ಅಹಮದಾಬಾದ್: ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಅಗ್ರಸ್ಥಾನ ಗಳಿಸಿರುವ ಎರಡು ತಂಡಗಳು ಇಂದು ಈ ಋತುವಿನ ಐಪಿಎಲ್ ಪಂದ್ಯಾವಳಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಲಿದ್ದು, ಯಾರು ಗೆದ್ದು ನೇರವಾಗಿ ಫೈನಲ್ ಪ್ರವೇಶಿಸಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ.
ಸನ್ ರೈಸರ್ಸ್ ಹೈದರಾಬಾದ್ ( SRH ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ( KKR ) ನಡುವೆ ಇಂದು ಸಂಜೆ 7.30 ಕ್ಕೆ ಆರಂಭಗೊಳ್ಳಲಿರುವ ಕ್ವಾಲಿಫೈಯರ್ ಪಂದ್ಯವನ್ನು ಗೆಲ್ಲುವ ತಂಡ ನೇರವಾಗಿ ಫೈನಲ್ ಗೆ ಹೋದರೆ, ಸೋಲುವ ತಂಡ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು ನಡುವೆ ನಡೆಯುವ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಎದುರಿಸಲಿದೆ. ಹೀಗಾಗಿ ಸೋತ ತಂಡಕ್ಕೆ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶ ಲಭಿಸಲಿದೆ.
KKR ಮತ್ತು SRH ತಂಡಗಳು ಕಾಗದದ ಮೇಲೆ ಸಮಬಲದ ತಂಡಗಳ ಹಾಗೆಯೇ ಕಾಣುತ್ತವೆ. ಎರಡೂ ತಂಡಗಳು ಈ ಸರಣಿಯಲ್ಲಿ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸುತ್ತ ಬಂದಿವೆ. SRH ತಂಡದ ದೊಡ್ಡ ಶಕ್ತಿ ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮ. ಇಬ್ಬರೂ ತಂಡಕ್ಕೆ ಅತ್ಯುತ್ತಮ ಆರಂಭವನ್ನು ಒದಗಿಸಿಕೊಂಡು ಬಂದಿದ್ದಾರೆ. ಇವರಿಬ್ಬರ ಜೊತೆಯಾಟದಲ್ಲಿ 676 ರನ್ ಗಳು ಸಿಡಿದಿವೆ ಎಂದರೆ ಅದು ಸಾಮಾನ್ಯದ ಮಾತಲ್ಲ. ಅದೂ ಕೂಡ 229 ಸ್ಟ್ರೈಕ್ ರೇಟ್ ನೊಂದಿಗೆ! ಪವರ್ ಪ್ಲೇ ನಲ್ಲಿ SRH ತಂಡವನ್ನು ಕಟ್ಟಿಹಾಕುವುದು ಯಾವುದೇ ತಂಡಕ್ಕೆ ಕಷ್ಟದ ವಿಷಯ. ಪವರ್ ಪ್ಲೇನಲ್ಲಿ ಅದು ಈವರೆಗೆ 11.8 ರನ್ ರೇಟ್ ನಲ್ಲಿ ಆಡಿದೆ.
KKR ತಂಡದ ಬ್ಯಾಟಿಂಗ್ ಕೂಡ ಅದರ ಆರಂಭಿಕ ಆಟಗಾರರನ್ನೇ ನೆಚ್ಚಿಕೊಂಡಿದೆ. ಸುನೀಲ್ ನರೈನ್ ಮತ್ತು ಫಿಲ್ ಸಾಲ್ಟ್ ಈ ಟೂರ್ನಿಯುದ್ದಕ್ಕೂ ಉತ್ತಮ ಆರಂಭ ನೀಡುತ್ತ ಬಂದಿದ್ದಾರೆ. ಪವರ್ ಪ್ಲೇನ ಮೊದಲ ಆರು ಓವರ್ ಗಳಲ್ಲಿ ಒಟ್ಟು ಏಳು ಬಾರಿ ಈ ತಂಡ 70ಕ್ಕೂ ಹೆಚ್ಚು ರನ್ ಗಳಿಸಿದೆ. ಸುನೀಲ್ ಮತ್ತು ಸಾಲ್ಟ್ ಇಬ್ಬರೂ 12 ಇನ್ನಿಂಗ್ಸ್ ನಲ್ಲಿ 207 ಸ್ಟ್ರೈಕ್ ರೇಟ್ ನೊಂದಿಗೆ 559 ರನ್ ಗಳನ್ನು ದೋಚಿದ್ದಾರೆ.
ಸುನಿಲ್ ನರೈನ್ ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್ ನಲ್ಲೂ ಎದುರಾಳಿಗಳಿಗೆ ಕಂಟಕವಾಗಿದ್ದಾರೆ. ವರುಣ್ ಚಕ್ರವರ್ತಿ ಜೊತೆಗೂಡಿ ಅವರು ಎಸೆಯುವ ಏಳೆಂಟು ಓವರ್ ಗಳು ಮ್ಯಾಚ್ ಗತಿಯನ್ನೇ ಬದಲಿಸುತ್ತ ಬಂದಿದೆ. ಸರಣಿಯಲ್ಲಿ ಇಬ್ಬರೂ ಒಟ್ಟಾಗಿ ಕಿತ್ತ ವಿಕೆಟ್ ಗಳ ಸಂಖ್ಯೆ 33! ಯಾವ ತಂಡವೂ ಇಂಥ ಸ್ಪಿನ್ ಜೋಡಿಯನ್ನು ಹೊಂದಿಲ್ಲ.
KKR ತಂಡಕ್ಕೆ ದೊಡ್ಡ ತಲೆನೋವಾಗಿರುವುದು ನಾಯಕ ಶ್ರೇಯಸ್ ಐಯ್ಯರ್ ಫಾರ್ಮ್. ಈ ಸರಣಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಅವರು ಆಡಿಲ್ಲ. 12 ಇನ್ನಿಂಗ್ಸ್ ನಲ್ಲಿ ಅವರು ಗಳಿಸಿರುವುದು ಏಕೈಕ ಅರ್ಧಶತಕದೊಂದಿಗೆ 287 ರನ್ ಮಾತ್ರ. SRH ತಂಡ ಬೇರೆ ಎಲ್ಲ ವಿಭಾಗದಲ್ಲೂ ಸಮರ್ಥವಾಗಿದ್ದರೆ ಸ್ಪಿನ್ ವಿಭಾಗದಲ್ಲಿ ಸೊರಗಿದಂತೆ ಕಾಣುತ್ತದೆ.
ಒಟ್ಟಾರೆಯಾಗಿ SRH ಮತ್ತು KKR ನಡುವಿನ ಪಂದ್ಯ ಅತ್ಯಂತ ಕುತೂಹಲ ಕೆರಳಿಸಿದ್ದು, ಯಾರು ಬೇಕಾದರೂ ಗೆಲ್ಲಬಹುದಾದ ಸಮಬಲದ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ. ಸೋಲುವ ತಂಡದ ಮೇಲೆ ರಾಜಸ್ತಾನ ಮತ್ತು ಬೆಂಗಳೂರು ತಂಡಗಳು ಒಂದು ಕಣ್ಣು ಇಟ್ಟೇ ಇರುತ್ತವೆ. ಯಾಕೆಂದರೆ ಇವೆರಡು ತಂಡಗಳ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡ ಇಂದು ಸೋಲುವ ತಂಡವನ್ನು ಎದುರಿಸಬೇಕಿದೆ.