ಪ್ರತೀ ದಿನ ಬದುಕು ಬರೆ ಎಳೆಯುವಾಗ ಸರ್ಕಾರದ ಫ್ರೀ ಬಸ್ ವ್ಯವಸ್ಥೆ ನಿಜಕ್ಕೂ ಗಾಯಕ್ಕೊಂದು ಮುಲಾಮಿನಂತೆಯೇ ಕಂಡಿತು ನನಗೆ. ಆದರೆ ಇದು ಎಲ್ಲರಿಗೂ ಮುಲಾಮಾಗೇ ಕಂಡಿಲ್ಲ ಅನ್ನೋದು ಅಕ್ಷರಶಃ ಸತ್ಯ. ಕೆಲವರಿಗಂತೂ ಕಣ್ಣಿಗೆ ಖಾರದ ಪುಡಿ ಬಿದ್ದಂತೆ ಹೊಟ್ಟೆಗೆ ಬೆಂಕಿ ಬಿದ್ದಂತೆ ಆಗಿರುವುದಂತೂ ನೂರಕ್ಕೆ ನೂರು ನಿಜ –ಶೃಂಗಶ್ರೀ.ಟಿ, ಶಿವಮೊಗ್ಗ
ಕಳೆದ ಮೂರು ನಾಲ್ಕು ತಿಂಗಳಿಂದ ಒಂದು ಭಾನುವಾರವೂ ಸಹ ರಜೆ ಇಲ್ಲದಂತೆ ಕೆಲಸ, ಪುಸ್ತಕ ಬಿಡುಗಡೆ, ಎಕ್ಸಾಮ್ ಡ್ಯೂಟಿ ಎಂದು ಬ್ಯುಸಿಯಾಗಿದ್ದೆ. ನನಗಾಗಿ ಒಂದು ದಿನವೂ ಕಾಲ ಕಳೆಯುವುದಕ್ಕೆ ಸಾಧ್ಯವಾಗಿರಲಿಲ್ಲ. ಕೆಲಸದ ಒತ್ತಡ ಮಾನಸಿಕ ಹಿಂಸೆ ಹಣಕಾಸಿನ ಸಮಸ್ಯೆ ಬಹಳಷ್ಟು ಹಿಂಸೆಯಾಗಿತ್ತು. ಕಳೆದ ಒಂದು ವಾರದಿಂದ ರಜ ದೊರಕಿದೆ, ಎಲ್ಲಾದರೂ ಹೋಗಿ ಬರುವ ಎಂದರೆ ಕೈಯಲ್ಲಿ ದುಡ್ಡಿಲ್ಲ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಫಂಡಿಲ್ಲದ ಕಾರಣ ಅಕ್ಟೋಬರ್ ತಿಂಗಳಿಂದ ಸ್ಯಾಲರಿ ಹಾಕಿಲ್ಲ. ಅತಿಥಿ ಉಪನ್ಯಾಸಕರ ಈ ಬವಣೆ ಹೊಸದೇನಲ್ಲ.
ಈ ಎಲ್ಲದರ ನಡುವೆ ಮನಸ್ಸಿಗೆ ನೆಮ್ಮದಿ ಪಡೆಯಲಿಕ್ಕೆ ಈ ಸಮಯದಲ್ಲಿ ಮರುಭೂಮಿಯಲ್ಲಿ ನೀರು ಸಿಕ್ಕಂತೆ ಸಿಕ್ಕಿದ್ದು ಸರ್ಕಾರದ ಫ್ರೀ ಬಸ್ ಯೋಜನೆ. ಇದು ಅತಿಶಯೋಕ್ತಿಯಲ್ಲ. ಕೈಯಲ್ಲಿ ಕಾಸಿಲ್ಲದಿದ್ದರೂ ಕಳೆದ ವಾರದಲ್ಲಿ ಮೂರು ನಾಲ್ಕು ದಿನ ಶೃಂಗೇರಿ ಮೈಸೂರು ಸುತ್ತಿ ಬಂದೆ. ಕೆಲಸದ ಒತ್ತಡ ಹಣಕಾಸಿನ ಸಮಸ್ಯೆ ಮುಂತಾದ ಸಂಗತಿಗಳಿಂದ ರೋಸಿ ಹೋಗಿದ್ದ ನನಗೆ ಫ್ರೀ ಬಸ್ ಯೋಜನೆಯಿಂದಾಗಿ ಊರು ಸುತ್ತುವಂತಾಯಿತು. ಹೌದು ನಮಗೆಲ್ಲರಿಗೂ ತಿಳಿದಿರುವ ಸಂಗತಿಯೇ ಜಗತ್ತನ್ನ ಸುತ್ತೋದು ಕೇವಲ ಜ್ಞಾನರ್ಜನೆಗಷ್ಟೇ ಸೀಮಿತವಲ್ಲ. ಪ್ರಕೃತಿ ಜೊತೆ ಕಾಲ ಕಳೆಯೋದು ಒಂದು ಥೆರಪಿ. ಮನಸ್ಸನ್ನೂ, ದೇಹವನ್ನೂ ಕೂಡ ಹಗುರಾಗಿಸುವ ನೆಮ್ಮದಿ ನೀಡುವ ಚಿಕಿತ್ಸೆ. ಹೊಸ ಹೊಸ ಜಾಗ ಹೊಸ ಹೊಸ ಜನರನ್ನ ಪರಿಚಯಿಸುತ್ತೆ. ಬಹಳ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಸೋಲೋ ಟ್ರಿಪ್ ಬದುಕನ್ನ ಮತ್ತಷ್ಟು ಗಟ್ಟಿಗೊಳಿಸತ್ತೆ. ಉತ್ಸಾಹದ ಜೊತೆಗೆ ಧೈರ್ಯ ನೀಡತ್ತೆ. ನನಗಂತೂ ಸರ್ಕಾರದ ಫ್ರೀ ಬಸ್ ಯೋಜನೆಯಿಂದಾಗಿ ಮರಳಿ ಜೀವ ಬಂದಂತಾಯಿತು. ಜಗತ್ತನ್ನ ನೋಡುವ ಹಾಗಾಯಿತು.
ಮೈಸೂರಿಗೆ ಹೋದಾಗ ನಾನು ನನ್ನ ಸ್ನೇಹಿತೆ ಒಬ್ಬಳ ಮನೆಯಲ್ಲಿ ತಂಗಿದ್ದೆ. ಅವರದು ಬಾರಿ ಲೆಕ್ಕಾಚಾರದ ಬದುಕು ಅಪ್ಪನಿಲ್ಲದ ಆಕೆ ತನ್ನ ಮತ್ತು ತಮ್ಮನಿಗೆ ಸಿಗುವ ಅಲ್ಪ ಹಣದಲ್ಲೇ ಬದುಕು ನಡೆಸುತ್ತಿದ್ದಾಳೆ. ಹ್ಮ್ಮ್ ಕೇಳಿ.. ನಾನೇನು ಇಲ್ಲಿ ತೀರಾ ಕಡುಬಡವರ ಕಥೆ ಹೇಳುತ್ತಿಲ್ಲ. ಆಕೆ ಬ್ಯಾಂಕಿನಲ್ಲಿ 25 ಸಾವಿರಕ್ಕೆ ಕೆಲಸ ಮಾಡುವ ಹುಡುಗಿ. ಪೈಸೆ ಪೈಸೆಗೂ ಲೆಕ್ಕ ಹಾಕಿ ಬದುಕುತ್ತಿದ್ದಾಳೆ. ಆಕೆಯೂ ಕೂಡ ಸರ್ಕಾರದ ಫ್ರೀ ಬಸ್ ಯೋಜನೆಯ ಲಾಭ ಪಡೆದು ನಿಟ್ಟುಸಿರು ಬಿಟ್ಟಿದ್ದಾಳೆ. ಈ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಹಣ ಎಷ್ಟಿದ್ದರೂ ಸಾಲದು. ಇಲ್ಲಿ ಎಲ್ಲವೂ ಲೆಕ್ಕಾಚಾರದ ಮೇಲೆಯೇ ಬದುಕು. ಬ್ಯಾಂಕಿನಲ್ಲಿ ಕೆಲಸ ಮಾಡುವ ಅವಳು, ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಳಾಗಿ ಕೆಲಸ ಮಾಡುವ ನಾನು ಇಷ್ಟೊಂದು ಹಣದ ಸಮಸ್ಯೆ ಎದುರಿಸುವಾಗ ಪ್ರತಿ ದಿನ ಕೂಲಿ ಕೆಲಸ ಮಾಡುವ, ಈ ಉರಿಬಿಸಿಲಿನಲ್ಲಿ ಕೃಷಿ ಭೂಮಿಯನ್ನೇ ನೆಚ್ಚಿ ಬದುಕುವ, ಕಡುಬಡವರು, ನಿರ್ಗತಿಕರು, ಬಟ್ಟೆ ಹೊಲಿಯುವವರು, ಪೇಪರ್ ಹಾಕುವವರು, ಹೋಟೆಲ್ನಲ್ಲಿ ಕೆಲಸ ಮಾಡುವವರು, ಮನೆ ಮನೆಗೆ ಹೋಗಿ ಬಟ್ಟೆ ಮುಸುರೆ ಪಾತ್ರೆ ತೊಳೆಯುವವರು, ಹೂ ಕಟ್ಟುವವರು, ಕಾರ್ಮಿಕರು ಟಾಯ್ಲೆಟ್ ಕ್ಲೀನ್ ಮಾಡುವವರು, ಇಸ್ತ್ರೀ ಮಾಡುವವರು, ಗಾರೆ ಕೆಲಸದವರು, ಇನ್ನೂ ಪಟ್ಟಿ ಮುಂದುವರೆಯುತ್ತಲೇ ಹೋಗುತ್ತದೆ. ಇವರೆಲ್ಲರ ಬದುಕು ಸಂಕಟಗಳು, ಒಪ್ಪೊತ್ತಿಗೂ ಕಷ್ಟ ಪಡುವ ನಮ್ಮ ಜನರ ಬದುಕು ಬವಣೆಗಳು ಕಣ್ಣ ಮುಂದೆ ಬಂದವು.
ಅತಿ ರುಚಿರುಚಿಯಾದ ಹಣ್ಣು- ತರಕಾರಿ, ಪನ್ನೀರು ಬೆಣ್ಣೆ ತುಪ್ಪ ಬೇಡ, ತೀರ ಸಾಮಾನ್ಯವಾದ ಹಾಲು, ಮೊಸರು, ಬೇಳೆ, ತರಕಾರಿ, ಅಕ್ಕಿಯ ದರವೇ ಆಕಾಶ ಮುಟ್ಟುತ್ತಿದೆ. LKG UKG ಮಕ್ಕಳ ಫೀಸ್ ಗಳೇ 50- 60 ಸಾವಿರ ದಾಟುತ್ತಿವೆ. ಜ್ವರ ಕೆಮ್ಮು ಶೀತ ಅಂತ ಆಸ್ಪತ್ರೆಗೆ ಹೋದರೂ ಒಂದು ಸಾವಿರದಿಂದ ಎರಡು ಸಾವಿರ ದುಡ್ಡು ಕಟ್ಟಿ ಬರಬೇಕಾಗುತ್ತದೆ.
ಪ್ರತೀ ದಿನ ಬದುಕು ಬರೆ ಎಳೆಯುವಾಗ ಸರ್ಕಾರದ ಫ್ರೀ ಬಸ್ ವ್ಯವಸ್ಥೆ ನಿಜಕ್ಕೂ ಗಾಯಕ್ಕೊಂದು ಮುಲಾಮಿನಂತೆಯೇ ಕಂಡಿತು ನನಗೆ. ಆದರೆ ಇದು ಎಲ್ಲರಿಗೂ ಮುಲಾಮಾಗೇ ಕಂಡಿಲ್ಲ ಅನ್ನೋದು ಅಕ್ಷರಶಃ ಸತ್ಯ. ಕೆಲವರಿಗಂತೂ ಕಣ್ಣಿಗೆ ಖಾರದ ಪುಡಿ ಬಿದ್ದಂತೆ ಹೊಟ್ಟೆಗೆ ಬೆಂಕಿ ಬಿದ್ದಂತೆ ಆಗಿರುವುದಂತೂ ನೂರಕ್ಕೆ ನೂರು ನಿಜ.
