ನವೀನ್ ಸೂರಿಂಜೆ
ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಳಿಯಿರುವ ಯುನಿಸೆಕ್ಸ್ ಸಲೂನ್ ಹೆಸರಿನ ಮಸಾಜ್ ಪಾರ್ಲರ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ರಾಮಸೇನೆ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ್ದರು. ವಾಸ್ತವವಾಗಿ ಈ ಮಸಾಜ್ ಪಾರ್ಲರ್ ಮಾಲೀಕರು ರಾಮಸೇನೆ ನಡೆಸುತ್ತಿದ್ದ ಗೋಪೂಜೆಗೆ ಹಣಕಾಸಿನ ಕೊಡುಗೆ ನೀಡುತ್ತಿದ್ದರು.
“ರಾಮ ಸೇನೆಯಿಂದ ದಾಳಿಗೊಳಗಾದ ಯುನಿಸೆಕ್ಸ್ ಸೆಲೂನ್ ಮಸಾಜ್ ಪಾರ್ಲರ್ ಗೆ ರಾಮ ಸೇನೆಯ ಸಾಗರ್ ಎಂಬಾತ ಪ್ರತೀವರ್ಷ ಗೋಪೂಜೆಯ ಆಮಂತ್ರಣ ಪತ್ರ ಹಿಡಿದುಕೊಂಡು ಬರುತ್ತಿದ್ದ. ಪ್ರಸಾದ್ ಅತ್ತಾವರ ನಮ್ಮ ನಾಯಕರಾಗಿದ್ದು, ನಾವು ಗೋಪೂಜೆ ಮಾಡುತ್ತಿದ್ದೇವೆ. ಧನ ಸಹಾಯ ಮಾಡಿ ಎಂದು ರಾಮ ಸೇನೆಯ ಸಾಗರ್ ಮನವಿ ಮಾಡುತ್ತಿದ್ದ. ನಾವು ಕೈಲಾದ ಧನ ಸಹಾಯ ಮಾಡುತ್ತಿದ್ದೆವು” ಎಂದು ಯುನಿಸೆಕ್ಸ್ ಸೆಲೂನ್ ಮಾಲೀಕರು ಹೇಳುತ್ತಾರೆ.
“ನಮ್ಮ ಸೆಲೂನ್ ನಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯುತ್ತಿಲ್ಲ. ಹಾಗಾಗಿ ನಾವು ಯಾರಿಗೂ ಹಫ್ತಾ ಕೊಡುವುದಿಲ್ಲ. ಪೊಲೀಸರಿಗಾಗಲೀ, ಸಂಘಟನೆಗಳಿಗಾಗಲೀ ಲಂಚ ಕೊಡುವ ಪ್ರಶ್ನೆಯೇ ಇಲ್ಲ. ಆದರೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮಿಂದಾದ ಸಹಾಯ ಮಾಡುತ್ತೇವೆ. ಶ್ರೀರಾಮ ಸೇನೆ, ರಾಮಸೇನೆ ನಡೆಸುವ ಕಾರ್ಯಕ್ರಮಗಳಿಗೂ ಧನ ಸಹಾಯ ಮಾಡಿದ್ದೇವೆ. ರಾಮ ಸೇನೆಯ ಸಾಗರ್ ಎಂಬ ಕಾರ್ಯಕರ್ತ ಗೋಪೂಜೆಗೆ ಹಣ ತೆಗೆದುಕೊಂಡು ರಾಮಸೇನೆಯ ರಶೀದಿಯನ್ನೂ ಕೊಟ್ಟಿದ್ದ” ಎಂದು ರಾಮಸೇನೆಯಿಂದ ದಾಳಿಗೊಳಗಾದ ಯೂನಿಸೆಕ್ಸ್ ಸೆಲೂನ್ ಮಾಲೀಕ ಸುಧೀರ್ ಶೆಟ್ಟಿ ಮಾಹಿತಿ ನೀಡುತ್ತಾರೆ.
