ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ; ಸಿದ್ದರಾಮಯ್ಯ ಘೋಷಣೆ

Most read

ಹಾಸನ: ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. 2028ರ ವರೆಗೂ ನಾವು ಅಧಿಕಾರದಲ್ಲಿ ಇರುತ್ತೇವೆ. ನಂತರವೂ ಅಧಿಕಾರಕ್ಕೆ ಬರುತ್ತೇವೆ ಎಂದು ಘೋಷಿಸಿದರು. ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಭಿಮಾನಿಗಳೇ ದೇವರು ಎಂದು ಡಾ. ರಾಜ್ ಕುಮಾರ್ ಹೇಳುತ್ತಿದ್ದರು. ಅವರ ಮಾತು ನಮಗೆ ಮಾರ್ಗದರ್ಶನವಾಗಿದೆ. ನಮಗೆ ಮತದಾರರೇ ದೇವರು ಎಂದರು. ಶಿಗ್ಗಾಂವಿ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲ್ಲುತ್ತಿರಲಿಲ್ಲ. ಆದರೆ ಈಗ ನಾವು ಗೆದ್ದಿದ್ದೇವೆ. ಉಪಚುನಾವಣೆ ನಡೆದ ಮೂರೂ ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ. ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಮಹಾನಾಯಕನ ಮೊಮ್ಮಗನನ್ನು ಸೋಲಿಸಿದ್ದೇವೆ. ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಮಗನನ್ನು ಸೋಲಿಸಿದ್ದೇವೆ. ಇದೆಲ್ಲಾ ನಿಮ್ಮಿಂದ ಸಾಧ್ಯ ಎಂದರು.

ಜೆಡಿಎಸ್-ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಈ ಎರಡೂ ಪಕ್ಷಗಳು ಯಾವತ್ತೂ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ. ನಮ್ಮಿಂದ 2 ಬಾರಿ ಕುಮಾರಸ್ವಾಮಿ ಸಿಎಂ ಆದರು. ಹಿಂಬಾಗಿಲು ರಾಜಕಾರಣದ ಮೂಲಕ ಬಿಜೆಪಿ ಅಧಿಕಾರಕ್ಕೇರಿತ್ತು. ಸ್ವಂತ ಶಕ್ತಿಯಿಂದ 2 ಪಕ್ಷಗಳು ಅಧಿಕಾರ ಹಿಡಿಯಲು ಇದುವರೆಗೂ ಸಾಧ್ಯವಾಗಿಲ್ಲ ಎಂದರು.

40 ವರ್ಷಗಳ ರಾಜಕೀಯ ಜೀವನದಲ್ಲಿ ಇದು ದೊಡ್ಡ ಸಮಾವೇಶ. ಈ ಸಮಾವೇಶವನ್ನು ಮರೆಯಲು ಸಾಧ್ಯವಿಲ್ಲ. ಇದೊಂದು ಅವಿಸ್ಮರಣೀಯ ಕ್ಷಣವಾಗಿದೆ. ಮಹದೇವಪ್ಪ, ಚಲುವರಾಯಸ್ವಾಮಿ, ವೆಂಕಟೇಶ್ ಹಾಸನದಲ್ಲಿ ಸಮಾವೇಶ ನಡೆಸಲು ಸಲಹೆ ಕೊಟ್ಟರು. ಅದರಂತೆ ಹಾಸನದಲ್ಲಿ ಸಮಾವೇಶ ನಡೆಸುತ್ತಿದ್ದೇವೆ. ಇದು ಬರೀ ಕಾಂಗ್ರೆಸ್ ಸಮಾವೇಶವಲ್ಲ. ಸ್ವಾಭಿಮಾನಿಗಳ ಸಮಾವೇಶ ಎಂದರು. ಈ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದವರು. ಕಾಂಗ್ರೆಸ್ ಪಕ್ಷದಲ್ಲದವರು ಸೇರಿದ್ದಾರೆ ಎಂದು ಹೇಳಿದರು.

