Wednesday, May 22, 2024

ಗುಜರಾತ್ ಸರಕಾರದ ಬಣ್ಣ ಬಯಲು; ಬಿಡುಗಡೆಗೊಂಡ ಪಾತಕಿಗಳಿಗೆ ಜೈಲು

Most read

ಇಪ್ಪತ್ಮೂರು ವರ್ಷಗಳ ಹಿಂದೆ 2002 ರಲ್ಲಿ ದೇಶಕ್ಕೆ ದೇಶವೇ ತಲೆತಗ್ಗಿಸುವಂತಹ ಕೋಮುಗಲಭೆ ಹತ್ಯಾಕಾಂಡಕ್ಕೆ ಗುಜರಾತ್ ಸಾಕ್ಷಿಯಾಗಿತ್ತು. ಮತಾಂಧತೆಯ ಮತ್ಸರದ ಹಾಲಾಹಲವನ್ನು ಮನಸಲ್ಲಿ ತುಂಬಿಕೊಂಡು ಪ್ರಚೋದನೆಗೆ ಒಳಗಾದ ಕೋಮುಕ್ರಿಮಿಗಳ ಗುಂಪೊಂದು ಮುಸ್ಲಿಂ ಕುಟುಂಬವೊಂದನ್ನು ಟಾರ್ಗೆಟ್ ಮಾಡಿತ್ತು. ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಎನ್ನುವ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಯಿತು. ಅವಳ ಮೂರು ವರ್ಷದ ಮಗಳನ್ನು ತಾಯಿಯ ಮುಂದೆ ಹತ್ಯೆಮಾಡಲಾಯಿತು. ಬಾನು ಕುಟುಂಬದ ಇತರ ಏಳೂ ಜನರನ್ನು ಕೊಂದು ಅಟ್ಟಹಾಸ ಮೆರೆಯಲಾಗಿತ್ತು.

ತದನಂತರ ಹತ್ಯಾಕಾಂಡದ ವಿಚಾರಣೆ ನಡೆದು ಜನವರಿ 21, 2008 ರಂದು 11 ಮಂದಿ ಕಿರಾತಕರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಜೈಲಲ್ಲಿ ಕೊಳೆಯುವಂತೆ ಮಾಡಿತು. ಆನಂತರ ಅವರ ಶಿಕ್ಷೆಯನ್ನು ಬಾಂಬೆ ಹೈ ಕೋರ್ಟ್‌ ಎತ್ತಿಹಿಡಿಯಿತು. ಆದರೆ ಈ ಶಿಕ್ಷೆ ಮೇಲ್ವರ್ಗದ ಹಿಂದೂ ಮತಾಂಧರಿಗೆ ನುಂಗಲಾರದ ತುತ್ತಾಯಿತು. ಸಂಘ ಪರಿವಾರದ ಸರಕಾರದ ಮೇಲೆ ಅಪರಾಧಿಗಳನ್ನು ಬಿಡುಗಡೆಗೊಳಿಸಲು ಒತ್ತಡ ಸೃಷ್ಟಿಸಲಾಯ್ತು. ಸರಕಾರ ಗುಜರಾತಿನ ನ್ಯಾಯಾಲಯದ ಮೇಲೆ ಒತ್ತಡ ತಂದಿದ್ದರಿಂದಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಹನ್ನೊಂದು ಜನ ಕ್ರಿಮಿನಲ್ ಗಳನ್ನು ಸನ್ನಡತೆಯ ಮೇಲೆ ಅವಧಿಪೂರ್ವವಾಗಿ ಬಿಡುಗಡೆಗೆ ಕೋರ್ಟ್ ಮೇ.13, 2022 ರಂದು ಆದೇಶಿಸಿತು. ಈ ಅಪರಾಧಿಗಳು ಗೋದ್ರಾ ಸಬ್‌ ಜೈಲಿನಿಂದ 2022 ಆಗಸ್ಟ್‌ 15 ರಂದು ಬಿಡುಗಡೆಗೊಂಡಿದ್ದರು.ಗುಜರಾತ್ ಸರ್ಕಾರವು ಕೇಂದ್ರ ಗೃಹ ಸಚಿವಾಲಯದ ಅನುಮತಿ ಪಡೆದೇ ಅಪರಾಧಿಗಳ ಬಿಡುಗಡೆಗೆ ನಿರ್ಧಾರ ಮಾಡಿದ್ದು. ಹಾಗಾಗಿ ಕೇಂದ್ರ ಸರ್ಕಾರ ಅದರಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರವಾಗಿ ಅದಕ್ಕೆ ಬಾಧ್ಯಸ್ಥರು.

