ಸುಳ್ಳು ಬಿಜೆಪಿಯ ಮನೆ ದೇವರು: ಸಿಎಂ ಸಿದ್ದರಾಮಯ್ಯ

Most read

ಸಂಡೂರು: ಮೂರೂವರೆ ವರ್ಷ ನಮ್ಮದೇ ಸರ್ಕಾರ ಇರುತ್ತದೆ.
ಸಂಡೂರಿನ ಅಭಿವೃದ್ಧಿ ಮತ್ತಷ್ಟು ವೇಗ ಪಡೆದುಕೊಳ್ಳುತ್ತದೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರನ್ನು ಆರಿಸಿ ಕಳುಹಿಸುವಂತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಂಡೂರು ವಿಧಾನಸಭಾ ಕ್ಷೇತ್ರದ ಬೊಮ್ಮಘಟ್ಟದಲ್ಲಿ ನಡೆದ ಬೃಹತ್ ಜನ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರ ಗೆಲುವಿಗೆ ಪ್ರಚಾರ ನಡೆಸಿ ಮಾತನಾಡಿದರು. ಈ.ತುಕಾರಾಮ್ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಕಾತರಿಸುತ್ತಾ ಕೆಲಸ ಮಾಡುವ ಶಾಸಕರಾಗಿದ್ದರು, ಈಗ ಸಂಸದರಾಗಿದ್ದಾರೆ. ಸಂಡೂರಿನಲ್ಲಿ ಈಗ ಆಗಿರುವ ಎಲ್ಲಾ ಅಭಿವೃದ್ಧಿಗಳೂ ಈ.ತುಕಾರಾಮ್ ಮತ್ತು ಸಂತೋಷ್ ಲಾಡ್ ಅವರ ಅವಧಿಯಲ್ಲಿ ಆಗಿರುವಂಥವು ಎಂದು ಹೇಳಿದರು.

ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ಅವಧಿಯಿಂದಲೂ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿದೆ. ಬಿಜೆಪಿ ಸ್ವಾತಂತ್ರ್ಯ ಹೋರಾಟದಲ್ಲೂ ಜನರ ಪರವಾಗಿ ಇರಲಿಲ್ಲ. ಈಗಲೂ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು “ನಾ ಖಾವೋಂಗಾ-ನಾ ಖಾನೆ ದೂಂಗಾ” ಎಂದು ಭಾಷಣ ಮಾಡುತ್ತಾರೆ. ಆದರೆ ಜನಾರ್ಧನರೆಡ್ಡಿಯನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಜನಾರ್ದನ ರೆಡ್ಡಿಯನ್ನು ನ್ಯಾಯಲಯವೇ ಅಪರಾಧಿ ಎಂದು ಘೋಷಿಸಿ ಜೈಲಿಗೆ ಹಾಕಿತ್ತು‌. ಬಿಜೆಪಿಗಾಗಲಿ, ಮೋದಿಗಾಗಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದರು‌.

ಬಿಜೆಪಿ ಅಧಿಕಾರದಲ್ಲಿದ್ದಷ್ಟೂ ದಿನ ಸಂಡೂರಿಗೆ ಒಂದೇ ಒಂದು ಮನೆ ಕೊಡುವ ಯೋಗ್ಯತೆ ಇರಲಿಲ್ಲ. ಆಪರೇಷನ್ ಕಮಲದ ಮೂಲಕ ಜನ ಗೆಲ್ಲಿಸಿದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಲೂಟಿ ಮಾಡಿಕೊಂಡು ಹೋದರು. ಅದಕ್ಕೇ ಆಪರೇಷನ್ ಕಮಲದ ಸರ್ಕಾರವನ್ನು ಜನ ಸೋಲಿಸಿ ನಮ್ಮ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು ಎಂದು ಹೇಳಿದರು.

