ಹೊಸದಿಲ್ಲಿ: ಭಾರತ ಮತ್ತು ಚೀನಾ ನಡುವೆ ಸೌಹಾರ್ದ ಸಂಬಂಧ ಏರ್ಪಡುವುದು ಉಭಯ ದೇಶಗಳಿಗೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಬಹಳ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕದ ನ್ಯೂಸ್ ವೀಕ್ ಮ್ಯಾಗಜೀನ್ ಗೆ ನೀಡಿದ ಸಂದರ್ಶನದಲ್ಲಿ ಭಾರತ-ಚೀನ ಸಂಬಂಧ ಸುಧಾರಣೆಯ ಕುರಿತು ಅವರು ಮಾತನಾಡಿದ್ದಾರೆ.
ಉಭಯ ದೇಶಗಳ ನಡುವಿನ ಸಂವಹನದಲ್ಲಿ ಇರುವ ಅಸಹಜತೆಯನ್ನು ಬಗೆಹರಿಸಿಕೊಳ್ಳುವ ಅಗತ್ಯತೆಯನ್ನು ಒತ್ತಿ ಹೇಳಿರುವ ಅವರು ಭಾರತ-ಚೀನಾ ಗಡಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕಾಗಿದೆ ಎಂದಿದ್ದಾರೆ.
ಭಾರತಕ್ಕೆ ಚೀನಾ ಜೊತೆಗಿನ ಸಂಬಂಧ ಸುಧಾರಣೆ ಅತಿಮುಖ್ಯವಾಗಿದೆ. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗಡಿ ಸಮಸ್ಯೆಯನ್ನು ಬಗೆಹರಿಸುವತ್ತ ನಾವು ಗಮನ ಹರಿಸಬೇಕಾಗಿದೆ. ಆಗ ಮಾತ್ರ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಗಳು ಫಲಪ್ರದವಾಗಲಿದೆ. ಚೀನಾ ಭಾರತದೊಂದಿಗೆ ಸಕಾರಾತ್ಮಕ ಸಂವಾದದ ಮೂಲಕ ಗಡಿಯಲ್ಲಿ ಶಾಂತಿ ಕಾಪಾಡಲು ಸಹಕರಿಸುವ ವಿಶ್ವಾಸ ತಮಗಿದೆ ಎಂದು ಅವರು ಹೇಳಿದರು.
ಲಡಾಕ್ ನ ಗ್ಯಾಲ್ವಾನ್ ಕಣಿವೆಯಲ್ಲಿ 2020ರಲ್ಲಿ ಉಭಯ ದೇಶಗಳ ಸೇನಾಪಡೆಗಳ ನಡುವೆ ನಡೆದ ಘರ್ಷಣೆಯ ನಂತರ ಭಾರತ-ಚೀನಾ ಸಂಬಂಧ ಹಳಸಿರುವುದನ್ನು ಸ್ಮರಿಸಿಕೊಳ್ಳಬಹುದಾಗಿದೆ. ಈ ಸಂಘರ್ಷದಲ್ಲಿ ಕನಿಷ್ಠ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು.
ಭಾರತ ಸರ್ಕಾರ ಚೀನಾದ ಹಲವು ಆಪ್ ಗಳನ್ನು ನಿಷೇಧಿಸಿದರ ಪರಿಣಾಮವಾಗಿ ಭಾರತ-ಚೀನಾ ಸಂಬಂಧ ಮತ್ತಷ್ಟು ಹಳಸುತ್ತ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೋದಿ ಅವರು ಸಂಬಂಧ ಸುಧಾರಣೆ ಕುರಿತು ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಭಾರತ-ಪಾಕಿಸ್ತಾನ ಸಂಬಂಧ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನರೇಂದ್ರ ಮೋದಿ, ಪಾಕಿಸ್ತಾನದ ನೂತನ ಪ್ರಧಾನಿಯನ್ನು ನಾನು ಅಭಿನಂದಿಸಿದ್ದೇನೆ. ಭಾರತ ಯಾವಾಗಲೂ ಈ ಭಾಗದಲ್ಲಿ ಶಾಂತಿ, ಭದ್ರತೆ, ಸೌಹಾರ್ದತೆಯ ಅಗತ್ಯವನ್ನು ಒತ್ತಿ ಹೇಳುತ್ತ ಬಂದಿದೆ. ಭಾರತ ಉಪಖಂಡವು ಭಯೋತ್ಪಾದನೆ ಮತ್ತು ಹಿಂಸೆಯಿಂದ ಮುಕ್ತವಾಗಿರಬೇಕು ಎಂಬುದು ಭಾರತದ ಒತ್ತಾಸೆಯಾಗಿದೆ ಎಂದರು,
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪಾಕಿಸ್ತಾನದ ಆಂತರಿಕ ವಿಷಯದ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.