ಆಘಾತಕಾರಿಯಾದ ಈ ತೀರ್ಪು ದೇಶಾದ್ಯಂತ ಸಂಚಲನವನ್ನುಂಟು ಮಾಡಿತು. ಪ್ರತಿಪಕ್ಷಗಳು, ಪ್ರಗತಿಪರರು, ಸಾಮಾಜಿಕ ಹೋರಾಟಗಾರರಿಂದ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತು. ದೇಶವಾಸಿಗಳು ನ್ಯಾಯಾಲಯವನ್ನೇ ಸಂದೇಹದಿಂದ ನೋಡುವಂತೆ ಮಾಡಿತು. ಸಂಘ ಪರಿವಾರದವರು ಮಾತ್ರ ಸಂಭ್ರಮಿಸಿದರು. ಬಿಡುಗಡೆಗೊಂಡ ಪಾತಕಿಗಳನ್ನು ಮರೆವಣಿಗೆಯಲ್ಲಿ ಕರೆದೊಯ್ದು ಅದ್ದೂರಿಯಾಗಿ ಸನ್ಮಾನಿಸಿದರು. ಬಿಜೆಪಿ ಶಾಸಕ ಹಾಗೂ ಸಂಸದರೇ ಬಹಿರಂಗವಾಗಿ ಈ ಕೊಲೆಪಾತಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

ಘನಘೋರ ಹತ್ಯಾಕಾಂಡ ಮಾಡಿ ಶಿಕ್ಷೆಗೊಳಗಾದ ಕೊಲೆಪಾತಕರನ್ನು ಸಂಘೀ ಸರಕಾರ ಯಾಕೆ ಮುತುವರ್ಜಿ ವಹಿಸಿ ಅವಧಿಗೆ ಮುನ್ನವೇ ಜೈಲಿಂದ ಬಿಡುಗಡೆ ಗೊಳಿಸಿತು? ಯಾಕೆಂದರೆ ಪಾತಕಿಗಳು ಹಿಂದುಗಳಾಗಿದ್ದರು. ಹಿಂದುತ್ವವಾದಿಗಳ ಧರ್ಮಾಂಧ ಸಿದ್ದಾಂತವನ್ನು ಪ್ರತಿಪಾದಿಸುವವರಾಗಿದ್ದರು.. ಮುಸ್ಲಿಂ ವಿರೋಧಿಯಾಗಿದ್ದರು. ಯಾರು ಇವೆಲ್ಲಾ ಆಗಿರುತ್ತಾರೋ ಅಂತವರು ಧರ್ಮರಕ್ಷಣೆಯ ಹೆಸರಲ್ಲಿ ಏನೇ ಮಾಡಿದರೂ ಸರಕಾರ ಬೆಂಬಲಕ್ಕಿರುತ್ತದೆ. ಸಂಘದ ನಾಯಕತ್ವ ರಕ್ಷಣೆಗೆ ಧಾವಿಸುತ್ತದೆ, ಎಂತಹುದೇ ಕಠಿಣಾತೀಕಠಿಣ ಶಿಕ್ಷೆಯಾದರೂ ಬಂಧನದಿಂದ ಬಿಡುಗಡೆ ಗೊಳಿಸುತ್ತದೆ ಎನ್ನುವ ಅಭಯವನ್ನು ಹಿಂದುತ್ವವಾದಿ ಮತಾಂಧ ಕಾರ್ಯಕರ್ತರಿಗೆ ಮನದಟ್ಟುಮಾಡಬೇಕಿತ್ತು. ಮುಂದೆ ನಡೆಯಬಹುದಾದ ಕೋಮುದಂಗೆಗಳಲ್ಲಿ ತೊಡಗಿಕೊಳ್ಳುವವರಲ್ಲಿ ಇರಬಹುದಾದ ಕಾನೂನು ಶಿಕ್ಷೆಯ ಭಯವನ್ನು ಹೋಗಲಾಡಿಸಬೇಕಿತ್ತು. ಅನ್ಯ ಧರ್ಮದ್ವೇಷದ ದೌರ್ಜನ್ಯವನ್ನು ಕಾನೂನಿನ ಭಯವಿಲ್ಲದೇ ನಿರ್ಭೀತಿಯಿಂದ ಮಾಡಬಹುದು ಎನ್ನುವ ಅಭಯವನ್ನು ಕೊಡಬೇಕಾಗಿತ್ತು. ಅದಕ್ಕಾಗಿ ಗರಿಷ್ಟ ಶಿಕ್ಷೆಗೆ ಒಳಗಾದ ಸಂಘದ ಕಾರ್ಯಕರ್ತರನ್ನು ಕೇಂದ್ರ ಹಾಗೂ ಗುಜರಾತ್ ಸರಕಾರವು ನ್ಯಾಯಾಲಯದ ದಾರಿ ತಪ್ಪಿಸಿ ಶಿಕ್ಷೆಪೀಡಿತರನ್ನು ಕಾನೂನಾತ್ಮಕವಾಗಿಯೇ ಬಿಡುಗಡೆ ಗೊಳಿಸಿ ಸಾರ್ವಜನಿಕವಾಗಿ ಸನ್ಮಾನಿಸಲಾಯ್ತು. ಸರಕಾರ ಹಾಗೂ ಪಕ್ಷದ ಈ ಅಪರಾಧಿ ರಕ್ಷಣಾ ಕಾರ್ಯವು ಮುಂದೆ ಆಗಬಹುದಾದ ಕೋಮುದ್ವೇಷದ ದಳ್ಳುರಿ ಪ್ರಕರಣದಲ್ಲಿ ಭಾಗವಹಿಸುವವರಿಗೆ ಪ್ರಚೋದನೆ ಕೊಡುವಂತಹುದಾಗಿತ್ತು.

