Wednesday, May 22, 2024

ಕರವೇ ನಾರಾಯಣಗೌಡರಿಗೆ ಜಾಮೀನು, ಸಂಜೆ‌ ಬಿಡುಗಡೆ ಸಾಧ್ಯತೆ

Most read

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡರಿಗೆ ಕುಮಾರಸ್ವಾಮಿ ಲೇ ಔಟ್ ಠಾಣೆಯಲ್ಲಿ 2017ರಲ್ಲಿ ದಾಖಲಾದ ಪ್ರಕರಣದಲ್ಲೂ ಜಾಮೀನು ಮಂಜೂರಾಗಿದೆ. ನಿನ್ನೆ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದ್ದ 30ನೇ ಎಸಿಎಂಎಂ ಕೋರ್ಟ್‌ ನಿಂದ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಕಳೆದ ಡಿಸೆಂಬರ್ 27ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿ ಕಳೆದ 12 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ಸೇರಿದಂತೆ ಮೂವತ್ತು ಕರವೇ ಮುಖಂಡರು ಬಿಡುಗಡೆಯಾಗಿದ್ದರೂ 2017ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಿನ್ನೆ ಬೆಳಿಗ್ಗೆ ಕುಮಾರಸ್ವಾಮಿ ಲೇ ಔಟ್ ಪೊಲೀಸರು ಮತ್ತೆ ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದರು.

ಕನ್ನಡದಲ್ಲಿ ನಾಮಫಲಕ ಅಭಿಯಾನ ಕೈಗೊಂಡು, ಬೆಂಗಳೂರಿನಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ‌ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರಿಗೆ ಹಾಗು ಇತರ ಮೂವತ್ತು ಕರವೇ ಮುಖಂಡರಿಗೆ ದೇವನಹಳ್ಳಿ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿತ್ತು.
ನಿನ್ನೆ ಬೆಳಿಗ್ಗೆ ಪರಪ್ಪನ ಅಗ್ರಹಾರ ಜೈಲು ಬಳಿ ಬಂದ ಕುಮಾರಸ್ವಾಮಿ ಲೇ ಔಟ್ ಪೊಲೀಸರು ನಾರಾಯಣಗೌಡರನ್ನು ವಶಕ್ಕೆ ಪಡೆದು ಬಿಗಿಭದ್ರತೆಯಲ್ಲಿ 30 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

 2017ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹಿಂದಿ ಭಾಷೆಯನ್ನು ತುರುಕಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸತತ ಚಳವಳಿ ಸಂಘಟಿಸಿತ್ತು. ಶಾಂತಿಯುತ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಿವಿಗೊಡದ ಹಿನ್ನೆಲೆಯಲ್ಲಿ 2017ರ ಜೂನ್‌ 20ರಂದು ಆಗ ಅಸ್ತಿತ್ವದಲ್ಲಿ ಇದ್ದ ಸುಮಾರು 24 ಮೆಟ್ರೋ ನಿಲ್ದಾಣಗಳಿಗೆ ಬೆಳಗಿನ ಜಾವ 4ರಿಂದ 5 ಗಂಟೆಯವರೆಗೆ ನುಗ್ಗಿದ್ದ ಕರವೇ ಕಾರ್ಯಕರ್ತರು ಹಿಂದಿ ನಾಮಫಲಕಗಳಿಗೆ ಮಸಿ ಬಳಿದಿದ್ದರು. ಸುಮಾರು 24 ಕರವೇ ಮುಖಂಡರ ತಂಡಗಳು ಏಕಕಾಲಕ್ಕೆ ಈ ದಾಳಿ ಸಂಘಟಿಸಿದ್ದವು. ಈ ಘಟನೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.

ಈ ಚಳವಳಿಯ ನಂತರ ಎಚ್ಚೆತ್ತುಕೊಂಡ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಮ್ಮ ಮೆಟ್ರೋ ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಇದರಲ್ಲಿ ಹಿಂದಿ ಬಳಕೆಯ ಅವಶ್ಯಕತೆ ಇಲ್ಲ. ಹೀಗಾಗಿ ಹಿಂದಿಯನ್ನು ತೆಗೆದುಹಾಕುವುದಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ನಂತರ ನಮ್ಮ ಮೆಟ್ರೋದಲ್ಲಿ ಇದ್ದ ಹಿಂದಿ ಅಕ್ಷರಗಳು ಮರೆಯಾಗಿದ್ದವು.

