ಕಾಂಗ್ರೆಸ್ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ನಾಯಕ ಎಂ. ಬಿ. ಭಾನುಪ್ರಕಾಶ್ ಅವರಿಗೆ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಿಸದೇ ನಿಧನ ಹೊಂದಿದ್ದಾರೆ.
ಸೋಮವಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ ಆಯೋಜನೆ ಮಾಡಿತ್ತು. ನಗರದ . ಸೀನಪ್ಪಶೆಟ್ಟಿ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಎಂ. ಬಿ. ಭಾನುಪ್ರಕಾಶ್ ಪಾಲ್ಗೊಂಡಿದ್ದರು. ಪ್ರತಿಭಟನೆ ಬಳಿಕ ಪಕ್ಷದ ಮುಖಂಡರೊಂದಿಗೆ ಮಾತನಾಡುತ್ತ ನಿಂತಿದ್ದ ಭಾನುಪ್ರಕಾಶ್ ಅವರು, ಏಕಾಏಕಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆಯೇ ಅಸುನೀಗಿದ್ದಾರೆ.
ರಾಷ್ಟೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿದ್ದ ಎಂ. ಬಿ. ಭಾನುಪ್ರಕಾಶ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಬಿಜೆಪಿ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿಯೂ ನೇಮಕ ಮಾಡಿತ್ತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಅನುಯಾಯಿಯಾಗಿದ್ದ ಭಾನು ಪ್ರಕಾಶ್ ಅವರು, 2019ರಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 2001- 2005ರ ಅವಧಿಯಲ್ಲಿ ಗಾಜನೂರು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. 2005ರಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಾಗ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಎಸ್ ಬಂಗಾರಪ್ಪ ಅವರಿಗೆ ಎದುರಾಳಿಯಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಅದರಲ್ಲಿ ಅವರು 1.48 ಲಕ್ಷ ಮತಗಳನ್ನು ಪಡೆದು ಮೂರನೇ ಸ್ಥಾನ ಗಳಿಸಿದ್ದರು.