ನೆನ್ನೆ ತಾನೇ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಗಮನಕ್ಕೆ ಬಂದ ಒಂದು ಸಂಗತಿ ಹೇಳ್ತೀನಿ ಕೇಳಿ. ನಾನು ಬಸ್ ಹತ್ತಿದಾಗಿಂದಾನೂ ಕೂಡ ಕಂಡಕ್ಟರ್ ಒಂದೇ ಸಮನೆ ಕೂಗಾಡ್ತಾನೇ ಇದ್ದ. ಇದ್ದಬದ್ದ ಹೆಂಗಸರ ಮೇಲೆಲ್ಲಾ ರೇಗಾಡ್ತಾನೇ ಇದ್ದ. ಒಂದು ಹೆಂಗಸು ಆಧಾರ್ ಕಾರ್ಡ್ ತೋರಿಸುವದನ್ನ ತಡಮಾಡಿದ್ದಕ್ಕೆ ಹೀಗಂದ- ನೀವೆಲ್ಲಾ ಹೆಂಗುಸ್ರು ಇತ್ತೀಚೆಗೆ ಮನೇಲೇ ಇರೋದಿಲ್ಲ ಎಲ್ಲಾ ರೋಡಲ್ಲೇ ಇರ್ತಿರಾ, ಕೆಲವರಂತೂ ಆಧಾರ್ ಕಾರ್ಡ್ ಯಾವಾಗ್ಲೂ ಕೈಯಲ್ಲೇ ಇಟ್ಕೊಂಡಿರ್ತಾರೆ ಅಂತ ಇನ್ನೂ ಏನೆನೋ ಬೊಬ್ಬೆ ಹೊಡೀತಿದ್ದ. ಈ ಎಲ್ಲಾ ಮಾತಿನ ಹಿಂದೆ ಇರುವುದು ನಾವು ಬಿಟ್ಟಿ ಭಾಗ್ಯ ಅನುಭವಿಸುತ್ತಿದ್ದೆವೆ ಅನ್ನುವ ಅವನ ಕೆಟ್ಟ ಮನಸ್ಥಿತಿ. ಅಲ್ಲ ನನಗಷ್ಟಕ್ಕೂ ಅರ್ಥ ಆಗದೆ ಉಳಿದದ್ದು ಇತ್ತಿಚಿನ ದಿನಗಳಲ್ಲಿ ನಾನು ಇದೇ ತರಹದ ಕಂಡಕ್ಟರ್ ಗಳನ್ನ ನೋಡ್ತಿದ್ದೆನೆ. ಅವರಪ್ಪನ ಮನೆ ಆಸ್ತಿಯಿಂದ ಖರ್ಚು ಮಾಡಿ ನಮಗೆ ಫ್ರೀ ಬಸ್ ಯೋಜನೆ ಕೊಡ್ತಿದ್ದಾರಾ ಅಥವಾ ಅವರಪ್ಪನ ಮನೆ ಆಸ್ತಿಯನ್ನ ನಾವೇನಾದ್ರೂ ಕೊಳ್ಳೆ ಹೊಡಿತ್ತಿದ್ದಿವಾ.. !? ನಾವೇ ಕಟ್ಟುವ ತೆರಿಗೆಯಿಂದ ನಾವು ಸೌಲಭ್ಯ ಪಡೆಯೋದಕ್ಕೆ ಇವರಿಗ್ಯಾಕೆ ಇಷ್ಟೊಂದು ಸಂಕಟ, ನೋವು, ಉರಿ !?