ರಾಮಸೇನೆಯಿಂದ ದಾಳಿಗೊಳಗಾದ ಯೂನಿಸೆಕ್ಸ್ ಸೆಲೂನ್ ಗೆ ಮಹಿಳೆಯರೇ ಹೆಚ್ಚಿನ ಗ್ರಾಹಕರಾಗಿದ್ದಾರೆ. ವ್ಯಾಕ್ಸಿಂಗ್, ಹೇರ್ ಕಟ್, ಮಸಾಜ್ ಸೇರಿದಂತೆ ಹಲವು ಫ್ಯಾಶನ್ ಮತ್ತು ಬ್ಯೂಟಿ ವಿಷಯಗಳಿಗೆ ಸಂಬಂಧಿಸಿ ಮಹಿಳೆಯರು ನಿತ್ಯ ಈ ಸಲೂನ್ ಕಮ್ ಮಸಾಜ್ ಪಾರ್ಲರ್ ಗೆ ಭೇಟಿ ನೀಡುತ್ತಾರೆ. ದಾಳಿಗೂ ಮುನ್ನ ಇಬ್ಬರು ಮಹಿಳೆಯರು ಅಪಾಯಿಂಟ್‌ಮೆಂಟ್ ತೆಗೆದುಕೊಂಡಿದ್ದರು. ಹಾಗಾಗಿ ಈ ಮಸಾಜ್ ಪಾರ್ಲರ್ ನಲ್ಲಿ ಮೇಲ್ನೋಟಕ್ಕೆ ಅನೈತಿಕ ಚಟುವಟಿಕೆಯ ಪ್ರಶ್ನೆಯೇ ಬರುವುದಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ರಾಮಸೇನೆಗೂ ಈ ಮಸಾಜ್ ಪಾರ್ಲರ್ ಗೂ ಸಂಪರ್ಕವಿದೆ. ರಾಮಸೇನೆಯ ಗೋಪೂಜೆಗೆ ಇದೇ ಮಸಾಜ್ ಪಾರ್ಲರ್ ಹಣಕಾಸಿನ ಸಹಾಯ ಮಾಡಿದೆ. ಹಾಗಿದ್ದರೆ ಗೋಪೂಜೆಗೆ ಅನೈತಿಕ ಹಣ ಬಳಕೆ ಆಗಿದೆಯೇ ? ಅಥವಾ ಗೋಪೂಜೆಗೆ ಹಣ ತೆಗೆದುಕೊಳ್ಳುವಾಗ ಇಲ್ಲದ ಅನೈತಿಕ ಪ್ರಶ್ನೆ ಧಿಡೀರನೆ ರಾಮ ಸೇನೆಗೆ ಅರಿವಿಗೆ ಬಂದಿದ್ದು ಹೇಗೆ ?
ರಾಮಸೇನೆ ಎಂಬುದು ಶ್ರೀರಾಮ ಸೇನೆಯಿಂದ ಹೊರ ಬಂದ ಗುಂಪು. ಶ್ರೀರಾಮ ಸೇನೆಯಿಂದ ಹೊರ ಬಂದ ಬಳಿಕ ಅಸ್ತಿತ್ವ ಇಲ್ಲದಂತಾಗಿದ್ದ ಪ್ರಸಾದ್ ಅತ್ತಾವರ ನೇತೃತ್ವದ ರಾಮ ಸೇನೆಯು ಮಂಗಳೂರಿನಲ್ಲಿ ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಯೂನಿಸೆಕ್ಸ್ ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ನಡೆಸುವ ವೇಳೆ ಅನೈತಿಕ ಚಟುವಟಿಕೆಗೆ ಸಾಕ್ಷ್ಯ ನೀಡಲು ತಾವೇ ಕಾಂಡೋಮ್ ಪ್ಯಾಕೇಟ್ ಗಳನ್ನು ತೆಗೆದುಕೊಂಡು ಹೋಗಿ ಇರಿಸಿದ್ದಾರೆ.
ರಾಮಸೇನೆಯ ಈ ಗುಂಪು ನಡೆಸಿರುವುದು ‘ಸಂಘಟಿತ ಭಯೋತ್ಪಾದನೆ’ ಅಲ್ಲದೇ ಇನ್ನೇನೂ ಅಲ್ಲ. ತಮ್ಮ ಸಂಘಟನೆಯ ಮೂಲಕ ವಸೂಲಿ ನಡೆಸಲು ಭಯ ಪಡಿಸಿ ಉದ್ಯಮಿಗಳಿಗೆ ಪರಿಚಯಿಸುವುದು ಪ್ರಸಾದ್ ಅತ್ತಾವರ ಮತ್ತವರ ಗುಂಪಿನ ಹಳೇ modus operandi ಆಗಿದೆ.
ನವೀನ್ ಸೂರಿಂಜೆ, ಪತ್ರಕರ್ತರು