ಜೆಂಡರ್ ಚಾಂಪಿಯನ್ಸ್, ಶಾಲೆಗಳಲ್ಲಿ ಎಳೆಯ ಹುಡುಗರನ್ನು ಮತ್ತು ಹುಡುಗಿಯರನ್ನು ಲಿಂಗ ಸೂಕ್ಷ್ಮಗೊಳಿಸಿ ಹುಡುಗಿಯರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವ ವಾತಾವರಣವನ್ನು ಸುಗಮಗೊಳಿಸುತ್ತಾರೆ. ಮತ್ತು ಅವರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಗೌರವಿಸುವ ಸಕಾರಾತ್ಮಕ ನಡೆಗಳನ್ನು ರೂಪಿಸುತ್ತಾರೆ. ಹೆಣ್ಣುಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಿ ಅವರ ಯೋಗಕ್ಷೇಮವನ್ನು ಸುಧಾರಿಸಲು ಮುಂದಾಗುತ್ತಾರೆ.
ಜೆಂಡರ್ ಚಾಂಪಿಯನ್ಸ್ ಎನ್ನುವುದು ಒಂದು ನಾಯಕತ್ವದ ಜಾಲ. ಗಂಡು ಹೆಣ್ಣಿನ ಜೈವಿಕ (ಬಯಾಲಾಜಿಕಲ್) ವ್ಯತ್ಯಾಸಗಳನ್ನು ಹೊರತು ಪಡಿಸಿ ಗಂಡು ಮತ್ತು ಹೆಣ್ಣಿಗೆ ಸಮಾಜ ರೂಪಿಸಿ ಲೇಪಿಸಿರುವ ಎಲ್ಲ ರೂಪದ ತಾರತಮ್ಯಗಳನ್ನು ಪ್ರಶ್ನಿಸಿ ಸಮಾನತೆಯ ಹೆಜ್ಜೆಗಳನ್ನಿಡಲು ಶಾಲಾಮಕ್ಕಳನ್ನು ಲಿಂಗಸೂಕ್ಷ್ಮ ಗೊಳಿಸುವ ಒಂದು ಯೋಜನೆ ಇದು. ತರಬೇತಿ ಹೊಂದಿದ, ಲಿಂಗಸೂಕ್ಷ್ಮಗೊಂಡ ವಿದ್ಯಾರ್ಥಿಗಳು ಲಿಂಗ ಸಮಾನತೆಯನ್ನು ತಮಗೆ ಸಾಧ್ಯವಾಗುವ ಕ್ಷೇತ್ರಗಳಲ್ಲಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಾರೆ. ತರಬೇತಿಯು ವಿದ್ಯಾರ್ಥಿಗಳನ್ನು ವೈವಿಧ್ಯಮಯ ದೃಷ್ಟಿಕೋನಗಳಿಗೆ ಒಡ್ಡುವ ಮೂಲಕ ಮತ್ತು ಸಾಂಪ್ರದಾಯಿಕ ಲಿಂಗತ್ವದ ಪಾತ್ರಗಳನ್ನು ಸವಾಲು ಮಾಡುವ ಮೂಲಕ, ಬದಲಾವಣೆಗೆ ವೇಗವಾಗಿ ತೆರೆದುಕೊಳ್ಳುವಂತೆ ಮಾಡುವುದು ಇಲ್ಲಿಯ ನಿರೀಕ್ಷೆ. ಇಂತಹ ತರಬೇತಿಗಳು ಭವಿಷ್ಯದ ಪೀಳಿಗೆಗಳು ತಮ್ಮ ಸುತ್ತಲಿನ ಪ್ರಪಂಚವನ್ನು ಗ್ರಹಿಸುವ ಮತ್ತು ಅದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ವಿಧಾನವನ್ನು ರೂಪಿಸುತ್ತವೆ. ಶ್ರಮ ವಹಿಸಿದರೆ ಯುವ ಮನಸ್ಸುಗಳಲ್ಲಿ ಲಿಂಗ ಸಮಾನತೆಯ ಬೀಜಗಳನ್ನು ಆಳವಾಗಿ ಬಿತ್ತಬಹುದು ಎಂಬುದನ್ನು ಮಂಗಳೂರಿನ ಡೀಡ್ಸ್ ಸಂಸ್ಥೆಯು ಜೆಂಡರ್ ಚಾಂಪಿಯನ್ಸ್ ತರಬೇತಿಯ ಮೂಲಕ ತೋರಿಸಿಕೊಟ್ಟಿದೆ.
ಡೀಡ್ಸ್ ಅಂದರೆ….
ಮಂಗಳೂರಿನಲ್ಲಿ ಕಛೇರಿಯನ್ನು ಹೊಂದಿರುವ ಡೀಡ್ಸ್ (DEEDS- Development Education Service) ಸಂಸ್ಥೆಯು( NGO) ಕಳೆದ 42 ವರ್ಷಗಳಿಂದ ಮಹಿಳೆಯರ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿದೆ. ಪ್ರಸ್ತುತ ಕರ್ನಾಟಕದಾದ್ಯಂತ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ. ಲಿಂಗ ಸಮಾನತೆ ಹಾಗೂ ಕಾನೂನಿನ ಪ್ರಾಥಮಿಕ ಜ್ಞಾನವನ್ನು ಮಹಿಳೆಯರ ಬಳಿ ಒಯ್ದು ಅವರನ್ನು ಸಬಲೀಕರಿಸುವ ಆಶಯದಿಂದ ʼಪೂರಕ ಕಾನೂನು ಸುಗಮಕಾರರ ತರಬೇತಿʼ (Para legal training) ಕಾರ್ಯಕ್ರಮಗಳನ್ನು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸುತ್ತಿದೆ. 2023ರಲ್ಲಿ ಸಂಸ್ಥೆಯು ಹದಿಹರೆಯದ ಮಕ್ಕಳಿಗಾಗಿ ಜೆಂಡರ್ ಚಾಂಪಿಯನ್ ಯೋಜನೆಯನ್ನು ದಕ್ಷಿಣ ಕನ್ನಡದಲ್ಲಿ ರೂಪಿಸಿದೆ. ಮರ್ಲಿನ್ ಮಾರ್ಟಿಸ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಯಾರೀ ಜೆಂಡರ್ ಚಾಂಪಿಯನ್ಸ್ ?
ಜೆಂಡರ್ ಚಾಂಪಿಯನ್ಸ್, ಶಾಲೆಗಳಲ್ಲಿ ಎಳೆಯ ಹುಡುಗರನ್ನು ಮತ್ತು ಹುಡುಗಿಯರನ್ನು ಲಿಂಗ ಸೂಕ್ಷ್ಮಗೊಳಿಸಿ ಹುಡುಗಿಯರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವ ವಾತಾವರಣವನ್ನು ಸುಗಮಗೊಳಿಸುತ್ತಾರೆ. ಮತ್ತು ಅವರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಗೌರವಿಸುವ ಸಕಾರಾತ್ಮಕ ನಡೆಗಳನ್ನು ರೂಪಿಸುತ್ತಾರೆ. ಹೆಣ್ಣುಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಿ ಅವರ ಯೋಗಕ್ಷೇಮವನ್ನು ಸುಧಾರಿಸಲು ಮುಂದಾಗುತ್ತಾರೆ. ಹುಡುಗಿಯರು ಮತ್ತು ಹುಡುಗರ ಬಗ್ಗೆ ಚಾಲ್ತಿಯಲ್ಲಿರುವ ಲಿಂಗತ್ವ ಅಸಮಾನತೆಯ ಸಾಮಾಜಿಕ ರೂಢಿಗಳನ್ನು ತೊಡೆದು, ಲಿಂಗ ಸಮಾನತೆಯತ್ತ ಪುಟ್ಟ, ದಿಟ್ಟ ಹೆಜ್ಜೆಯನ್ನು ಇಡಲು ಯುವಜನರ ಸಾಮರ್ಥ್ಯವನ್ನು ಬಲಪಡಿಸುತ್ತಾರೆ.
ಈ ತರಬೇತಿಯ ಕುರಿತು ಡೀಡ್ಸ್ ಸಂಸ್ಥೆಯ ನಿರ್ದೇಶಕರಾದ ಮರ್ಲಿನ್ ಮಾರ್ಟಿಸ್ ಹೀಗೆ ಹೇಳುತ್ತಾರೆ-
ಸಮಾಜದಲ್ಲಿರುವ ಹೆಣ್ಣು ಗಂಡು ಅಸಮಾನತೆಯನ್ನು ಹೋಗಲಾಡಿಸುವುದು, ಮಹಿಳೆಯರ ಮೇಲಿನ ಹಿಂಸೆಯನ್ನು ನಿವಾರಣೆ ಮಾಡುವುದು, ಈ ನಿಟ್ಟಿನಲ್ಲಿ ಶಾಲಾ ಅವಧಿಯಲ್ಲೇ ಹದಿಹರೆಯದ ಮಕ್ಕಳಿಗೆ ಮಾಹಿತಿ ನೀಡುತ್ತಾ, ಅವರನ್ನು ಲಿಂಗತ್ವ ಹರಿಕಾರರನ್ನಾಗಿ (ಜೆಂಡರ್ ಚಾಂಪಿಯನ್ಸ್) ಬೆಳೆಸುವ ಉದ್ದೇಶದ ತರಬೇತಿ ಕಾರ್ಯಕ್ರಮ ʼಜೆಂಡರ್ ಚಾಂಪಿಯನ್ಸ್ʼ. ಈ ಕಾರ್ಯಕ್ರಮವನ್ನು 2024 ರ ಜೂನ್ ತಿಂಗಳಿನಿಂದ ಮಂಗಳೂರು, ಮುಲ್ಕಿ, ಉಳ್ಳಾಲ ತಾಲೂಕಿನ ಆಯ್ದ 14 ಸರಕಾರಿ ಪ್ರೌಢ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡದ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ 8ನೇ ತರಗತಿಯ ಹುಡುಗಿಯರು, ಹುಡುಗರಿಗೆ ಒಟ್ಟಾಗಿ ಈ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. 2024 ರ ಡಿಸೆಂಬರ್ ತಿಂಗಳಿಗೆ ಈ ಚಟುವಟಿಕೆಗಳು ಮುಗಿದಿರುತ್ತವೆ. ನಾಯಕತ್ವ, ಸಂವಹನ, ಹೆಣ್ಣು- ಗಂಡು ಸಮಾನತೆ, ಹದಿಹರೆಯದ ಬೆಳವಣಿಗೆಗಳು, ಹಿಂಸೆ, ಪೋಕ್ಸೋ, ಕೆರಿಯರ್ ಗೈಡೆನ್ಸ್, ನ್ಯಾಯ ವ್ಯವಸ್ಥೆಗಳಿಗೆ (ಪೋಲಿಸ್ ಠಾಣೆ, ಸಖಿ ಕೇಂದ್ರ, ನ್ಯಾಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ) ಕೇತ್ರ ವೀಕ್ಷಣೆ ಮುಂತಾದ ವಿಷಯಗಳನ್ನು ಆರಿಸಿಕೊಳ್ಳಲಾಗಿದೆ. 14 ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಪ್ರತಿ ಶನಿವಾರ 1-2 ಗಂಟೆಯ ಅವಧಿಯಲ್ಲಿ ಚಟುವಟಿಕೆಯಾಧಾರಿತವಾಗಿ ತರಬೇತಿ ನಡೆಸಲಾಗಿದೆ. 15 ಮಂದಿ ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿರುತ್ತಾರೆ. ಒಟ್ಟು 463 ಪ್ರೌಢಶಾಲಾ ಮಕ್ಕಳು ಈ ಚಟುವಟಿಕೆಯಲ್ಲಿ ಭಾಗವಹಿಸಿರುತ್ತಾರೆ. ಮಕ್ಕಳು ಖುಷಿ ಖುಷಿಯಿಂದ ಚಟುವಟಿಕೆಗಳಲ್ಲಿ ಭಾಗವಹಿಸಿ ಕಲಿತಿದ್ದನ್ನು ಕಾರ್ಯರೂಪಕ್ಕೆ ತರುವುದಾಗಿ ಭರವಸೆ ನೀಡಿ ತರಬೇತಿಯನ್ನು ಸಂತಸದಿಂದ ಸಂಪನ್ನಗೊಳಿಸಿದ್ದಾರೆ ಮರ್ಲಿನ್ ಮಾರ್ಟಿಸ್, ನಿರ್ದೇಶಕರು-ಡೀಡ್ಸ್
ಹೀಗೆ ರೂಪುಗೊಂಡ ಜೆಂಡರ್ ಚಾಂಪಿಯನ್ ಮಕ್ಕಳ ಸಮಾವೇಶವು ಇದೇ ಫೆಬ್ರವರಿ 1 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ – ನವ ಮಾಧ್ಯಮ ಜಗತ್ತಿನ ಉತ್ಪ್ರೇಕ್ಷೆಗಳು