ಬೆಂಗಳೂರು: ಕನ್ನಡ, ಕನ್ನಡಿಗರನ್ನು ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಖ್ಯಾತ ಗಾಯಕ ಸೋನು ನಿಗಂ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜ್ ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸೋನು ನಿಗಂ ಕನ್ನಡಿಗರ ಭಾವನೆಗಳನ್ನು ಪಹಲ್ಗಾಮ್ ಹತ್ಯಾಕಾಂಡಕ್ಕೆ ಹೋಲಿಸಿದ್ದನ್ನು ಖಂಡಿಸಿ ಕನ್ನಡ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ್ ಎ. ಅವರು ದೂರು ದಾಖಲಿಸಿದ್ದರು. ಇದೀಗ ಈ ದೂರಿನನ್ವಯ ಎಫ್ ಐಆರ್ ದಾಖಲಿಸಲಾಗಿದೆ.
ಪ್ರಸಿದ್ಧ ಗಾಯಕ ಸೋನು ನಿಗಮ್ ಅವರು ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಇಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮಾಡಿದ ಆಕ್ಷೇಪಾರ್ಹ ಮತ್ತು ಭಾವನೆಗಳನ್ನು ಕೆರಳಿಸುವ ಹೇಳಿಕೆಗಳನ್ನು ನೀಡಿದ್ದಾರೆ. ಅವರ ಹೇಳಿಕೆಗಳು ಕನ್ನಡಿಗ ಸಮುದಾಯದ ಭಾವನೆಗಳಿಗೆ ತೀವ್ರ ಘಾಸಿಯನ್ನುಂಟು ಮಾಡಿದ್ದು, ಕರ್ನಾಟಕದ ವಿವಿಧ ಭಾಷಿಕ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುತ್ತದೆಯಲ್ಲದೆ ಹಿಂಸೆಗೆ ಪ್ರಚೋದನೆ ನೀಡುವಂತಿವೆ. ಈಗಾಗಲೇ ಸೋನು ನಿಗಮ್ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ರಾಜ್ಯಾದ್ಯಂತ ಕೋಟ್ಯಂತರ ಕನ್ನಡಿಗರು ಆಕ್ರೋಶಗೊಂಡಿದ್ದಾರೆ.
ಸಂಗೀತ ಕಾರ್ಯಕ್ರಮದಲ್ಲಿ ಓರ್ವ ವಿದ್ಯಾರ್ಥಿಯು ಸೋನು ನಿಗಮ್ ಅವರಿಗೆ ಕನ್ನಡ ಗೀತೆಯನ್ನು ಹಾಡಲು ಕೋರಿದ್ದಾನೆ. ಈ ಬೇಡಿಕೆಗೆ ಪ್ರತಿಯಾಗಿ ಸೋನು ನಿಗಮ್ ಅವರು ” ಕನ್ನಡ, ಕನ್ನಡ, ಕನ್ನಡ, ಇದೇ ಕಾರಣಕ್ಕೆ ಪಹಲ್ಗಾಂ ನಲ್ಲಿ ದುರಂತ ಘಟನೆ ಸಂಭವಿಸಿತು” ಎಂದು ಹೇಳಿದ್ದಾರೆ. ಕನ್ನಡ ಹಾಡು ಹೇಳಲು ಬಂದ ಒಂದು ಯಕಶ್ಚಿತ್ ಕೋರಿಕೆಗೆ ಅವರು ಕಾಶ್ಮೀರದ ಪಹಲ್ಗಾಂ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ್ದಾರೆ. ಕನ್ನಡ ಗೀತೆಯ ಕೋರಿಕೆಯನ್ನು ಭಯೋತ್ಪಾದಕ ಕೃತ್ಯಕ್ಕೆ ಥಳುಕು ಹಾಕುವ ಮೂಲಕ ನಿಗಮ್ ಅವರು ಕನ್ನಡಿಗ ಸಮುದಾಯವನ್ನು ಅವಮಾನಿಸಿದ್ದಾರೆ.
