ಇಂದು ಗೌರಿ ಹಬ್ಬ. ಹಿಂದೆ ಆಚರಿಸುತ್ತಿದ್ದ ಅಪ್ಪಟ ಜಾನಪದ ಸೊಗಡಿನ ಗೌರಿ ಹಬ್ಬದ ಕುರಿತು ತಮ್ಮ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ ಯುವ ಬರಹಗಾರ ಸಂತೋಷ್ ಕುಮಾರ್ ತೇಕಲೆ. ಸಮಸ್ತರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.
ಮಳೆಗಾಲ ಬಂದ ತಕ್ಷಣ ನನಗೆ ಯಾವಾಗಲೂ ಗೌರಿ ಹಬ್ಬ ನೆನಪಿಗೆ ಬಂದು ಮನಸಿನಲ್ಲಿ ಒಂದು ರೋಮಾಂಚನ ಉಂಟಾಗುತ್ತಿತ್ತು. ಹಬ್ಬ ಒಂದು ವಾರ ಇರುವಾಗಲೇ ಹೆಣ್ಮಕ್ಕಳು ಮನೆಯನ್ನು ಸಾರಿಸಿ ಕೆಮ್ಮಣ್ಣು ತಂದು ಗೋಡೆಗಳನ್ನು ಚೆಂದ ಮಾಡುತ್ತಿದ್ದರು. (ಹಿಂದೆಲ್ಲ ಮಣ್ಣಿನ ಹುಲ್ಲು ಗುಡಿಸಲು). ಮನೆಯನೆಲ್ಲ ಚೆಂದ ಮಾಡಿ ಕೊನೆಗೆ ಈ ಹೆಣ್ಮಕ್ಕಳು ತಮ್ಮ ತಾಯಿ ಮನೆಗೆ ಹಬ್ಬ ಮಾಡಲು ಹೋಗುತ್ತಿದ್ದರು. ಇವರ ಅತ್ತಿಗೆ ನಾದಿನಿಯರು ಇವರ ಮನೆಗೆ ಹಬ್ಬ ಮಾಡಲು ಬರುತ್ತಿದ್ದರು. ಗೌರಿ ಹಬ್ಬ ಎಂದರೆ ಗೌರಮ್ಮ ತನ್ನ ಗಂಡನ ಮನೆಯಿಂದ ತವರುಮನೆಗೆ ಬರುವಳು ಎನ್ನುವ ನಂಬಿಕೆಯ ಹಬ್ಬ. ಪಕ್ಕಾ ಜಾನಪದ ಹಳ್ಳಿ ಸೊಗಡಿನ ಹಬ್ಬ.
ಗೆಜಗಂಡೆ ಹಣ್ಣು, ಕಂಗನ ಹಳ್ಳು, ಮದ್ದರನಸಿಕಾಯಿ, ಬರ್ಲಕ್ಕಿ ಹೂವು, ಅಕ್ಕತಂಗಿಯರ ಹೂವು ಮುಂತಾದವುಗಳ ಮೂಲಕ ಬಾಳೆ ಮಂಟಪ ಮಾಡಿ ಅದರೊಳಗೆ ಒಂದು ತಂಬಿಗೆಯಲ್ಲಿ ನೀರು ಮತ್ತು ಒಂಬತ್ತು ಕಲ್ಲುಗಳನ್ನು ಹಳ್ಳದಿಂದ ತಂದು ಇಡುತ್ತಾರೆ. ಗೌರಿ ಹಬ್ಬದ ಪ್ರಾರಂಭದ ದಿನ ಹಾಡುವ ಹಾಡು ಹೀಗಿದೆ.
ಹತ್ತಕಾಲೇಣಿ ಉಪ್ಪರಿಗೆ ಚಾಚಿಕೊಂಡು ಹತ್ತಿ ನೋಡ್ಯಳೆ
ತವರೂರ ಹತ್ತಿ ನೋಡ್ಯಳೆ
ತವರೂರಪ್ಪನ ಮನೆಯ ಅಪ್ಪ ಗಿರಿರಾಜ ಬರುವುದಾ….