ಆದರೆ ಪ್ರಜ್ಞಾವಂತರು ಸುಮ್ಮನಿರಲಿಲ್ಲ. ಈ ಅಕಾಲಿಕ ಆದೇಶದ ವಿರುದ್ಧ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದರು. ನ್ಯಾಯ ಕೊಡಿಸಿ ಎಂದು ಬಿಲ್ಕಿಸ್ ಬಾನು ಅರ್ಜಿ ಸಲ್ಲಿಸಿದರು. ಜೊತೆಗೆ ತೃಣಮೂಲ ಕಾಂಗ್ರೆಸ್ಸಿನ ಸಂಸದೆ ಮಹುವಾ ಮೊಯಿತ್ರಾ, ಸಿಪಿಎಂ ಪಕ್ಷದ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲೌಲ್, ಲಕ್ನೊ ವಿವಿ ಉಪಕುಲಪತಿ ರೂಪ್ ರೇಖಾ ವರ್ಮಾ ಇವರೆಲ್ಲಾ ಗುಜರಾತ್ ಸರಕಾರದ ಕ್ರಮದ ವಿರುದ್ದ ಸುಪ್ರೀಂ ಕೋರ್ಟಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದರು.

ಎಲ್ಲಾ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ 11 ದಿನಗಳ ಕಾಲ ನಿರಂತರ ವಿಚಾರಣೆ ನಡೆಸಿ 2023 ಅಕ್ಟೋಬರಿನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು. ಅವಧಿಗೆ ಮುನ್ನ ಅಪರಾಧಿಗಳ ಶಿಕ್ಷೆ ಕಡಿತಕ್ಕೆ ಕಾರಣ ಕೇಳಿ ಕೇಂದ್ರ ಹಾಗೂ ಗುಜರಾತ್ ಸರಕಾರಕ್ಕೆ ಸುಪ್ರೀಂ ಸೂಚಿಸಿತ್ತು.

ಇವತ್ತು 2024 ಜನವರಿ 8 ರಂದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿರುವ ಜಸ್ಟೀಸ್ ಬಿ.ವಿ.ನಾಗರತ್ನರವರು ಅಮೋಘವಾದ ನ್ಯಾಯದಪರ ತೀರ್ಪನ್ನು ಪ್ರಕಟಿಸಿದರು. ಈ ಐತಿಹಾಸಿಕ ತೀರ್ಪಿನ ಸಾರಾಂಶ ಹೀಗಿದೆ.

1. ಗುಜರಾತ್ ಸರಕಾರದ ಮನವಿಯಂತೆ ಅಪರಾಧಿಗಳ ಬಿಡುಗಡೆಗೊಳಿಸಿದ ಗುಜರಾತ್ ನ್ಯಾಯಾಲಯದ ಮೇ.13, 2022 ರ ತೀರ್ಪನ್ನು ರದ್ದುಗೊಳಿಸಲಾಗಿದೆ.

2. ಅಪರಾಧಿಗಳ ಪರವಾದ ತೀರ್ಪನ್ನು ಗುಜರಾತ್ ಸರಕಾರವು ನ್ಯಾಯಾಲಯಕ್ಕೆ ವಂಚಿಸಿ ಪಡೆದುಕೊಂಡಿದೆ.

3. ಸಂತ್ರಸ್ತೆಯ ಹಕ್ಕು ಇಲ್ಲಿ ಮುಖ್ಯ. ಸಂತ್ರಸ್ತ ಮಹಿಳೆ ಗೌರವಕ್ಕೆ ಅರ್ಹಳು. ಮಹಿಳೆಯರ ವಿರುದ್ಧ ನಡೆಸಲಾಗುವ ಬರ್ಬರ ಅಪರಾಧಗಳಲ್ಲಿ ಶಿಕ್ಷೆ ಕಡಿತಗೊಳಿಸಲಾಗದು.

