ಹಿಂದುತ್ವವಾದದ ಮುಖವಾಡವಾಗಿರುವ ರಾಷ್ಟ್ರೀಯವಾದಿ ತಂದೆ ಬಾಲಗಂಗಾಧರ ತಿಲಕರ ಸಿದ್ಧಾಂತದಿಂದ ದೂರವಾಗಿದ್ದ ಶ್ರೀಧರ ತಿಲಕರು ಅಂಬೇಡ್ಕರ್ ಅವರ ಜೊತೆ ಸೇರಿಕೊಂಡು ಸಮಸಮಾಜಕ್ಕಾಗಿ, ಶೋಷಿತರ ಉದ್ಧಾರಕ್ಕಾಗಿ ಜೀವನವನ್ನು ಮುಡಿಪಾಗಿಟ್ಟರು. ಬಾಲಗಂಗಾಧರ ತಿಲಕರು ಮನುವಾದವನ್ನು ಇನ್ನಷ್ಟೂ ಗಟ್ಟಿಗೊಳಿಸುವ ಸಾರ್ವಜನಿಕ ಗಣೇಶೋತ್ಸವಗಳನ್ನು ನಡೆಸಿದರೆ ಅವರ ಕಿರಿಯ ಪುತ್ರ ಶ್ರೀಧರ ತಿಲಕರು “ಸಾರ್ವಜನಿಕ ಸಹಭೋಜನ ಕಾರ್ಯಕ್ರಮ”ಗಳನ್ನು ನಡೆಸಿದರು – ನವೀನ್ ಸೂರಿಂಜೆ.
ಸಾರ್ವಜನಿಕ ಗಣೇಶೋತ್ಸವ ಆರಂಭಿಸಿ ‘ಲೋಕಮಾನ್ಯ’ ಎನ್ನಿಸಿಕೊಂಡಿದ್ದ ಬಾಲಗಂಗಾಧರ ತಿಲಕರು ನಿಜವಾದ ಲೋಕಮಾನ್ಯರಲ್ಲ. ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಕಾರ ‘ಲೋಕಮಾನ್ಯ ಎಂಬ ಬಿರುದಿಗೆ ನಿಜವಾದ ಅರ್ಹರು ಯಾರಾದರೂ ಇದ್ದರೆ ಅದು ಶ್ರೀಧರ್ ಪಂತ್ ತಿಲಕರು ಮಾತ್ರ’!
ಬಾಲಗಂಗಾಧರ ತಿಲಕರ ವಿಚಾರಧಾರೆಯನ್ನು ಅವರ ಕಿರಿಯ ಪುತ್ರ ಶ್ರೀಧರ ತಿಲಕರೇ ಒಪ್ಪುತ್ತಿರಲಿಲ್ಲ. ಹಿಂದುತ್ವವಾದದ ಮುಖವಾಡವಾಗಿರುವ ರಾಷ್ಟ್ರೀಯವಾದಿ ತಂದೆ ಬಾಲಗಂಗಾಧರ ತಿಲಕರ ಸಿದ್ಧಾಂತದಿಂದ ದೂರವಾಗಿದ್ದ ಶ್ರೀಧರ ತಿಲಕರು ಅಂಬೇಡ್ಕರ್ ಅವರ ಜೊತೆ ಸೇರಿಕೊಂಡು ಸಮಸಮಾಜಕ್ಕಾಗಿ, ಶೋಷಿತರ ಉದ್ಧಾರಕ್ಕಾಗಿ ಜೀವನವನ್ನು ಮುಡುಪಾಗಿಟ್ಟರು. ಬಾಲಗಂಗಾಧರ ತಿಲಕರು ಮನುವಾದವನ್ನು ಇನ್ನಷ್ಟೂ ಗಟ್ಟಿಗೊಳಿಸುವ ಸಾರ್ವಜನಿಕ ಗಣೇಶೋತ್ಸವಗಳನ್ನು ನಡೆಸಿದರೆ ಅವರ ಕಿರಿಯ ಪುತ್ರ ಶ್ರೀಧರ ತಿಲಕರು “ಸಾರ್ವಜನಿಕ ಸಹಭೋಜನ ಕಾರ್ಯಕ್ರಮ”ಗಳನ್ನು ನಡೆಸಿದರು. ಭಾರತದಲ್ಲಿ ನಡೆಯಬೇಕಿರುವುದು ಸಾರ್ವಜನಿಕ ಗಣೇಶೋತ್ಸವದ ಭಜನೆಗಳಲ್ಲ, ಬದಲಾಗಿ ಸಮುದಾಯ ಭೋಜನಗಳು ಎಂದು ಶ್ರೀಧರ ತಿಲಕರು ಪ್ರತಿಪಾದಿಸುತ್ತಿದ್ದರು.
