ಗಾಂಧಿಯನ್ನು ಮತ್ತೆ ಮತ್ತೆ ಧ್ಯಾನಿಸುವತ್ತ ‘ಗಾಂಧಿ ಭಾರತʼ ಸಮಾವೇಶ

Most read

ಗಾಂಧಿಯವರು ಕಾಂಗ್ರೆಸ್ ನ ರಾಷ್ಟ್ರೀಯ ಸಭೆಯ ಅಧ್ಯಕ್ಷತೆ ವಹಿಸಿ ಇಂದಿಗೆ ನೂರು ವರ್ಷ. ಕಾಂಗ್ರೆಸ್  ಪಕ್ಷ ಈ ಶತಮಾನೋತ್ಸವದ ಸವಿ ನೆನಪಿನಲ್ಲಿ ಬೆಳಗಾವಿಯಲ್ಲಿ  ಕಾರ್ಯಕ್ರಮ  ನಡೆಸುತ್ತಿದೆ. ವರ್ಷಪೂರ್ತಿ  ಗಾಂಧಿಯವರ  ಚಿಂತನೆಗಳ ಕುರಿತು ಸಮಾಜದಲ್ಲಿ  ಜಾಗೃತಿ ಮೂಡಿಸಲು ಕಾರ್ಯಕ್ರಮ  ಹಮ್ಮಿಕೊಂಡಿದೆ. ಭಾರತದ ನಿರ್ಮಾಣದಲ್ಲಿ ಗಾಂಧಿಯವರ ನಿರೂಪಣೆಗಳು ಎಷ್ಟು  ಅಗತ್ಯ ಎಂಬುದನ್ನು  ಯುವ ಜನತೆಗೆ ತಲುಪಿಸಲು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ – ಎಂ ಜಿ ಹೆಗಡೆ, ಸಾಮಾಜಿಕ ಹೋರಾಟಗಾರರು.

ಮಹಾತ್ಮ ಗಾಂಧಿಯವರು ಕೇವಲ ಭಾರತದ ಸ್ವಾತಂತ್ರ್ಯ ಚಳುವಳಿಗೆ ಸೀಮಿತವಾದ ನಾಯಕರಲ್ಲ. ಅಥವಾ ಭಾರತೀಯರ ಅಸ್ಮಿತೆಯ ಪರಿಧಿಯಲ್ಲಿ  ನಿಂತವರೂ ಅಲ್ಲ. ಇವುಗಳ ಜೊತೆಗೆ, ಇದೆಲ್ಲದರ ಆಚೆ ನಿಂತು ಮಾನವಕುಲಕ್ಕೆ ಮಾರ್ಗದರ್ಶನ  ಮಾಡಿದ ಸಂತ.

ಜಗತ್ತಿನ ನಾಗರೀಕ ಸಮಾಜದ ಮತ್ತು ಸೃಷ್ಟಿಯ ಅಂತರ್ಗತ  ಗುಣ ಅಹಿಂಸೆ.  ಅದುವೇ ನಾಗರೀಕ  ಸಮಾಜವನ್ನು  ದೀರ್ಘಕಾಲ ಉಳಿಸಿಕೊಂಡು ಬಂದಿರುವುದು. ಹಿಂಸೆ ಮನುಷ್ಯನ ಪ್ರಲೋಭನೆಗಳಿಂದಾಗಿ ಹುಟ್ಟಿಕೊಂಡ ಗುಣ.

ಮೋಸ, ವಂಚನೆ, ಕೃತಕ ಬದುಕಿನ ಬಂಡವಾಳ ಸುಳ್ಳು . ಅದಕ್ಕೆ ಸದಾ ಪ್ರತಿರೋಧ ಒಡ್ಡಿ ನಿಂತಿರುವುದೇ ಸತ್ಯ. ಈ ಸತ್ಯವೇ ಮನುಷ್ಯ  ಸಮಾಜವನ್ನು ಅನಾಗರಿಕಗೊಳಿಸದೇ, ನಾಗರೀಕವಾಗಿರಿಸುವುದು.

