ಐದು ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಇದೀಗ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಮಿತಿ ರಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರುಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸಮಿತಿ ರಚನೆ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಮೂಲಕ ಈ ಮೂಲಕ ಕಾರ್ಯಕರ್ತರನ್ನು ಬಳಸಿಕೊಂಡು ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಬ್ರಹ್ಮಾಸ್ತ್ರ ಬಳಸಿದ್ದಾರೆ.
ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೂ ಸಮಿತಿ ರಚಿಸಲಾಗುವುದು. ರಾಜ್ಯ ಮಟ್ಟದ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನ ಮಾನ ನೀಡಲಾಗುವುದು. ಉಳಿದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಗೌರವ ಧನ ನೀಡಲಾಗುವುದು. ಇದಕ್ಕೆ ವಾರ್ಷ 16 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಸಿಎಂ ತಿಳಿಸಿದ್ದಾರೆ.