1928 ಮೇ 10, ನಾರಾಯಣ ಪೇಟೆಯ ಕೇಸರಿ ವಾಡಾ ನಿವಾಸಿಗಳಿಗಾಗಿ ವಿಶೇಷ ಔತಣ ಕೂಟವನ್ನು ಬಾಲಗಂಗಾಧರನಾಥ ತಿಲಕರ ಪುತ್ರ ಶ್ರೀಧರ ತಿಲಕರು ಆಯೋಜಿಸಿದ್ದರು. ವಿವಿಧ ಜಾತಿ ಮತ್ತು ಧರ್ಮಗಳ ಸುಮಾರು 200 ಜನರನ್ನು ಈ ಔತಣ ಕೂಟಕ್ಕೆ ಆಹ್ವಾನಿಸಲಾಗಿತ್ತು. ಖುದ್ದು ಶ್ರೀಧರ ತಿಲಕರೇ ಆಯೋಜಿಸಿದ್ದ ಈ ಸಹಭೋಜನ ಕೂಟವನ್ನು ಅವರೇ ಓಡಾಡಿ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದರು.
ದಲಿತರು ಮೇಲ್ವರ್ಗಗಳ ಜೊತೆ ಊಟ ಮಾಡುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ದಿನಗಳವು. ಮೇಲ್ವರ್ಗಗಳು ದಲಿತರಿಗೇನಾದರೂ ಊಟ ಕೊಡಬೇಕಿದ್ದರೂ ಮುಟ್ಟದಂತೆ ಊಟವನ್ನು ಎತ್ತರದಿಂದ ಬಿಸಾಡುತ್ತಿದ್ದಂತಹ ಅಮಾನವೀಯ ದಿನಗಳು ಅದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ಚಳವಳಿ ಕಟ್ಟುತಿದ್ದರು. ಇದೇ ಸಂದರ್ಭದಲ್ಲಿ ಸಹಭೋಜನ ಕಾರ್ಯಕ್ರಮವನ್ನು ಶ್ರೀಧರ ತಿಲಕರು ಆಯೋಜಿಸಿ ಅದರ ಯಶಸ್ಸಿಗಾಗಿ ದುಡಿದರು. ಇದು ಮಹಾರಾಷ್ಟ್ರದಲ್ಲಿ ನಡೆದ ಮೊದಲ ಸಹಭೋಜನ ಕಾರ್ಯಕ್ರಮವಾಗಿತ್ತು.
ಶ್ರೀಧರ ತಿಲಕರು ಆಯೋಜಿಸಿದ್ದ ಈ ಸಹಭೋಜನ ಕಾರ್ಯಕ್ರಮಕ್ಕೆ ಮತ್ತೊಂದು ಐತಿಹಾಸಿಕ ಮಹತ್ವವಿದೆ. ಬಾಲಗಂಗಾಧರ ತಿಲಕರನ್ನು ಒಪ್ಪದ ಡಾ ಬಿ ಆರ್ ಅಂಬೇಡ್ಕರ್, ತಿಲಕರ ಪುತ್ರ ಶ್ರೀಧರ ತಿಲಕರ ಆತ್ಮೀಯ ಸ್ನೇಹಿತರಾಗಿದ್ದರು. ಶ್ರೀಧರ ತಿಲಕರು ಆಯೋಜಿಸಿದ್ದ ಸಹಭೋಜನ ಕಾರ್ಯಕ್ರಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರೂ ಭಾಗವಹಿಸಿದರು.