ಸೋನು ನಿಗಮ್ ಅವರ ಹೇಳಿಕೆಗಳು ಆಕ್ಷೇಪಾರ್ಹ, ವಿಭಜನಕಾರಿ ಮತ್ತು ಸಾಮುದಾಯಿಕ ಸೌಹಾರ್ದಕ್ಕೆ ಹಾನಿಕಾರಕವಾಗಿವೆ. ಇವು ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್), 2023 ರ ಕೆಳಗಿನ ಸೆಕ್ಷನ್ ಗಳನ್ನು ಉಲ್ಲಂಘಿಸುತ್ತವೆ:
ಬಿಎನ್ ಎಸ್ ಸೆಕ್ಷನ್ 352(1) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಭಾಷೆ, ಜಾತಿ, ಅಥವಾ ಸಮುದಾಯದಂತಹ ಕಾರಣಗಳ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಮತ್ತು ಸೇಡಿನ ಭಾವನೆಗಳನ್ನು ಉತ್ತೇಜಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಬಿಎನ್ ಎಸ್ ಸೆಕ್ಷನ್ 352(1) ಪ್ರಕಾರ “ಯಾರೇ ಆಗಲಿ, ಮಾತುಗಳಿಂದ, ಲಿಖಿತವಾಗಿ ಅಥವಾ ಗೋಚರ ಚಿತ್ರಣಗಳಿಂದ, ಧರ್ಮ, ಜಾತಿ, ಜನ್ಮಸ್ಥಳ, ವಾಸಸ್ಥಳ, ಭಾಷೆ, ಕುಲ ಅಥವಾ ಸಮುದಾಯದಂತಹ ಯಾವುದೇ ಕಾರಣಗಳಿಂದ, ವಿವಿಧ ಧಾರ್ಮಿಕ, ಜಾತಿಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳ ನಡುವೆ ಅಸೌಹಾರ್ದತೆ, ದ್ವೇಷ ಅಥವಾ ಕೆಡದ ಭಾವನೆಗಳನ್ನು ಉತ್ತೇಜಿಸಿದರೆ ಅಥವಾ ಉತ್ತೇಜಿಸಲು ಪ್ರಯತ್ನಿಸಿದರೆ, ಶಿಕ್ಷೆಗೆ ಒಳಪಡಬೇಕಾಗಿರುತ್ತದೆ.
ಬಿ.ಎನ್.ಎಸ್. ಸೆಕ್ಷನ್ 351(2) (ಕ್ರಿಮಿನಲ್ ಮಾನಹಾನಿ) ಪ್ರಕಾರ ಸೋನು ನಿಗಮ್ ಅವರ ಹೇಳಿಕೆಗಳು ಕನ್ನಡಿಗ ಸಮುದಾಯದ ಸಾಂಸ್ಕೃತಿಕ ಅಥವಾ ಭಾಷಿಕ ಅಭಿವ್ಯಕ್ತಿಗಳನ್ನು ಭಯೋತ್ಪಾದನೆಗೆ ಜೋಡಿಸುವ ಮೂಲಕ ಕನ್ನಡಿಗರ ಮಾನಹಾನಿ ಮಾಡಿವೆ. ಇದರಿಂದ ಶಾಂತಿಪ್ರಿಯ ಸಮುದಾಯವಾಗಿರುವ ಕನ್ನಡಿಗರ ಖ್ಯಾತಿಗೆ ಧಕ್ಕೆಯುಂಟಾಗಿದೆ. ಈ ಹೇಳಿಕೆಗಳು ಸಾರ್ವಜನಿಕವಾಗಿ, ಕಾರ್ಯಕ್ರಮದ ವೇಳೆ ಮಾಡಲಾಗಿದ್ದು, ಕೆರಳಿಸುವ ಮತ್ತು ಅವಮಾನಿಸುವ ಉದ್ದೇಶವನ್ನು ಹೊಂದಿವೆ.
