ಹಾಡು :
ಭಕ್ತರಾಟ.. ಅಂಧಭಕ್ತರಾಟ
ಬಲ್ಲವರ್ಯಾರೋ
ಮೆದುಳೇ ಇಲ್ಲದ ಮಬ್ಬಕ್ತರಾಟ
ನೋಡೋಣ ಬನ್ನಿರೋ
( ಭಾರತ ಪಾಕಿಸ್ತಾನದ ಗಡಿಯ ಆ ಪಕ್ಕ ಪಾಕಿಸ್ತಾನದ ಅಂಧಭಕ್ತ ಹಾಗೂ ಈ ಪಕ್ಕ ಇಂಡಿಯಾದ ಅಂಧಭಕ್ತ ಇಬ್ಬರೂ ಅಚಾನಕ್ ಭೇಟಿ ಆಗ್ತಾರೆ. ಪಾಕಿ ಅಂಧಭಕ್ತ ಕಾಲರ್ ಮೇಲೆ ಮಾಡಿಕೊಂಡು, ಮೀಸೆ ತಿರುವುತ್ತಾ, ಎದೆ ಉಬ್ಬಿಸಿಕೊಂಡು)
ಪಾಕಿ ಅಂಧಭಕ್ತ : ನೋಡಿದ್ಯಾ ಹೆಂಗೆ ನಾವು.. ಇರಾನ್- ಇಸ್ರೇಲ್ ಅಮೇರಿಕಾ ಯುದ್ಧ ನಿಲ್ಸಿದ್ವಿ.
ಇಂಡಿ ಅಂಧಭಕ್ತ : ಯುದ್ಧ ನಿಂತೋಯ್ತಾ. ಅದು ನಮ್ಮ ವಿಶ್ವಗುರು ಆದೇಶ ಇಲ್ಲದೇ. ನೋ.. ಇದು ಸಾಧ್ಯವೇ ಇಲ್ಲಾ..
ಪಾಕಿ ಅಂಧಭಕ್ತ : ಹೋಯ್ತು. ನಿಮ್ಮ ವಿಶ್ವಗುರು ಪಟ್ಟ ಹೊರಟೋಯ್ತು. ಈಗ ನಮ್ಮ ಷರೀಫ್ ಮುನೀರ್ ಗಳೇ ವಿಶ್ವಗುರುಗಳು. ಇರಾನ್ ಅಮೇರಿಕದವರನ್ನೇ ಇಸ್ಲಾಮಾಬಾದಿಗೆ ಕರೆಸಿ ಕೈಕಟ್ ಬಾಯ್ ಮುಚ್ ಅಂತಾ ಗದರಿದ್ದೇ ತಡಾ ತಡಬಡಾಯಿಸಿದ ಟ್ರಂಪ್ ನಂತಾ ಟ್ರಂಪ್ ಸೀಜ್ ಫಯರ್ ಅಂತಾ ಕಿರುಚಿದ. ಯುದ್ಧ ನಿಂತೋಯ್ತು. ಹೆಂಗೆ ಪಾಕಿಗಳ ತಾಕತ್ತು.
ಇಂಡಿ ಅಂಧಭಕ್ತ : ಅಯ್ಯೋ ನಿನ್ನ ಪುಟಗೋಸಿ ಪಾಕಿಗಳಾ, ನಮ್ಮ ವಿಶ್ವಗುರು “ಆಪರೇಶನ್ ಸಿಂಧೂರ” ಅಂದ್ರೆ ಸಾಕು ಓಡಿ ಹೋಗಿ ಟ್ರಂಪ್ ಕಾಲಿಗೆ ಬಿದ್ದು ಕದನವಿರಾಮ ಮಾಡಿಕೊಂಡವ್ರು ನೀವು.
