ ಅಧಿಕ ಮಂದಿ ಉತ್ಸವಕ್ಕೆ ಆಗಮಿಸಿದ್ದರು. ಈ ವರ್ಷ ಇನ್ನೂ ಹೆಚ್ಚಿನ ಜನರು ಆಗಮಿಸುವ ನಿರೀಕ್ಷಿ ಇದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.