ಒಂದು ಇವರು ಕಾಂಗ್ರೆಸ್ ಸರ್ಕಾರದ ವಿರೋಧಿಗಳಾಗಿರಬಹುದು ಅಥವಾ ಹೆಣ್ಣು ದಿನದ ಇಪ್ಪತ್ನಾಲ್ಕು ಗಂಟೆಯೂ ಮನೆಯ ಮನೆಯವರ ಮಕ್ಕಳ ಚಾಕರಿ ಮಾಡಿ ಗಂಡನ ದರ್ಪ ಅಧಿಕಾರ ಆದೇಶಗಳನ್ನ ಪಾಲಿಸಿ ಪೋಷಣೆ ಮಾಡುವ ನಾಲ್ಕು ಗೋಡೆಗಳ ಮಧ್ಯೆ ಇದ್ದರೆ ಮಾತ್ರ ಇಂತಹವರಿಗೆ ನೆಮ್ಮದಿ ಇರಬಹುದು. ಇದು ಸಾವಿರಾರು ವರ್ಷಗಳಿಂದಲೂ ಇದ್ದದ್ದೇ ಬಿಡಿ. ಇಂತಹ ತಲೆಯಲ್ಲಿ ಬುದ್ಧಿ ಬದಲು ಲದ್ದಿ ತುಂಬಿಕೊಂಡಿರುವ ಜನರು ಹೀಗೇ ಅಂತ ಸುಮ್ಮನಾಗುವ ಅಂದರೆ ಇತ್ತೀಚೆಗೆ ತಾನೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದಂತಹ ಹೆಚ್.ಡಿ. ಕುಮಾರಸ್ವಾಮಿ ಅವರು ಒಂದು ಹೇಳಿಕೆ ನೀಡಿದ್ದರು. ಸರ್ಕಾರದ ಫ್ರೀ ಬಸ್ ಯೋಜನೆಯಿಂದಾಗಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಅಂತ. ಆ ಹೇಳಿಕೆಗೆ ಸರಿಯಾಗಿ ಪೂಜೆ ಮಂಗಳಾರತಿಯೂ ಆಗಿದೆ. ನನ್ನ ಪ್ರಶ್ನೆ ಒಬ್ಬ ಮುಖ್ಯಮಂತ್ರಿಯಾದಂತಹ ಕುಮಾರಸ್ವಾಮಿಯವರು ಜನಸಾಮಾನ್ಯರಿಂದಲೇ ಗೆದ್ದು ಅಧಿಕಾರಕ್ಕೆ ಬಂದು ಜನಸಾಮಾನ್ಯರ ಅಳಲನ್ನೇ ಅರ್ಥಮಾಡಿಕೊಳ್ಳದ ಇಂತಹ ದೊಡ್ಡ ವ್ಯಕ್ತಿಗಳೇ ಹೀಗೆ ತಲೆಯಿಲ್ಲದವರಂತೆ ಮಾತಾಡಿ ದ್ವೇಷ ರಾಜಕಾರಣ ಮಾಡುವಾಗ ಇನ್ನೂ ಈ ಕಂಡಕ್ಟರ್ ಗಳ ಕತೆ ಕೇಳಬೇಡಿ.
ಇನ್ನೂ ಎಷ್ಟೋ ಬಸ್ ಡ್ರೈವರ್ ಗಳು ಕೆಲವೊಂದು ಬಸ್ ಸ್ಟ್ಯಾಂಡ್ ಗಳಲ್ಲಿ ಹೆಣ್ಣು ಮಕ್ಕಳು ನಿಂತಿದ್ದೇವೆಂದರೆ ಬಸ್ ನಿಲ್ಲಿಸುವುದೇ ಇಲ್ಲ. ನಾನು ಟ್ರಿಪ್ ಮುಗಿಸಿ ಬಂದಮೇಲೆ ಒಂದಷ್ಟು ಜನ ಕೊಲಿಗ್ಸ್ ಕೊಂಕು ನುಡಿದರು ʼಏನಮ್ಮ ಫ್ರೀ ಬಸ್ ಅಂತ ಏನ್ ಊರ್ ಸುತ್ತುತ್ತಾನೇ ಇದಿಯಾʼ ಅಂತ ಅದರಲ್ಲಿ ಹೆಂಗಸರೂ ಕೂಡ ಇದ್ದರು. ನಾನಂತೂ ಯಾವ ಬೇಜಾರು ಇಲ್ಲದೇ ಅವರ ಕೊಂಕು ಮಾತುಗಳಿಗೆ ಸೊಪ್ಪು ಹಾಕದೇ ಹೌದು, ನಮ್ಮ ಸರ್ಕಾರದ ಯೋಜನೆ ಅದು ಜನಸಾಮಾನ್ಯರಿಗಾಗೇ ಮಾಡಿರುವಂತಹದ್ದು. ಬಿಟ್ಟಿ ಭಾಗ್ಯ ಅಲ್ಲ ಬಡವರ ಭಾಗ್ಯ ಅದನ್ನು ಅನುಭವಿಸಿಯೇ ತೀರುತ್ತೇನೆ ಅಂತ ಖಡಕ್ ದನಿಯಲ್ಲಿ ಉತ್ತರಿಸಿ ಬಂದೆ.
ಶೃಂಗಶ್ರೀ.ಟಿ
ಶಿವಮೊಗ್ಗ
ಇದನ್ನೂ ಓದಿ- ಚುನಾವಣೆ ಗೆಲ್ಲುವ ಧೂರ್ತ ಬಿಜೆಪಿ ಸೂತ್ರ