ಪಾಕಿ ಅಂಧ ಭಕ್ತ : ಅದು ಅವತ್ತಿನ ಕಾಲ. ಈಗ ಎಲ್ಲಾ ಚೇಂಜ್. ಅಮೇರಿಕದಂತಾ ಪಟ್ಟದಾನೆಯನ್ನ ಕಟ್ಟಿ ಹಾಕಿ ಪಳಗಿಸೋ ಅಂಕುಶ ಪಾಕಿಸ್ತಾನಕ್ಕಿದೆ. ನೋಡಿದ್ಯಾ ಹೆಂಗೆ ವಾರ್ ನಿಲ್ಸಿದ್ವಿ.
ಇಂಡಿ ಅಂಧ ಭಕ್ತ : ಏ ಪುಟಗೋಸಿಗಳಾ..
ಪಾಕಿ ಅಂಧ ಭಕ್ತ : ಹಾ ಹಾಂ.. ಮಾನ ಕಾಪಾಡೋಕೆ ಪುಟಗೋಸಿನೇ ಬೇಕು. ಈಗ ಅಮೇರಿಕದ ಮಾನ ಕಾಪಾಡಿದ್ದೆ ಅದು, ಪಾಕಿ ಪುಟಗೋಸಿ.
ಇಂಡಿ ಅಂಧ ಭಕ್ತ : ಇದೆಲ್ಲಾ ಸಾಧ್ಯವೇ ಇಲ್ಲ. ನಮ್ಮ ವಿಶ್ವಗುರುಗಳು ಈಗ ಐದು ರಾಜ್ಯಗಳ ಚುನಾವಣೆ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯೂಸಿ ಆಗಿರೋದರ ಲಾಭ ಪಡಕೊಂಡ ನೀವು ದಲ್ಲಾಳಿ ಕೆಲಸ ಮಾಡಿ ಯುದ್ಧ ನಿಲ್ಸಿದ್ದೀನಿ ಅಂತಾ ಬಾಯಿ ಬಡ್ಕೋತಿದ್ದೀರಾ. ಇರಿ ಚುನಾವಣೆ ಮುಗೀಲಿ, ಆಗ ನಮ್ಮ ಮೋದಿ ಎಂತಾ ಆಟ ಆಡ್ತಾರೆ ಅಂತಾ ಗೊತ್ತಾಗುತ್ತೆ.
ಪಾಕಿ ಅಂಧ ಭಕ್ತ : ಆಡ್ತಾರೆ.. ಆಡ್ತಾರೆ.. ಎಲ್ಲಾ ಟುಸ್ ಪಟಾಕಿ. ಟ್ರಂಪ್ ಮಾತನ್ನೇ ಕೇಳದ ಇರಾನು ನಮ್ಮ ಪಾಕಿಸ್ತಾನ ಚುಪ್ ರೇ ಅಂದಿದ್ದೇ ತಡಾ ಕದನ ವಿರಾಮಕ್ಕೆ ಕಮಕ್ ಕಿಮಕ್ ಅನ್ನದೇ ಒಪ್ಪಿಕೊಳ್ತು ಗೊತ್ತಾ. ಏನಂತಾ ತಿಳ್ಕೊಂಡಿದ್ದಿ ನಮ್ ಪವರ್ರು.
ಇಂಡಿ ಅಂಧ ಭಕ್ತ : ಕಂಡಿದ್ದೀನಿ ಸುಮ್ಕಿರಲೇ. ನಮ್ಮ ಅವತಾರ ಪುರುಷನ ಮುಂದೆ ನಿಮ್ಮದೆಲ್ಲಾ ತೃಣ ಸಮಾನ. ಈ ಯುದ್ಧ ಆರಂಭಿಸಿದ್ದೇ ನಮ್ಮ ಮೋದಿಯವರು ಗೊತ್ತಾ. ಇಸ್ರೇಲಿಗೆ ಹೋಗಿ, ನೆತನ್ಯಾಹುನನ್ನ ತಬ್ಬಿಕೊಂಡು ಫಾದರ್ ಲ್ಯಾಂಡ್ ಅಂತಾ ಹೇಳಿ, ಭಾರತ ನಿಮ್ಮ ಜೊತೆ ಇದೆ ಅಂತಾ ಧೈರ್ಯ ತುಂಬಿ ಬಂದ ಎರಡೇ ದಿನಕ್ಕೆ ಇಸ್ರೇಲ್ ವಾರ್ ಶುರುಮಾಡ್ತು. ಇರಾನಿನ ಸುಪ್ರೀಂ ಲೀಡರನನ್ನ ಹೊಡದ್ ಹಾಕ್ತು. ಅದು ನಮ್ಮ ವಿಶ್ವಗುರುವಿನ ತಾಕತ್ತು.
