ಅನುಮತಿ ಪಡೆದಿದ್ದೇ ಒಂದು, ಧ್ವಜ ಹಾರಿಸಿದ್ದೇ ಇನ್ನೊಂದು: ಕೆರಗೋಡು ಹನುಮಧ್ವಜ ವಿವಾದದ ಮೂಲ ಇಲ್ಲಿದೆ ನೋಡಿ

Most read

ಮಂಡ್ಯ: ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಮಾಡಿದ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದೆ. ಆದರೆ ಯಾಕೆ ಹನುಮಧ್ವಜವನ್ನು ತೆರವು ಮಾಡಲಾಗಿದೆ ಎಂಬ ವಿಷಯವನ್ನು ಮುಚ್ಚಿಡಲಾಗುತ್ತಿದೆ.

ಕೆರಗೋಡಿನಲ್ಲಿ ಧ್ವಜಸ್ಥಂಭ ಸ್ಥಾಪನೆ ಸಂಬಂಧ ಖಾಸಗಿ ಟ್ರಸ್ಟ್ ಒಂದಕ್ಕೆ ನೀಡಲಾಗಿರುವ ಅನುಮತಿ ಪತ್ರದ ಪ್ರತಿ ಕನ್ನಡ ಪ್ಲಾನೆಟ್ ಗೆ ಲಭ್ಯವಾಗಿದ್ದು, ಗಲಭೆ ಎಬ್ಬಿಸುವ ಕಾರಣದಿಂದಲೇ ನಿಯಮಬಾಹಿರವಾಗಿ ಹನುಮಧ್ವಜ ಹಾರಿಸಿರುವ ಶಂಕೆ ವ್ಯಕ್ತವಾಗುತ್ತದೆ.

ಪ್ರಕರಣದ ವಿವರ:
ಮಂಡ್ಯ ಜಿಲ್ಲೆ, ಮಂಡ್ಯ ತಾಲ್ಲೂಕು ಕೆರಗೋಡು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೆರಗೋಡು ಗ್ರಾಮದಲ್ಲಿ ಧ್ವಜ ಸ್ಥಂಭವನ್ನು ಸ್ಥಾಪಿಸಲು ಅನುಮತಿ ಕೋರಿ ಅಲ್ಲಿನ ಗೌರಿಶಂಕರ ಸೇವಾ ಟ್ರಸ್ಟ್ ಅರ್ಜಿ ಸಲ್ಲಿಸಿತ್ತು. ಟ್ರಸ್ಟ್ ನ ಮನವಿಯನ್ನು ಪುರಸ್ಕರಿಸಿದ ಗ್ರಾಮಪಂಚಾಯ್ತಿ ಧ್ವಜ ಸ್ಥಂಭದಲ್ಲಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜವನ್ನು ಹೊರತುಪಡಿಸಿದ ಬೇರೆ ಧ್ವಜ ಹಾರಿಸುವಂತಿಲ್ಲ ಎಂಬ ಕಟ್ಟಳೆಯೊಂದಿಗೆ ಅನುಮತಿ ನೀಡಿತ್ತು.

ವಿಶೇಷವೆಂದರೆ ಅರ್ಜಿ ಸಲ್ಲಿಸುವಾಗಲೇ ಧ್ವಜಸ್ಥಂಭದಲ್ಲಿ ರಾಷ್ಟ್ರಧ್ವಜ ಮತ್ತು ನಾಡಧ್ವಜದ ಹೊರತಾಗಿ ಬೇರೆ ಧ್ವಜ ಹಾರಿಸುವುದಿಲ್ಲ ಎಂದು ಸ್ವತಃ ಟ್ರಸ್ಟ್ ಹೇಳಿಕೊಂಡಿತ್ತಲ್ಲದೆ, ಈ ಸಂಬಂಧ ಗ್ರಾಮಪಂಚಾಯ್ತಿಯ ಷರತ್ತುಗಳಿಗೆ ಬದ್ಧವಾಗಿರುವುದಾಗಿ ಹೇಳಿತ್ತು.

ಅರ್ಜಿ ಪುರಸ್ಕರಿಸಿದ ಗ್ರಾಮಪಂಚಾಯ್ತಿ, ಯಾವುದೇ ಧಾರ್ಮಿಕ, ರಾಜಕೀಯ ಪಕ್ಷದ ಬಾವುಟವನ್ನು ಹಾರಿಸುವಂತಿಲ್ಲ ಎಂದು ಅನುಮತಿ ಪತ್ರದಲ್ಲಿ ಷರತ್ತು ವಿಧಿಸಿತ್ತು. ಧ್ವಜಾರೋಹಣ ಮಾಡುವ ಮುನ್ನ ಆರು-ಏಳು ದಿನಗಳೊಳಗೆ ಗ್ರಾಮಪಂಚಾಯ್ತಿಗೆ ಮಾಹಿತಿ ನೀಡಬೇಕು, ಯಾವುದೇ ಗಲಾಟೆಗಳಿಗೆ ಆಸ್ಪದ ನೀಡಬಾರದು ಎಂದು ಅನುಮತಿ ಪತ್ರದಲ್ಲಿ ತಿಳಿಸಲಾಗಿತ್ತು.

ಆದರೆ ಏಕಾಏಕಿ ಹನುಮಧ್ವಜವನ್ನು ಹಾರಿಸಿದ ಕೆಲವರು, ಗಲಭೆ ಎಬ್ಬಿಸಲೆಂದೇ ಕುತಂತ್ರ ನಡೆಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಧಾರ್ಮಿಕ ಬಾವುಟ ಹಾರಿಸುವುದಿಲ್ಲ ಎಂದ ಮೇಲೂ ಹಾರಿಸಿದ್ದೇಕೆ? ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಹನುಮಧ್ವಜವನ್ನು ತೆರವುಗೊಳಿಸಿದೆ. ಆದರೆ ಇದ್ಯಾವುದನ್ನೂ ಹೇಳದ ಕೆಲ ಮಾಧ್ಯಮಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕಾರ್ಯ ಮಾಡುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

More articles

Latest article