ಹೀಗೆ ಅವರೇ ಹಾಡಿಕೊಂಡು ಬೆಳಗಿನ ಕೆಲಸ ಆರಂಭಿಸುತ್ತಾರೆ. ಮದುರಂಗಿ ಹೂವಿನ ಹರಿವಾಣ ಗೌರಮ್ಮ ಬರುವ ದಿನ ದಾಟುದಾಟಾಗಿ ಇರುತ್ತದೆ. ಅಂದರೆ ತವರು ಮನೆಗೆ ಬರುವ ಅವಸರದಲ್ಲಿ ಹಾಗೆ ಮಾಡುತ್ತಾರೆ ಎನ್ನುವ ಕಲ್ಪನೆ. ಮನೆಯ ಯಜಮಾನಿ ತನ್ನ ತಾಳಿಯನ್ನು ತೆಗೆದು ಜ್ವಾರಲಕಾಯಿ ಸೇರಿಸಿ ಆ ತಂಬಿಗೆಗೆ ಕಟ್ಟುತ್ತಾರೆ. ರಾತ್ರಿ ೯ ಗಂಟೆಗೆ ಮನೆಯವರೆಲ್ಲ ಸೇರಿ ಹುಡುಗರು ದೊಂದಿ, ಜಾಗಟೆ ಹಿಡಿದು ಯಜಮಾನ ದೀಪ ಹಿಡಿದು ಯಜಮಾನಿ ತಂಬಿಗೆ ಹಿಡಿದು ಒಂದು ಹಳ್ಳಕ್ಕೆ ಹೋಗುತ್ತಾರೆ. ಅಲ್ಲಿ ಒಂದಿಷ್ಟು ಪಟಾಕಿ ಹಚ್ಚಿ, ನೀರು ಕಲ್ಲುಗಳನ್ನು ತುಂಬಿ, ದೊಂದಿಯಿಂದ ದೀಪ ಹಚ್ಚಿ ಮನೆಗೆ ಬರುತ್ತಾರೆ. ರಾತ್ರಿ ಬಂದ ಗೌರಮ್ಮಗೆ ಚಕ್ಕುಲಿ ಬಾಳೆಹಣ್ಣು ಐತ್ರಾಸ ಮುಂತಾದ ತಿಂಡಿಗಳಿಂದ ಊಟ ಬಡಿಸುತ್ತಾರೆ.
ಮಾರನೇ ದಿನ ಇಲಾಡಿ ಅಂತ ಕರೆಯುತ್ತಾರೆ. ಅಂದು ಗೌರಮ್ಮನ ಮಂಟಪಕ್ಕೆ ಕಪ್ಪು ಹಚ್ಚಿ ಶೃಂಗಾರ ಮಾಡುತ್ತಾರೆ. ಅಂದಿನ ದಿನದಂದೂ ಸಹ ಬಗೆ ಬಗೆಯ ಸಿಹಿತಿನಿಸು ಮಾಡಿ ಬಡಿಸುತ್ತಾರೆ. ನಾವು ಚಿಕ್ಕವರಿದ್ದಾಗ ಊರಿನ ಪ್ರತಿಯೊಬ್ಬರು ಗೌರಮ್ಮ ಗೆ ದೂಪ ಹಾಕಿ, ಎಡೆ ಇಟ್ಟು, ಕೈಮುಗಿದು ಬರುತ್ತಾ ಇದ್ದೆವು. ಈಗ ಆ ಸಂಪ್ರದಾಯ ಇಲ್ಲ. ಮೂರನೇ ದಿನ ಗೌರಮ್ಮ ಬಿಡುವ ದಿನ. ಬಂದ ಗೌರಮ್ಮ ಉಣಲಿಲ್ಲ ತಿನ್ನಲಿಲ್ಲ…. ಎಂಬ ರೀತಿಯ ಹಾಡು ಇದೆ.
ಬಾಳೆದಿಂಡಿನ ಮೇಲೆ ವಾಟೆ ಕಡಿಗಳಿಂದ ಬತ್ತಿ ಎಣ್ಣೆ ಹಾಕಿ ಕಡ್ಡಿ ದೀಪ ಮಾಡುತ್ತಾರೆ. ಸಂಪೂರ್ಣ ಮಂಟಪ ತೆಗೆದು ನೀರಿಗೆ ಬಿಡುತ್ತಾರೆ. ಗೌರಮ್ಮ ಬಂದ ದಿನ ಹಳ್ಳೆಣ್ಣೆ ದೀಪ ಬೆಳಗಿ ಬೆಳತನಕ ಕಾದು ಹಾಡು ಹೇಳಿಕೊಂಡು ಸಂಭ್ರಮಿಸುತ್ತಾರೆ .