ಪಾಕಿ ಅಂಧಭಕ್ತ : ಯುದ್ಧ ಯಾರು ಶುರು ಮಾಡಿದ್ರೇನು, ನಿಲ್ಸಿದ್ದು ನಾವೇ.. ಪಾಕಿಸ್ತಾನವೇ..
ಇಂಡಿ ಅಂಧಭಕ್ತ : ಜಾಸ್ತಿ ಕುಣಿದಾಡ್ಬೇಡಾ. ನಮ್ಮ ವಿಶ್ವಗುರು ತಮ್ಮ ಮೂರನೇ ಉರಿಗಣ್ಣು ಬಿಟ್ರೆ ಜಗತ್ತಿನ ಮ್ಯಾಪಿನಲ್ಲಿ ಇರಾನು ಇರೋದಿಲ್ಲಾ, ನಿಮ್ಮ ಪಾಕಿಸ್ತಾನ ದುರ್ಬಿನ್ ಹಾಕಿ ಹುಡುಕಿದ್ರೂ ನೋಡೋಕಾಗೋದಿಲ್ಲ.
ಪಾಕಿ ಅಂಧಭಕ್ತ : ಇದೆಲ್ಲಾ ಡೌ ಬೇಕಾಗಿಲ್ಲ. ನಮಗೆ ಇತ್ತ ಚೀನಾ, ಅತ್ತ ಅಮೇರಿಕಾ ಎರಡೂ ಕಡೆ ಸಪೋರ್ಟ್ ಐತೆ. ನಿಮಗ್ಯಾರಿದ್ದಾರೆ ಬೆಂಬಲಿಸೋಕೆ?
ಇಂಡಿ ಅಂಧಭಕ್ತ : ನಮಗೆ.. ವಿಶ್ವಗುರುಗೆ ಯಾರ ಸಪೋರ್ಟು ಬೇಕಾಗಿಲ್ಲ. ಜಗತ್ತೇ ಸಪೋರ್ಟ್ ಕೊಡಿ ಅಂತಾ ನಮ್ಮ ವಿಶ್ವಗುರುವಿನ ಮುಂದೆ ಮಂಡಿ ಊರಿ ಕುಳಿತಿದೆ. ರಷ್ಯಾದಂತಾ ದೇಶ “ಕಡಿಮೆ ಬೆಲೆಗೆ ತೈಲ ಕೊಡ್ತೀವಿ ತಗೊಳ್ಳಿ, ನಿಮ್ಮ ದಮ್ಮಯ್ಯಾ ತಗೊಳ್ಳಿ ಅಂತಾ ವಿಶ್ವಗುರುವಿಗೆ ದುಂಬಾಲು ಬಿದ್ದಿದೆ. ಇಡಿ ಜಗತ್ತಿನ ಎಲ್ಲಾ ದೇಶಗಳಿಗೂ ಇರಾನು ಹಾರ್ಮೋಜ್ ಜಲಸಂಧಿ ಬಂದ್ ಮಾಡಿದ್ರೂ ಭಾರತದ ಹಡಗುಗಳನ್ನ ಮಾತ್ರ ರಾಜಮರ್ಯಾದೆಯಿಂದ ದಾರಿ ಮಾಡಿಕೊಟ್ಟು ಕಳಿಸ್ತಿದೆ. ಏನಂತಾ ತಿಳ್ಕೊಂಡಿದ್ದೀಯಾ ಮೋದಿ ಮಹಾತ್ಮರ ದಮ್ಮು ತಾಕತ್ತು.
