ದೇವರ ಮಹಿಮೆ

Most read

ಪ್ರಹಸನ

ವ್ಯಕ್ತಿ 1 : ಸುದ್ದಿ ಗೊತ್ತಾಯ್ತೇನೋ.. ಛೆ ಛೇ ಅವನಿಗೆ ಹೀಗಾಗಬಾರದಿತ್ತು..

ವ್ಯಕ್ತಿ 2 : ಏನ್ ಸುದ್ದಿ, ಯಾರಿಗೇನಾಯ್ತು?

ವ್ಯಕ್ತಿ 1 : ಅದೇ ನಮ್ಮ ದೋಸ್ತು ಮುತ್ತು ಇದ್ನಲ್ಲಾ?

ವ್ಯಕ್ತಿ 2 : ಹೌದು. ಇದ್ದಾ.. ಈಗ ಇಲ್ವಾ? ಛೇ.. ಎಂತಾ ಅನಾಹುತ ಆಯ್ತು?

ವ್ಯಕ್ತಿ 1 : ಇನ್ನೂ ಇದ್ದಾನೋ, ಈಗಲೂ ಉಸಿರಾಡ್ತಿದ್ದಾನೆ.

ವ್ಯಕ್ತಿ 2 : ಜೀವ ಇದ್ದವರೆಲ್ಲಾ ಉಸಿರಾಡ್ತಾನೇ ಇರ್ತಾರೆ ಬಿಡಾಯ್ತಾ, ಅದರಲ್ಲೇನಿದೆ ವಿಶೇಷಾ?

ವ್ಯಕ್ತಿ 1 : ಅದು ಹಾಗಲ್ವೋ? ನಿನ್ನೆ ರಾತ್ರಿ ಸುಮಾರು 10 ಗಂಟೆ ಆಗಿರಬೋದು, ಆಗ ಏನಾಯ್ತಪಾಂತಂದ್ರೆ..

ವ್ಯಕ್ತಿ 2 : ಯೇ ನೇರವಾಗಿ ವಿಷಯಕ್ಕೆ ಬಾರೋ. ಹಾರರ್ ಫಿಲಂ ಕಥೆ ಹೇಳಿದಂಗೆ ಶುರುಮಾಡ್ಬೇಡಾ?

ವ್ಯಕ್ತಿ 1 : ಅದೇ ನಮ್ಮ ದೋಸ್ತ್ ಮುತ್ತುಗೆ ಎಕ್ಸಿಡೆಂಟ್ ಆಗೋಗಿದೆ. ಪಾಪ ಕೈ ಕಾಲು ಮುರಿದಿದೆ, ಮುಖಕ್ಕೆ ಏಟಾಗಿದೆ.. ಮಲ್ಟಿಪಲ್ ಡ್ಯಾಮೇಜ್ ಅಗಿ ಆಸ್ಪತ್ರೆ ಐಸಿಯು ನಲ್ಲಿದ್ದಾನೆ. ಪಾಪ..

ವ್ಯಕ್ತಿ 2 : ಹೌದಾ.. ಅದೆಂಗಾಯ್ತಯ್ಯಾ.. ಅವನಿಗೆ ಹಿಂಗಾಗಬಾರದಿತ್ತು. ದೇವರಂತಾ ಮನುಷ್ಯ..

ವ್ಯಕ್ತಿ 1 : ಹೌದೌದು, ಆಗಬಾರದಿತ್ತು, ಆಗೋಯ್ತು..

ವ್ಯಕ್ತಿ 2 : ಅಲ್ಲಯ್ಯ, ಕಳೆದ ತಿಂಗಳು ಬೆಂಗಳೂರಿಂದಾ ಶಬರಿಮಲೆಗೆ ಬರೀಗಾಲಲ್ಲಿ ನಡಕೊಂಡು ಹೋಗಿ ಅಯ್ಯಪ್ಪ ಸ್ವಾಮಿ ಸೇವೆ ಮಾಡಿ ಬಂದಿದ್ದನಲ್ವಾ?