ಸತ್ಯ ಮತ್ತು ಅಂಹಿಸೆಯನ್ನು ತನ್ನ ವೈಯಕ್ತಿಕ  ಜೀವನದಲ್ಲಿ ಪ್ರಯೋಗಿಸುತ್ತಲೇ ಜಗತ್ತಿಗೇ ಅದರ ಸತ್ವದ ಪರಿಚಯ ಮಾಡಿಸಿದ್ದು ಮಹಾತ್ಮ ಗಾಂಧಿಯವರು. ಈ ಹಿನ್ನೆಲೆಯಲ್ಲಿ ಗಾಂಧಿಯವರ  ವಿಚಾರಧಾರೆ  ಮತ್ತು ನಿಲುವುಗಳನ್ನು ಎಷ್ಟೇ  ಹತ್ತಿಕ್ಕಿದರೂ ಅದು ಮತ್ತೆ ಮತ್ತೆ ಪುಟಿಯುತ್ತಲೇ ನಮ್ಮತ್ತ ಬರುತ್ತದೆ.

ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಮಾನವೀಯ ಮೌಲ್ಯ  ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ  ಗಾಂಧಿಯವರು ಒಂದಿಲ್ಲೊಂದು ಕಾರಣಕ್ಕೆ ನಮ್ಮನ್ನು ಕಾಡುತ್ತಾರೆ. ನಮ್ಮ ನಿಲುವುಗಳ ಕುರಿತು ಅತ್ಮಶೋಧನೆಗೆ ಪ್ರಚೋದಿಸುತ್ತಾರೆ.

1924 ರ ಡಿಸೆಂಬರ್ 26 ಮತ್ತು 27 ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ನ 39 ನೇ ಮಹಾ ಅಧಿವೇಶನದಲ್ಲಿ ಗಾಂಧೀಜಿ.

ಇದೀಗ ಗಾಂಧಿಯವರು ಕಾಂಗ್ರೆಸ್ ನ ರಾಷ್ಟ್ರೀಯ ಸಭೆಯ ಅಧ್ಯಕ್ಷತೆ ವಹಿಸಿ ಇಂದಿಗೆ ನೂರು ವರ್ಷ. 1924 ರ ಡಿಸೆಂಬರ್ 26 ಮತ್ತು 27 ರಂದು ಅವರು ಕರ್ನಾಟಕದ ಬೆಳಗಾವಿಯಲ್ಲಿ  ನಡೆದ ಕಾಂಗ್ರೆಸ್  ಸಮಾವೇಶದ ಅಧ್ಯಕ್ಷರಾಗಿದ್ದರು.  ಸ್ವಾತಂತ್ರ್ಯ  ಹೋರಾಟಕ್ಕೆ ಖಾದಿ ಚಳುವಳಿಯ ಅಗತ್ಯವನ್ನು  ಗಾಂಧಿಯವರು ಮನವರಿಕೆ ಮಾಡಿಕೊಟ್ಟಿದ್ದರು.