ಪಾಕಿ ಅಂಧಭಕ್ತ : ಹೌದೌದು.. ಎಲ್ಲಾ ಕಂಡಿದ್ದೀವಿ ಅದುಮ್ಕೊಂಡಿರು. (ಜೋರಾಗಿ ನಕ್ಕು) ಹಡಗು ಬಿಟ್ರಂತೆ ಹಡಗು. ಹಡಗು ಬಿಟ್ಟಿದ್ರೆ ಗ್ಯಾಸ್ ಸಿಲಿಂಡರ್ ಸಿಗದೇ ನಿಮ್ಮ ದೇಶ ಯಾಕೆ ತತ್ತರಿಸ್ತು. ಹೊಟೇಲು ಬಂದ್ ಆಗಿ ತಿನ್ನೋಕು ಗತಿ ಇಲ್ಲದಂಗಾಯ್ತು? ಇದೆಲ್ಲಾ ಡೌ ಮಾಡಬ್ಯಾಡಾ..
ಇಂಡಿ ಅಂಧಭಕ್ತ : ಏ ಬಾಯ್ ಮುಚ್ಕೊಂಡಿರಬೇಕು.. ನಮ್ಮ ವಿಶ್ವಗುರುವಿನ ಮಾಸ್ಟರ್ ಸ್ಟ್ರೋಕ್ ಪ್ಲಾನ್ ಬಗ್ಗೆ ನಿನಗೇನೋ ಗೊತ್ತು. ಮುಸ್ಲಿಂ ದೇಶಗಳನ್ನ ಹೊಸಕಿ ಹಾಕೋವಂತಾ ಮೆಗಾ ಮಾಸ್ಟರ್ ಐಡಿಯಾ ಮಾಡಿದ್ದಾರೆ ಗೊತ್ತಾ. ನಮ್ಮ ವಿಶ್ವಗುರುಗಳು ಇಸ್ರೇಲಿಗೆ ಹೋದ್ರು ಇರಾನ್ ಮೇಲೆ ಯುದ್ಧ ಮಾಡು ಅಂದ್ರು. ಇಸ್ರೇಲಿನೋರು ಅಮೇರಿಕಕ್ಕೆ ದುಂಬಾಲು ಬಿದ್ದು ಯುದ್ಧಕ್ಕೆ ಜೊತೆಯಾಗಿ ಅಂದ್ರು. ಈ ಇಬ್ಬರೂ ಸೇರಿ ಇರಾನ್, ಲೆಬನಾನ್ ಮೇಲೆ ಮುಗಿಬಿದ್ರು. ಆಗ ಇರಾನು ಅಕ್ಕಪಕ್ಕದ ಸಾಬರ ದೇಶದ ಮೇಲೆ ಆಕ್ರಮಣ ಮಾಡಿ ನಾಶ ಮಾಡ್ತು. ಈಗೇನಾಯ್ತು.. ಇರಾನಿನ ಸಾಬರು ಗಲ್ಫ್ ದೇಶದ ಸಾಬರ ಮೇಲೆ ಯುದ್ಧ ಸಾರಿದ್ರು. ಹೀಗೆ ಎಲ್ಲಾ ಸಾಬರೂ ಬಡದಾಡಿಕೊಂಡು ಸಾಯೋಹಂಗೆ ಮಾಡಿದ್ರು. ಅವರವರ ತೈಲ ಕೇಂದ್ರಗಳಿಗೆ ಅವರವರೇ ಬೆಂಕಿ ಇಟ್ಟು ಭಸ್ಮಾ ಮಾಡಿದ್ರು. ಈಗ ಎಲ್ಲಾ ಮುಸ್ಲಿಂ ಕಂಟ್ರಿಗಳು ಅರ್ಧಕ್ಕರ್ಧ ಸರ್ವನಾಶ ಆಗಿ ಹೋದ್ವು. ಹೆಂಗಿದೆ ನಮ್ಮ ಮೋದಿಯವರ ಮಾಸ್ಟರ್ ಸ್ಟ್ರೋಕ್.