ವ್ಯಕ್ತಿ 1 : ಈ ವರ್ಷ ಅಷ್ಟೇ ಯಾಕೆ ಪ್ರತಿ ವರ್ಷ ಪಾದಯಾತ್ರೆ ಮಾಡ್ತಾನೇ ಬಂದಿದ್ದಾ. ತಿರುಪತಿಗೆ, ಶಿರಡಿಗೆ ಅಷ್ಟೇ ಯಾಕೆ ಶ್ರೀಶೈಲ ಪಂಡರಾಪುರಕ್ಕೂ ಪಾದಯಾತ್ರೆ ಮೂಲಕ ಹೋಗಿ ಬರ್ತಿದ್ದಾ ಅಂತೀನಿ..

ವ್ಯಕ್ತಿ 2 : ಅಷ್ಟೆಲ್ಲಾ ಪೂಜೆ ಪುನಸ್ಕಾರ ದೇವಸ್ಥಾನ ದೇವರು ಅನ್ನೋ ವ್ಯಕ್ತಿಗೆ ಯಾಕೆ ಹೀಗಾಯ್ತು? ಇಂತಾ ಪರಮ ಭಕ್ತನನ್ನ ಅಯ್ಯಪ್ಪ ಹೋಗಲಿ ತಿರುಪತಿ ತಿಮ್ಮಪ್ಪ, ಅದೂ ಹೋಗಲಿ ಶ್ರೀಶೈಲದ ಮಲ್ಲಿಕಾರ್ಜುನಪ್ಪ.. ಯಾರೋ ಒಬ್ಬ ದೇವರು ಕಾಪಾಡ ಬಹುದಾಗಿತ್ತಲ್ವಾ? ಯಾಕೆ ಕಾಪಾಡಲಿಲ್ಲಾ? ಭಗವಂತನಿಗೂ ತನ್ನ ಭಕ್ತನ ಮೇಲೆ ಕರುಣೆ ಕಾಳಜಿ ಇರೋದಿಲ್ವಾ?

ವ್ಯಕ್ತಿ 1 : ಇದೆ..ದೇವರಿಗೂ ಕಾಳಜಿ ಇದ್ದೇ ಇರುತ್ತೆ. ಅದಕ್ಕೆ ಅಲ್ವಾ ತನ್ನ ಭಕ್ತನನ್ನು ದೇವರುಗಳು ಕಾಪಾಡಿದ್ದು. ಆತ ಮಾಡಿದ ಪೂಜೆ ಪುನಸ್ಕಾರದ ಫಲದಿಂದಲೇ ಮುತ್ತುಗೆ ಜೀವದಾನ ಸಿಕ್ಕಿದ್ದು.

ವ್ಯಕ್ತಿ 2 : ಏಯ್.. ಬಾಡಿ ಪೂರ್ತಿ ಡ್ಯಾಮೇಜ್ ಮಾಡ್ಕೊಂಡು, ಮೈತುಂಬಾ ಬ್ಯಾಂಡೇಜ್ ಹಾಕಿಸ್ಕೊಂಡು ಆಸ್ಪತ್ರೆಲಿ ಆತ ಮಲಗಿದ್ದಾನೆ, ಇಂತಾ ದುಸ್ಥಿತಿ ತಂದ ದೇವರು ಕಾಪಾಡಿದ ಅಂತೀಯಲ್ಲಯ್ಯಾ?

ವ್ಯಕ್ತಿ 1 : ಹೌದು ಮತ್ತೆ. ಆಗಿರೋ ಎಕ್ಸಿಡೆಂಟ್ ತೀವ್ರತೆ ಗಮನಿಸಿದರೆ ಬಾಡಿ ಪೀಸ್ ಪೀಸ್ ಆಗಿ ಸ್ಪಾಟ್ ಔಟ್ ಆಗಬೇಕಿತ್ತು. ಆದರೆ ಆ ದೇವರು ದೊಡ್ಡೊನು. ಉಸಿರು ಉಳಿಸಿದ. ಪ್ರಾಣಕ್ಕೇನೂ ಅಪಾಯ ಇಲ್ಲಾ ಅಂತಾ ಡಾಕ್ಟರ್ ಹೇಳಿದ್ರು. ಇದೇ ಅಲ್ವಾ ಭಗವಂತನ ಲೀಲೆ. ನಂಬಿದವರನ್ನ ಆ ದೇವರು ಯಾವತ್ತೂ ಕೈ ಬಿಡೋದಿಲ್ಲ ಅನ್ನೋದಕ್ಕೆ ಇದೊಂದೇ ಉದಾಹರಣೆ ಸಾಕು.

