ಬೆಂಗಳೂರು: ಕೇರಳದ ನ್ಯಾ. ಹೇಮಾ ಸಮಿತಿ ವರದಿ ಬಹಿರಂಗಗೊಂಡ ಬೆನ್ನಲ್ಲಿ ಕರ್ನಾಟಕದ ಸಿನಿಮಾ ರಂಗದ ಕಲಾವಿದೆಯರು, ತಂತ್ರಜ್ಞೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿಚಾರಿಸಲು ಇಂದು ರಾಜ್ಯ ಮಹಿಳಾ ಆಯೋಗ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿತು.
ಸಭೆಯ ನಂತರ ಮಾತನಾಡಿದ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಚಿತ್ರರಂಗಕ್ಕೆ ಹೆಣ್ಣುಮಕ್ಕಳನ್ನು ನಿಶ್ಚಿಂತೆಯಿಂದ ಕಳಿಸುವಂತೆ ಆಗಬೇಕು. ಆದರೆ ಚಿತ್ರರಂಗಕ್ಕೆ ಕಳಿಸಲು ಪೋಷಕರು ಇಂದು ಹಿಂದೆ ಮುಂದೆ ನೋಡುವ ಸನ್ನಿವೇಶವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂದಿನ ಸಭೆಗೆ ಕಡಿಮೆ ಜನ ನಟಿಯರು ಬಂದಿದ್ದಾರೆ. ನನಗೆ ಹುಷಾರಿಲ್ಲ, ಆದರೂ ನಾನು ಇಂದು ಸಭೆಗೆ ಬಂದಿದ್ದೇನೆ. ಹೆಣ್ಣುಮಕ್ಕಳಿಗೆ ತೊಂದ್ರೆ ಆದರೆ ನಿಮ್ಮ ಮಾತೃ ಸಂಸ್ಥೆಗೆ ಬನ್ನಿ, ದೂರು ನೀಡಿ ಎಂದು ಅವರು ಕರೆ ನೀಡಿದರು.
ಮಹಿಳೆಯರ ಕುಂದುಕೊರತೆಗಳ ವಿಚಾರಣೆಗೆ ಕಮಿಟಿ ರಚನೆ ಮಾಡುವುದಕ್ಕೆ ಹೇಳಿದ್ದೇನೆ ಎಂದ ಅವರು ಮುಂದಿನ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರಬೇಕು. ಶೂಟಿಂಗ್ ವೇಳೆ ನಟಿಯರಿಗೆ ಕನಿಷ್ಠ ಸೌಲಭ್ಯ ಕೊಡಬೇಕು. ರಾಜ್ಯ ಮಹಿಳಾ ಆಯೋಗ ಈ ಸಂಬಂಧ ಸರ್ವೆ ನಡೆಸುತ್ತದೆ. ಲೋಪದೋಷಗಳನ್ನು ಸರಿಪಡಿಸುವ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 85 ವರ್ಷಗಳ ಇತಿಹಾಸ ಹೊಂದಿದೆ. 18-20 ಅಂಗ ಸಂಸ್ಥೆಗಳನ್ನು ವಾಣಿಜ್ಯ ಮಂಡಳಿ ಹೊಂದಿದೆ. ಏನೇ ಸಮಿತಿ ರಚನೆಯಾದರೂ ಮಂಡಳಿಯ ನೇತೃತ್ವದಲ್ಲೇ ಆಗಬೇಕು ಎಂದು ಮಂಡಳಿ ಅಧ್ಯಕ್ಷ ಎನ್. ಎಂ. ಸುರೇಶ್ ಹೇಳಿದರು.
ಚಿತ್ರರಂಗದಲ್ಲಿ ಕೆಲಸ ಮಾಡುವ ಹುಡುಗಿಯರಿಗೆ ಭದ್ರತೆ ನೀಡಬೇಕು. ಚಿಕ್ಕಂದಿನಲ್ಲಿ ನನಗೂ ಕಿರುಕುಳವಾಗಿದೆ ಎಂದು ನಟಿ ಸಂಜನಾ ಗಲ್ರಾನಿ ಹೇಳಿದರು.
ನಮಗೆ ಕೇರಳದ ಹೇಮಾ ಮಾದರಿ ಕಮಿಟಿ ಬೇಡ. ಚಿತ್ರರಂಗಕ್ಕೆ ಅಂತಹದ್ದೆಲ್ಲಾ ಕಮಿಟಿ ತರಬೇಡಿ.. ಯಾರಿಗೆ ತೊಂದರೆಯಾದ್ರೂ ನಮ್ಮತ್ರ ಹೇಳ್ಕೋಬೇಕು. ನಾವು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡ್ತೀವಿ ಎಂದು ನಿರ್ಮಾಪಕ ಸಾ.ರಾ. ಗೋವಿಂದು ಹೇಳಿಕೆ ನೀಡಿದ್ದಾರೆ.

