ಉಚಿತ ಕೊಡುಗೆಗಳಿಂದ ಬಡತನ ನಿರ್ಮೂಲನೆ ಅಸಾಧ್ಯ: ಇನ್ಫಿ ನಾರಾಯಣ ಮೂರ್ತಿ

Most read

ನವದೆಹಲಿ: ಕೇವಲ ಉಚಿತ ಕೊಡುಗೆಗಳನ್ನು ನೀಡುವುದರಿಂದ ದೇಶದಲ್ಲಿ ಬಡತನ ನಿರ್ಮೂಲನೆ ಅಸಾಧ್ಯ. ಬದಲಿಗೆ ಉದ್ಯೋಗ ಸೃಷ್ಟಿ ಬಡತನವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹೊಸ ಉದ್ಯಮಗಳನ್ನು ಸೃಷ್ಟಿಸಲು ಸಾಧ್ಯವಾದರೆ, ಬೆಳಗ್ಗಿನ ಬಿಸಿಲಿಗೆ ಇಬ್ಬನಿ ಮಾಯವಾದಂತೆ ಬಡತನವೂ ನಿರ್ಮೂಲನೆಯಾಗುತ್ತದೆ ಎಂದು ಹೇಳಿದ್ದಾರೆ.

ನೀವು ಪ್ರತಿಯೊಬ್ಬರೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತೀರಿ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಆದರೆ ನೀವು ಬಡತನದ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತೀರಿ ಎನ್ನುವುದೂ ಮುಖ್ಯ. ಉಚಿತ ಕೊಡುಗೆಗಳು ಬಡತನ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಇದುವರೆಗೂ ಉಚಿತ ಕೊಡುಗೆಗಳನ್ನು ಕೊಟ್ಟಿರುವ ಯಾವ ದೇಶವೂ ಬಡತನದಿಂದ ಮುಕ್ತಿ ಹೊಂದಿಲ್ಲ. ಬದಲಿಗೆ ನಾವು ಹೆಚ್ಚು ಉದ್ಯಮಗಳನ್ನು ಸೃಷ್ಟಿಸಬೇಕು ಎಂದಿದ್ದಾರೆ.

ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಗೆಲ್ಲಲು ಉಚಿತ ಕೊಡುಗೆಗಳನ್ನು ನೀಡುತ್ತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿರುವ ವೇಳೆಯೇ ನಾರಾಯಣ ಮೂರ್ತಿ ಅವರ ಈ ಹೇಳಿಕೆ ಚರ್ಚೆಗೆ ಗ್ರಾಸವೊದಗಿಸಿದೆ. ಭಾರತೀಯ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಕಳೆದ ವರ್ಷ ನಾರಾಯಣ ಮೂರ್ತಿ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ಹೇಳಿಕೆ  ಕುರಿತು ಪರ ವಿರೋಧ ಚರ್ಚೆಗಳು ನಡೆದಿದ್ದವು.

More articles

Latest article