ಸಿದ್ಧರಾಮಯ್ಯ ಹೆಸರಲ್ಲಿ‌ ಸುಳ್ಳು ಸುದ್ದಿ: ಫೇಕ್ ಫ್ಯಾಕ್ಟರಿ ಬೆನ್ನು ಬಿದ್ದ ಪೊಲೀಸರು.

Most read

ಬೆಂಗಳೂರು: ವಾರ್ತಾಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂಬಂತೆ ಕಾಣುವ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೇಳಿಕೆ ಎಂದು ಸುಳ್ಳು ಸುದ್ದಿಯೊಂದನ್ನು ಸೃಷ್ಟಿಸಿ ಕೋಮುಸಾಮರಸ್ಯಕ್ಕೆ ಧಕ್ಕೆ ತಂದ ಸಮಾಜಘಾತಕ ವ್ಯಕ್ತಿಗಳ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ಕುರಿತು ಸ್ವತಃ ಸಿದ್ಧರಾಮಯ್ಯ ಅವರೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದು, ಈ ದುಷ್ಟಶಕ್ತಿಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಬಿಜೆಪಿ – ಜೆಡಿಎಸ್‌ ಮಿತ್ರಮಂಡಳಿ ಕೃಪಾಪೋಷಿತ ಕಿಡಿಗೇಡಿಗಳು ವಾರ್ತಾಪತ್ರಿಕೆಯನ್ನು ಹೋಲುವ ಸುಳ್ಳು ಸುದ್ದಿಯ ತುಣುಕೊಂದನ್ನು ಸೃಷ್ಟಿಸಿ, ಅದರಲ್ಲಿ ಜನರ ಕೋಮುಭಾವನೆ ಕೆರಳಿಸುವ ಸುದ್ದಿಯನ್ನು ತುಂಬಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಈಗಾಗಲೇ ನಾನು ಪೊಲೀಸ್‌ ಇಲಾಖೆಗೆ ದೂರು ನೀಡಿದ್ದೇನೆ. ಇದರ ಹಿಂದಿರುವ ದುಷ್ಟ ಶಕ್ತಿ ಯಾರು ಎಂಬ ಬಗ್ಗೆ ನಮಗೆ ಮಾಹಿತಿ ಇದ್ದು, ಆದಷ್ಟು ಬೇಗನೆ ಅವರನ್ನು ನ್ಯಾಯದ ಕೈಗಳಿಗೆ ಒಪ್ಪಿಸಲಾಗುವುದು ಎಂದು ಸಿದ್ಧರಾಮಯ್ಯ ಎಕ್ಸ್ ನಲ್ಲಿ ಬರೆದಿದ್ದಾರೆ.

ರಾಜಕೀಯ ವಿರೋಧಿಗಳನ್ನು ನ್ಯಾಯಸಮ್ಮತ ರೀತಿಯಲ್ಲಿ ಎದುರಿಸಲಾಗದೆ ಇಂತಹ ಅಡ್ಡದಾರಿ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವುದು ಬಿಜೆಪಿ ಮತ್ತು ಜೆಡಿಎಸ್‌ನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಹತ್ತು ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ ಪಕ್ಷವೊಂದು ಚುನಾವಣೆ ಗೆಲ್ಲಲು ಸುಳ್ಳು ಸುದ್ದಿಯ ಮೊರೆ ಹೋಗುವಂತಹ ಹೀನಾಯ ಸ್ಥಿತಿಗೆ ತಲುಪಬಾರದಿತ್ತು ಎಂದು ಅವರು ಹೇಳಿದ್ದಾರೆ.

ಸುಳ್ಳು ಸುದ್ದಿಗಳನ್ನು ನಂಬಿ ಶೇರ್‌ ಮಾಡುವ ಮುನ್ನ ಎಚ್ಚರಿಕೆ ವಹಿಸಿಸಬೇಕು ಎಂದು ವಿನಂತಿಸಿರುವ ಅವರು, ಸುಳ್ಳು ಸುದ್ದಿಯ ಸೃಷ್ಟಿಕರ್ತರು, ಅವರ ಬೆನ್ನ ಹಿಂದೆ ಬೆಂಬಲಕ್ಕೆ ನಿಂತಿರುವವರು ಹೀಗೆ ಫೇಕ್‌ ಫ್ಯಾಕ್ಟರಿಯನ್ನು ಕಾನೂನಿನ ಮೂಲಕ ಬೇರು ಸಹಿತ ಕಿತ್ತೆಸೆಯುತ್ತೇವೆ ಎಂದು ತಿಳಿಸಿದ್ದಾರೆ.

More articles

Latest article