ಪಾಕಿ ಅಂಧಭಕ್ತ : ಓ ಹೊ ಹೋ.. ನಿಮ್ಮ ಮೋದಿ ಬೆಂಕಿ ಹಚ್ಚಿದ್ರೆ ನಮ್ಮ ಮುನೀರ್ ರವರು ನೀರಾಕಿ ಬೆಂಕಿ ಆರಿಸಿ ತಣ್ಣಗೆ ಮಾಡಿದ್ರು. ಸೀಜ್ ಫೈರ್ ಮಾಡ್ಸಿದ್ರು.
ಇಂಡಿ ಅಂಧಭಕ್ತ : ಏ ಸಾಬಿ. ಹಿಂಗ್ ಕುಂಡಿ ಬಡ್ಕೊಂಡ್ ಮಂಗನಂಗ ಕುಣೀಬ್ಯಾಡ. ಯುದ್ಧ ನಿಲ್ಸಿದ್ದು ನೀವಲ್ಲ, ನಮ್ಮ ಮೋದಿಯವರು ಗೊತ್ತಾ. ನಮ್ಮ ದೇಶದೊಳಗ ಈಗ ಐದು ರಾಜ್ಯದೊಳಗ ಎಲೆಕ್ಷನ್ ನಡೀತಾ ಇದೆ. ಕೋಡ್ ಆಫ್ ಕಾಂಡಕ್ಟ್ ಅಂದ್ರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಯಾವ ಸಾಧನೆಯನ್ನೂ ಬಹಿರಂಗವಾಗಿ ಮೋದಿಯವರು ಹೇಳಿಕೊಳ್ಳುವಂತಿಲ್ಲಾ. ಹೇಳ್ಕೊಂಡ್ರೆ ಆ ನೆಹರು ವಂಶದವರು ನೀತಿ ಸಂಹಿತೆ ಮೀರಲಾಗಿದೆ ಅಂತಾ ಬಾಯಿ ಬಡ್ಕೋತಾರೆ. ಅದಕ್ಕೆ ನಮ್ಮ ವಿಶ್ವಗುರುಗಳು ಯಾರಿಗೂ ಹೇಳದೇ ಟ್ರಂಪ್ ಗೆ ಟ್ರಂಕಾಲ್ ಮಾಡಿ ಹಿಂಗಿಂಗೆ.. ಈಗ ಯುದ್ಧ ನಿಲ್ಸಿ.. ಸ್ವಲ್ಪ ರೆಸ್ಟ್ ತಗೊಂಡು ಆಮ್ಯಾಲೆ ಮತ್ತೆ ಶುರು ಮಾಡ್ಕೊಳ್ಳಿ ಅಂತಾ ಕಿವಿ ಊದಿದ್ರು. ಮೊದಲೇ ಯುದ್ಧ ಮಾಡಿ ಸುಸ್ತಾಗಿ ಬಿದ್ದಿದ್ದ ಟ್ರಂಪಿಗೆ ಹೋದ್ ಉಸಿರು ಬಂದಂಗಾಗಿ ಸೀಜ್ ಫೈರ್ ಅಂತಾ ಅರಚಿದ. ಎಲ್ಲಾದಕ್ಕೂ ನಮ್ಮ ಮೋದಿಯವರೇ ಕಾರಣ. ಅವರ ಕೃಪಾ ಕಟಾಕ್ಷ ಇಲ್ಲದೇ ಈ ಜಗತ್ತಿನಲ್ಲಿ ಒಂದೇ ಒಂದು ಹುಲ್ಲು ಕಡ್ಡಿಯೂ ಅಲ್ಲಾಡೋಲ್ಲ.. ಇನ್ನು ಈ ಟ್ರಂಪ್ ಯಾವ ಲೆಕ್ಕ.