ಶ್ರೀಧರ ತಿಲಕರು 1925 ರಿಂದ ಅಂಬೇಡ್ಕರ್ ಅವರ “ವಾದ”ಗಳಿಗೆ ಮಾರು ಹೋಗಿದ್ದರು. ಅಂಬೇಡ್ಕರ್ ವಾದ ಮಾತ್ರ ಸಾಮಾಜಿಕ ಸುಧಾರಣೆಗಳನ್ನು ಮಾಡಬಹುದು ಎಂದು ಶ್ರೀಧರ ತಿಲಕರು ನಂಬಿದ್ದರು. ಅಂಬೇಡ್ಕರ್ ಅವರನ್ನು ಹೆಚ್ಚುಕಡಿಮೆ ನಿತ್ಯ ಭೇಟಿಯಾಗುತ್ತಿದ್ದ ಶ್ರೀಧರ ತಿಲಕರು, ಮೇಲ್ಜಾತಿಯ ದಬ್ಬಾಳಿಕೆ-ಅಸಮಾನತೆಗಳನ್ನು ನಿವಾರಿಸುವ ಚಳವಳಿ ಹೇಗೆ ರೂಪುಗೊಳ್ಳಬೇಕು ಎಂದು ಚರ್ಚಿಸುತ್ತಿದ್ದರು. ಆಗ ಭಾರತೀಯ ಸಮಾಜದಲ್ಲಿದ್ದ ಬಾಲ್ಯ ವಿವಾಹ, ವಿಧವೆಯರ ತಲೆಬೋಳಿಸುವಿಕೆ, ಅಸ್ಪೃಶ್ಯತೆ, ಬಡತನ, ಅನಕ್ಷರತೆಗಳ ವಿರುದ್ಧ ಹೋರಾಡಲು ಶ್ರೀಧರ ತಿಲಕರು ಅಂಬೇಡ್ಕರ್ ಅವರ ಅನುಯಾಯಿಯಾದರು.
1927ರಲ್ಲಿ, ಮಹಾಡ್ ಸತ್ಯಾಗ್ರಹದ ಸಮಯದಲ್ಲಿ ಅಂಬೇಡ್ಕರ್ ಅವರು ‘ಸಮಾಜ ಸಮತಾ ಸಂಘ’ವನ್ನು ಸ್ಥಾಪಿಸಿದರು. 1928ರ ಏಪ್ರಿಲ್‌ನಲ್ಲಿ, ಶ್ರೀಧರ ತಿಲಕರು ಪುಣೆಯಲ್ಲಿ ಸಮಾಜ ಸಮತಾ ಸಂಘದ ಶಾಖೆಯನ್ನು ಪ್ರಾರಂಭಿಸಿದರು. ಇದು ಕ್ರಮೇಣ ದಲಿತ ಕ್ರಾಂತಿಗೆ ಕಾರಣವಾಯಿತು.
ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಶ್ರೀಧರ ತಿಲಕರು ದಲಿತರಿಗಾಗಿ ಅಂಬೇಡ್ಕರ್ ಅವರ ಕ್ರಾಂತಿಯಲ್ಲಿ ಭಾಗಿಯಾಗಿರುವುದನ್ನು ಅವರ ಸಮುದಾಯ ಸಹಿಸಲಿಲ್ಲ. ಶ್ರೀಧರ ತಿಲಕರಿಗೆ ಹಲವು ರೀತಿಯ ಕಾಟ ಕೊಡಲಾರಂಭಿಸಿದರು. ತಂದೆ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟಕ್ಕಾಗಿ ಆರಂಭಿಸಿದ ಕೇಸರಿ ಪತ್ರಿಕೆಯಲ್ಲಿ ‘ದಲಿತರ ಸ್ವಾತಂತ್ರ್ಯ’ದ ಬಗ್ಗೆ ಬರೆಯಲು ಇಚ್ಛಿಸಿದ್ದರು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಇಂತಹ ಹಲವು ಘಟನೆಗಳಿಂದ ಮನನೊಂದ ಶ್ರೀಧರ ತಿಲಕರು ಆತ್ಮಹತ್ಯೆ ಮಾಡಿಕೊಂಡರು.
