Sunday, September 8, 2024

ಫೆಬ್ರವರಿ 2 ರಿಂದ ಹಂಪಿ ಉತ್ಸವ ಪ್ರಾರಂಭ : ಈ ವರ್ಷದ ವಿಶೇಷತೆ ಏನು?

Most read

ಹಂಪಿ ಉತ್ಸವವನ್ನು ಫೆಬ್ರವರಿ 02, 03 ಮತ್ತು 04ರಂದು ಮೂರು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ ತಿಳಿಸಿದ್ದಾರೆ.

2024 ರ ಹಂಪಿ ಉತ್ಸವದ ಸಿದ್ಧತೆಗಳ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಬಾರಿಯ ಹಂಪಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿಗೆ ಅವಕಾಶ ಮಾಡಿಕೊಡಲಾಗುವುದು ಎಂದ ಅವರು, ಉತ್ಸವಕ್ಕೆ ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಸಮಯವಕಾಶ ಕಡಿಮೆ ಇರುವುದರಿಂದ ಯುದ್ದೋಪಾದಿಯಲ್ಲಿ ಉತ್ಸವದ ಸಿದ್ದತೆ ಮಾಡಿಕೊಳ್ಳಲು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಬಡ್ಡಿ, ಕುಸ್ತಿ ಸೇರಿದಂತೆ ನಾನಾ ಸಾಹಸ ಕ್ರೀಡೆಗಳು, ರಂಗೋಲಿ, ಅಡುಗೆ ಸೇರಿದಂತೆ ನಾನಾ ಸ್ಪರ್ಧೆಗಳು ಇರಲಿವೆ, ಬಗೆಬಗೆಯ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆ, ವಸ್ತುಪ್ರದರ್ಶನ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಮಾತನಾಡಿ, ಫೆ.2 ರಿಂದ ಮೂರು ದಿನಗಳ ಕಾಲ ನಿಗದಿಯಾದ ಐತಿಹಾಸಿಕ ಹಂಪಿ ಉತ್ಸವವನ್ನು ಜನರ ನಿರೀಕ್ಷೆಯಂತೆ ನಡೆಸಲು ಅಗತ್ಯ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.

ಉತ್ಸವ ನಡೆಸಲು ಉತ್ಸುಕರಾಗಿರುವ ಸ್ಥಳೀಯ ಶಾಸಕರು ಸೇರಿದಂತೆ ಜಿಲ್ಲೆಯ ಎಲ್ಲ ಜ‌ನಪ್ರತಿನಿಧಿಗಳ ಸಲಹೆ ಪಡೆದು ಉತ್ಸವಕ್ಕೆ ಸಿದ್ಧತೆ ಮಾಡಲಾಗುವುದು. ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಮುಖ್ಯವಾಗಿ ಶ್ರೀ ವಿರುಪಾಕ್ಷೇಶ್ವರನ ಸನ್ನಿಧಿಯಲ್ಲಿ ನಡೆಯುವ ಕಾರ್ಯಕ್ರಮ ಇದಾಗಿದ್ದು, ಭರತನಾಟ್ಯ, ಕ್ಲಾಸಿಕಲ್ ಮ್ಯೂಸಿಕ್ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು, ಮೂರು ಬೃಹತ್ ವೇದಿಕೆಗಳು, ಧ್ವನಿ ಬೆಳಕು ಸೇರಿದಂತೆ ನಾನಾ ಕಾರ್ಯಕ್ರಮಗಳಿಗೆ ಯೋಜಿಸಲಾಗಿದೆ ಎಂದರು.

ಜನಾಕರ್ಷಣೆಗಾಗಿ ವಿಶೇಷ ಕಾರ್ಯಕ್ರಮ
ಐತಿಹಾಸಿಕ ಉತ್ಸವಕ್ಕೆ ಸ್ವಯಂ ಪ್ರೇರಣೆಯಿಂದ ಆಗಮಿಸಲು ಇಚ್ಚಿಸುವ ಖ್ಯಾತ ಗಾಯಕರನ್ನು ಕರೆತರುವ ಯೋಜನೆ ಇದೆ ಎಂದರು.

