ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಗಳಿಗೆ ಪ್ರಾತಿನಿಧ್ಯವನ್ನು ನೀಡುವ ಮೂಲಕ ಹಿಂದಿಯೇತರ ಅಭ್ಯರ್ಥಿಗಳ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಕೇಂದ್ರ ಸಚಿವರಾದ ಡಾ.ಜಿತೇಂದ್ರ ಸಿಂಗ್ ರವರಿಗೆ ಇಂದು ಪತ್ರ ಬರೆದಿರುವ ಅವರು ಲೋಕಸೇವಾ ಆಯೋಗವು ನಡೆಸುವ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಕೇವಲ ಆಂಗ್ಲ ಅಥವಾ ಹಿಂದಿ ಭಾಷೆಯಲ್ಲಿದ್ದು, ಈ ಭಾಷೆಗಳ ಮೇಲೆ ಪ್ರಭುತ್ವ ಹೊಂದದೆ ಇರುವ ಹಾಗೂ ತಮ್ಮ ತಾಯ್ನುಡಿಗಳಲ್ಲಿ ಪರೀಕ್ಷೆಯನ್ನು ಎದುರಿಸುವ ಪ್ರತಿಭಾವಂತ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯವಾಗಿದೆ. ಈ ಅಭ್ಯರ್ಥಿಗಳು ಆಂಗ್ಲ ಅಥವಾ ಹಿಂದಿ ಭಾಷೆಗಳ ಪ್ರಶ್ನೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ಈ ಕಾರಣಕ್ಕಾಗಿ ಸಮರ್ಪಕ ಉತ್ತರ ನೀಡುವುದರಲ್ಲಿಯೂ ವಿಫಲರಾಗುವ ಸಾಧ್ಯತೆಗಳಿರುತ್ತವೆ. ದೇಶದ ಪ್ರತಿಯೊಬ್ಬ ನಾಗರೀಕನಿಗೆ ಸಮಾನ ಹಕ್ಕನ್ನು ನೀಡುವುದು ಸಂವಿಧಾನಾತ್ಮಕ ಆಶಯವಾಗಿರುವ ಕಾರಣ ಕೂಡಲೇ ಈ ಕುರಿತು ಕ್ರಮ ವಹಿಸಿ ಹಿಂದಿಯೇತರ ಅಭ್ಯರ್ಥಿಗಳಿಗೆ ಯುಪಿಎಸ್ಸಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಸಮಾನ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.