ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳೇ ಕೇಂದ್ರ ಬಿಂದು. ಅಲ್ಲಿ ಒಂದು ಸುತ್ತು ಹೊಡೆದರೆ ಹೊಸ ವರ್ಷದ ಸ್ವಾಗತಕ್ಕೆ ಒಂದು ಕಳೆ. ಇದಕಾಗಿ ಈ ರಸ್ತೆಗಳಿಗೆ ಬೇಟಿ ನೀಡುವವರಿಗೆ ಬಿಎಂಆರ್ ಸಿಎಲ್ ಗುಡ್ ನ್ಯೂಸ್ ಕೊಟ್ಟಿದೆ. ಡಿಸೆಂಬರ್ 31 ರಂದು ಮಧ್ಯರಾತ್ರಿ 2.15 ರವರೆಗೆ ಮೆಟ್ರೋ ರೈಲುಗಳ ಸಂಚಾರವನ್ನು ವಿಸ್ತರಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅವಧಿ ವಿಸ್ತರಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಕಟಣೆ ಹೊರಡಿಸಿದೆ.
ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಪ್ರತಿ 10 ನಿಮಿಷಕ್ಕೊಂದು ರೈಲು ಸೇವೆ ಇರಲಿದ್ದು, ಜನವರಿ 1ರಂದು ಮುಂಜಾನೆ 2 ಗಂಟೆಗೆ ಎಲ್ಲ ಮೆಟ್ರೋ ಟರ್ಮಿನಲ್ಗಳಿಂದ ಕೊನೆಯ ರೈಲು ಹೊರಡಲಿದೆ. ಆದರೆ ಮೆಜೆಸ್ಟಿಕ್ನಿಂದ ಮುಂಜಾನೆ 2.40ಕ್ಕೆ ಕೊನೆಯ ರೈಲು ಸಂಚರಿಸಲಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ. ಇನ್ನು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗುವುದರಿಂದ ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಪ್ರವೇಶ ಹಾಗೂ ನಿರ್ಗಮನ ದ್ವಾರ ಬಂದ್ ಆಗಲಿವೆ. ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರಿಗೆ ಮೆಟ್ರೋ ಸೇವೆ ಲಭ್ಯವಾಗಲಿದ್ದು, ಮುಂಗಡವಾಗಿ ಅಂದು ರಿಟರ್ನ್ ಹೋಗಲು 50 ರೂ. ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್ ಪಡೆದುಕೊಳ್ಳಲು ನೂಕುನುಗ್ಗಲು ಉಂಟಾಗುವುದರಿಂದ ಈ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಪೇಪರ್ ಟಿಕೆಟ್ ಬೇಗ ಕೊಡಬಹುದು. ಯಾವುದೇ ಸ್ಕ್ಯಾನ್ ಮಾಡುವ ತೊಂದರೆ ಇರುವುದಿಲ್ಲ. ಇದರಿಂದ ಜನಸಂದಣೆಯೂ ಆಗುವುದಿಲ್ಲ ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ.