ಗಾಜ಼ಾ ನರಮೇಧ | ವಿಶ್ವಸಂಸ್ಥೆಯ ತನಿಖಾ ಆಯೋಗ ವರದಿ

Most read

 
ವಿಶ್ವಸಂಸ್ಥೆಯ ಅತ್ಯುನ್ನತ ಮಟ್ಟದ ಸ್ವತಂತ್ರ ವಿಚಾರಣಾ ಆಯೋಗವು ಗಾಜ಼ಾದಲ್ಲಿ ನಡೆಸಿರುವ ನರಮೇಧದ ಅಪರಾಧವನ್ನು ಇಸ್ರೇಲ್‌  ಮೇಲೆ ಹೊರಿಸಿದೆ.

ಪ್ಯಾಲೆಸ್ತೇನ್‌ ಮತ್ತು ಇಸ್ರೇಲ್‌ ಕುರಿತ ವಿಶ್ವಸಂಸ್ಥೆಯ ಸ್ವತಂತ್ರ ವಿಚಾರಣಾ ಆಯೋಗವು, ಗಾಜ಼ಾದಲ್ಲಿ ಇಸ್ರೇಲ್‌ ನಡೆಸಿರುವ ನರಮೇಧ ಅಪರಾಧ ಸತ್ಯವೆಂದು ಅಧಿಕಾರಯುತವಾಗಿ ಹೇಳಿದೆ. ಪ್ಯಾಲೆಸ್ತೇನ್‌ ಮತ್ತು ಇಸ್ರೇಲ್‌ ಕುರಿತ ವಿಶ್ವಸಂಸ್ಥೆಯ ತನಿಖಾ ಆಯೋಗವು ತನ್ನ 72 ಪುಟಗಳ ವರದಿಯಲ್ಲಿ‌ 1948ರ ನರಮೇಧ ಕುರಿತ ಒಡಂಬಡಿಕೆಯಲ್ಲಿ ನಿಷೇಧಿಸಲಾಗಿರುವ ಐದು ಕೃತ್ಯಗಳಲ್ಲಿ ಇಸ್ರೇಲ್‌ ನಾಲ್ಕು ಕೃತ್ಯಗಳನ್ನು ಎಸೆಗಿದೆ ಹಾಗೂ ಗಾಜ಼ಾದಲ್ಲಿನ ಪ್ಯಾಲೆಸ್ತೇನಿಯರನ್ನು ಒಂದು ಜನಾಂಗೀಯ ಗುಂಪಾಗಿ ನಾಶಮಾಡುವ ಉದ್ದೇಶವನ್ನು ಇಸ್ರೇಲಿ ನಾಯಕರುಗಳು ಹೊಂದಿದ್ದರು ಎಂದು ಹೇಳಿದೆ.

ಈ ಬಗ್ಗೆ ಕಳೆದ ವರ್ಷ ಪ್ಯಾಲೆಸ್ತೇನ್, ಇಸ್ರೇಲ್ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಗುಂಪುಗಳು  ಮಾಡಿದ ವರದಿಗಳ ಫಲಿತಗಳನ್ನೇ ಈ ವರದಿಯೂ ಸಹ ಪ್ರತಿಧ್ವನಿಸುತ್ತದೆ.

“ಗಾಜ಼ಾದಲ್ಲಿ ಇಸ್ರೇಲ್‌ ವರ್ತನೆಯ ಬಗೆಗೆ ಹೊಣೆಗಾರಿಕೆಯನ್ನು ನಿರ್ಧರಿಸಲು ವಿಚಾರಣಾ ಆಯೋಗವು ಇಂಟರ್‌ ನ್ಯಾಶನಲ್‌ ಕೋರ್ಟ್‌ ಆಫ್‌ ಜಸ್ಟೀಸ್‌ನ ಕಾನೂನಿನ ಮಾನದಂಡಗಳನ್ನು ಬಳಸಿಕೊಂಡಿದೆ. ಹಾಗಾಗಿ ಇದೊಂದು ವಿಶ್ವಸಂಸ್ಥೆಯಿಂದ ಬಂದಿರುವ ಅತ್ಯಂತ ಅಧಿಕಾರಯುತ ಫಲಿತವಾಗಿದೆ.

ತಮ್ಮ ಆಯೋಗವೂ ಸೇರಿದಂತೆ ವಿಶ್ವಸಂಸ್ಥೆಯು ಸಿದ್ಧಪಡಿಸಿರುವ ವರದಿಗಳು, ನಿರ್ದಿಷ್ಟವಾದ ಸಾಕ್ಷ್ಯಾತ್ಮಕ ಮೌಲ್ಯವನ್ನು ಹೊಂದಿವೆ. ಹಾಗೂ ಎಲ್ಲ ದೇಶಗಳ ನ್ಯಾಯಾಲಯಗಳು ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯಗಳು ವಿಶ್ವಾಸವಿಡುವಂತಹದಾಗಿದೆ ಎಂದು ಆಯೋಗದ ಮುಖ್ಯಸ್ಥರಾದ ನವಿ ಪಿಳ್ಳೈ ಹೇಳಿದ್ದಾರೆ.

ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್ ವೈಮಾನಿಕ ದಾಳಿ

ಆಯೋಗದ ವರದಿಯು ಅಕ್ಟೋಬರ್‌ 7, 2023ರಿಂದ ಜುಲೈ 31, 2025ರವರೆಗಿನ ಕಾಲಾವಧಿಯನ್ನು ಪರಿಗಣಿಸಿದ್ದು ಈ ಅವಧಿಯಲ್ಲಿ ಗಾಜ಼ಾದಲ್ಲಿ ಪ್ಯಾಲೆಸ್ತೇನಿಯರ ಮೇಲೆ ಇಸ್ರೇಲ್‌ ನರಮೇಧ ನಡೆಸಿದೆ ಎಂದು ವರದಿಯ ತೀರ್ಮಾನವು ಹೇಳಿದೆ.

ಇಸ್ರೇಲ್‌ ಮಾಡಿರುವ ನಾಲ್ಕು ನರಮೇಧದ ಕೃತ್ಯಗಳೆಂದರೆ:

1. ಒಂದು ಜನಾಂಗೀಯ ಗುಂಪಿನ ಸದಸ್ಯರುಗಳನ್ನು ಕೊಂದುಹಾಕಿರುವುದು: ಇಸ್ರೇಲ್‌ ಪ್ಯಾಲೆಸ್ತೇನಿ ನಾಗರಿಕರ ಮೇಲೆ ಮತ್ತು ರಕ್ಷಿತ ಕಾರಗೃಹಗಳ ಮೇಲೆ ಮತ್ತು ಪ್ರಮುಖ ನಾಗರಿಕ ಮೂಲ ಸೌಕರ್ಯಗಳ ಮೇಲೆ ನೇರದಾಳಿ ಮಾಡಿ ದೊಡ್ಡ ಸಂಖ್ಯೆಯಲ್ಲಿ ಪ್ಯಾಲೆಸ್ತೇನಿಯರು ಸಾವಿಗೆ ಗುರಿಯಾಗುವ ಪರಿಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಮಾಡಿದೆ.

2.  ಗಂಭೀರವಾದ ದೈಹಿಕ ಮತ್ತು ಮಾನಸಿಕ ಹಾನಿಯನ್ನು ಉಂಟುಮಾಡಿರುವುದು: ಪ್ಯಾಲೆಸ್ತೇನಿಯರ ಮೇಲೆ ಚಿತ್ರಹಿಂಸೆ, ಅತ್ಯಾಚಾರ, ಲೈಂಗಿಕ ಆಕ್ರಮಣ, ಬಲವಂತದ ಸ್ಥಳಾಂತರ ಮತ್ತು ಬಂಧನದಲ್ಲಿ ಹೀನಾಯವಾಗಿ ನಡೆಸಿಕೊಳ್ಳುವುದರ ಜೊತೆಯಲ್ಲಿ ನಾಗರೀಕರು ಮತ್ತು ಪರಿಸರದ ಮೇಲೆ ದಾಳಿ ನಡೆಸಲಾಗಿದೆ.

3. ಒಂದು ಗುಂಪನ್ನು ಯೋಜಿತವಾಗಿ ನಾಶಪಡಿಸುವಂತಹ ಪರಿಸ್ಥಿತಿಯನ್ನು ಹೇರುವುದು: ಅವಶ್ಯಕ ಮೂಲ ಸೌಕರ್ಯಗಳನ್ನು ಹಾಳು ಮಾಡುವ, ವೈದ್ಯಕೀಯ ಸೌಲಭ್ಯ ನಿರಾಕರಿಸುವ, ಬಲವಂತವಾಗಿ ಸ್ಥಳಾಂತರ ಮಾಡುವ, ಆಹಾರ, ನೀರು, ಉರುವಲು ಮತ್ತು ವಿದ್ಯುಚ್ಚಕ್ತಿಯನ್ನು ತಡೆಗಟ್ಟುವ, ಬಸುರಿಯರು, ಬಾಣಂತಿಯರ ಮೇಲೆ ಹಿಂಸೆಮಾಡುವ, ಹಸಿವಿನಿಂದ ನರಳಿಸುವಂಥಹುಗಳನ್ನು ಯುದ್ಧ ಮಾದರಿಯಾಗಿ ಬಳಸಿಕೊಳ್ಳಲಾಗಿದೆ. ಮಕ್ಕಳನ್ನೇ ನಿರ್ದಿಷ್ಟವಾಗಿ ಗುರಿಮಾಡಿ ಕೊಳ್ಳಲಾಗಿದೆ.

