ರೈತನನ್ನು ಅವಮಾನಿಸಿದ ಜಿ.ಟಿ.ಮಾಲ್ ಅನ್ನು​ ಒಂದು ವಾರ ಮುಚ್ಚಿಸುತ್ತೇವೆ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್ ಘೋಷಣೆ

Most read

ಪಂಚೆ ಹಾಕಿದ ರೈತನಿಗೆ ಅವಮಾನ ಮಾಡಿದ ಜಿ.ಟಿ ಮಾಲ್ ಅನ್ನು 7 ದಿನಗಳ ಕಾಲ ಮುಚ್ಚಿಸುತ್ತೇವೆ ಎಂದು ಸಚಿವ ಬೈರತಿ ಸುರೇಶ್ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ.


ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಅವರು, ಈಗಾಗಲೇ ಬಿಬಿಎಂಪಿ ಆಯುಕ್ತರ ಹತ್ತಿರ ಮಾತನಾಡಿದ್ದೇವೆ. ಕಾನೂನಿನಲ್ಲಿ ಅವಕಾಶ ಇದೆ. ಸರ್ಕಾರದ ಕ್ರಮ ಕೈಗೊಳ್ಳಬಹುದು. ಹಾಗಾಗಿ 7 ದಿನ ಮಾಲ್ ಮುಚ್ಚಿಸುತ್ತೇವೆ, ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸ್ಪೀಕರ್ ಯು.ಟಿ.ಖಾದರ್‌, ಗ್ರಾಮೀಣ ಭಾಗದಿಂದ ಬಂದ ಯುವಕ ತಮ್ಮ ತಂದೆಯನ್ನು ಮಾಲ್‌ಗೆ ಕರೆದೊಯ್ದಾಗ ಅಲ್ಲಿ ಆ ರೈತನನ್ನು ಮಾಲ್‌ನೊಳಗೆ ಬಿಡಲಿಲ್ಲ. ಆ ರೈತ ಕರ್ನಾಟಕದ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು. ಪಂಚೆ ತೊಟ್ಟಿದ್ದಾರೆ ಎಂಬ ಕಾರಣಕ್ಕೆ ಒಳಬಿಟ್ಟಿಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಸರ್ಕಾರ ಮಾಲ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಮೂಲಕ ಎಲ್ಲಾ ಮಾಲ್​ಗಳಿಗೂ ಸಂದೇಶ ರವಾನಿಸಬೇಕು ಎಂದರು.

ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಶಾಸಕ ಲಕ್ಷ್ಮಣ ಸವದಿ, ಮಾಲ್‌ ವಿರುದ್ಧ ಕಠಿಣ ಕ್ರಮ ಎಂದು ಹೇಳಿದರೆ ಆಗದು. ಒಂದು ವಾರಗಳ ವಿದ್ಯುತ್​ ಕಡಿತಗೊಳಿಸಿ, ಆಗ ತಕ್ಕ ಪಾಠ ಆಗುತ್ತದೆ. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿ ರೈತರ ಸಮವಸ್ತ್ರಕ್ಕೆ ಬೆಲೆ ಕೊಡದ ಮಾಲ್​ ವಿರುದ್ಧ ಕ್ರಮವಾಗಬೇಕು ಎಂದು ಆಗ್ರಹಿಸಿದರು.

ಅಲ್ಲದೆ ರಾಜ್ಯದ ಎಲ್ಲಾ ಕ್ಲಬ್‌ಗಳು, ಮಾಲ್‌ಗಳಲ್ಲಿ ಒಂದೇ ರೂಲ್ಸ್ ತರಬೇಕು. ಪಂಚೆ ಸೇರಿದಂತೆ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುವುದನ್ನು ಬಿಡಬೇಕು ಎಂದು ಅಶೋಕ್ ಪಟ್ಟಣ, ಬೈರತಿ ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ರು.

More articles

Latest article