ಆತ್ಮಹತ್ಯೆಗೂ ಮುನ್ನ ಶ್ರೀಧರ ತಿಲಕರು ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಪತ್ರ ಬರೆದಿದ್ದರು. ಶ್ರೀಧರ ತಿಲಕ್ ಅವರ ಆತ್ಮಹತ್ಯೆಯ ನಂತರ ‘ದುನಿಯಾ’ ಮ್ಯಾಗಜಿನ್ ವಿಶೇಷ ಸಂಚಿಕೆ ಪ್ರಕಟಿಸಿತು. ಆ ಸಂಚಿಕೆಗೆ ‘ತಿಲಕ ಸಂಚಿಕೆ’ ಎಂದೇ ಹೆಸರಿಟ್ಟಿತ್ತು ! ಆ ವಿಶೇಷ ಸಂಚಿಕೆಯಲ್ಲಿ ಡಾ. ಬಾಬಾಸಾಹೇಬ ಆಂಬೇಡ್ಕರ್ ಅವರು ಒಂದು ಅತ್ಯುನ್ನತ ಲೇಖನ ಬರೆದಿದ್ದರು. ಅದರ ಸಾರಾಂಶ ಇಲ್ಲಿದೆ :
“ನಾನು ಅದೊಂದು ದಿನ ಜಳಗಾಂವಿನಲ್ಲಿ ಬಹಿಷ್ಕೃತ ವರ್ಗಗಳ ಸಭೆಯಲ್ಲಿ ಭಾಗವಹಿಸುತ್ತಿದ್ದೆ. ಮುಂಬೈನಿಂದ ಹೊರಟಿದ್ದ ನನಗೆ ಅದೇ ದಿನ, ಶ್ರೀಧರ ತಿಲಕ ಅವರಿಂದ ಒಂದು ಪತ್ರ ಬಂದಿತ್ತು. ದಾಪೋಳಿಯಲ್ಲಿ ನಡೆಯುತ್ತಿರುವ ದಲಿತರ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲವೆಂಬ ವಿಷಾದವನ್ನು ಅವರು ಪತ್ರದಲ್ಲಿ ವ್ಯಕ್ತಪಡಿಸಿದ್ದರು. ಆದರೆ ಇಡೀ ಪತ್ರದಲ್ಲಿ ಎಲ್ಲೂ ಕೂಡಾ ಆತ್ಮಹತ್ಯೆಯ ಒಂದು ಸಣ್ಣ ಸೂಚನೆಯೂ ಇರಲಿಲ್ಲ.
ಜುಳಗಾಂನಲ್ಲಿ ಅಂದು ಸಂಜೆ ಆರು ಗಂಟೆಗೆ ಸಭೆ ಪ್ರಾರಂಭವಾಗಿತ್ತು. ಸುಮಾರು ಐದು ಸಾವಿರ ಜನರು ಈ ಸಭೆಯಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ನಾನು, ಸಮಾಜ ಸಮತಾ ಸಂಘ/ ಸಮತಾ ಸೈನಿಕ ದಳದ ಪ್ರಾಮುಖ್ಯತೆಯ ಬಗ್ಗೆ, ಅಸ್ಪೃಶ್ಯತೆ, ಅಸಮಾನತೆಯ ಭೀಕರತೆಯ ಬಗ್ಗೆ ಮಾತನಾಡಿ ಆಗಷ್ಟೆ ಕುಳಿತಿದ್ದೆ. ಉಳಿದ ಅತಿಥಿಗಳು ಮಾತನಾಡುತ್ತಿದ್ದರು. ಆಗ ಸಂದೇಶವೊಂದು ಬಂತು. ಅದು