ಗುಲ್ಫಿಶಾ ಫಾತಿಮಾ 40,000 ಗಂಟೆಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾಳೆ!!!

Most read

ಎಪ್ರಿಲ್‌ 9,2020 ರಂದು ಫಾತಿಮಾರನ್ನು ದಿಲ್ಲಿ ಪೊಲೀಸರು ಬಂಧಿಸಿದರು. ಆಕೆಯನ್ನು ಟಾರ್ಗೆಟ್‌ ಮಾಡಲು ಮುಖ್ಯ ಕಾರಣ ಧಾರ್ಮಿಕ ತಾರತಮ್ಯದ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಆಕೆ ಶಾಂತಿಪೂರ್ವಕ ಪ್ರತಿಭಟನೆಯ ನೇತೃತ್ವ ವಹಿಸಿದ್ದು. ಗುಲ್ಫಿಶಾ ಫಾತಿಮಾ1957 ದಿನಗಳಿಂದ, ಅಂದರೆ 40,008 ಗಂಟೆಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾಳೆ – ಶ್ರೀನಿವಾಸ ಕಾರ್ಕಳ.

ಈಕೆ ಗುಲ್ಫಿಶಾ ಫಾತಿಮಾ. ಎಂ ಬಿ ಎ ಪದವೀಧರೆ. ಅತ್ಯಂತ ಪ್ರತಿಭಾವಂತ ಯುವತಿ. ದಿಲ್ಲಿಯ ನಿವಾಸಿ.

2020 ರಲ್ಲಿ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿ ಎ ಎ) ವಿರೋಧಿ ಹೋರಾಟ ನಡೆಯಿತು. ಇದರ ಬೆನ್ನಿಗೇ ಉತ್ತರ ದಿಲ್ಲಿಯಲ್ಲಿ ಭೀಕರ ಕೋಮು ಗಲಭೆಯೂ ನಡೆಯಿತು. ಅಧಿಕೃತವಾಗಿ 50 ಮಂದಿ ಜೀವ ಕಳೆದುಕೊಂಡರು. ಇದರಲ್ಲಿ ಮೂರನೇ ಎರಡರಷ್ಟು ಮಂದಿ ಮುಸ್ಲಿಮರು.

ಗುಲ್ಫಿಶಾ ಫಾತಿಮಾ

ಸ್ನೇಹಿತರಿಂದ ʼಗುಲ್‌ʼ ಎಂದೇ ಕರೆಸಿಕೊಳ್ಳುವ ಗುಲ್ಫಿಶಾ ಫಾತಿಮಾ ಈ ಸಿ ಎ ಎ ವಿರೋಧಿ ಪ್ರತಿಭಟನಾ ಪ್ರದರ್ಶನದಲ್ಲಿ ತನ್ನನ್ನು ತೀವ್ರವಾಗಿ ತೊಡಗಿಸಿಕೊಂಡಳು. ಮುಂಚೂಣಿಯಲ್ಲಿ ನಿಂತಳು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದಳು. ಪ್ರತಿಭಟನಾ ಸ್ಥಳದಲ್ಲಿಯೇ ಸ್ಥಳೀಯ ಮುಸ್ಲಿಂ ಮಹಿಳೆಯರಿಗೆ ಆಕೆ ಇಂಗ್ಲಿಷ್‌ ಕಲಿಸುವ ಕೆಲಸವನ್ನೂ ಮಾಡಿದ್ದಳು.

ಜೈಲಿಗೆ ಫಾತಿಮಾ

ಎಪ್ರಿಲ್‌ 9,2020 ರಂದು ಫಾತಿಮಾರನ್ನು ದಿಲ್ಲಿ ಪೊಲೀಸರು ಬಂಧಿಸಿದರು. ಜಫರಾಬಾದ್‌ ಪ್ರತಿಭಟನೆಯ ಪ್ರಕರಣದಲ್ಲಿ ಆಕೆಯ ಮೇಲೆ ಎಫ್‌ ಐ ಆರ್‌ ಸಂಖ್ಯೆ 48/2020 ದಾಖಲಾಯಿತು. ಗಲಭೆ ನಡೆಸಿದ್ದು ಮತ್ತು ಸರಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ್ದು ಸೇರಿದಂತೆ ಇಂಡಿಯನ್‌ ಪೀನಲ್‌ ಕೋಡ್‌ ನ ಅನೇಕ ಸೆಕ್ಷನ್‌ ಗಳ ಅಡಿಯಲ್ಲಿ ಆಕೆಯ ಮೇಲೆ ಈ ಆರೋಪ ಹೊರಿಸಲಾಯಿತು. ಆಕೆಯನ್ನು ಟಾರ್ಗೆಟ್‌ ಮಾಡಲು ಮುಖ್ಯ ಕಾರಣ ಬೇರೆಯೇ ಇತ್ತು. ಅದೆಂದರೆ, ಧಾರ್ಮಿಕ ತಾರತಮ್ಯದ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಆಕೆ ಶಾಂತಿಪೂರ್ವಕ ಪ್ರತಿಭಟನೆಯ ನೇತೃತ್ವ ವಹಿಸಿದ್ದು. 