ನಾವು ಅಧಿಕಾರಕ್ಕೆ ಬಂದ 8 ತಿಂಗಳಲ್ಲೇ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ. ಒಂದು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳ ಯಜಮಾನಿ ಮಹಿಳೆಯರಿಗೆ ಪ್ರತೀ ತಿಂಗಳು 2000 ರೂಪಾಯಿ ಕೊಡ್ತಾ ಇರೋದು ನಮ್ಮ ಸರ್ಕಾರ. 1 ಕೋಟಿ 61 ಲಕ್ಷ ಕುಟುಂಬಗಳಿಗೆ ಉಚಿತ ಕರೆಂಟ್ ಕೊಡ್ತಾ ಇರೋದು ನಾವು. ಐದು ಕೆಜಿ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಯ ಹಣವನ್ನೂ ಕೊಡ್ತಾ ಇರೋದು ನಾವು‌. ಹೀಗೆ ಐದಕ್ಕೆ ಐದೂ ಗ್ಯಾರಂಟಿಗಳ ಮೂಲಕ ಸಂಡೂರಿನ ಜನರಿಗೆ, ರಾಜ್ಯದ ಜನರಿಗೆ ಆರ್ಥಿಕ ಶಕ್ತಿ ಕೊಡ್ತಾ ಇರೋದು ನಾವು. ನಮ್ಮ ಕಾಂಗ್ರೆಸ್ ಸರ್ಕಾರ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯಗಳಲ್ಲೂ ಬಿಜೆಪಿ ಏಕೆ ಜಾರಿ ಮಾಡಿಲ್ಲ ಎನ್ನುವುದನ್ನು ಜನರಿಗೆ ಉತ್ತರಿಸಬೇಕು ಎಂದರು.

ಸಂಡೂರಿನ ಅಭಿವೃದ್ಧಿಗೆ ಈ.ತುಕಾರಾಮ್ ಮತ್ತು ಇವರ ಧರ್ಮಪತ್ನಿ ಅನ್ನಪೂರ್ಣಮ್ಮ ಅವರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಅನ್ನಪೂರ್ಣ ಗೆದ್ದರೆ ಸಂಡೂರಿನ ಅಭಿವೃದ್ಧಿ ಕೆಲಸಗಳು ಸರಾಗವಾಗಿ, ವೇಗವಾಗಿ ಮುಂದುವರೆಯುತ್ತವೆ. ಅನ್ನಪೂರ್ಣ ನನ್ನ ಆತ್ಮೀಯ ಸ್ನೇಹಿತ‌ನ ಮಗಳು. ಇವರನ್ನು ಗೆಲ್ಲಿಸಿ ಕಳುಹಿಸಿ ಸಂಡೂರಿನ ಜನರಿಗೆ ತುಂಬಾ ಅನುಕೂಲಗಳಾಗುತ್ತವೆ ಎಂದರು.

ಸಚಿವ ಸಂತೋಷ್ ಲಾಡ್ ಮಾತನಾಡಿ ಬಿಜೆಪಿ ನಾಯಕರಿಗೆ ಸಂಡೂರಿನ ಗುಡ್ಡಗಳು, ಗಣಿಗಳ ಮೇಲೆ ಮಾತ್ರ ಪ್ರೀತಿ. ಸಂಡೂರಿನ ಜನರ ಬಗ್ಗೆ, ಸಂಡೂರಿನ ಬಡವರ ಮೇಲೆ ಖಂಡಿತಾ ಪ್ರೀತಿ ಇಲ್ಲ. ನಾನು ಸುಡುಗಾಡಿಗೆ ಹೋಗುವವರೆಗೂ ಸಂಡೂರಿನ‌ ಜನರ ಋಣದಲ್ಲಿ ಇರ್ತೀನಿ. ನನ್ನಪ್ಪ ಇಲ್ಲೇ ಸತ್ತ. ನನ್ನ ದೊಡ್ಡಪ್ಪ ಇಲ್ಲೇ ಸತ್ತ. ನಾನು ಜೀವ ಇರುವವರೆಗೂ ಇಲ್ಲೇ ಈರ್ತೀನಿ. ಇಲ್ಲೇ ಸಾಯ್ತೀನಿ ಎಂದು ಹೇಳಿದರು.

More articles

Latest article