ವ್ಯಕ್ತಿ 2 : ತೊ ಥೋ.. ಕಾಪಾಡಲೇ ಬೇಕೆಂದಿದ್ರೆ ಅಪಘಾತ ಆಗದಂತೆ ಆ ದೇವರು ತಡೀ ಬಹುದಾಗಿತ್ತಲ್ವಾ? ಯಾಕೆ ತಡೀಲಿಲ್ಲಾ? ಕೈಕಾಲು ಮುರಿದು ಯಾಕೆ ಶಾಶ್ವತ ಅಂಗವಿಕಲನನ್ನಾಗಿಸಿ ತನ್ನದೇ ಭಕ್ತನಿಗೆ ಈ ದುರಾವಸ್ಥೆ ತಂದಾ.

ವ್ಯಕ್ತಿ 2 : ನೀ ಏನೇ ಹೇಳು. ನಮ್ಮ ಮುತ್ತುವನ್ನ ಆತನ ದೈವಭಕ್ತಿಯೇ ಕಾಪಾಡಿದೆ. ಸಾಯೋ ಬದಲು ಇನ್ನೂ ಪ್ರಾಣ ಉಳಿಯುವಂತೆ ಮಾಡಿದೆ. ದೇವರು ಅಂದ್ರೆ ಸುಮ್ಮನೇನಾ? ಗಾಡ್ ಇಸ್ ಗ್ರೇಟ್

ವ್ಯಕ್ತಿ 1 : ಇರಬಹುದು ಇರ್ಲಿ ಬಿಡು. ದೇವರ ಸುದ್ದಿ ನಮಗ್ಯಾಕೆ?

ವ್ಯಕ್ತಿ 2 : ಈಗ ಸುನಿತಾ ವಿಲಿಯಮ್ಸ್ ಎನ್ನುವ ಗಗನಯಾತ್ರಿ ಸುದ್ದಿನೇ ತಗೋ. ನಿನ್ನೆ ಬಾಹ್ಯಾಕಾಶದಿಂದ ಹೇಗೆ ಸುರಕ್ಷಿತವಾಗಿ ಭೂಮಿಗೆ ಬಂದ್ಲು?

ವ್ಯಕ್ತಿ 1 : ಹೇಗಂದ್ರೆ.. ಬಾಹ್ಯಾಕಾಶ ನೌಕೆಯಿಂದಾ..

ವ್ಯಕ್ತಿ 2 : ಅಲ್ಲಾ.. ಗಣೇಶನ ಅನುಗ್ರಹದಿಂದ..

ವ್ಯಕ್ತಿ 1 : ಗಣೇಶನಿಗೂ ಇದಕ್ಕೂ ಏನಯ್ಯಾ ಲಿಂಕು?

ವ್ಯಕ್ತಿ 2 : ಐತೆ. ಲಿಂಕು ಐತೆ. ಅದೇನಪಾಂತಂದ್ರೆ.. ಸುನಿತಕ್ಕಾ ಬಾಹ್ಯಾಕಾಶಕ್ಕೆ ಹೋಗುವಾಗ ತನ್ನ ಜೊತೆಗೆ ಗಣೇಶನ ಮೂರ್ತಿ ಹಾಗೂ ಭಗವದ್ಗೀತೆ ತಗೊಂಡು ಹೋಗಿದ್ರು. ತಾಂತ್ರಿಕ ದೋಷದಿಂದ ವಾಪಸ್ ಭೂಮಿಗೆ ಬರೋದೇ ಡೌಟು ಎಂದು ಎಲ್ಲರೂ ಅಂದ್ಕೊಂಡಿದ್ರು. ಆದರೆ ನಮ್ಮ ಗಣೇಶ ನಿನ್ನೆ ಸುನಿತಕ್ಕನನ್ನ ಸೇಫಾಗಿ ಭೂಮಿಗೆ ಬಂದು ತಲುಪುವಂತೆ ನೋಡಿಕೊಂಡಾ. ಇದೇ ಅಲ್ವಾ ನಮ್ಮ ದೇವರ ಮಹಿಮೆ.