ಏನೆಂದರೆ ಗೆಳೆಯ ಶ್ರೀಧರ ತಿಲಕರ ನಿಧನದ ಸುದ್ದಿಯಾಗಿತ್ತು. ನಾನು ಆಘಾತಕ್ಕೊಳಗಾದೆ. ತಕ್ಷಣ ಏನು ಮಾಡಬೇಕೆಂದು ತಿಳಿಯದೆ ಸಭೆ ಮುಗಿಸಲು ಒಂದು ನಿರ್ಣಯ ಮಂಡಿಸಿ ಮುಂಬೈಗೆ ಹೊರಟೆ. ಮೂರೇ ಗಂಟೆಗಳ ಹಿಂದೆ, ಶ್ರೀಧರ ತಿಲಕರು ನನಗೆ ಕಳುಹಿಸಿದ್ದ ಪತ್ರ ನನ್ನ ಟೇಬಲ್ ಮೇಲೆ ಇತ್ತು. ನನಗೆ ಬಹಳ ದುಃಖವಾಯಿತು. ಆತ್ಮಹತ್ಯೆ ಎಂದರೆ ಬಹಳ ಭಯಾನಕ ಕೊನೆಯಾಗಿದೆ. ಆದರೆ ಅವರ ಆತ್ಮಹತ್ಯೆಗೆ ಕಾರಣವಾದ ವಿಷಯಗಳನ್ನು ಪರಿಗಣಿಸುವಾಗ, ಅವರು ಜೀವನದಲ್ಲಿ ಎದುರಿಸಿದ ಸಂಕಷ್ಟ ಬಹಳ ಹೃದಯವಿದ್ರಾವಕವಾಗಿತ್ತು” ಎಂದು ಅಂಬೇಡ್ಕರ್ ಅವರು ಲೇಖನ ಬರೆಯುತ್ತಾರೆ.
ಗಣೇಶೋತ್ಸವದ ಸಂದರ್ಭದಲ್ಲಿ ನಾವುಗಳು ಶ್ರೀಧರ ತಿಲಕರನ್ನು ನೆನಪಿಸಿಕೊಳ್ಳಬೇಕು. ಸಾರ್ವಜನಿಕ ಗಣೇಶೋತ್ಸವ ಭಜನೆಯ ಬದಲು ಸಾಮುದಾಯಿಕ ಭೋಜನಕ್ಕೆ ನಾವು ಒತ್ತುಕೊಡಬೇಕು. ನಮ್ಮನ್ನು ಒಟ್ಟುಗೂಡಿಸಿದ್ದು ಬಾಲಗಂಗಾಧರ ತಿಲಕರ ಸಾರ್ವಜನಿಕ ಗಣೇಶೋತ್ಸವ ಎಂಬ ತಪ್ಪು ತಿಳುವಳಿಕೆ ಇದೆ. ನಾವು ಸ್ವಲ್ಪವಾದರೂ ಮನುಷ್ಯರಾಗಿ ಒಟ್ಟುಗೂಡಿದ್ದು ಶ್ರೀಧರ ತಿಲಕರು ಅಂಬೇಡ್ಕರ್ ಜೊತೆಗೂಡಿ ಮಾಡಿದ ಚಳವಳಿಯಿಂದ ! ಹಾಗಾಗಿ ಶೋಷಿತ ಸಮುದಾಯ ಮತ್ತು ಶೋಷಿತರ ಪರ ಇರುವವರು ಬಾಲಗಂಗಾಧರ ತಿಲಕರನ್ನು ಅನುಸರಿಸದೇ ಶ್ರೀಧರ ತಿಲಕರನ್ನು ಅನುಸರಿಸಬೇಕಿದೆ. ಯಾಕೆಂದರೆ ಅಂಬೇಡ್ಕರ್ ಹೇಳಿದಂತೆ ‘ಲೋಕಮಾನ್ಯ ಎಂಬ ಬಿರುದಿಗೆ ನಿಜವಾದ ಅರ್ಹರು ಯಾರಾದರೂ ಇದ್ದರೆ ಅದು ಶ್ರೀಧರ್ ಪಂತ್ ತಿಲಕರು ಮಾತ್ರ’!
ನವೀನ್ ಸೂರಿಂಜೆ
ಹಿರಿಯ ಪತ್ರಕರ್ತರು