ಪಾಕಿ ಅಂಧಭಕ್ತ : ಅಲೆಲೆಲೇ.. ಈ ಹರಿಕತೆಯನ್ನು ನಿಮ್ಮ ದೇಶದ ಅಂಧಭಕ್ತರಿಗೆ ಹೇಳು. ಚಪ್ಪಾಳೆ ತಟ್ಯಾರು. ಗುಟ್ಟಾಗಿ ಯುದ್ಧ ನಿಲ್ಸಿದ್ರಂತೆ ಯುದ್ಧಾನಾ.. ನಮ್ಮ ಮುನೀರು, ಷರೀಫ್ ಸಾಹೇಬರು ಬಹಿರಂಗವಾಗಿಯೇ ನಮ್ಮ ದೇಶಕ್ಕೆ ಕರೆಸಿಕೊಂಡು ಕದನ ವಿರಾಮ ಮಾಡ್ಸಿದ್ದಾರೆ.. ಈಗ ನಾವೇ ವಿಶ್ವಗುರು..
ಇಂಡಿ ಅಂಧಭಕ್ತ : (ಮೊಬೈಲ್ ನೋಡುತ್ತಾ) ಜಾಸ್ತಿ ಮೆರಿಬ್ಯಾಡ. ಇಲ್ಲಿ ನೋಡು ನಮ್ಮ ವಿಶ್ವಗುರು ಸೈಲಂಟಾಗಿ ಬತ್ತಿ ಇಟ್ಟು ಬಾಂಬ್ ಹಾಕವ್ರೆ. ಅಮೇರಿಕಾದ ಟ್ರಂಪು ಕದನ ವಿರಾಮ ಅಂದ.. ಆದರೆ ಇಸ್ರೇಲ್ ಇರಾನ್ ಮೇಲೆ ಮತ್ತೆ ಬಾಂಬ್ ಹಾಕಿದೆ. ಲೆಬನಾನ್ ಮೇಲೆ ಬೆಂಕಿ ಮಳೆ ಸುರಿಸಿದೆ. ಹೋಯ್ತು.. ಹೊರಟೋಯ್ತು. ನಿಮ್ಮ ಕದನವಿರಾಮ ಕೊಚ್ಕೊಂಡ್ ಹೊರಟೋಯ್ತು. ಹಾರ್ಮೋಜ್ ಮತ್ತೆ ಬಂದ್ ಆಯ್ತು. ಈಗ ಮತ್ತೆ ಯುದ್ಧ, ಘನಘೋರ ಮಹಾಯುದ್ಧ, ಪರಮಾಣು ಯುದ್ಧ.. ಅಷ್ಟೇ ಈ ಸಾಬರ ದೇಶಗಳೆಲ್ಲಾ ಉಡೀಸ್. ಹೆಂಗೆ ನಮ್ಮ ಮೋದಿಯವರ ಸೈಲಂಟ್ ಸ್ಟ್ರೋಕ್. ಒಂದೇ ಒಂದು ಗುಂಡು ಹಾರಿಸಿಲ್ಲಾ, ಬಾಂಬ್ ಹಾಕಿಲ್ಲ.. ಸಾಬರ ದೇಶಗಳೆಲ್ಲಾ ಮಟಾಶ್. ಅವರಿವರನ್ನ ಎತ್ತಿಕಟ್ಟಿ ಯುದ್ಧ ಮಾಡಿಸಿ ವಿಶ್ವಗುರು ಪಟ್ಟ ಗಿಟ್ಟಿಸಿಕೊಳ್ಳೋದೇ ಮಹಾ ಸಾಧನೆ. ಅದಕ್ಕೆ ಮೋದಿಯವರಿಗೆ ಮೋದಿಯೇ ಸಾಟಿ..