ವ್ಯಕ್ತಿ  1 : ಇರಬೋದು ಇರಬಹುದು. ಇರ್ಲಿ. ಆದರೆ ಈ ಕೆಲಸ ಮಾಡೋಕೆ ಗಣೇಶನಿಗೆ ಆರು ತಿಂಗಳು ಬೇಕಾಯ್ತಾ. ಅಲ್ಲಯ್ಯಾ ಸುನಿತಾ ವಿಲಿಯಮ್ಸ್ ರವರು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದು ಒಂದು ವಾರ ಗೆಸ್ಟ್ ಆಗಿ ಇದ್ದು ಬರೋಕೆ ಅಲ್ವಾ?

ವ್ಯಕ್ತಿ 2 : ಹೌದು.. ಏನೀವಾಗ?

ವ್ಯಕ್ತಿ 1 : ಮತ್ತೆ ಯಾಕಪ್ಪಾ ಆರು ತಿಂಗಳು ಬೇಕಾಯ್ತು? ಅಷ್ಟು ದಿನ ಇಲಿ ಮೇಲೆ ಕೂತು ಗಣೇಶ ದೇವರು ವಿಶ್ವಪರ್ಯಟನೆಗೆ ಹೋಗಿದ್ರಾ? ಆ ನೌಕೆಲಿ ಆದ ಪ್ರಾಬ್ಲಂ ಪಟಾಪಟ್ ನಿವಾರಿಸಿ ತನ್ನ ಭಕ್ತೆಯನ್ನ ಸೇಪಾಗಿ ಆಗಲೇ ಭೂಮಿಗೆ ತಂದು ಬಿಡಬಹುದಿತ್ತಲ್ವಾ? ಅದಕ್ಕೆ ಟ್ರಂಪು ಮಸ್ಕು ಡ್ಯಾಗನ್ ವಾಹನ ಎಲ್ಲಾ ಯಾಕೆ ಬೇಕಿತ್ತು?

ವ್ಯಕ್ತಿ 2 : ನೋಡು ಇದೇ ಬೇಡಾ ಅನ್ನೋದು? ನಮ್ಮ ದೇವರಿಗೆ ಹೀಗೆಲ್ಲಾ ಅಂದ್ರೆ ಸರಿ ಇರೋದಿಲ್ಲಾ ನೋಡು. ಇದು ನಂಬಿಕೆಯ ಪ್ರಶ್ನೆ? ನೀನು ನಮ್ಮಂತವರ ಭಾವನೆಗಳನ್ನ ಘಾಸಿ ಮಾಡ್ತಿದ್ದೀ. ಇದನ್ನ ನಾವು ಸಹಿಸೋದಿಲ್ಲಾ ಅಂದ್ರೆ ಸಹಿಸೋದಿಲ್ಲಾ.

ವ್ಯಕ್ತಿ 1 : ನೋಡು ಅವರವರ ನಂಬಿಕೆ ಅವರವರು ಇಟ್ಕೊಳ್ಲಿ ಬೇಡಾ ಅಂದೋರ್ಯಾರು? ಆದರೆ ವಿಜ್ಞಾನವೇ ಬೇರೆ, ದೈವ ನಂಬಿಕೆಯೇ ಬೇರೆ. ಭಾವನಾ ಲೋಕವೇ ಬೇರೆ, ವಾಸ್ತವವೇ ಬೇರೆ. ಇವುಗಳನ್ನು ಮಿಕ್ಸ್ ಮಾಡದೇ ಇದ್ರೆ ಒಳ್ಳೆಯದು.