ಗೌರಮ್ಮನ ತಂದ ರೀತಿಯಲ್ಲಿ ದೀಪ ಹಚ್ಚಿಕೊಂಡು ರಾತ್ರಿ ಹತ್ತು ಗಂಟೆಗೆ ಗೌರಮ್ಮನ ತಂದ ಹಳ್ಳದಲ್ಲಿಯೆ ಬಿಟ್ಟು ಬರುತ್ತಾರೆ. ಆಗ ಒಂದು ಹಾಡಿದೆ
ಇಂದೋದ ಗೌರಮ್ಮ ಇನ್ನೆಂದು ಬರುತೀಯೆ
ನಾ ಬರುವುದು ಮುಂದಿನ ವರುಷಕೆ..
ಗೌರಮ್ಮ ಗಂಡನ ಮನೆಗೆ ಹಿಂದಿರುಗುವ ದಿನ ಒಲ್ಲದ ಮನಸ್ಸಿನಿಂದ ಹೋಗುತ್ತಾಳೆ ಎನ್ನುವ ಸಂಕೇತವಾಗಿ ಮದುರಂಗಿ ಹೂಗಳನ್ನು ತುಂಬಾ ಚೆಂದವಾಗಿ ಒಪ್ಪವಾಗಿ ಕಟ್ಟುತ್ತಾರೆ. ಈಗೆಲ್ಲಾ ಮರದ ಮಂಟಪದ ಹಿಂದೆ ಬಾಳೆದಿಂಡಿನ ಮಂಟಪ ಮಾಡಿ ಅದರಲ್ಲಿ ಪೂಜೆ ಮಾಡುವ ಕ್ರಮ ಇತ್ತು. ಅದು ತುಂಬಾ ಚಂದವಾಗಿತ್ತು. ಅದೇ ರೀತಿಯ ದೊಂದಿ ಜಾಗಟೆ ಗಳೊಂದಿಗೆ ಹಳ್ಳಕ್ಕೆ ಹೋಗಿ ಗೌರಮ್ಮನ ಬಿಟ್ಟು ಗಂಗಮ್ಮನನ್ನು ತರುತ್ತಾರೆ. ಹಳ್ಳದಲ್ಲಿ ದೀಪಗಳ ಸಾಲು ತೇಲಿಹೋತ್ತದೆ. ದಾರಿಯಲ್ಲಿ ತಿನ್ನಲಿ ಎಂಬ ನಂಬಿಕೆಯ ಬುತ್ತಿ ಕಟ್ಟಿ ಅದನ್ನು ಸಹ ಬಿಡುತ್ತಾರೆ.
ಗಂಗಮ್ಮ ಗೌರಮ್ಮ ಉಪಯೋಗಿಸಿದ ಯಾವುದೇ ವಸ್ತುವನ್ನು ಉಪಯೋಗ ಮಾಡುವುದಿಲ್ಲ. ಈ ನಂಬಿಕೆ ಇರುವ ಕಾರಣ ಗೌರಮ್ಮನ ಮಂಟಪದ ಯಾವ ವಸ್ತುಗಳನ್ನು ಇಡುವುದಿಲ್ಲ. ಗಂಗಮ್ಮನನ್ನು ಕೇವಲ ಒಂದು ಮಣೆಯ ಮೇಲೆ ಮಾತ್ರ ಇಟ್ಟು ಪೂಜೆ ಮಾಡುತ್ತಾರೆ.
ಅಲ್ಲಿಗೆ ಮೂರು ದಿನಗಳ ಗೌರಮ್ಮ ಹಬ್ಬ ಮುಕ್ತಾಯ. ಇವೆಲ್ಲವೂ ಇಂದು ನೆನಪಾಗಿ ಉಳಿದಿವೆ.
ಸಂತೋಷ್ ಕುಮಾರ್ ತೇಕಲೆ
ಯುವ ಬರಹಗಾರ
ಇದನ್ನೂ ಓದಿ-http://‘ಎತ್ತಿನಹೊಳೆ ಯೋಜನೆ’ಗೆ ಸಿಎಂ ಸಿದ್ದರಾಮಯ್ಯ ಚಾಲನೆ https://kannadaplanet.com/cm-siddaramaiah-hetinaholi-start/