ಬಿಎನ್ ಎಸ್ ಸೆಕ್ಷನ್ 353 (ಧಾರ್ಮಿಕ ಅಥವಾ ಭಾಷಿಕ ಭಾವನೆಗಳನ್ನು ಕೆರಳಿಸುವುದು) ಪ್ರಕಾರ ಕನ್ನಡ ಗೀತೆಯ ಕೋರಿಕೆಯನ್ನು ಗೇಲಿ ಮಾಡಿ, ಭಯೋತ್ಪಾದಕ ದಾಳಿಗೆ ಸಂಬಂಧಿಸುವ ಮೂಲಕ, ನಿಗಮ್ ಅವರ ಹೇಳಿಕೆಗಳು ಕನ್ನಡಿಗ ಸಮುದಾಯದ ಭಾಷಿಕ ಭಾವನೆಗಳನ್ನು ಕೆರಳಿಸಿವೆ. ಕನ್ನಡಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಕುರಿತು ಅಪಾರ ಹೆಮ್ಮೆಯನ್ನು ಹೊಂದಿರುತ್ತಾರೆ. ಈ ಕೃತ್ಯವು ಸಾರ್ವಜನಿಕ ಸೌಹಾರ್ದತೆಗೆ ಭಂಗ ತಂದಿದ್ದು, ಕನ್ನಡಿಗರ ಘನತೆಗೆ ಧಕ್ಕೆಯುಂಟುಮಾಡಿದೆ.
ಬಿಎನ್ ಎಸ್ ಸೆ. 353 ಪ್ರಕಾರ “ಯಾರೇ ಆಗಲಿ, ಉದ್ದೇಶಪೂರ್ವಕವಾಗಿ ಅಥವಾ ತಿಳಿದುಕೊಂಡು, ಮಾತುಗಳಿಂದ, ಲಿಖಿತವಾಗಿ ಅಥವಾ ಗೋಚರ ಚಿತ್ರಣಗಳಿಂದ, ಭಾರತದ ಯಾವುದೇ ವರ್ಗದ ನಾಗರಿಕರ ಧಾರ್ಮಿಕ ಅಥವಾ ಇತರ ನಂಬಿಕೆಗಳನ್ನು ಅಥವಾ ಭಾವನೆಗಳನ್ನು ಅವಮಾನಿಸಿದರೆ ಅಥವಾ ಅವಮಾನಿಸುವುದು ಶಿಕ್ಷಗೆ ಅರ್ಹವಾಗಿರುತ್ತದೆ.
ಆದ್ದರಿಂದ ಬಿಎನ್ ಎಸ್, 2023 ರ ಸೆಕ್ಷನ್ 352(1), 351(2), ಮತ್ತು 353 ಅಡಿಯಲ್ಲಿ ಸೋನು ನಿಗಮ್ ವಿರುದ್ಧ ಈ ದೂರು ದಾಖಲಿಸಿ, ದ್ವೇಷವನ್ನು ಉತ್ತೇಜಿಸಿದ್ದಕ್ಕಾಗಿ, ಕ್ರಿಮಿನಲ್ ಮಾನಹಾನಿಗಾಗಿ, ಮತ್ತು ಭಾಷಿಕ ಭಾವನೆಗಳನ್ನು ಆಕ್ಷೇಪಿಸಿದ್ದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಧರ್ಮರಾಜ್ ಒತ್ತಾಯಿಸಿದ್ದರು.
ಸೋನು ನಿಗಂ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕರವೇ ಅಧ್ಯಕ್ಷ ನಾರಾಯಣಗೌಡ ಅವರು, ಸೋನು ನಿಗಂ ಒಬ್ಬ ಸಾಂಸ್ಕೃತಿಕ ಭಯೋತ್ಪಾದಕ. ಆತನನ್ನು ಕನ್ನಡದಿಂದ ಬ್ಯಾನ್ ಮಾಡಬೇಕು, ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸುವ ಈತ ಕನ್ನಡಿಗರ ಕ್ಷಮೆ ಕೇಳಬೇಕು, ಇಲ್ಲವಾದರೆ ಸೋನು ನಿಗಮ್ ಹಾಡಿರುವ ಹಾಡುಗಳನ್ನು ಪ್ರಸಾರ ಮಾಡಬಾರದು ಎಂದಿದ್ದಾರೆ. ರಾಜ್ಯದಲ್ಲಿ ಈತ ಸಂಗೀತ ಕಾರ್ಯಕ್ರಗಳನ್ನು ನಡೆಸಲು ಬಿಡುವುದಿಲ್ಲ. ಯಾರೊಬ್ಬರೂ ಸೋನು ನಿಗಂನನ್ನು ಆಹ್ವಾನಿಸಬಾರದು. ಒಂದು ವೇಳೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದರೆ ಆಯೋಜಕರೇ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.