ನಾನಾ ಸ್ಪರ್ಧೆ
ಹಂಪಿ ಉತ್ಸವದಲ್ಲಿ ಪ್ರತಿ ಬಾರಿ ಸಾಂಪ್ರದಾಯಿಕವಾಗಿ ನಡೆಸುವ ಅಡುಗೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕುಸ್ತಿ ಹಾಗೂ ಕಲ್ಲು ಎತ್ತುವ ಸ್ಪರ್ಧೆ ಸೇರಿದಂತೆ ಎಲ್ಲಾ ಬಗೆಯ ಸ್ಪರ್ಧೆಗಳಿಗೆ ಉತ್ಸವದಲ್ಲಿ ಅವಕಾಶವಿರಲಿದೆ ಎಂದರು.

ನಿರಂತರ ಪ್ರಚಾರ
ಈ ಉತ್ಸವವು ಎಲ್ಲರನ್ನೊಳಗೊಳ್ಳುವ ನಿಟ್ಟಿನಲ್ಲಿ 25 ದಿನ ನಿರಂತರ ಪ್ರಚಾರ ಮಾಡುತ್ತೇವೆ. ಉತ್ಸವಕ್ಕೆ ತಡವಾಗಿ ದಿನಾಂಕ ಘೋಷಣೆಯಾದರು ಉತ್ಸವವನ್ನು ಯಶಸ್ವಿ ಮಾಡುತ್ತೇವೆ. ಇಕೋ ಫ್ರೆಂಡ್ಲಿ ಬ್ಯಾನರ್ ಮತ್ತು ಪೋಸ್ಟರ್ ಹಾಕಲಾಗುವುದು ಎಂದರು.

ಹಂಪಿ ವಿವಿಯ ಸಹಯೋಗ
ಹಂಪಿಯ ಇತಿಹಾಸದಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಕಿರೀಟವಿದ್ದಂತೆ.‌ ವಿಶ್ವವಿದ್ಯಾಲಯದ ಕುಲಪತಿಗಳು ಸೇರಿದಂತೆ ಅಲ್ಲಿನ ಎಲ್ಲ ವಿಭಾಗಗಳ ಪ್ರಾಧ್ಯಾಪಕರೊಂದಿಗೆ ಚರ್ಚಿಸಿ, ಪುಸ್ತಕ ಮಳಿಗೆ ಸೇರಿದಂತೆ ವಿಭಿನ್ನ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ವಿಶೇಷ ಕಾರ್ಯಕ್ರಮ
ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನ ಸಮುದಾಯವನ್ನು ಆಕರ್ಷಿಸಲು ಉತ್ಸವದಲ್ಲಿ ವೈವಿಧ್ಯಮಯವಾಗಿ ಕಾರ್ಯಕ್ರಮ ರೂಪಿಸಲಾಗುವುದು. ರೈತರಿಗಾಗಿ ಕೃಷಿ ಪ್ರದರ್ಶನ, ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ, ಮಹಿಳೆಯರಿಗಾಗಿ ಕ್ಲಾಸಿಕಲ್ ಸಂಗೀತ ಸೇರಿದಂತೆ ನಾನಾ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

80 ರಿಂದ 100 ಬಸ್ ಗಳನ್ನು ಸ್ಥಳೀಯರಿಗೆಂದೇ ಮೀಸಲಿಟ್ಟು ಜನರನ್ನು ಸೇರಿಸಲಾಗುವುದು. ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳ ಪ್ರಮುಖರ ಸಹಯೋಗದೊಂದಿಗೆ ಶಾಲಾ ವಾಹನಗಳ ಮೂಲಕ ವಿದ್ಯಾರ್ಥಿಗಳನ್ನು ಸೇರಿಸಲಾಗುವುದು ಎಂದರು.

ಉತ್ಸವದಲ್ಲಿ ಮಾಧ್ಯಮ ಪ್ರತಿನಿಧಿಗಳು, ಕಲಾವಿದರು, ಗಣ್ಯರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಇನ್ನಿತರರು ಉತ್ಸವದಲ್ಲಿ ಅಚ್ಚುಕಟ್ಟಾಗಿ ಭಾಗಿಯಾಗಿ ಉತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಗೊಂದಲವಾಗದಂತೆ ಪಾಸುಗಳ ವಿತರಣೆ ಮಾಡಲಾಗುವುದು ಎಂದರು. ಈ ವೇಳೆ ಜಿಪಂ ಸಿಇಒ ಸದಾಶಿವ ಪ್ರಭು ಬಿ, ಇತರರು ಇದ್ದರು.

More articles

Latest article