ತಮಿಳರ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಕೇಂದ್ರ ಚುನಾವಣಾ ಆಯೋಗಕ್ಕೆ ಡಿಎಂಕೆ (DMK) ದೂರು ನೀಡಿದ ಬೆನ್ನಲ್ಲೇ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ,
ಹೌದು, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಹಿಂದೆ ತಮಿಳುನಾಡಿನ ಜನರಿದ್ದಾರೆ. ತಮಿಳುನಾಡಿನಲ್ಲಿ ಟ್ರೈನಿಂಗ್ ಪಡೆದು, ಬಾಂಬ್ ಇಡಲು ಬೆಂಗಳೂರಿಗೆ (Bengaluru) ಬಂದಿದ್ದಾನೆ ಎಂದು ಶೋಭಾ ಕರಂದ್ಲಾಜೆ ಹೇಳಿಕೆ ವಿರುದ್ಧ ಮಧುರೈ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ಶೋಭಾ ಕರಂದ್ಲಾಜೆಯ ವಿರುದ್ಧ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 153 (ಪ್ರಚೋದನೆ ನೀಡುವುದು, ಗಲಭೆ ಉಂಟುಮಾಡುವ ಉದ್ದೇಶ, 153A (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜನೆ) ಹಾಗೂ ಭಾಷೆ, 505 (1)(ಬಿ) ಮತ್ತು 505 (2) ಸಾರ್ವಜನಿಕರ ಶಾಂತಿಗೆ ಭಂಗವಾಗಲು ಹೇಳಿಕೆ ನೀಡಿದ್ದಕ್ಕೆ ಸಂಬಂಧಪಟ್ಟ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಎಫ್‌ಐಆರ್ ಗೂ ಮೊದಲು, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಹಿಂದೆ ತಮಿಳುನಾಡಿನ ಜನರಿದ್ದಾರೆ. ತಮಿಳುನಾಡು ಕರ್ನಾಟಕದ ಜನರ ಮಧ್ಯೆ ಕೋಮು ದ್ವೇಷದ ಭಾಷಣ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ರಾಷ್ಟ್ರೀಯ ತನಿಖಾ ದಳ (NIA) ಯಾರನ್ನೂ ಬಂಧನ ಮಾಡಿಲ್ಲ. ಹೀಗಾಗಿ ಪ್ರಜಾಪತ್ರಿನಿಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಕೇಂದ್ರ ಚುನಾವಣೆ ಆಯೋಗಕ್ಕೆ ಡಿಎಂಕೆ ದೂರು ನೀಡಿತ್ತು.