1893 ರಲ್ಲಿ ಎ ಓ ಹ್ಯೂಮ್ ಬೆಳಗಾವಿಗೆ ಭೇಟಿ  ನೀಡಿದ್ದರು. 1906 ರಲ್ಲಿ ಬಾಲಗಂಗಾಧರ ತಿಲಕ್ ಇಲ್ಲಿಗೆ ಭೇಟಿ ನೀಡಿದ್ದರು. ಈ ಸಮ್ಮೇಳನದ ಸಭಾ ಭವನಕ್ಕೆ ವಿಜಯನಗರ  ಎಂದು ಹೆಸರಿಡಲಾಗಿತ್ತು. ದ್ವಾರಗಳನ್ನು  ಹಂಪಿಯ ವಿರೂಪಾಕ್ಷ ದೇವಸ್ಥಾನದ ಗೋಪುರದ ಮಾದರಿಯಲ್ಲಿ ರಚಿಸಲಾಗಿತ್ತು. ಭಾರೀ ಮೆರವಣಿಗೆಯಲ್ಲಿ ಗಾಂಧಿಯವರನ್ನು ಸಭಾ ವೇದಿಕೆಗೆ ಕರೆತರಲಾಗಿತ್ತು. ಕರ್ನಾಟಕದ ವಿವಿಧ ಸಾಂಸ್ಕೃತಿಕ  ಕಲಾ ತಂಡಗಳ ಪ್ರದರ್ಶನವೂ ಇತ್ತು. ದಿನವಿಡೀ  ಕುಡಿಯಲು ನೀರು, ಅಚ್ಚುಕಟ್ಟಾದ ಭೋಜನ ವ್ಯವಸ್ಥೆ, ಸ್ನಾನ ಮತ್ತು ಶೌಚಕ್ಕೆ ವ್ಯವಸ್ಥೆ, ಮುಂಬೈನಿಂದ ಕಾರ್ಯಕ್ರಮಕ್ಕೆಂದೇ ತರಿಸಲಾಗಿದ್ದ  ಪೆಟ್ರೋಮೆಕ್ಸ್ ದೀಪಗಳಿದ್ದವು. ಎನ್ ಎಸ್‌  ಹರ್ಡೀಕರ್ ಅವರ ನೇತೃತ್ವದಲ್ಲಿ ಸೇವಾದಳದ ಕಾರ್ಯಕರ್ತರು ಎಲ್ಲಾ ವ್ಯವಸ್ಥೆಯ ಜವಾಬ್ದಾರಿ  ವಹಿಸಿಕೊಂಡಿದ್ದರು.

ಕಾಂಗ್ರೆಸ್ ಸಮಾವೇಶಕ್ಕೆ ಹಂಪಿಯ ವಿರೂಪಾಕ್ಷ ದೇವಸ್ಥಾನದ ಗೋಪುರದ ಮಾದರಿ

ನೆಹರೂ, ಸರೋಜಿನಿ  ನಾಯ್ಡು, ಅಲಿ ಸಹೋದರರು, ವಲ್ಲಭಭಾಯ್ ಪಟೇಲ್ ಮುಂತಾದ ಗಣ್ಯರು ಆಗಮಿಸಿದ್ದರು. ಸಮಾವೇಶ ಸಮಿತಿಯ ಅಧ್ಯಕ್ಷರಾದ ಗಂಗಾಧರ ರಾವ್ ದೇಶಪಾಂಡೆ ಎಲ್ಲರನ್ನೂ ಸ್ವಾಗತಿಸಿದ್ದರು.  ವಂದೇ ಮಾತರಂ  ಮತ್ತು  ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯನ್ನು ಹಾಡಲಾಗಿತ್ತು. ವಿದೇಶಿ ವಸ್ತ್ರಗಳ ಬಹಿಷ್ಕಾರ, ಖಾದಿ ಉತ್ಪಾದನೆ, ಅಸ್ಪೃಶ್ಯತೆ ವಿರೋಧ, ಸೇರಿದಂತೆ ಗಾಂಧಿಯವರು ಭಾಷಣ ಮಾಡಿದ್ದರು.

ಈ ಸಮ್ಮೇಳನದಲ್ಲಿ ಖಿಲಾಫತ್ ಚಳುವಳಿ, ಅಖಿಲ ಭಾರತ ಹಿಂದೂ ಮಹಾಸಭಾ,  ಅಖಿಲ ಭಾರತ  ಬ್ರಾಹ್ಮಣೇತರ ಪ್ರತಿನಿಧಿಗಳ, ಸಾಮಾಜಿಕ ವಿಷಯ, ಕರ್ನಾಟಕ  ಏಕೀಕರಣ ವಿಚಾರಗಳ ಕುರಿತು ಗೋಷ್ಠಿಗಳು ನಡೆದಿದ್ದವು.

