ಸಚಿವ ಜಮೀರ್ ಪುತ್ರ ನಟ ಝೈದ್‌ ಖಾನ್‌ ವಿರುದ್ಧ ದೂರು ದಾಖಲು;

Most read

ಬೆಂಗಳೂರು:  ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ ಪುತ್ರ ಹಾಗೂ ಚಿತ್ರನಟ ಝೈದ್ ಖಾನ್ ವಿರುದ್ಧ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡ್ರೋನ್ ತಂತ್ರಜ್ಞ ಸಂತೋಷ್ ಅವರ ಸಹೋದರಿ ಝೈದ್ ಖಾನ್ ಮತ್ತು ನಿರ್ದೇಶಕ ಅನಿಲ್ ವಿರುದ್ಧ ದೂರು ದಾಖಲಿಸಿದ್ದಾರೆ.

ನ.25ರಂದು ಝೈದ್ ಖಾನ್ ನಾಯಕ ನಟನಾಗಿ ನಟಿಸುತ್ತಿರುವ ಕಲ್ಟ್ ಕನ್ನಡ ಚಿತ್ರದ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಯುತ್ತಿದ್ದು, ಈ ಚಿತ್ರಕ್ಕೆ ಸಂತೋಷ್ ಡ್ರೋಣ್ ಮೂಲಕ ಶೂಟಿಂಗ್‌ ಮಾಡುತ್ತಿದ್ದರು. ಮಾರ್ಟಿನ್, ಯುವ ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಸಂತೋಷ್, ಕಲ್ಟ್ ಚಿತ್ರಕ್ಕೂ ಶೂಟಿಂಗ್ ಮಾಡಲು ಒಪ್ಪಿಕೊಂಡಿದ್ದರು. ಡ್ರೋನ್‌ ಮೂಲಕ ಚಿತ್ರೀಕರಣ ಮಾಡುವುದು ಅಸಾಧ್ಯ. ಇದರಿಂದ ಡ್ರೋನ್‌ ಗೆ ಹಾನಿಯುಂಟಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದರೂ ಶೂಟಿಂಗ್‌ ಮಾಡಲೇಬೇಕು ಎಂದು ನಿರ್ದೇಶಕ ಅನಿಲ್‌ ಒತ್ತಡ ಹೇರಿದ್ದರು. ಶೂಟಿಂಗ್ ಮಾಡುತ್ತಿರುವಾಗ ವಿಂಡ್ ಫ್ಯಾನ್‌ಗೆ ತಗುಲಿ ಡ್ರೋಣ್ ‌ ಛಿದ್ರಛಿದ್ರವಾಗಿತ್ತು.

ಈ ನಷ್ಟವನ್ನು ಭರಿಸುವಂತೆ ಮನವಿ ಮಾಡಿಕೊಂಡರೂ ಚಿತ್ರದ ನಿರ್ಮಾಪಕರೂ ಆಗಿರುವ ಝೈದ್‌ ಖಾನ್‌ ನಷ್ಟವನ್ನು ಭರಿಸಲು ಒಪ್ಪಿಕೊಂಡಿರಲಿಲ್ಲ. ಬದಲಾಗಿ ಝೈದ್‌ ಸಂತೋಷ್ ಬಳಿ ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡಿದ್ದಾರೆ. ಜತೆಗೆ ಒಂದೂವರೆ ಲಕ್ಷ ರೂ. ಮೌಲ್ಯದ ಫೂಟೇಜ್ ರೆಕಾರ್ಡಿಂಗ್ ಆಗಿದ್ದ ಮೆಮೊರಿ ಕಾರ್ಡ್ ಕಿತ್ತುಕೊಂಡಿದ್ದಾರೆ ಎಂದು ಸಂತೋಷ್‌ ದೂರಿದ್ದಾರೆ. ಇದರಿಂದ ಅವಮಾನಗೊಂಡ ಸಂತೋಷ್‌ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಅವರ ಸಹೋದರಿ ದೂರಿದ್ದಾರೆ. ಘಟನೆ ಬಳಿಕ ಸಂತೋಷ್ ಸಹೋದರಿ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. ಆದರೆ ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ನಂತರ ಆಸ್ಪತ್ರೆಯ ದಾಖಲೆಗಳ ಆಧಾರದ ಮೇಲೆ  ಗಂಭೀರವಲ್ಲದ ಪ್ರಕರಣ ಎಂದು ದೂರನ್ನು ದಾಖಲಿಸಿಕೊಳ್ಳಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಕಲ್ಟ್ ಚಿತ್ರತಂಡವನ್ನ ಸಂಪರ್ಕಿಸಿದ್ದಾರೆ. ಘಟನೆ ಸಂಬಂಧ ಸಿನಿಮಾ ನಿರ್ದೇಶಕನಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಹಲವು ಸಿನಿಮಾಗಳಿಗೆ ಡ್ರೋನ್ ತಂತ್ರಜ್ಞರಾಗಿ ಕೆಲಸ ಮಾಡುತ್ತಿರುವ ಸಂತೋಷ್ ಸ್ವಂತವಾಗಿ ಡ್ರೋಣ್ ಇಟ್ಟುಕೊಂಡಿದ್ದರು. 25 ಲಕ್ಷ ರೂ. ಬಂಡವಾಳ ಹೂಡಿ ಡ್ರೋಣ್ ಖರೀದಿಸಿದ್ದರು. ಸಿನಿಮಾ ಚಿತ್ರೀಕರಣಕ್ಕಾಗಿ ದಿನವೊಂದಕ್ಕೆ 25 ಸಾವಿರ ರೂ. ಬಾಡಿಗೆ ನಿಗದಿ ಮಾಡಿದ್ದರು.‌ ಇದೀಗ ನಷ್ಟ ಉಂಟಾಗಿ ಅವರು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

More articles

Latest article