4. ಗುಂಪಿನೊಳಗೆಯೇ ಜನನವನ್ನು ತಡೆಯುವುದು: ಗಾಜ಼ಾದ ಬಹುದೊಡ್ಡ ಫಲವತ್ತತೆಯ ಕ್ಲಿನಿಕ್‌ ಮೇಲೆ ನಡೆಸಿದ ದಾಳಿಯು ಸಾವಿರಾರು ಭ್ರೂಣಗಳನ್ನು, ವೀರ್ಯಾಣುಗಳ ನಮೂನೆಗಳನ್ನು ಮತ್ತು ಅಂಡಗಳನ್ನು ನಾಶಪಡಿಸಿದೆ. ಸಾವಿರಾರು ಪ್ಯಾಲೆಸ್ತೇನಿ ಮಕ್ಕಳು ಹುಟ್ಟುವುದನ್ನೇ ಇದು ಹೊಸಕಿ ಹಾಕಿದೆ ಎಂದು ಪರಿಣತರು ಆಯೋಗಕ್ಕೆ ಹೇಳಿದ್ದಾರೆ.

ನರಮೇಧ ಕೃತ್ಯಗಳ ಜೊತೆಗೆ, ಇಸ್ರೇಲಿ ಅಧಿಕಾರಿವರ್ಗ ಮತ್ತು ಭದ್ರತಾಪಡೆಗಳು ನರಮೇಧದ ಉದ್ದೇಶವನ್ನಿಟ್ಟುಕೊಂಡು ಗಾಜ಼ಾಪಟ್ಟಿಯಲ್ಲಿರುವ ಪ್ಯಾಲೇಸ್ತೇನಿಯರನ್ನು ಇಡಿಯಾಗಿ ಅಥವಾ ಭಾಗಶಃವಾಗಿ ನಾಶಮಾಡಿವೆ ಎಂದು ತನಿಖೆಯು ತೀರ್ಮಾನಿಸಿದೆ.

ನರಮೇಧದ ಉದ್ದೇಶವನ್ನು ಸಾಬೀತುಪಡಿಸುವುದು ಬಹಳ ಕಷ್ಟವಾದುದು. ಆದರೆ ವರದಿ ರಚಿಸಿದವರಿಗೆ ಅಂತಹ ಉದ್ದೇಶವನ್ನು ಸಾಬೀತುಪಡಿಸುವ “ಸಂಪೂರ್ಣವಾಗಿ ಮನಗಾಣಿಸುವ ಸಾಕ್ಷ್ಯ” ಸಿಕ್ಕಿದೆ.

ನರಮೇಧದ ಉದ್ದೇಶದಿಂದ ಗಾಜ಼ಾದಲ್ಲಿ ಇಸ್ರೇಲಿ ಪಡೆಗಳು ನಡೆಸಿರುವ ಆರು ನಮೂನೆಗಳನ್ನು ಗುರುತಿಸಿದ್ದೇವೆಂದು ಆಯೋಗವು ಹೇಳಿದೆ.

1. ಸಾಮೂಹಿಕ ಹತ್ಯೆಗಳು:

ಅಕ್ಟೋಬರ್‌ 7, 2023ರಿಂದಲೂ ಇಸ್ರೇಲಿ ಪಡೆಗಳು ಅಸಂಖ್ಯಾತ ಪ್ಯಾಲೆಸ್ತೇನಿಯರನ್ನು ಕೊಂದುಹಾಕಿವೆ ಮತ್ತು ಗಂಭೀರವಾಗಿ ಹಾನಿಮಾಡಿವೆ. ಅವರಲ್ಲಿ ಬಹುಪಾಲು ನಾಗರೀಕರು. ಜನಸಂಖ್ಯೆ ದಟ್ಟವಾಗಿರುವ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಿ ಹತ್ಯೆಗಳನ್ನು ಮಾಡಲಾಗಿದೆ. ಜುಲೈ 15, 2025ರ ಹೊತ್ತಿಗೆ ಹತ್ಯೆಯಾದವರಲ್ಲಿ ಶೇ.83ರಷ್ಟು ನಾಗರೀಕರು ಎಂದು ಆಯೋಗವು ಹೇಳಿದೆ. ಅವರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳು.

