ಇಂದು ಕನ್ನಡದ ಸ್ಟಾರ್ ನಟ ಯಶ್ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಭರ್ಜರಿಯಾಗೆ ಆಚರಿಸುತ್ತಿದ್ದಾರೆ. ಆದರೆ ಗದಗ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಟ ಯಶ್ ಅವರ ಹುಟ್ಟುಹಬ್ಬದ ಫ್ಲೆಕ್ಸ್ ಅಳವಡಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಮೂವರು ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಹನುಮಂತ ಹರಿಜನ (24), ಮುರಳಿ ನಡುವಿನಮನಿ (20) ಮತ್ತು ನವೀನ್ ಗಾಜಿ (20) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗದಗ ಪೊಲೀಸ್ ವರಿಷ್ಠಾಧಿಕಾರಿ ಬಾಬಾಸಾಹೇಬ ನೇಮಗೌಡ ಮಾತನಾಡಿ, ಬ್ಯಾನರ್ ಹಾಕುವ ವೇಳೆ ವಿದ್ಯುತ್ ಸ್ಪರ್ಶಿಸಿ ಹನುಮಂತ ಹರಿಜನ (24), ಮುರಳಿ ನಡುವಿನಮನಿ (20) ಮತ್ತು ನವೀನ್ ಗಾಜಿ (20) ಎಂಬುವವರು ಸ್ಥಳದಲ್ಲೆ ಸಾವನಪ್ಪಿದ್ದು, ಮಂಜುನಾಥ, ದೀಪಕ್, ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಬ್ಯಾನರ್ ಲೋಹದ ಚೌಕಟ್ಟನ್ನು ಹೊಂದಿದ್ದು ಅದು ಹೆಸ್ಕಾಂ ತಂತಿ ತಗುಲಿ ಈ ಘಟನೆ ನಡೆದಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಮಾತನಾಡಿ, ಯಾವುದೇ ಲೋಹದ ಚೌಕಟ್ಟಿನ ಬ್ಯಾನರ್‌ಗಳನ್ನು ಹಾಕದಂತೆ ಸಾರ್ವಜನಿಕರಲ್ಲಿ ವಿನಂತಿಸುತ್ತೇವೆ. ಮೃತರ ಕುಟುಂಬಗಳನ್ನು ಭೇಟಿ ಮಾಡುವಂತೆ ಯಶ್ ಅವರನ್ನೂ ಕೋರುತ್ತೇನೆ” ಎಂದು ಹೇಳಿದ್ದಾರೆ.