ಸಿಎಎ ಯ ಮುಖ್ಯ ಗುರಿ ಮುಸ್ಲಿಮರಾಗಿದ್ದು ಈ ಕಾಯಿದೆ ಒದಗಿಸುವ ಅವಕಾಶದಿಂದ ಅವರನ್ನು ಹೊರಗಿಡಲಾಗಿತ್ತು. ಜೈನರು, ಬೌದ್ಧರು, ಸಿಖ್ಖರು, ಕ್ರೈಸ್ತರು, ಯಹೂದಿಗಳಿಗೆ ಇರುವ ಪೌರತ್ವದ ಅವಕಾಶವೂ ಮುಸ್ಲಿಮರಿಗಿಲ್ಲ.!

ಮುಂದೆ ಎಪ್ರಿಲ್‌ 2020 ರಲ್ಲಿ ಪೊಲೀಸರು ಹೊಸದೊಂದು ಎಫ್‌ ಐ ಆರ್‌ (59/2020) ದಾಖಲಿಸಿದರು. ಇದಂತೂ ಕರಾಳ  ಕಾಯಿದೆಯ ಅಡಿಯ ಆರೋಪ. ಐಪಿಸಿ 1967 ರ ಶಸ್ತ್ರಾಸ್ತ್ರ ಕಾಯಿದೆ ಮತ್ತು ಕಾನೂನುಬಾಹಿರ ಚಟುವಟಿಕೆ (ಯುಎಪಿಎ)ಯ ಅಡಿಯಲ್ಲಿ ಆಕೆಯ ಮೇಲೆ ಹೊಸ ಆರೋಪ ಹೊರಿಸಲಾಯಿತು. 2020 ರ ದಿಲ್ಲಿ ಕೋಮು ಗಲಭೆಯನ್ನು ಪ್ರಚೋದಿಸಿದವಳು ಎಂದು ಪೊಲೀಸರು ಆಕೆಯ ಮೇಲೆ ದೂರು ಹೊರಿಸಿದರು.

ಸಿಎಎ ಹೋರಾಟದಲ್ಲಿ ಗುಲ್

ಜಫರಾಬಾದ್‌ ಪ್ರತಿಭಟನಾ ಪ್ರಕರಣದಲ್ಲಿ (ಎಫ್‌ ಐ ಆರ್‌ 48/2020) ಫಾತಿಮಾರಿಗೆ ಮೇ 2020 ರಲ್ಲಿ ಜಾಮೀನು ಸಿಕ್ಕಿತು. ಆದರೆ ಯುಎಪಿಎ ಅಡಿಯಲ್ಲಿ ಆರೋಪಿಯಾದರೆ ಜಾಮೀನು ಬಲುಕಷ್ಟ ಮಾತ್ರವಲ್ಲ, ಬಹುತೇಕ ಅಸಂಭವ ಕೂಡಾ. ಇದೇ ಕಾರಣದಿಂದ ಗುಲ್ಫಿಶಾ ಫಾತಿಮಾ1957 ದಿನಗಳಿಂದ, ಅಂದರೆ 40,008 ಗಂಟೆಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾಳೆ.

ಭಾರತದಲ್ಲಿ ಈಗ ಮುಸ್ಲಿಮರ ಜೀವದ ಬೆಲೆ ಎಷ್ಟು?

