ಬೆಂಗಳೂರು ಸೆ. 4: ನಗರದ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಉಲ್ಲಂಘನೆಗಳ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ ಇದೀಗ ಪ್ರತಿಷ್ಠಿತ ಕ್ಲಬ್ಗಳಿಗೂ ವಿಸ್ತರಿಸಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ ವಿವಿಧ ಕ್ಲಬ್ಗಳ ಅಡುಗೆಮನೆ ಹಾಗೂ ಆಹಾರ ಸಂಗ್ರಹಣಾ ಪ್ರದೇಶಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಇತ್ತೀಚಿನ ತಪಾಸಣೆಗಳಲ್ಲಿ ಹಲವು ಕ್ಲಬ್ಗಳಲ್ಲಿ ಅವಧಿ ಮೀರಿದ ಆಹಾರ, ಅನೈರ್ಮಲ್ಯ, ಕೀಟಬಾಧೆ ಹಾಗೂ ಆಹಾರ ಸಂಗ್ರಹಣೆಯಲ್ಲಿ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ.
ಸಹಕಾರ ನಗರ–ಡಾಲರ್ಸ್ ಕಾಲೋನಿಯಲ್ಲಿರುವ ಚೇರ್ಮನ್ಸ್ ಕ್ಲಬ್ ಅಡುಗೆಮನೆಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಪಾಸಣೆ ವೇಳೆ ಅಡುಗೆಮನೆಯಲ್ಲಿ ತೀವ್ರ ಅನೈರ್ಮಲ್ಯ ಕಂಡುಬಂದಿದ್ದು, ಅವಧಿ ಮೀರಿದ ಸುಮಾರು 40 ಕೆ.ಜಿ. ಮೆಣಸಿನಕಾಯಿ ಪತ್ತೆಯಾಗಿದೆ. ಆಹಾರದಲ್ಲಿ ಬಳಸಲು ನಿಯಮಬಾಹಿರವಾಗಿರುವ ಕೃತಕ ಬಣ್ಣಗಳ ಬಳಕೆ ಅಥವಾ ಸಂಗ್ರಹವೂ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಇದರ ಜತೆಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸದೆ ಒಟ್ಟಿಗೆ ಇರಿಸಿರುವುದು, ಆಹಾರ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ಪಾಲಿಸದಿರುವುದು ಕೂಡ ಪತ್ತೆಯಾಗಿದೆ. ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ಲಬ್ನ ಅಡುಗೆಮನೆಯನ್ನು ಮುಚ್ಚಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಇತರ ಆಹಾರ ಮಳಿಗೆಗಳ ಮೇಲೆ ನಿರಂತರ ತಪಾಸಣೆ ನಡೆಸುತ್ತಿದ್ದಾರೆ. ಮೂರು ದಿನಗಳ ವಿಶೇಷ ಕಾರ್ಯಾಚರಣೆಯೊಂದರಲ್ಲೇ 60 ಹೋಟೆಲ್ಗಳಲ್ಲಿ ತಪಾಸಣೆ ನಡೆಸಿ 77 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿತ್ತು; 640 ಕೆ.ಜಿ. ಮಾಂಸ ಹಾಗೂ 276 ಕೆ.ಜಿ. ಕೊಳೆತ ತರಕಾರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದಾದ ಬಳಿಕ ನಗರದ ಪ್ರತಿಷ್ಠಿತ ಕ್ಲಬ್ಗಳ ಅಡುಗೆಮನೆಗಳ ಮೇಲೂ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಆಗಸ್ಟ್ 25ರಂದು ನಡೆದ ವಿಶೇಷ ತಪಾಸಣೆಯಲ್ಲಿ ಸೆಂಚುರಿ ಕ್ಲಬ್, ಕೆಎಸ್ಸಿಎ ಕ್ಲಬ್, ರೇಸ್ಕೋರ್ಸ್ ಕ್ಲಬ್, ಬೋರಿಂಗ್ ಇನ್ಸ್ಟಿಟ್ಯೂಟ್, ಕ್ಯಾಥೋಲಿಕ್ ಕ್ಲಬ್, ಬ್ಯಾಡ್ಮಿಂಟನ್ ಕ್ಲಬ್, ಟೆನಿಸ್ ಕ್ಲಬ್, ವಿಜಯನಗರ ಕ್ಲಬ್, ಮಹಾಲಕ್ಷ್ಮಿ ಲೇಔಟ್ ಕ್ಲಬ್ ಮತ್ತು ಮಲ್ಲೇಶ್ವರಂ ಕ್ಲಬ್ ಸೇರಿದಂತೆ 10 ಕ್ಲಬ್ಗಳನ್ನು ಪರಿಶೀಲಿಸಲಾಗಿತ್ತು.
ಕೆಲವು ಕ್ಲಬ್ಗಳಲ್ಲಿ ಅವಧಿ ಮೀರಿದ ಆಹಾರ, ಜಿರಳೆಗಳ ಬಾಧೆ, ಅಡುಗೆಮನೆಯಲ್ಲಿ ಅನೈರ್ಮಲ್ಯ, ಸರಿಯಾದ ಲೇಬಲ್ಗಳ ಕೊರತೆ ಹಾಗೂ ಆಹಾರ ಸಂಗ್ರಹಣೆಯಲ್ಲಿ ಲೋಪಗಳು ಕಂಡುಬಂದಿದ್ದವು. ಗಂಭೀರ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಸೇರಿದಂತೆ ಕ್ರಮ ಕೈಗೊಳ್ಳಲಾಗಿದೆ.
ಪ್ರತಿಷ್ಠಿತ ಕ್ಲಬ್ಗಳು ಸದಸ್ಯರು ಮತ್ತು ಗ್ರಾಹಕರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸುವುದರ ಜತೆಗೆ, ತಮ್ಮ ಅಡುಗೆಮನೆಗಳ ಆಹಾರ ಸುರಕ್ಷತೆ ಮತ್ತು ಸ್ವಚ್ಛತೆಯ ಮೇಲೂ ಅಷ್ಟೇ ಕಟ್ಟುನಿಟ್ಟಿನ ಗಮನ ಹರಿಸಬೇಕು ಎಂಬ ಚರ್ಚೆಗೂ ಈ ಕಾರ್ಯಾಚರಣೆ ಕಾರಣವಾಗಿದೆ.