4. ಅಪರಾಧಿಗಳಿಗೆ ಶಿಕ್ಷೆ ಯಾವ ರಾಜ್ಯದ ನ್ಯಾಯಾಲಯದಲ್ಲಿ ವಿಧಿಸಲಾಗಿದೆಯೋ ಅಂತಹ ರಾಜ್ಯದ ಸರಕಾರಗಳು ಶಿಕ್ಷೆ ಕಡಿತಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದೇ ಹೊರತು ಅಪರಾಧ ನಡೆದ ರಾಜ್ಯದ ಸರಕಾರವಲ್ಲ.

 5. 1992 ರ ಶಿಕ್ಷೆ ಕಡಿತ ಕಾಯಿದೆಯ ಆಧಾರದಲ್ಲಿ ಗುಜರಾತ್ ಸರಕಾರ ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆಗೊಳಿಸಿದೆ. ಆದರೆ 2014 ರಲ್ಲಿ ಜಾರಿಗೊಳಿಸಲಾದ ಕಾನೂನಿನ ಪ್ರಕಾರ ಗರಿಷ್ಠ ಶಿಕ್ಷೆ ಎದುರಿಸುವ ಪ್ರಕರಣಗಳಲ್ಲಿ ಶಿಕ್ಷೆ ಕಡಿತಗೊಳಿಸುವುದಕ್ಕೆ ಅವಕಾಶವಿಲ್ಲ.

ಹೀಗೆ ಹೇಳಿದ ಸುಪ್ರೀಂ ಕೋರ್ಟ್ ಎಲ್ಲಾ ಹನ್ನೊಂದು ಜನ ದುಷ್ಕರ್ಮಿಗಳ ಬಿಡುಗಡೆ ಆದೇಶವನ್ನು ರದ್ದು ಮಾಡಿ ಮತ್ತೆ ಜೈಲಿಗೆ ಕಳುಹಿಸಲು ಆದೇಶಿಸಿದೆ. ಇಂತಹ ನ್ಯಾಯಸಮ್ಮತ ತೀರ್ಪುಗಳಿಂದಲೇ ಇನ್ನೂ ಈ ದೇಶದ ಜನರಲ್ಲಿ ನ್ಯಾಯಾಲಯದ ಮೇಲೆ ಒಂದಿಷ್ಟು ನಂಬಿಕೆ ಉಳಿದುಕೊಂಡಿದೆ. ಇಂತಹ ದಿಟ್ಟ ತೀರ್ಪನ್ನು ಪ್ರಕಟಿಸಿದ ಜಸ್ಟೀಸ್ ನಾಗರತ್ನರವರು ಅಭಿನಂದನಾರ್ಹರು.

ಧರ್ಮದ ಹೆಸರಲ್ಲಿ, ಮತಾಂಧತೆಯ ಅಮಲಿನಲ್ಲಿ ಎಂತಹುದೇ ಹತ್ಯಾಕಾಂಡ ಮಾಡಿ ಜಿರ್ಣಿಸಿಕೊಳ್ಳುತ್ತೇವೆ ಎಂಬ ದುರಹಂಕಾರದಲ್ಲಿ ಮೆರೆಯುತ್ತಿದ್ದ ಸಂಘಿಗಳಿಗೆ ಈ ತೀರ್ಪು ಮರ್ಮಾಘಾತವನ್ನುಂಟು ಮಾಡಿದೆ. ಕೇಂದ್ರ ಪ್ರಭುತ್ವದ ಬೆಂಬಲದಿಂದ ಗುಜರಾತ್ ಸರಕಾರವೇ ಹತ್ಯಾಕಾಂಡದ ಅಪರಾಧಿಗಳ ರಕ್ಷಣೆಗೆ ಮುಂದಾಗಿದ್ದು ಅಸಹನೀಯವಾಗಿದೆ. ಮತಾಂಧ ಕೊಲೆಪಾತಕರ ಪರವಾದ ಈ ಸಂಘಿ ಸರಕಾರಗಳ ನಡೆ ಫ್ಯಾಸಿಸಂ ಆಡಳಿತಕ್ಕೆ ಮುನ್ನುಡಿಯಾಗಿದೆ. ಪ್ರಭುತ್ವ ಪ್ರಾಯೋಜಿತ ಹತ್ಯಾಕಾಂಡದ ಅಪರಾಧಿಗಳನ್ನು ಮತ್ತೆ ಜೈಲಿಗಟ್ಟಿದ ಸುಪ್ರೀಂಕೋರ್ಟ್ ಆದೇಶ  ಸ್ವಲ್ಪ ಸಮಾಧಾನಕರವಾಗಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ, ಪತ್ರಕರ್ತರು

More articles

Latest article