ಎಚ್‌–1ಬಿ ವೀಸಾಕ್ಕೆ ವಾರ್ಷಿಕ 1 ಲಕ್ಷ ಯುಎಸ್ ಡಾಲರ್‌ ಶುಲ್ಕ: ಪ್ರಧಾನಿ ಮೋದಿ ದುರ್ಬಲ ಎನ್ನುವುದಕ್ಕೆ ಇದು ಸಾಕ್ಷಿ; ರಾಹುಲ್‌ ಗಾಂಧಿ ಕಿಡಿ

Most read

ನವದೆಹಲಿ: ಅಮೆರಿಕಕ್ಕೆ ವಲಸೆ ಬರುವವರನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯರು ಸೇರಿದಂತೆ ವಿದೇಶಿಯರು ಬಳಸುವ ಎಚ್‌–1ಬಿ ವೀಸಾ ಮೇಲೆ ವಾರ್ಷಿಕ 1 ಲಕ್ಷ ಅಮೆರಿಕನ್ ಡಾಲರ್‌ ಶುಲ್ಕ ವಿಧಿಸುವ ಪ್ರಸ್ತಾವನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮತಿ ಸೂಚಿಸಿದ್ದಾರೆ. ಈ ಕ್ರಮದಿಂದ ವಿಶೇಷವಾಗಿ ಭಾರತೀಯ ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವ ಸಾಧ್ಯಗಳೇ ಹೆಚ್ಚಾಗಿವೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ  ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗದುಕೊಂಡಿವೆ.

ತಮ್ಮ ಗೆಳೆಯ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಈ ನಿರ್ಧಾರ ಕುರಿತು ಪ್ರಧಾನಿ ಮೋದಿ ಚಕಾರೆ ಎತ್ತದೇ ಇರುವುದಕ್ಕೆ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ  ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ವಿಪಕ್ಷಗಳ ನಾಯಕರು ಕಿಡಿ ಕಾರಿದ್ದಾರೆ.

ರಾಹುಲ್ ಗಾಂಧಿ ಅವರು  ಭಾರತ ದುರ್ಬಲ ಪ್ರಧಾನಿಯನ್ನು ಹೊಂದಿದೆ ಎಂದು ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ಇದಕ್ಕಿಂತ ಸಾಕ್ಷ್ಯ ಬೇಕೇ ಎಂದು ಪ್ರಶ್ನಿಸಿದ್ದಾರೆ.

 ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಅವರು ಪ್ರಧಾನಿ ಮೋದಿ ಅವರೇ, ನಿಮ್ಮ ಹುಟ್ಟುಹಬ್ಬಕ್ಕೆ ಟ್ರಂಪ್‌ ನೀಡಿರುವ ಕೊಡುಗೆಯಿಂದ  ಭಾರತೀಯರು ನೋವನ್ನು ಅನುಭವಿಸುವಂತಾಗಿದೆ. ನಿಮ್ಮ ‘ಅಬ್‌ ಕಿ ಬಾರ್‌, ಟ್ರಂಪ್ ಸರ್ಕಾರ್‌ ’ದಿಂದ ಭಾರತೀಯರಿಗೆ ಆದ ಲಾಭಗಳೇನು ಎಂದು ಪ್ರಶ್ನಿಸಿದ್ದಾರೆ.