ಇಡೀ ಜಗತ್ತಿನಲ್ಲಿ ಗಾಂಧಿಯವರ  ಚಿಂತನೆ ಪಸರಿಸಿಕೊಂಡಿದೆ. ಗಾಂಧಿಯವರ  ವಿರೋಧಿಗಳು ಮತ್ತು ನಿಂದಕರು ಮತ್ತೆ ಮತ್ತೆ ಗಾಂಧಿಯವರನ್ನು ಜನ ಮಾನಸದಿಂದ ದೂರ ಮಾಡುವ ಪ್ರಯತ್ನವನ್ನು ನಿರಂತರ ಮಾಡುತ್ತಲೂ ಇದ್ದಾರೆ. ಗಾಂಧಿ  ಜಗತ್ತಿನ ನಾಗರೀಕ  ಸಮಾಜದ ” ಐಕಾನ್ “. ಹಿಂಸೆ, ಯುದ್ಧ,  ಸುಳ್ಳು, ಮತೀಯ ದ್ವೇಷ  ಇವುಗಳನ್ನೇ ಆಧಾರ ಮಾಡಿಕೊಂಡು ಅಧಿಕಾರ ಮತ್ತು  ಸಂಪತ್ತಿನ ಕ್ರೋಡೀಕರಣ ಮಾಡಿಕೊಳ್ಳುವ ಶಕ್ತಿಗಳಿಗೆ ಗಾಂಧಿಯವರ ಚಿಂತನೆಗಳೇ ಮಹಾ ಶತ್ರು. ಅದಕ್ಕಾಗಿ  ಅವರ ಚಿಂತನೆಗಳನ್ನು ದೂರ ಮಾಡುವ, ನಂತರ ಅವರ ವ್ಯಕ್ತಿತ್ವವನ್ನು ಬದಿಗೆ ಸರಿಸುವ, ಕೊನೆಗೆ ತಮ್ಮ ಚಿಂತನೆಗೆ ಪೂರಕವಾಗಿರುವ  ವ್ಯಕ್ತಿಯನ್ನು   ಐಕಾನ್ ಆಗಿ ಪ್ರತಿಷ್ಠಾಪನೆ ಮಾಡುವ ಪ್ರಯತ್ನ  ಸದಾ ನಡೆಯುತ್ತಲೇ ಇರುತ್ತದೆ.

ಆದರೆ ಗಾಂಧಿಯವರದು ತನ್ನ ಆತ್ಮ ಶೋಧನೆಯ ಪ್ರಭೆಯಲ್ಲಿ ಬೆಳೆದು ನಿಂತ ವ್ಯಕ್ತಿತ್ವ. ಅದನ್ನು ಸೋಲಿಸಲು ಮತ್ತೊಂದು ಆತ್ಮ ಶೋಧನೆಯ ಬೆಳಕು ಎದುರಾಗಬೇಕೇ ಹೊರತು ಮಾಮೂಲಿಯಾದ ರಾಜಕೀಯ, ಸಾಮಾಜಿಕ ತಂತ್ರಗಳಿಂದ ಅಸಾಧ್ಯವಾದುದು.

ಲೂಯಿ ಫೀಶರ್ ಗಾಂಧಿಯವರ  ಜೀವನ ಚರಿತ್ರೆಯಲ್ಲಿ  ಹೀಗೆ ಹೇಳುತ್ತಾರೆ-“ವಿರೋಧಿಗೆ ಸಂಕಷ್ಟ  ತಂದೊಡ್ಡದೆ ತಾನೇ ಸಂಕಷ್ಟಕ್ಕೆ ತುತ್ತಾಗುವುದರ ಮೂಲಕ ಸತ್ಯವನ್ನು ಸಮರ್ಥಿಸುವುದೇ ಸತ್ಯಾಗ್ರಹ”. ಇದು ಗಾಂಧಿಯವರ ಮಾರ್ಗವಾಗಿತ್ತು.

