Saturday, July 27, 2024

ಬಿಹಾರ ಕಣ್ಣಾಮುಚ್ಚಾಲೆ ಆಟ ಅಂತ್ಯ: ನಿತೀಶ್‌ ಕುಮಾರ್‌ ರಾಜೀನಾಮೆ

Most read

ಪಾಟ್ನಾ: ಮೂರು ದಿನಗಳ ಕಣ್ಣಾಮುಚ್ಚಾಲೆ ಆಟದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕೊನೆಗೂ ರಾಜೀನಾಮೆ ಸಲ್ಲಿಸಿದ್ದಾರೆ. ಜೆಡಿಯು ಶಾಸಕರೊಂದಿಗೆ ತಮ್ಮ ನಿವಾಸದಲ್ಲಿ ಸಭೆ ನಡೆಸಿದ ನಂತರ ರಾಜಭವನಕ್ಕೆ ತೆರಳಿದ ನಿತೀಶ್‌, ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ತನಗೆ ಬೇಕಾದಾಗೆಲ್ಲ ಜೊತೆಗಾರರನ್ನು ಬದಲಾಯಿಸುವ 72 ವರ್ಷದ ನಿತೀಶ್ ಕುಮಾರ್ ತನ್ನ ರಾಜಕೀಯ ಜೀವನದ ಚದುರಂಗದಾಟದಲ್ಲಿ ಮತ್ತೊಂದು ದಾಳ ಉರುಳಿಸಿದ್ದಾರೆ. ಅಧಿಕಾರಾರೂಢ ಮಹಾಘಟಬಂಧನದಿಂದ ಹೊರಬಂದು ತನ್ನ ಹಳೆಯ ಸಂಗಾತಿ ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸುತ್ತಿದ್ದಾರೆ.

ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ನಾನು ಹಿಂದಿನ ಮೈತ್ರಿಕೂಟದಿಂದ ಹೊರಗೆ ಬಂದಿದ್ದೇನೆ. ಅಲ್ಲಿ ಪರಿಸ್ಥಿತಿ ಸರಿಯಿರಲಿಲ್ಲ. ಹೀಗಾಗಿ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ನಿತೀಶ್‌ ಹೇಳಿದ್ದಾರೆ. ಹೊಸ ಸರ್ಕಾರ ರಚನೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷಗಳು ಸಭೆ ಸೇರಿ ಅತಿ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಿವೆ ಎಂದರು.

ನಿತೀಶ್‌ ರಾಜೀನಾಮೆಯೊಂದಿಗೆ INDIA ಮೈತ್ರಿಕೂಟ ಆರಂಭದಲ್ಲೇ ಆಘಾತ ಅನುಭವಿಸಿದೆ. ನಿತೀಶ್ ಕುಮಾರ್ ಮುಖ್ಯಮಂತ್ರಿ ಪದವಿಗೆ ಇಂದೇ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಬಿಜೆಪಿ ಜೊತೆಗೂಡಿ ಹೊಸ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.

ಬಿಹಾರ ವಿಧಾನಸಭೆಯಲ್ಲಿ ಒಟ್ಟು 243 ಸ್ಥಾನಗಳಿದ್ದು, ಈ ಪೈಕಿ 79 ಸ್ಥಾನಗಳೊಂದಿಗೆ ಲಾಲೂ ಯಾದವ್ ಅವರ ಆರ್ಜೆಡಿ ಪಕ್ಷ ಅತಿದೊಡ್ಡ ಪಕ್ಷವಾಗಿದೆ. ಆರ್ಜೆಡಿ ಬೆನ್ನಲ್ಲೇ 78 ಶಾಸಕ ಸ್ಥಾನ ಹೊಂದಿರುವ ಬಿಜೆಪಿ ಎರಡನೇ ಅತಿದೊಡ್ಡ ಪಕ್ಷವಾಗಿದೆ. 45 ಸ್ಥಾನ ಗೆದ್ದಿರುವ ನಿತೀಶ್ ಕುಮಾರ್ ಅವರ ಜೆಡಿಯು ಡ್ರೈವಿಂಗ್ ಸೀಟ್ನಲ್ಲಿ ಕುಳಿತುಕೊಂಡಿದೆ. ಮಿಕ್ಕಂತೆ ಕಾಂಗ್ರೆಸ್ನ 19. ಸಿಪಿಐ (ಎಂಎಲ್)ನ 12, ಹಿಂದೂಸ್ತಾನಿ ಅವಾಮಿ ಮೋರ್ಚಾದ 4, ಸಿಪಿಐ (ಎಂ) ಮತ್ತು ಸಿಪಿಐನ ತಲಾ ಇಬ್ಬರು ಹಾಗು AIMIM ನ ಒಬ್ಬರು, ಪಕ್ಷೇತರ ಶಾಸಕರೊಬ್ಬರು ಆಯ್ಕೆಯಾಗಿದ್ದಾರೆ.

ಈಗಾಗಲೇ ಭಾರತೀಯ ಜನತಾ ಪಕ್ಷದ ಶಾಸಕರ ಬೆಂಬಲದ ಪತ್ರ ನಿತೀಶ್ ಕೈ ಸೇರಿದ್ದು ಹೊಸ ಸರ್ಕಾರ ರಚನೆಯಾಗುವುದಷ್ಟೇ ಬಾಕಿ ಇದೆ.

ಬಿಹಾರದಲ್ಲಿ ಆಟ ಇನ್ನೂ ಶುರುವಾಗಬೇಕಿದೆ ಎಂದು RJD ನಾಯಕ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ. ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತೇಜಸ್ವಿ ಯಾದವ್ ತಮ್ಮ ಪಕ್ಷದ ನಾಯಕರ ಜೊತೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಉದ್ಯೋಗ, ಜಾತಿಗಣತಿ, ಮೀಸಲಾತಿ ವಿಷಯದಲ್ಲಿ ಎರಡು ದಶಕಗಳಲ್ಲಿ ನೆನೆಗುದಿಗೆ ಬಿದ್ದಿದ್ದ ತೀರ್ಮಾನಗಳನ್ನು ನಾವು ಸಣ್ಣ ಅವಧಿಯಲ್ಲಿ ಜಾರಿಗೊಳಿಸಿದ್ದೇವೆ. ನಮ್ಮ ಸಾಧನೆಗಳನ್ನು ಜನರ ಮುಂದೆ ಇಡೋಣ ಎಂದು ಅವರು ತಮ್ಮ ಮುಖಂಡರಿಗೆ ಧೈರ್ಯ ತುಂಬುತ್ತಿದ್ದಾರೆ, ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿತೀಶ್ ಸರ್ಕಾರಕ್ಕೆ RJD ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆಯಬಹುದಲ್ಲವೇ ಎಂಬ ಕೆಲವರ ಪ್ರಶ್ನೆಗೆ, ಸರ್ಕಾರ ನಾವೇ ಬೀಳಿಸಿದಂತೆ ಆಗಬಾರದು. ಅವರೇನು ಮಾಡುತ್ತಾರೋ ಮಾಡಲಿ ಎಂದು ತೇಜಸ್ವಿ ಹೇಳಿದ್ದಾರೆ.

More articles

Latest article