ಭಾರತದಲ್ಲಿ ಈಗ ಮುಸ್ಲಿಮರ ಬದುಕು ಎಷ್ಟು ಕಷ್ಟ, ಅವರ ಜೀವದ ಬೆಲೆ ಎಷ್ಟು ಎಂಬುದನ್ನು ನೀವೇ ಊಹಿಸಿ.  ಸಮಾನತೆಯ ಮಾತಾಡುವ ಸಂವಿಧಾನದ ಪ್ರಕಾರ ಕೆಲಸ ಮಾಡುತ್ತಾ ರಕ್ಷಣೆ ನೀಡಬೇಕಾದ ಪ್ರಭುತ್ವದಿಂದಲೇ ಮೇಲಿಂದ ಮೇಲೆ ಅನ್ಯಾಯ. ಆ ಅನ್ಯಾಯವನ್ನು ಶಾಂತಿಯುತವಾಗಿ ಪ್ರಜಾತಾಂತ್ರಿಕವಾಗಿ ಪ್ರತಿಭಟಿಸಿದರೂ ವರ್ಷ ವರ್ಷಗಳ ಜೈಲು ಶಿಕ್ಷೆ. ನ್ಯಾಯಾಲಯಗಳಿಂದಲೂ ನ್ಯಾಯ ಇಲ್ಲ.

ʼಗುಲ್‌ ʼಮಗಳನ್ನು ಕಾಯುತ್ತಿರುವ ಹೆತ್ತವರು

ಡಿ ವೈ ಚಂದ್ರ ಚೂಡರಂತಹ ನ್ಯಾಯಮೂರ್ತಿಗಳು ವಾರಾಂತ್ಯದಲ್ಲಿ ಮೋಹಕ ಭಾಷಣ ಬಿಗಿಯುತ್ತಾರೆ. ಅದರಲ್ಲಿ ಸಂವಿಧಾನಾತ್ಮಕ ಹಕ್ಕುಗಳು, ವೈಯಕ್ತಿಕ ಹಕ್ಕುಗಳು ಇವನ್ನೆಲ್ಲ ರಕ್ಷಿಸುವುದು ಎಷ್ಟು ಮುಖ್ಯ ಎಂದು ತರ್ಕಬದ್ಧವಾಗಿ ವಾದಿಸುತ್ತಾರೆ. ಆದರೆ ನ್ಯಾಯಾಲಯದಲ್ಲಿ ಅವರ ವರ್ತನೆ ಬೇರೆಯೇ ಇರುತ್ತದೆ (ಸಣ್ಣ ಉದಾಹರಣೆ ಸ್ಟಾನ್‌ ಸ್ವಾಮಿ ಮತ್ತು ಜಿ ಎನ್‌ ಸಾಯಿಬಾಬಾ ಪ್ರಕರಣಗಳು).

ಗೋಹತ್ಯೆ, ಕಳ್ಳತನ ಇತ್ಯಾದಿ ಸುಳ್ಳು ನೆಪದಲ್ಲಿ ಹಾದಿಬೀದಿಯಲ್ಲಿ ಮುಸ್ಲಿಮರನ್ನು ಬಡಿದು ಕೊಲ್ಲಲಾಗುತ್ತದೆ. ಮಸೀದಿಯ ಮುಂದೆ ಹಿಂದೂ ಮೆರವಣಿಗೆ ಸಾಗುತ್ತದೆ, ಅಲ್ಲಿ ಪ್ರಚೋದನಾಕಾರಿ ಕೃತ್ಯ ನಡೆಸಲಾಗುತ್ತದೆ. ವಿರೋಧಿಸಿದಿರೋ ನಿಮ್ಮ ಮನೆಗಳ ಮೇಲೆ ಬುಲ್‌ ಡೋಜರ್‌ ಸಾಗುತ್ತದೆ. ಮನೆ ಒಡೆಯುವುದಕ್ಕೆ ನಿಷೇಧ ಹೇರಿರುವ ಸುಪ್ರೀಂಕೋರ್ಟ್‌ ನಿರ್ದೇಶನವೂ ಇಲ್ಲಿ ಲೆಕ್ಕಕ್ಕಿಲ್ಲ!

ಉಮರ್‌ ಖಾಲೀದ್‌ ಬಗ್ಗೆ ಮಾತನಾಡಬೇಕು ನಿಜ. ಆದರೆ ಗುಲ್ಫಿಶಾ ಫಾತಿಮಾ ರನ್ನೂ ಮತ್ತು ಅವರ ಹಾಗೆಯೇ ಇದೇ ಕಾರಣಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವ ಇತರರನ್ನೂ ನಾವು ಮರೆಯಬಾರದು ಅಲ್ಲವೇ?

ಶ್ರೀನಿವಾಸ ಕಾರ್ಕಳ
ಚಿಂತಕರು

ಇದನ್ನೂ ಓದಿ- ಜಿ ಎನ್‌ ಸಾಯಿಬಾಬಾ‌ ಸಾವು: ಪ್ರಭುತ್ವ ನಡೆಸಿದ ಘನ ಘೋರ ಕ್ರೌರ್ಯ

More articles

Latest article