ಪ್ರಹಸನ
ಇದು ಖಂಡಿತಾ ಕಾಲ್ಪನಿಕ ಪ್ರಹಸನವಲ್ಲ. ಉತ್ತರ ಪ್ರದೇಶ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಪಾಲುದಾರ ಪಕ್ಷವಾದ ನಿಶಾದ್ ಪಕ್ಷದ ಅಧ್ಯಕ್ಷ ಹಾಗೂ ಸಚಿವ ಸಂಜಯ್ ರವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಯಾದಾಗ ನಡೆದ ಸತ್ಯ ಘಟನೆ. ಒಂದು ಸಲ ಓದಿ ಹಾಗೂ ಇಂತಹ ಸನಾತನಿ ಸಚಿವರ ಮೂರ್ಖತನಕ್ಕೆ ಮರುಕ ಪಡಿ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಹಿಂಬಾಲಕ : ಉತ್ತರ ಪ್ರದೇಶದ ಜನಪ್ರಿಯ ಸಚಿವ, ಜನಸೇವೆಗೆ ಬದುಕನ್ನೇ ಮೀಸಲಿಟ್ಟ ಸಂಜಯ್ ನಿಶಾದ್ ರವರಿಗೆ..
ಜನರು : ಜೈ ಜೈ..
ಹಿಂಬಾಲಕ : ಇವತ್ತು ಈ ನಮ್ಮ ಕಾನ್ಪುರ ಗ್ರಾಮಾಂತರ ಜಿಲ್ಲೆಯ ಭೋಗಿನಿಪುರ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತ ಜನರಿಗೆ ಸಾಂತ್ವನ ಹೇಳಲು ಸಚಿವರು ಆಗಮಿಸಿದ್ದಾರೆ..ಜನಮಾನ್ಯ ಸಚಿವ ಸಂಜಯ್ ನಿಶಾದ್ ರವರಿಗೆ..
ಜನರು : ಜಯವಾಗಲಿ..
ಸಚಿವರು : ಇರಲಿ ಇರಲಿ.. ಮಹಾ ಜನಗಳೇ ನನ್ನ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಇವತ್ತು ಈ ಪ್ರವಾಹ ಪೀಡಿತ ಕುಗ್ರಾಮಗಳಿಗೆ ಬಂದಿದ್ದೇನೆ.
ಒಬ್ಬ : ಮಂತ್ರಿಗಳೇ ಪ್ರವಾಹ ಬಂದು ಮನೆಗಳೆಲ್ಲಾ ಮುಳುಗಿವೆ, ಜನ ಜಾನುವಾರುಗಳು ಸಂಕಷ್ಟದಲ್ಲಿವೆ.. ಪ್ರವಾಹಕ್ಕೆ ಸಿಲುಕಿ ಹಲವರು ಸತ್ತಿದ್ದಾರೆ. ಈಗ ನೀವೇ ನಮಗೆ ಪರಿಹಾರ ಕೊಟ್ಟು ಕಾಪಾಡಬೇಕು.
ಸಚಿವ : ಛೇ ಛೇ ಎಂತಾ ಮಾತು ಅಂತಾ ಆಡ್ತೀರಿ. ಇದೆಲ್ಲಾ ವಿರೋಧ ಪಕ್ಷಗಳ ಅಪಪ್ರಚಾರ.
ಇನ್ನೊಬ್ಬ : ಮಂತ್ರಿಗಳೇ..
ಸಚಿವ : ನೋಡ್ರಪ್ಪಾ.. ಸ್ವತಃ ಗಂಗಾಮಾತೆ ನಿಮ್ಮ ಪಾದ ತೊಳೆಯಲೆಂದೇ ನಿಮ್ಮೂರಿಗೆ ಬಂದಿದ್ದಾಳೆ. ಇದಕ್ಕಿಂತಾ ದೊಡ್ಡ ಭಾಗ್ಯ ಇನ್ನೇನಿದೆ. ಆ ಮಾತೆಯ ದರ್ಶನ ಮಾತ್ರದಿಂದ ನೀವು ನೇರವಾಗಿ ಸ್ವರ್ಗಕ್ಕೆ ಹೋಗುತ್ತೀರಿ.
ಮತ್ತೊಬ್ಬ : ಮಂತ್ರೀಜಿ.. ಪ್ರವಾಹದಿಂದಾಗಿ ನಮ್ಮ ಬದುಕೇ ಸರ್ವನಾಶವಾಗಿದೆ. ಎಲ್ಲಿಗೆ ಹೋಗಬೇಕೆಂದು ತಿಳಿಯದಾಗಿದೆ.
ಸಚಿವ : ಗಂಗಾ ಮಾತೆಯೇ ತನ್ನ ಪುತ್ರರ ಪಾದ ತೊಳೆಯಲು ಬಂದಿರುವಾಗ, ಆ ದೇವತೆಯ ದರ್ಶನ ಪಡೆದು ಸ್ವರ್ಗಕ್ಕೆ ಹೋಗುವ ಸೌಭಾಗ್ಯ ನಿಮ್ಮದಾಗಿರುವಾಗ ಸಂಭ್ರಮಿಸಬೇಕೆ ಹೊರತು ಸಂಕಟ ಪಡಬಾರದು.
ಒಬ್ಬ : ಮಂತ್ರಿಗಳೇ ನೀವೇನು ಹೇಳ್ತಿದ್ದೀರಾ?
ಸಚಿವ : ಸರಿಯಾಗಿಯೇ ಹೇಳ್ತಿದ್ದೇನಯ್ಯಾ..ಆ ಗಂಗಾ ಮಾತೆ..
ಇನ್ನೊಬ್ಬ : ಗಂಗಾ ಮಾತೆ ಅಲ್ಲಾ ಸ್ವಾಮಿ.. ನಾವಿರೋದು ಯಮುನಾ ನದಿ ತೀರದಲ್ಲಿ. ಪ್ರವಾಹ ಬಂದಿದ್ದು ಯಮುನಾ ನದಿಯಿಂದಾ.
ಸಚಿವ : ಓ ಹಾಗಾ.. ಹಾಗಾದರೆ ನಾವಿನ್ನು ಬರ್ತೇವೆ..
ಒಬ್ಬ : ಮಂತ್ರಿಗಳೇ..
ಹಿಂಬಾಲಕ : ಜನಪ್ರಿಯ ಸಚಿವರಿಗೆ..
ಹಿಂಬಾಲಕ ಪಡೆ : ಜೈ
ಇನ್ನೊಬ್ಬ : ಪ್ರವಾಹ ಪರಿಹಾರ..
ಹಿಂಬಾಲಕ : ಭಾರತ್ ಮಾತಾಕೀ
ಹಿಂಬಾಲಕ ಪಡೆ : ಜೈ ಜೈ..
( ಸಚಿವರು ಹೊರಡುತ್ತಾರೆ, ಗ್ರಾಮಸ್ತರು ತಲೆ ಮೇಲೆ ಟವಲ್ ಹಾಕಿಕೊಂಡು ಕೂಡುತ್ತಾರೆ)
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು.
ಇದನ್ನೂ ಓದಿ- ಅವಳೇಕೆ ಹೀಗೆ?