ಬೆಂಗಳೂರು: ರಾಜ್ಯದ ಯಶಸ್ವಿ ಗ್ಯಾರಂಟಿ ಯೋಜನೆ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಘಟಕ ಸುಳ್ಳು ಜಾಹೀರಾತು ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆಯಾಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಪಡಿಸಿದ್ದಾರೆ.
ವಿಧಾನಸಭಾ ಚುನಾವಣೆ ನಡೆಯುತ್ತಿರುವ ಮಹಾರಾಷ್ಟ್ರದಲ್ಲಿ ಅಲ್ಲಿನ ಬಿಜೆಪಿ ಘಟಕ ಕರ್ನಾಟಕದಲ್ಲಿ ಕಾಂಗ್ರೆಸ್ ಭರವಸೆ ನೀಡಿದ್ದಂತೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರದೆ ಮೋಸ ಮಾಡಿದೆ ಎಂದು ಜಾಹೀರಾತು ನೀಡಿತ್ತು.
ಈ ಸುಳ್ಳು ಜಾಹೀರಾತಿಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿಯವರೇ, ಇದೇನು ನಮಗೆ ಆಶ್ಚರ್ಯ ಉಂಟುಮಾಡಿಲ್ಲ. ಮನೆ ಒಡೆಯನ ಬುದ್ದಿ ಮನೆಯವರಿಗೆಲ್ಲ ಬಂದಿದೆ. ಹೋದಲ್ಲಿ ಬಂದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳುಗಳನ್ನು ಉದುರಿಸುವ ನಿಮ್ಮಿಂದಲೇ ಪ್ರೇರಣೆ ಪಡೆದು ಮಹಾರಾಷ್ಟ್ರ ಬಿಜೆಪಿ ಇಷ್ಟೊಂದು ನಿರ್ಲಜ್ಜತನದಿಂದ ಈ ಹಸಿ ಸುಳ್ಳನ್ನು ಪ್ರಕಟಿಸಿದೆ ಎನ್ನುವುದು ನಿಸ್ಸಂಶಯ ಎಂದು ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ 2023ರ ಆಗಸ್ಟ್ ತಿಂಗಳಿನಿಂದ ಈ ವರೆಗೆ 1.22 ಕೋಟಿ ಮನೆಯೊಡತಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಸಂದಾಯವಾಗುತ್ತಿದೆ. ಈ ರೀತಿ ಒಟ್ಟು ₹30,285 ಕೋಟಿ ವರ್ಗಾವಣೆ ಮಾಡಲಾಗಿದೆ. ಅನುಮಾನ ಇದ್ದವರು ಈ 1.22 ಕೋಟಿ ಮನೆ ಒಡತಿಯರನ್ನೇ ಕೇಳಿ ಪರಾಂಬರಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿಯವರೇ, ಇದು ನಿಮ್ಮ ಸುಳ್ಳಿನಿಂದಲೇ ಪ್ರೇರಣೆ ಪಡೆದು ಹೇಳಿರುವ ಸುಳ್ಳಾಗಿರುವ ಕಾರಣ ದಯವಿಟ್ಟು ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಹಾರಾಷ್ಟ್ರ ಬಿಜೆಪಿ ಹೇಳಿರುವ ಸುಳ್ಳಿಗಾಗಿ ದೇಶದ ಜನತೆಯ ಕ್ಷಮೆ ಯಾಚಿಸಿ, ಸತ್ಯಸಂಗತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕೆಂದು ಎಂದು ಆಗ್ರಹಿಸುತ್ತೇನೆ. ಮಹಾರಾಷ್ಟ್ರ ಬಿಜೆಪಿ ತಾನು ಪ್ರಕಟಿಸಿರುವ ಸುಳ್ಳಿನ ಜಾಹೀರಾತಿನಷ್ಟೇ ಗಾತ್ರದ ಜಾಹೀರಾತಿನಲ್ಲಿ ಸತ್ಯ ಸಂಗತಿಯನ್ನು ತಿಳಿಸಿ ಅಲ್ಲಿನ ಎಲ್ಲ ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ನೋಡಿಕೊಳ್ಳಬೇಕು. ಇದಕ್ಕೆ ತಪ್ಪಿದ್ದಲ್ಲಿ ನಮ್ಮ ಸರ್ಕಾರ ಮುಂದಿನ ಕ್ರಮದ ಬಗ್ಗೆ ಯೋಚನೆ ಮಾಡಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.