ಜೆಡಿಎಸ್, ಬಿಜೆಪಿಯವರು ಬಿಪಿಎಲ್ ಕಾರ್ಡ್ ಬಗ್ಗೆ ಬಹಳ ಮಾತಾಡ್ತಾರೆ. ಉಚಿತವಾಗಿ 5 ಕೆಜಿ ಅಕ್ಕಿ ಕೊಟ್ಟವರು ಯಾರು? ಯಾರೂ ಹಸಿವಿನಿಂದ ಮಲಗಬಾರದೆಂದು ಉಚಿತವಾಗಿ ಅಕ್ಕಿ ಕೊಡ್ತಿದ್ದೇವೆ. ದೇಶದಲ್ಲೇ ಕಡುಬಡವರಿಗೆ ನಾವು 10 ಕೆಜಿ ಅಕ್ಕಿ ಕೊಡ್ತಿದ್ದೇವೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಉಚಿತ ಅಕ್ಕಿ ಕೊಡ್ತಿದ್ರೆ ತೋರಿಸಲಿ. ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

5 ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ಮೀಡಲಿಟ್ಟಿದ್ದೇವೆ. ಗ್ಯಾರಂಟಿಗಳ ಬಗ್ಗೆ ಬಿಜೆಪಿ ಸುಳ್ಳು ಹೇಳುತ್ತಿದೆ. ಅಭಿವೃದ್ಧಿಗೆ ಹಿನ್ನಡೆ ಅಂತ ಸುಳ್ಳು ಹೇಳ್ತಿದ್ದಾರೆ. ಇವರೆಲ್ಲಾ ಬಡವರ ವಿರೋಧಿಗಳು. ಕೇಂದ್ರದ ತೆರಿಗೆ ತಾರತಮ್ಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ನಾವು ತಿಂಗಳಿಗೆ ನಾಲ್ಕೂವರೆ ಲಕ್ಷ ಕೋಟಿ ತೆರಿಗೆ ಪಾವತಿಸುತ್ತೇವೆ. ನಮಗೆ 65,000 ಕೋಟಿ ಮಾತ್ರ ಕೊಡ್ತಿದ್ದಾರೆ. ಈ ತೆರಿಗೆ ತಾರತಮ್ಯದ ಬಗ್ಗೆ ಕುಮಾರಸ್ವಾಮಿ ಪ್ರಸ್ತಾಪಿಸಲಿ ಎಂದು ಹೇಳಿದರು.

ಹಾಸನದಲ್ಲಿ ಏಕೆ ಈ ಸಮಾವೇಶ ಮಾಡ್ತಿದ್ದೀರಿ ಅಂತಾ ಮಾಧ್ಯಮದಲ್ಲಿ ಚರ್ಚೆ ನಡೆಯಿತು. ಕಾಂಗ್ರೆಸ್ ಮಾತ್ರವಲ್ಲ, ಸ್ವಾಭಿಮಾನ ಒಕ್ಕೂಟ ಸಹಯೋಗದಲ್ಲಿ ಸಮಾವೇಶ ನಡೆದಿದೆ. ಕೃತಜ್ಞತಾ ಸಮಾವೇಶಕ್ಕೆ ಸ್ವಾಭಿಮಾನಿಗಳ ಒಕ್ಕೂಟ ತೀರ್ಮಾನಿಸಿತ್ತು ಎಂದರು. ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಈ ಸಮಾವೇಶ ಆಯೋಜನೆ ಮಾಡಲಾಗಿದೆ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದದ್ದೇವೆ. ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ಬಿಜೆಪಿಯವರ ತರಹ ನಾವು ದ್ರೋಹ ಮಾಡಿಲ್ಲ. ಕಡು ಬಡವರಿಗೆ ಅನ್ನಭಾಗ್ಯ ಕೊಟ್ಟಿದ್ದೇವೆ ಎಂದು ವಿವರಣೆ ನೀಡಿದರು.

More articles

Latest article