ವ್ಯಕ್ತಿ 2 : (ಮೊಬೈಲ್ ರಿಂಗ್ ಆಗುತ್ತದೆ. ಫೋನ್ ರಿಸೀವ್ ಮಾಡುತ್ತಾನೆ) ಹೌದಾ.. ಯಾವಾಗ.. ಅಯ್ಯೋ ಶಿವನೇ..

ವ್ಯಕ್ತಿ 1 : ಏನಯ್ಯಾ ಆಯ್ತು?

ವ್ಯಕ್ತಿ 2 : ಹೋಗ್ಬಿಟ್ಟಾ.. ಹೋಗೇ ಬಿಟ್ನಂತೆ. ನಮ್ಮ ಮುತ್ತು ದೇವರ ಪಾದ ಸೇರಿದ್ನಂತೆ..

ವ್ಯಕ್ತಿ 1 : ಅಯ್ಯೋ ಪಾಪ. ಕೊನೆಗೆ ನಂಬಿದ ದೇವರೂ ಕಾಪಾಡಲಿಲ್ವಾ. ಪೂಜೆ ಪುನಸ್ಕಾರ ದೈವಭಕ್ತಿ ಪಾದಯಾತ್ರೆ ಎಲ್ಲಾ ವ್ಯರ್ಥ ಆದ್ವಾ?

ವ್ಯಕ್ತಿ 2 : ( ಕಣ್ಣೀರು ಒರೆಸಿಕೊಳ್ಳುತ್ತಾ) ಅಷ್ಟೆಲ್ಲಾ ಮಾಡಿದ್ದಕ್ಕೆ ದೇವರು ತನ್ನ ಹತ್ತಿರ ಇಷ್ಟು ಬೇಗ ಮುತ್ತು ವನ್ನ ಕರೆಸಿಕೊಂಡಿದ್ದಾನಯ್ಯಾ.. ಈಗ ಹೋಗಿ ಮುಂದಿನ ಕಾರ್ಯ ಮಾಡಿ ಸ್ವರ್ಗಕ್ಕೆ ಮುತ್ತುವಿನ ಆತ್ಮವನ್ನ ಕಳಿಸಿಕೊಡಬೇಕಿದೆ. (ಹೊರಡುವನು)

ವ್ಯಕ್ತಿ 1 : ( ಸ್ವಗತ) ಇಷ್ಟೇ.. ದೇವರು ಎನ್ನುವ ಭ್ರಮೆ ಒಮ್ಮೆ ಮೆದುಳಿಗೇರಿದರೆ ಮುಗೀತು, ಎಲ್ಲವೂ ಭಗವಂತನ ಲೀಲೆ ಎನ್ನುವವರು ನಂಬಿಕೆಯ ನಾವೆಯ ಪಯಣಿಗರೇ. ಅಲೆಗಳೇಳಲಿ, ಚಂಡಮಾರುತ ಬೀಸಲಿ, ನಾವೆಯೇ ಮುಳುಗಲಿ.. ಎಲ್ಲದಕ್ಕೂ ದೇವರ ಲೀಲೆ, ದೈವದ ಮಾಯೆ ಕಾರಣ ಎಂದು ಬದುಕು ಸವೆಸುವವರು. ಅದಕ್ಕೆ ಪ್ರಜ್ಞಾವಂತರು ಹೇಳುವುದು ದೇವರು ಒಂದು ಮತ್ತೇರಿಸುವ ಅಫೀಮು ಎಂದು. ನಂಬಿಕೆಯ ನಶೆ ಏರಿಸಿಕೊಂಡವರಿಗೆ ವೈಚಾರಿಕತೆ ಬೇಕಿಲ್ಲ. ವಾಸ್ತವದ ಅರಿವನ್ನೂ ಮೀರಿ ಅವಾಸ್ತವ ನಂಬಿಕೆಗಳ ಮರೀಚಿಕೆಯ ಬೆನ್ನು ಹತ್ತಿದವರನ್ನು ಆ ದೇವರೂ ಕಾಪಾಡಲಾರ. ಇದೇ ಸತ್ಯ, ಇದೇ ನಿತ್ಯ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ-

More articles

Latest article