ಮೈಸೂರು: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಮನವಿ ಸಲ್ಲಿಸಿತು.
ಸಂಘದ ಅಧ್ಯಕ್ಷ, ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮನವಿ ಸಲ್ಲಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಲಾಯಿತು.
ರೈತರ ಕೃಷಿ ಉಪಕರಣ ಖರೀದಿ ಮೇಲೆ ತೆರಿಗೆ ಹಾಕಲಾಗಿದೆ. ರೈತರು ಸಾಲ ಕೇಳಲು ಬ್ಯಾಂಕ್ ಗೆ ಹೋದಾಗ ಸಿಬಿಲ್ ಸ್ಕೋರ್ ಕೇಳುತ್ತಿದ್ದಾರೆ. ರೈತರ ಸಾಲಕ್ಕೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂಬ ಸಮಸ್ಯೆಗಳನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಯಿತು. ಕೃಷಿ ಉಪಕರಣದ ಮೇಲಿನ ಜಿಎಸ್ ಟಿ ತೆಗೆದು ಹಾಕುವಂತೆಯೂ ಮನವಿ ಮಾಡಲಾಯಿತು.
ವಕ್ಫ್ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಶಾಂತಕುಮಾರ್, ಸರ್ಕಾರಗಳು ನಾಟಕ ಆಡೋದನ್ನ ಬಿಡಬೇಕು. ಚುನಾವಣೆ ಮತ್ತು ವೋಟಿಗೋಸ್ಕರ ರಾಜಕಾರಣ ಮಾಡಬಾರದು. ವಕ್ಫ್ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ರೈತರು ಹೆದರುವ ಅವಶ್ಯಕತೆ ಇಲ್ಲ. ಕೂಡಲೇ ಸರ್ಕಾರ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಪಡಿಸಿದರು.