ಜಾತಿ ಸಮೀಕ್ಷೆಯಲ್ಲಿ ಎಸ್‌ ಸಿ, ಎಸ್‌ ಟಿ ಅನುಯಾಯಿಗಳು ಧರ್ಮ ಜಾತಿ ಕಾಲಂನಲ್ಲಿ “ಬೌದ್ಧ” ಎಂದು ನಮೂದಿಸಲು ಕರೆ

Most read

ಬೆಂಗಳೂರು: ಇದೇ 22ರಿಂದ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬುದ್ಧನ ಅನುಯಾಯಿಗಳು ಜಾತಿ ಕಾಲಂನಲ್ಲಿ ಬೌದ್ಧ ಎಂದೇ ಬರಯಿಸುವಂತೆ ಅಖಿಲ ಕರ್ನಾಟಕ ಬೌದ್ಧ ದಾಖಲಾತಿ ಆಂದೋಲನ ಸಮಿತಿ ಮನವಿ ಮಾಡಿಕೊಂಡಿದೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಚಾಲಕ ಮಾವಳ್ಳಿ ಶಂಕರ್ ಅವರು, ಅಸ್ಪೃಶ್ಯತೆ, ಅಪಮಾನಗಳನ್ನು ಎದುರಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆ‌ರ್.ಅಂಬೇಡ್ಕರ್ ಅವರು, ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ್ದರು. ಆ ಪ್ರಕಾರವೇ ಸಂವಿಧಾನದಲ್ಲಿಯೂ ಮೂಲ ಧರ್ಮಕ್ಕೆ ಮರಳಲು ಅವಕಾಶ ಇದೆ. ಪರಿಶಿಷ್ಟ ಜಾತಿಯಲ್ಲಿಯೇ ಮುಂದುವರಿಯಲು ಬಯಸುವವರು ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಬರೆಯಿಸಿ ಎನ್ನುವ ಅವಕಾಶವನ್ನು ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿಯೆಂದು ಉಲ್ಲೇಖಿಸಿ ಉಪಜಾತಿ ಕಾಲಂನಲ್ಲಿ ಮೂಲ ಜಾತಿ ನಮೂದಿಸಲು ಅವಕಾಶ ಇದೆ ಎಂದು ವಿವರಿಸಿದರು.

ಒಂದು ವೇಳೆ ಪೂರ್ಣ ಪ್ರಮಾಣದಲ್ಲಿ ಬೌದ್ದರೆಂದು ಘೋಷಣೆ ಮಾಡುಕೊಳ್ಳಲು ಇಚ್ಛಿಸುವವರು, ಧರ್ಮದ ಕಾಲಂ ಮತ್ತು ಜಾತಿ ಕಾಲಂನಲ್ಲಿಯೂ ಬೌದ್ಧ ಎಂದೇ ನಮೂದಿಸಬಹುದು. ಈ ಮೂಲಕ ಧಾರ್ಮಿಕ ಸ್ವಾತಂತ್ರ್ಯವನ್ನು ಬಳಸಿಕೊಂಡು ಶಿಕ್ಷಣ, ಉದ್ಯೋಗ, ರಾಜಕೀಯ ಮೀಸಲಾತಿ ಹಕ್ಕುಗಳನ್ನು ಪಡೆಯಬಹುದಾಗಿದೆ. ಜಾತಿ, ಅಸ್ಪೃಶ್ಯತೆಯ ಕರಾಳತೆಯಿಂದ ಮುಕ್ತರಾಗಿ, ಗೌರವಯುತ ಬದುಕು ಕಟ್ಟಿಕೊಳ್ಳಲು ಅವಕಾಶ ಲಭ್ಯವಾಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕರಾದ ಎಂ. ವೆಂಕಟಸ್ವಾಮಿ, ಎನ್. ಮೂರ್ತಿ, ಬಿ.ಗೋಪಾಲ್, ಹ.ರಾ.ಮಹೇಶ್, ಹೆಣ್ಣೂರು ಶ್ರೀನಿವಾಸ್ ಹಾಜರಿದ್ದರು.

More articles

Latest article