 ಎಚ್‌-1B ವೀಸಾಗಳ ಮೇಲೆ ಒMದು ವರ್ಷಕ್ಕೆ1 ಲಕ್ಷ ಅಮೆರಿಕನ್‌ ಡಾಲರ್‌ ಶುಲ್ಕ. ಎಚ್‌-1B ವೀಸಾ ಹೊಂದಿರುವವರಲ್ಲಿ ಶೇ 70 ರಷ್ಟು ಭಾರತೀಯರೇ ಆಗಿದ್ದು ಅವರ ಉದ್ಯೋಗದ ಮೇಲೆ ದುಷ್ಪರಿಣಾಮ ಬೀರುತ್ತದೆ.  ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ವಿಧಿಸಿದ್ದರಿಂದ ಭಾರತಕ್ಕೆ ರೂ.2.17 ಲಕ್ಷ ಕೋಟಿ ನಷ್ಟವಾಗುತ್ತಿದೆ. ಚಬಹಾರ್ ಬಂದರಿನ ವಿನಾಯಿತಿಯನ್ನು ತೆಗೆದುಹಾಕಲಾಗಿದೆ. ಇದರಿಂದ ನಮ್ಮ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ನಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಹಲವು ಬಾರಿ ಹೇಳಿಕೊಂಡಿದ್ದಾರೆ. ಭಾರತೀಯ ಸರಕುಗಳ ಮೇಲೆ ಶೇಕಡ 100ರಷ್ಟು ಸುಂಕವನ್ನು ವಿಧಿಸಲು ಯುರೋಪಿನ್‌ ಒಕ್ಕೂಟಕ್ಕೆ ಟ್ರಂಪ್‌ ಕರೆ ನೀಡಿದ್ದಾರೆ. ಈ ಬಗ್ಗೆ ನೀವು ಮಾತನಾಡಲೇಬೇಕು ಎಂದು ಒತ್ತಾಯಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯಿಸಿ ದೇಶದ ಜನ ‘ಮೋದಿ, ಮೋದಿ’ ಎಂದು ಜಪಿಸುವಂತೆ ಮಾಡುವುದು ವಿದೇಶಾಂಗ ನೀತಿ ಅಲ್ಲ. ವಿದೇಶಾಂಗ ನೀತಿ ಎಂದರೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.

ಎಚ್‌–1ಬಿ ವೀಸಾ ಯೋಜನೆಯ ದುರುಪಯೋಗವು ರಾಷ್ಟ್ರೀಯ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ 1 ಲಕ್ಷ ಅಮೆರಿಕನ್ ಡಾಲರ್‌ ಪಾವತಿಸಿ ಎಚ್‌–1ಬಿ ವೀಸಾ ಪಡೆಯದ ಹೊರತು ಅಮೆರಿಕದಲ್ಲಿ ನೆಲಸಲು ಅನುಮತಿ ನೀಡುವುದಿಲ್ಲ ಎಂದು ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ತಂತ್ರಜ್ಞಾನ ಕಂಪನಿಗಳು ಭಾರತ ಸೇರಿದಂತೆ ವಿವಿಧ ದೇಶಗಳ ಸಾವಿರಾರು ನೌಕರರನ್ನು ಪ್ರತಿ ವರ್ಷ ನೇಮಕ ಮಾಡಿಕೊಳ್ಳುತ್ತಿವೆ. ಅದರಲ್ಲೂ ತಾಂತ್ರಿಕ ಪರಿಣತ ಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕ್ರಮಕ್ಕೆ ಎಚ್–1ಬಿ ವೀಸಾ ಅಗತ್ಯವಾಗಿರುತ್ತದೆ.

ಎಚ್–1ಬಿ ವಲಸೆರಹಿತ ವೀಸಾ ಕಾರ್ಯಕ್ರಮವು ಕಡಿಮೆ ಸಂಬಳ, ಕಡಿಮೆ ಕೌಶಲ್ಯದ ಕಾರ್ಮಿಕರೊಂದಿಗೆ ಅಮೆರಿಕನ್ ಕಾರ್ಮಿಕರನ್ನು ಬದಲಿಸಲು ಉದ್ದೇಶಪೂರ್ವಕವಾಗಿ ಬಳಸಿಕೊಳ್ಳಲಾಗುತ್ತಿದೆ. ಬದಲಾಗಿ ತಾತ್ಕಾಲಿಕ ಕಾರ್ಮಿಕರನ್ನು ಅಮೆರಿಕಕ್ಕೆ ಕರೆತಂದು ಹೆಚ್ಚಿನ ಕೌಶಲ್ಯದ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿದೆ ಎನ್ನುವುದು ಟ್ರಂಪ್ ಆಪಾದನೆಯಾಗಿದೆ.

ಈ ಪ್ರಮಾಣದ ವೀಸಾ ಶುಲ್ಕವನ್ನು ಪಾವತಿಸುವುದು ಕಷ್ಟ ಸಾಧ್ಯವೇ ಸರಿ. ಇದು ಎಲ್ಲ ಹಂತದ ಉದ್ಯೋಗಿಗಳಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯ ಸಾಫ್ಟ್‌ ವೇರ್‌ ಇಂಜಿನಿಯರ್‌ ಗಳು ಭಾರತಕ್ಕೆ ಮರಳಬೇಕಾಗಿ ಬರಬಹುದು ಎಂದು ಹೇಳಲಾಗುತ್ತಿದೆ.

More articles

Latest article