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರೋಧಿಸಿದ ಕರವೇ ಮುಖಂಡರ ಮೇಲೆ ಹಲವು ಠಾಣೆಗಳಲ್ಲಿ ಮೊಕದ್ದಮೆಗಳು ದಾಖಲಾಗಿದ್ದವು. ಟಿ.ಎ.ನಾರಾಯಣಗೌಡರು ಖುದ್ದಾಗಿ ಭಾಗವಹಿಸದೇ ಇದ್ದರೂ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಹಿಂದಿ ನಾಮಫಲಕಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್‌ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಅವರನ್ನೂ ಸಹ ಆರೋಪಿಯನ್ನಾಗಿ ಮಾಡಲಾಗಿತ್ತು.

ಡಿಸೆಂಬರ್ 27ರಂದು ಕರ್ನಾಟಕ ರಕ್ಷಣಾ ವೇದಿಕೆಯ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬೆಂಗಳೂರಿನ ಹಲವಾರು ಭಾಗಗಳಲ್ಲಿ ನಡೆಸಿದ ಕನ್ನಡ ನಾಮಫಲಕ ಅಭಿಯಾನದ ಸಂದರ್ಭದಲ್ಲಿ ಕನ್ನಡವಿಲ್ಲದ ಸಾವಿರಾರು ನಾಮಫಲಕಗಳನ್ನು, ಜಾಹೀರಾತು ಫಲಕಗಳನ್ನು ಕಿತ್ತೆಸೆದಿದ್ದರು. ಘಟನೆಯ ನಂತರ ರಾಜ್ಯ ಸರ್ಕಾರ ರಾಜ್ಯದ ಎಲ್ಲ ಉದ್ಯಮ, ಅಂಗಡಿ ಮುಂಗಟ್ಟುಗಳ ಮುಂದೆ ಶೇ.60 ರಷ್ಟು ಕನ್ನಡದ ನಾಮಫಲಕಗಳು ಇರಬೇಕು ಮತ್ತು ಕನ್ನಡವೇ ಮೊದಲಿರಬೇಕು ಎಂಬ ಸುಗ್ರೀವಾಜ್ಞೆ ಹೊರಡಿಸಿತ್ತು.

ಕರವೇ ಮುಖಂಡರು ಕಾರ್ಯಕರ್ತರ ಮೇಲೆ ಚಿಕ್ಕಜಾಲ, ಕಬ್ಬನ್ ಪಾರ್ಕ್, ಆಡುಗೋಡಿ, ಕಾಟನ್ ಪೇಟೆ ಇತ್ಯಾದಿ ಪೊಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ.

ಚಿಕ್ಕಜಾಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರೂ ಸೇರಿದಂತೆ ಹಲವರ ಮೇಲೆ ದಾಖಲಿಸಲಾಗಿದ್ದ ಪ್ರಕರಣ ಸಂಬಂಧ ದೇವನಹಳ್ಳಿ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಸಂಬಂಧ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಕಳೆದ ಶನಿವಾರ ಜಾಮೀನು ಮಂಜೂರು ಮಾಡಿತ್ತು.

ನಾರಾಯಣಗೌಡರ ಬಿಡುಗಡೆಗೆ ಆಗ್ರಹಿಸಿ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆ ತಡೆ, ಪಂಜಿನ ಮೆರವಣಿಗೆ, ರಕ್ತದಲ್ಲಿ ಪತ್ರ ಸೇರಿದಂತೆ ನಾನಾ ಬಗೆಯ ಪ್ರತಿಭಟನೆಗಳನ್ನು ಕಳೆದ ಎರಡು ವಾರದಿಂದ ನಡೆಸುತ್ತ ಬಂದಿದ್ದರು.

More articles

Latest article