ಪಾಕಿ ಅಂಧಭಕ್ತ : ಚೆ ಛೇ.. ಮತ್ತೆ ವಾರ್ ಶುರು ಆಯ್ತಾ. ಹಾರ್ಮೋಜ್ ಬಂದಾಯ್ತಾ. ಇದು ಮೋದಿ ಸ್ಟ್ರೋಕ್ ಅಲ್ಲಯ್ಯಾ, ಆ ಅರೆಹುಚ್ಚ ಟ್ರಂಪ್ ನ ಹುಚ್ಚಾಟ. ನಿಮ್ಮ ಮೋದಿ ಡ್ರೆಸ್ ಚೇಂಜ್ ಮಾಡೋಕಿಂತಾ ಹೆಚ್ಚಾಗಿ ಆತ ತನ್ನ ನಿರ್ಧಾರಗಳನ್ನ ತಾನೇ ಬದಲಾಯಿಸ್ತಾ ಇರ್ತಾನೆ. ಆ ತುಘಲಕ್ ಸೈತಾನನ ಮುಂದೆ ನಿಮ್ಮ ಮೋದಿ ಆದ್ರೇನು, ನಮ್ಮ ಮುನೀರ್ ಆದ್ರೇನು ಅಷ್ಟಕ್ಕಷ್ಟೇ. ಈಗೇನಪ್ಪಾ ಮಾಡೋದು ಮತ್ತೆ ಪೆಟ್ರೋಲ್ ಡೀಸಲ್ ಬೆಲೆ ಗಗನಕ್ಕೇರುತ್ತಲ್ಲಾ.
ಇಂಡಿ ಅಂಧಭಕ್ತ : ನಮ್ಮನೇಲಿ ಗ್ಯಾಸ್ ಸಿಲಿಂಡರ್ ಖಾಲಿ ಆಗಿದೆ. ಮತ್ತೆ ಯುದ್ಧ ಶುರುವಾದ್ರೆ ಎಲ್ಲಿಂದಪ್ಪಾ ಗ್ಯಾಸ್ ತರೋದು.
ಪಾಕಿ ಅಂಧಭಕ್ತ : ನಿಮಗೇನು ಬಿಡು. ನಿಮ್ಮ ಮೋದಿ ಮಹಾ ವಿಜ್ಞಾನಿಗಳು. ಗಟಾರಿನಿಂದ ಗ್ಯಾಸ್ ತಯಾರಿ ಮಾಡೋ ಸಿಂಪಲ್ ಟೆಕ್ನಾಲಾಜಿ ಕಂಡು ಹಿಡಿದವ್ರೆ.. ನಾವೇನು ಮಾಡೋದು?
ಇಂಡಿ ಅಂಧಭಕ್ತ : ಹ್ಹೆ.. ಅದೆಲ್ಲಾ ಇನ್ನೂ ವರ್ಕೌಟ್ ಆಗಿಲ್ಲ. ಮುಂದಾಗಬಹುದು. ಈಗ ಏನ್ ಮಾಡೋದು. ಗ್ಯಾಸ್ ಎಲ್ಲಿಂದ ತರೋದು? (ತಲೆ ಮೇಲೆ ಟವಲ್ ಹಾಕಿಕೊಂಡು ಕೂರುತ್ತಾನೆ)
ಪಾಕಿ ಅಂಧಭಕ್ತ : ನಾವೇನ್ ಮಾಡೋದು.. ಪೆಟ್ರೋಲ್, ಡೀಸಲ್ ಎಲ್ಲಿಂದಾ ತರ್ಸೋದು. (ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾನೆ)
ಹಿನ್ನಲೆಯಲ್ಲಿ ಹಾಡು :
ಗುರುವೇ..ಗುರು ಗುರು ವಿಶ್ವಗುರುವೇ.
ಗುರುವೇ ನಿನ್ನಾಟ ಬಲ್ಲವರ್ಯಾರೋ
ವಿಶ್ವಗುರುವೇ ನಿನ್ನ ಮಹಿಮೆ ಬಲ್ಲವರ್ಯಾರೋ..
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ಸೌಜನ್ಯ ತಾಯಿ ಕುಸುಮಾವತಿಗೆ ಬೆಂಬಲ ಪತ್ರ ಬರೆದ “ಕೊಂದವರು ಯಾರುʼ ತಂಡ


