ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ: ಸತೀಶ್‌ ಜಾರಕಿಹೊಳಿ

Most read

ಹುಬ್ಬಳ್ಳಿ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿಲ್ಲ, ನಿಲ್ಲಿಸುವುದೂ ಇಲ್ಲ. ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ನೀಡುವುದು ಒಂದೆರಡು ತಿಂಗಳು ವಿಳಂಬವಾಗಿರಬಹುದು. ಆದರೆ ಮುಂಬರುವ ದಿನಗಳಲ್ಲಿ ಎರಡೂ ತಿಂಗಳ ಹಣವನ್ನು ಒಟ್ಟಿಗೆ ಸೇರಿಸಿಕೊಡಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರದ ಮಟ್ಟದಲ್ಲಿ ಹಣ ನೀಡುವುದು ವಿಳಂಬವಾಗುವುದು ಸಹಜ. ವಿಳಂಬವಾದರೂ ಹಣ ಕೊಡುವುದನ್ನು ನಿಲ್ಲಿಸಿಲ್ಲ ಎಂದರು. ಮುಖ್ಯಮಂತ್ರಿ ರೇಸ್ನಲ್ಲಿ ಡಿ.ಕೆ. ಶಿವಕುಮಾರ್ ಮೊದಲಿನಿಂದಲೂ ಇದ್ದಾರೆ. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ತೀರ್ಮಾನವನ್ನು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಅಲ್ಲ. ಸಮಯ ಬಂದಾಗ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಕೆಪಿಸಿಸಿ ಅಧ್ಯಕ್ಷರನ್ನ ನೇಮಿಸುವ ಅಧಿಕಾರ ನಮಗಿಲ್ಲ, ಅದನ್ನು ಹೈಕಮಾಂಡ್ ಗೆ ಬಿಟ್ಟ ವಿಚಾರ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ತಕ್ಷಣ ಆಗದೆ ಇರಬಹುದು, ಮುಂದೆ ಆಗಿಯೇ ಆಗುತ್ತದೆ. ಯಾವಾಗ ಮಾಡುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ ಎಂದು ಹೇಳಿದರು.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಸಂಸ್ಥೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಅದನ್ನು ಸಾಬೀತುಪಡಿಸಲು ಆಗುವುದೂ ಇಲ್ಲ. ಸಾಕ್ಷ್ಯಾಧಾರಗಳೂ ಇಲ್ಲ. ಮುಖ್ಯಮಂತ್ರಿಗಳ ಕುಟುಂಬಕ್ಕೆ ನೀಡಲಾದ 14 ನಿವೇಶನಗಳನ್ನು ಕುರಿತು ಅತಿಯಾಗಿ ಚರ್ಚೆ ಮಾಡುತ್ತಿರುವುದೇ ರಾಜಕೀಯ. ಇದೇ ರೀತಿ 2,000 ಸೈಟ್ಗಳು ಹಂಚಿಕೆ ಆಗಿವೆ, ಆ ಬಗ್ಗೆ ಯಾಕೆ ಚರ್ಚೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

More articles

Latest article