2. ಸಾಂಸ್ಕೃತಿಕ ನಾಶ: ಮನೆಗಳು, ಶಾಲೆಗಳು, ಮಸೀದಿಗಳು, ಚರ್ಚುಗಳು ಮತ್ತು ಸಾಂಸ್ಕೃತಿಕ ತಾಣಗಳನ್ನು ನೆಲಸಮ ಮಾಡಿರುವುದು ಪ್ಯಾಲೆಸ್ತೇನಿಯರ ಅಸ್ಮಿತೆಯನ್ನು ಅಳಿಸಿ ಹಾಕುವುದಕ್ಕೆ ಸಾಕ್ಷಿಯಾಗಿದೆ.

3. ಉದ್ದೇಶಪೂರ್ವಕವಾಗಿ ಹುಟ್ಟುಹಾಕಿದ ಸಂಕಟ: ಐಸಿಜೆಯಿಂದ ಮೂರು ಆದೇಶಗಳು ಬಂದರೂ ಮತ್ತು ಪದೇಪದೇ ಅಂತಾರಾಷ್ಟ್ರೀಯ ಎಚ್ಚರಿಕೆಗಳು ಬಂದ ಮೇಲೂ ಪ್ಯಾಲೆಸ್ತೇನಿಯರು ಹೊರಗೆ ಹೋಗದಂತೆ ಸಿಕ್ಕಿಕೊಳ್ಳುತ್ತಾರೆಂದು ತಿಳಿದಿದ್ದರೂ ಇಸ್ರೇಲ್ ತನ್ನ ನೀತಿಗಳನ್ನು ಮುಂದುವರೆಸಿತು.

4. ಆರೋಗ್ಯ ಸೇವೆಯ ಕುಸಿತ: ಗಾಜ಼ಾದ ಆರೋಗ್ಯ ಸೇವಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಪಡೆಗಳು ಆಸ್ಪತ್ರೆಗಳ ಮೇಲೆ ದಾಳಿ ಮಾಡಿವೆ, ವೈದ್ಯಕೀಯ ಸಿಬ್ಬಂದಿಗಳ ಕೊಲೆಮಾಡಿವೆ, ಅವರಿಗೆ ಚಿತ್ರಹಿಂಸೆ ನೀಡಿವೆ, ಪ್ರಮುಖ ಸರಬರಾಜುಗಳಿಗೆ, ರೋಗಿಗಳ ತೆರವಿಗೆ ತಡೆಯೊಡ್ಡಿವೆ.

5. ಲೈಂಗಿಕಹಿಂಸೆ: ಲೈಂಗಿಕ ಚಿತ್ರಹಿಂಸೆ, ಅತ್ಯಾಚಾರ ಹಾಗೂ ಇನ್ನಿತರ ಲಿಂಗತ್ವ ಆಧಾರಿತ ಹಿಂಸೆಯನ್ನು ಸಾಮೂಹಿಕ ಶಿಕ್ಷೆಯ ಅಸ್ತ್ರಗಳಾಗಿ ಬಳಸಲಾಗಿದೆ ಎಂದು ತನಿಖಾದಾರರು ದಾಖಲಿಸಿದ್ದಾರೆ.

6. ಮಕ್ಕಳನ್ನುಗುರಿಯಾಗಿಸಿಕೊಂಡಿರುವುದು: ಪ್ಯಾಲೆಸ್ತೇನಿನ ಮಕ್ಕಳನ್ನು ಗುರಿಯಿಟ್ಟು ಗುಂಡು ಹಾರಿಸಿ, ಡ್ರೋಣ್‌ ಗಳನ್ನು ಬಳಸಿ ಮಕ್ಕಳನ್ನು ಕೊಲ್ಲಲಾಗಿದೆ. ತೆರುವು  ಗೊಳಿಸುವಾಗ, ಮತ್ತು ಆಶ್ರಯ ತಾಣಗಳಲ್ಲಿ ಕೆಲವು ಸಲ ಬಿಳಿ ಬಾವುಟಗಳ ಒಯ್ಯುವಾಗ ಕೊಲ್ಲಲಾಗಿದೆ.

ಕೃಪೆ: ಮಿಡಲ್‌ ಈಸ್ಟ್‌ ಐ

ಕನ್ನಡಕ್ಕೆ : ದು ಸರಸ್ವತಿ.

ಇದನ್ನೂ ಓದಿ- http://ಗಾಝಾ ನರಮೇಧ – ಮಾನವ ಕುಲದ ಕ್ರೌರ್ಯಕ್ಕೆ ಹಿಡಿದ ಕನ್ನಡಿ https://kannadaplanet.com/gaza-genocide/

More articles

Latest article