ಗಾಜಾ– ಇಸ್ರೇಲ್‌ ಯುದ್ಧ: ಪ್ರಧಾನಿ ಮೋದಿ ಮೌನ ಭಾರತದ ಗೌರವಕ್ಕೆ ಧಕ್ಕೆ ತಂದಿದೆ: ಕಾಂಗ್ರೆಸ್‌ ಆರೋಪ

Most read

ನವದೆಹಲಿ: ಗಾಜಾದಲ್ಲಿ ಇಸ್ರೇಲ್‌ ನರಮೇಧ ನಿರಂತರವಾಗಿ ಮುಂದುವರೆಯುತ್ತಿದ್ದರೂ ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನ ತಾಳಿರುವುದನ್ನು ಕಾಂಗ್ರೆಸ್‌ ಖಂಡಿಸಿದೆ. ಅವರ ಮೌನವು ಭಾರತದ ನೈತಿಕ ಮತ್ತು ರಾಜಕೀಯ ಸ್ಥಾನಮಾನವನ್ನು ಕುಗ್ಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಕಾಂಗ್ರೆಸ್‌ ಅಭಿಪ್ರಾಯ ಹಂಚಿಕೊಂಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, ಇರಾನ್– ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಕದನ ವಿರಾಮ ಜಾರಿಯಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಆದರೆ ಇಸ್ರೇಲ್ ನರಮೇಧ ನಿರಂತರವಾಗಿ ನಡೆಯುತ್ತಿರುವ ಗಾಜಾದಲ್ಲಿ ಇನ್ನೂ ಕದನ ವಿರಾಮ ಘೋಷಣೆಯಾಗಿಲ್ಲ ಎಂದು ಜೈರಾಮ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಒಂದೂವರೆ ವರ್ಷದಿಂದ ಪ್ಯಾಲೆಸ್ಟೀನಿಯನ್ನರನ್ನು ಕಾಡುತ್ತಿರುವ ಈ ದುರಂತದ ಬಗ್ಗೆ ಪ್ರಧಾನಿ ಮೋದಿಯವರ ಮೌನವು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅವರ ನಡೆ ದೇಶದ ನೈತಿಕ ಮತ್ತು ರಾಜಕೀಯ ಸ್ಥಾನಮಾನ ಕುಗ್ಗಿಸಿದೆ ಎಂದು ರಮೇಶ್ ಕಿಡಿ ಕಾರಿದ್ದಾರೆ.

ಗಾಜಾ ಮತ್ತು ಇರಾನ್‌ ನಲ್ಲಿ ಇಸ್ರೇಲ್ ನಡೆಸಿದ ದಾಳಿಗಳ ಬಗ್ಗೆ ಭಾರತದ ಮೌನವು ಧ್ವನಿ ಅಡಗಿಸಿಕೊಳ್ಳುವ ಜತೆಗೆ ಮೌಲ್ಯಗಳ ಶರಣಾಗತಿಯೂ ಆಗಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರಿಕೆಯೊಂದಕ್ಕೆ ಬರೆದ  ಲೇಖನದಲ್ಲಿ ಉಲ್ಲೇಖಿಸುವ ಮೂಲಕ ಟೀಕಿಸಿದ್ದರು. ಈ ವರದಿ ಬೆನ್ನಲ್ಲೇ ಅವರು ಪಿಎಂ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಲೂ ಕಾಲ ಮಿಂಚಿಲ್ಲ. ಗಾಜಾ ಪರಿಸ್ಥಿತಿ ಕುರಿತು ಭಾರತ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಬೇಕು ಮತ್ತು ಜವಾಬ್ದಾರಿಯುತವಾಗಿ ವರ್ತಿಸಬೇಕು. ಪಶ್ಚಿಮ ಏಷ್ಯಾದ ಉದ್ವಿಗ್ನತೆಯನ್ನು ಮಾತುಕತೆಯ ಮೂಲಕ ಶಮನಗೊಳಿಸುವಂತೆ ಲಭ್ಯವಿರುವ ಪ್ರತಿಯೊಂದು ರಾಜತಾಂತ್ರಿಕ ಮಾರ್ಗವನ್ನು ಬಳಸಬೇಕು ಎಂದು ಸೋನಿಯಾ ಗಾಂಧಿ ಲೇಖನದಲ್ಲಿ ಸಲಹೆ ನೀಡಿದ್ದರು.

More articles

Latest article