ಬೆಳಗಾವಿಯಲ್ಲಿ ಗುಡಿ ಕೈಗಾರಿಕಾ ವಸ್ತು ಪ್ರದೆರ್ಶನದ ಉದ್ಘಾಟನೆ ಸಿದ್ದರಾಮಯ್ಯನವರಿಂದ

ಇದೀಗ ಕಾಂಗ್ರೆಸ್  ಪಕ್ಷ ಈ ಶತಮಾನೋತ್ಸವದ ಸವಿ ನೆನಪಿನಲ್ಲಿ ಬೆಳಗಾವಿಯಲ್ಲಿ  ಕಾರ್ಯಕ್ರಮ  ನಡೆಸುತ್ತಿದೆ. ವರ್ಷಪೂರ್ತಿ  ಗಾಂಧಿಯವರ  ಚಿಂತನೆಗಳ ಕುರಿತು ಸಮಾಜದಲ್ಲಿ  ಜಾಗೃತಿ ಮೂಡಿಸಲು ಕಾರ್ಯಕ್ರಮ  ಹಮ್ಮಿಕೊಂಡಿದೆ. ಭಾರತದ ನಿರ್ಮಾಣದಲ್ಲಿ ಗಾಂಧಿಯವರ ನಿರೂಪಣೆಗಳು ಎಷ್ಟು  ಅಗತ್ಯ ಎಂಬುದನ್ನು  ಯುವ ಜನತೆಗೆ ತಲುಪಿಸಲು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ನಾವು ನೀವು ಗಾಂಧಿಯವರನ್ನು ಮತ್ತೆ ಮತ್ತೆ ಧ್ಯಾನಿಸುತ್ತ ವೈಯಕ್ತಿಕ  ಮತ್ತು ಸಾಮೂಹಿಕ ಬದುಕನ್ನು ಸುಂದರಗೊಳಿಸುವುದಕ್ಕೆ ಪ್ರಯತ್ನಿಸಬೇಕಾಗಿದೆ.

“ನೀವು ನೋಡಿದ್ದ ಅತ್ಯಂತ  ಬಡ ಮತ್ತು ಅಸಹಾಯಕ ವ್ಯಕ್ತಿಯ ಮುಖವನ್ನು ನಿಮ್ಮೆದುರು ತಂದುಕೊಳ್ಳಿ. ಮತ್ತು ನೀವು ಯೋಚಿಸುತ್ತಿರುವ ಕ್ರಮದಿಂದ ಅವನಿಗೇನಾದರೂ ಲಾಭವಿದೆಯೇ? ಅವನ ಜೀವನ ಮತ್ತು ಹಣೆಬರಹದ ಮೇಲೆ ಅವನಿಗೆ ಅದರಿಂದ( ನಿಮ್ಮ ಯೋಜನೆ) ಹಿಡಿತ ಸಿಗಬಹುದೇ?”(1917-ಚಂಪಕಾರಣ್ಯದಲ್ಲಿ )

ಈ ಮೇಲಿನ ಮಾತುಗಳು ಬೆಳಗಾವಿಯಲ್ಲಿ ಈಗ ನಡೆಯುತ್ತಿರುವ ಕಾಂಗ್ರೆಸ್‌ ಶತಮಾನೋತ್ಸವದ ಕಾರಣಕ್ಕೆ ನಮ್ಮನ್ನು ಆತ್ಮ ಶೋಧನೆಗೆ ಹಚ್ಚಬೇಕು. ಅದುವೇ ಗಾಂಧಿಯವರ  ಚಿಂತನೆಗೆ ಮತ್ತಷ್ಟು  ಹೊಸ ಹುರುಪು ಮತ್ತು ಚೈತನ್ಯವನ್ನು ತರುತ್ತದೆ.

ಎಂ ಜಿ ಹೆಗಡೆ

ಸಾಮಾಜಿಕ ಹೋರಾಟಗಾರರು

ಇದನ್ನೂ ಓದಿ- ದುಶ್ಯಾಸನನಿಗೆ ಕೌರವರ ಮೆರವಣಿಗೆ

More articles

Latest article